‘ಪರಾಶಕ್ತಿ’ ಸಿನಿಮಾ ಬ್ಯಾನ್ ಮಾಡಿ: ಕಾಂಗ್ರೆಸ್ ಆಗ್ರಹ, ಕಾರಣವೇನು?

Parasakthi movie: ‘ಜನ ನಾಯಗನ್’ ರೀತಿ ‘ಪರಾಶಕ್ತಿ’ ತಮಿಳು ಸಿನಿಮಾಕ್ಕೆ ಸಹ ಸಮಸ್ಯೆಗಳು ಎದುರಾಗುತ್ತಲೇ ಇವೆ. ‘ಪರಾಶಕ್ತಿ’ ಸಿನಿಮಾಕ್ಕೆ ಸೆನ್ಸಾರ್ ಮಂಡಳಿ ವಿರೋಧ ವ್ಯಕ್ತಪಡಿಸಿ, 23 ಕಟ್​​ಗಳನ್ನು ಸೂಚಿಸಿತ್ತು. ಕೊನೆಗೂ ನಿಗದಿತ ದಿನಾಂಕದಂದೇ ಸಿನಿಮಾ ಬಿಡುಗಡೆ ಆಗಿದ್ದು ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ. ಇದೀಗ ತಮಿಳುನಾಡು ಕಾಂಗ್ರೆಸ್, ‘ಪರಾಶಕ್ತಿ’ ಸಿನಿಮಾದ ನಿಷೇಧಕ್ಕೆ ಆಗ್ರಹಿಸಿದೆ.

‘ಪರಾಶಕ್ತಿ’ ಸಿನಿಮಾ ಬ್ಯಾನ್ ಮಾಡಿ: ಕಾಂಗ್ರೆಸ್ ಆಗ್ರಹ, ಕಾರಣವೇನು?
Parasakthi

Updated on: Jan 13, 2026 | 7:21 PM

ತಮಿಳುನಾಡು ಚಿತ್ರರಂಗಕ್ಕೆ ಈ ಸಂಕ್ರಾಂತಿ ಅಥವಾ ಪೊಂಗಲ್ ವಿವಾದಾತ್ಮಕವಾಗಿ ಪರಿಣಮಿಸಿದೆ. ಜನವರಿ 09ರಂದು ಬಿಡುಗಡೆ ಆಗಬೇಕಿದ್ದ ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ (Jana Nayagan) ಸಿನಿಮಾ ಬಿಡುಗಡೆ ಆಗಲಿಲ್ಲ. ಸಿನಿಮಾ ವಿವಾದದಲ್ಲಿ ಸಿಲುಕಿಕೊಂಡಿದ್ದು ಪ್ರಕರಣ ನ್ಯಾಯಾಲಯದಲ್ಲಿದೆ. ‘ಜನ ನಾಯಗನ್’ ಎದುರು ಬಿಡುಗಡೆ ಆದ ‘ಪರಾಶಕ್ತಿ’ಗೂ ಸಹ ಸೆನ್ಸಾರ್ ಸಮಸ್ಯೆ ಎದುರಾಗಿತ್ತು, ಬರೋಬ್ಬರಿ 23 ಕಟ್​​ಗಳನ್ನು ಸಿನಿಮಾಕ್ಕೆ ಸೂಚಿಸಲಾಗಿತ್ತು. ಆದರೆ ಕೊನೆಗೂ ಸಿನಿಮಾ ಬಿಡುಗಡೆ ಆಗಿದ್ದು, ಬಿಡುಗಡೆ ಆದ ಬಳಿಕ ಸಿನಿಮಾಕ್ಕೆ ಒಂದಾದ ಮೇಲೊಂದರಂತೆ ಸಮಸ್ಯೆ ಎದುರಾಗುತ್ತಲೇ ಇದೆ.

‘ಜನ ನಾಯಗನ್’ ರೀತಿ ