
ಸದ್ಯ ಬಾಕ್ಸ್ ಆಫೀಸ್‌ನಲ್ಲಿ ಸಖತ್ ಸೌಂಡ್ ಮಾಡುತ್ತಿರುವ ಕಾಲಿವುಡ್ ಸ್ಟಾರ್ ನಟ ಸೂರ್ಯ ಅಭಿನಯದ ‘ಕರುಪ್ಪು’ ಸಿನಿಮಾ (Karuppu Movie) ಈಗ ಹೊಸದೊಂದು ವಿವಾದಕ್ಕೆ ಸಿಲುಕಿದೆ. ಚಿತ್ರದ ನಿರ್ದೇಶಕ ಹಾಗೂ ಎಡಿಟರ್ ನೀಡಿದ ಕೆಲವು ಹೇಳಿಕೆಗಳು ಸೂರ್ಯ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಚರ್ಚೆ ಶುರುವಾಗಿದೆ. ಈ ಬೆನ್ನಲ್ಲೇ ನಟ ಸೂರ್ಯ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ನಿಗೂಢ ಪೋಸ್ಟ್ ಒಂದು ಎಲ್ಲರ ಗಮನ ಸೆಳೆದಿದೆ.
‘ಕರುಪ್ಪು’ ಚಿತ್ರದ ಪ್ರಚಾರದ ವೇಳೆ ನಿರ್ದೇಶಕ ಆರ್‌ಜೆ ಬಾಲಾಜಿ ಮತ್ತು ಎಡಿಟರ್ ಆರ್. ಕಲೈವಾಣನ್ ಅವರು ನಟ ದಳಪತಿ ವಿಜಯ್ ಕುರಿತು ಆಡಿದ ಮಾತುಗಳೇ ಈ ವಿವಾದಕ್ಕೆ ಕಾರಣ. ‘ಈ ಚಿತ್ರದ ಕಥೆಯನ್ನು ಮೊದಲು ವಿಜಯ್ ಅವರಿಗೆ ಹೇಳಲಾಗಿತ್ತು. ಆದರೆ ಕೆಲವು ಕಾರಣಗಳಿಂದ ಅವರು ನಟಿಸಲು ಸಾಧ್ಯವಾಗಲಿಲ್ಲ’ ಎಂದು ಬಾಲಾಜಿ ಹೇಳಿದ್ದರು.
ಅಷ್ಟೇ ಅಲ್ಲದೆ, ಇತ್ತೀಚೆಗೆ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ವಿಜಯ್ ಅವರನ್ನು ಭೇಟಿಯಾದ ಫೋಟೋ ಹಂಚಿಕೊಂಡ ಬಾಲಾಜಿ, “ಕರಪ್ಪು ಚಿತ್ರವನ್ನು ಮೊದಲಿಗೆ ಶುರು ಮಾಡಿದ ವ್ಯಕ್ತಿ’ ಎಂದು ಬರೆದುಕೊಂಡಿದ್ದರು. ಇದು ಸೂರ್ಯ ಅಭಿಮಾನಿಗಳನ್ನು ಕೆರಳಿಸಿತು. ಸಿನಿಮಾ ಗೆದ್ದ ಮೇಲೆ ಸೂರ್ಯ ಅವರ ಶ್ರಮವನ್ನು ನಿರ್ಲಕ್ಷಿಸಿ, ವಿಜಯ್ ಅವರಿಗೆ ಕ್ರೆಡಿಟ್ ಕೊಡಲಾಗುತ್ತಿದೆ ಎಂದು ಫ್ಯಾನ್ಸ್ ಆಕ್ರೋಶ ಹೊರಹಾಕಿದರು.
