ತ್ರಿಶಾ ನಟನೆಯ ‘ಕರುಪ್ಪು’ ಸಿನಿಮಾಗೆ ವಿಶೇಷ ಅನುಮತಿ ನೀಡಿದ ಸಿಎಂ ವಿಜಯ್

ದಳಪತಿ ವಿಜಯ್ ಅವರು ಮುಖ್ಯಮಂತ್ರಿ ಆಗಿರುವುದು ಚಿತ್ರರಂಗದ ಹಲವರಿಗೆ ಸಂತಸ ತಂದಿದೆ. ಸೂರ್ಯ ಮತ್ತು ತ್ರಿಶಾ ಕೃಷ್ಣನ್ ನಟನೆಯ ‘ಕರುಪ್ಪು’ ಸಿನಿಮಾಗೆ ವಿಜಯ್ ಅವರು ವಿಶೇಷ ಅನುಮತಿ ನೀಡಿದ್ದಾರೆ. ಅದಕ್ಕಾಗಿ ವಿಜಯ್ ಅವರಿಗೆ ಈ ಚಿತ್ರತಂಡದವರು ಧನ್ಯವಾದ ತಿಳಿಸಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

ತ್ರಿಶಾ ನಟನೆಯ ‘ಕರುಪ್ಪು’ ಸಿನಿಮಾಗೆ ವಿಶೇಷ ಅನುಮತಿ ನೀಡಿದ ಸಿಎಂ ವಿಜಯ್
Trisha Krishnan, Vijay

Updated on: May 12, 2026 | 10:46 PM

ಕಾಲಿವುಡ್‌ನ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ‘ಕರುಪ್ಪು’ (Karuppu) ಸಿನಿಮಾ ಮೇ 14ರಂದು ತೆರೆಗೆ ಬರಲು ಸಜ್ಜಾಗಿದೆ. ಈ ಸಿನಿಮಾದಲ್ಲಿ ಸೂರ್ಯ ಮತ್ತು ತ್ರಿಶಾ ಕೃಷ್ಣನ್ ಅವರು ಜೋಡಿಯಾಗಿ ಅಭಿನಯಿಸಿದ್ದಾರೆ. ಚಿತ್ರದ ಬಿಡುಗಡೆ ಸಮಯದಲ್ಲಿ ತಮಿಳುನಾಡಿನ ನೂತನ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ (Tamil Nadu CM Vijay) ಅವರು ಚಿತ್ರತಂಡಕ್ಕೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಬೆಳಿಗ್ಗೆ 9 ಗಂಟೆಗೆ ಮೊದಲ ಪ್ರದರ್ಶನ ಮಾಡಲು ವಿಜಯ್ ಅವರು ಅನುಮತಿ ನೀಡಿದ್ದಾರೆ. ವಿಜಯ್ ಜೊತೆ ತ್ರಿಶಾ (Trisha) ಅವರು ಆಪ್ತತೆ ಹೊಂದಿದ್ದಾರೆ ಎಂಬುದು ಗುಟ್ಟಾಗಿ ಉಳಿದಿಲ್ಲ.

ಸಾಮಾನ್ಯವಾಗಿ ತಮಿಳುನಾಡಿನಲ್ಲಿ ಮುಂಜಾನೆಯ ಪ್ರದರ್ಶನಗಳಿಗೆ ಕಟ್ಟುನಿಟ್ಟಿನ ನಿಯಮಗಳಿವೆ. ಆದರೆ, ಆರ್.ಜೆ. ಬಾಲಾಜಿ ನಿರ್ದೇಶನದ ‘ಕರುಪ್ಪು’ ಚಿತ್ರದ ಕ್ರೇಜ್ ಪರಿಗಣಿಸಿ, ಮುಖ್ಯಮಂತ್ರಿ ವಿಜಯ್ ಅವರು ಮೇ 14ರಿಂದ ಬೆಳಿಗ್ಗೆ 9 ಗಂಟೆಗೆ ವಿಶೇಷ ಪ್ರದರ್ಶನಗಳನ್ನು ನಡೆಸಲು ಅನುಮತಿ ನೀಡಿದ್ದಾರೆ. ಇದರಿಂದ ಸೂರ್ಯ ಅಭಿಮಾನಿಗಳು ಸಂಭ್ರಮದಲ್ಲಿದ್ದಾರೆ.

ಚಿತ್ರದ ನಿರ್ಮಾಣ ಸಂಸ್ಥೆಯಾದ ‘ಡ್ರೀಮ್ ವಾರಿಯರ್ ಪಿಕ್ಚರ್ಸ್’ ಈ ಕುರಿತು ಅಧಿಕೃತ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ಸಿಎಂ ವಿಜಯ್ ಅವರು ಕಡತಕ್ಕೆ ಸಹಿ ಹಾಕುತ್ತಿರುವ ಫೋಟೋವನ್ನು ಹಂಚಿಕೊಂಡಿರುವ ನಿರ್ಮಾಪಕರು, ‘ನಮ್ಮ ಗೌರವಾನ್ವಿತ ಮುಖ್ಯಮಂತ್ರಿಗಳಾದ ತಿರು ಜೋಸೆಫ್ ವಿಜಯ್ ಅವರಿಗೆ ಧನ್ಯವಾದಗಳು. ನಿಮ್ಮ ವಿಶೇಷ ಅನುಮತಿಯಿಂದ ಮೇ 14ರಿಂದ ಬೆಳಿಗ್ಗೆ 9 ಗಂಟೆಗೆ ಮೊದಲ ಪ್ರದರ್ಶನ ಆರಂಭವಾಗಲಿದೆ’ ಎಂದು ಬರೆದುಕೊಂಡಿದ್ದಾರೆ.

ಕಳೆದ ವಾರವಷ್ಟೇ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ವಿಜಯ್ ಅವರ ಟಿವಿಕೆ ಪಕ್ಷ ಭರ್ಜರಿ ಜಯ ದಾಖಲಿಸಿದಾಗ, ನಟ ಸೂರ್ಯ ಅವರು ಸಾಮಾಜಿಕ ಜಾಲತಾಣದ ಮೂಲಕ ಅಭಿನಂದನೆ ಸಲ್ಲಿಸಿದ್ದರು. ‘ತಮಿಳುನಾಡು ಜನರು ನನ್ನ ಗೆಳೆಯ ವಿಜಯ್ ಮೇಲೆ ಅಪಾರ ನಂಬಿಕೆ ಇಟ್ಟಿದ್ದಾರೆ. ಅವರ ರಾಜಕೀಯ ಜೀವನ ಯಶಸ್ವಿಯಾಗಲಿ’ ಎಂದು ಸೂರ್ಯ ಹಾರೈಸಿದ್ದರು. ಇದೀಗ ವಿಜಯ್ ಅವರು ಸಿಎಂ ಆದ ನಂತರ ಸೂರ್ಯ ಅವರ ಚಿತ್ರಕ್ಕೆ ಬೆಂಬಲ ಸೂಚಿಸಿರುವುದು ಇಬ್ಬರ ನಡುವಿನ ಆತ್ಮೀಯತೆಯನ್ನು ಎತ್ತಿ ತೋರಿಸಿದೆ.

ಇದನ್ನೂ ಓದಿ: ವಿಜಯ್ ಪ್ರಮಾಣವಚನ ನೋಡಲು ಬರಲಿಲ್ಲ ಪತ್ನಿ, ಮಕ್ಕಳು; ಮಿಂಚಿದ್ದು ಮಾತ್ರ ತ್ರಿಶಾ

‘ಕರುಪ್ಪು’ ಚಿತ್ರವನ್ನು ಎಸ್.ಆರ್. ಪ್ರಭು ಮತ್ತು ಎಸ್.ಆರ್. ಪ್ರಕಾಶ್ ಬಾಬು ನಿರ್ಮಿಸಿದ್ದು, ಸೂರ್ಯ ಅವರು ಭಿನ್ನವಾದ ಗೆಟಪ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದ್ದರಿಂದ ಅಭಿಮಾನಿಗಳಲ್ಲಿ ಈ ಸಿನಿಮಾ ಬಗ್ಗೆ ಹೆಚ್ಚು ನಿರೀಕ್ಷೆ ಇದೆ. ಈ ಚಿತ್ರದ ಮೂಲಕ ತ್ರಿಶಾ ಮತ್ತು ಸೂರ್ಯ ದೀರ್ಘಕಾಲದ ನಂತರ ತೆರೆ ಹಂಚಿಕೊಳ್ಳುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us