ಇದರ ಬೆನ್ನಲ್ಲೇ ಚಿತ್ರದ ಎಡಿಟರ್ ಕಲೈವಾಣನ್, ‘ಒಂದು ವೇಳೆ ಈ ಸಿನಿಮಾದಲ್ಲಿ ವಿಜಯ್ ನಟಿಸಿದ್ದರೆ, ಅವರ ಸ್ಟಾರ್‌ಡಮ್‌ಗೆ ತಕ್ಕಂತೆ ದೃಶ್ಯಗಳು ಮತ್ತಷ್ಟು ಬ್ಲಾಸ್ಟಿಂಗ್ ಆಗಿರುತ್ತಿದ್ದವು’ ಎಂದು ಸಂದರ್ಶನವೊಂದರಲ್ಲಿ ಹೇಳಿಕೆ ನೀಡಿದರು. ಸೂರ್ಯ ನಟಿಸಿ ಸಿನಿಮಾ ಸೂಪರ್ ಹಿಟ್ ಆಗಿರುವಾಗ ಈ ರೀತಿಯ ಹೋಲಿಕೆ ಮಾಡಿದ್ದು ಅಭಿಮಾನಿಗಳ ಕೋಪವನ್ನು ಮತ್ತಷ್ಟು ಹೆಚ್ಚಿಸಿತು.
ಅಭಿಮಾನಿಗಳಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತ ಎಡಿಟರ್ ಕಲೈವಾಣನ್ ಸೋಶಿಯಲ್ ಮೀಡಿಯಾದಲ್ಲಿ ಬಹಿರಂಗ ಕ್ಷಮೆ ಯಾಚಿಸಿದ್ದಾರೆ. ‘ಸೂರ್ಯ ಅಣ್ಣನ ಅಭಿಮಾನಿಗಳಿಗೆ ನಿಜಕ್ಕೂ ಕ್ಷಮೆ ಕೇಳುತ್ತೇನೆ. ನನ್ನ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗಿದೆ. ನಾನು ಬಳಸಿದ ಪದಗಳು ನನ್ನದೇ ತಪ್ಪು. ಸೂರ್ಯ ಅಣ್ಣನಿಗೆ ನಾನು ಯಾವಾಗಲೂ ಕೃತಜ್ಞನಾಗಿರುತ್ತೇನೆ’ ಎಂದು ಬರೆದುಕೊಂಡಿದ್ದಾರೆ.
ಈ ಎಲ್ಲ ಬೆಳವಣಿಗೆಗಳ ನಡುವೆ ನಟ ಸೂರ್ಯ ಯಾರ ಹೆಸರನ್ನೂ ಉಲ್ಲೇಖಿಸದೆ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಒಂದು ಸಣ್ಣ ಸಂದೇಶ ಹಂಚಿಕೊಂಡಿದ್ದಾರೆ. ‘ಪ್ರೀತಿಯಿಂದ ಮುನ್ನಡೆಯಿರಿ. ದಯೆ ಇರಲಿ. ಉದಾರವಾಗಿರಿ’ ಎಂದು ಬರೆದುಕೊಂಡಿದ್ದಾರೆ. ಅಭಿಮಾನಿಗಳಿಗೆ ಶಾಂತವಾಗಿರುವಂತೆ ಸೂಚಿಸಲು ಸೂರ್ಯ ಈ ಪೋಸ್ಟ್ ಮಾಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇದನ್ನೂ ಓದಿ: ‘ಕರುಪ್ಪು’ ಸಿನಿಮಾ ಗೆದ್ದ ಖುಷಿಯಲ್ಲಿ ತಂಡದವರಿಗೆ ಕಾರು ಗಿಫ್ಟ್ ಕೊಟ್ಟ ನಟ ಸೂರ್ಯ
ವಿವಾದಗಳು ಏನೇ ಇದ್ದರೂ ‘ಕರುಪ್ಪು’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಎಬ್ಬಿಸಿದೆ. ಚಿತ್ರತಂಡದ ಅಧಿಕೃತ ಮಾಹಿತಿ ಪ್ರಕಾರ, ಸಿನಿಮಾ ಈಗಾಗಲೇ ವಿಶ್ವಾದ್ಯಂತ ಬರೋಬ್ಬರಿ ₹300 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದೆ. ಈ ಮೂಲಕ ಸೂರ್ಯ ಅವರ ಕೆರಿಯರ್‌ನಲ್ಲೇ ಅತಿ ದೊಡ್ಡ ಹಿಟ್ ಚಿತ್ರಗಳ ಸಾಲಿಗೆ ‘ಕರುಪ್ಪು’ ಸೇರ್ಪಡೆಯಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.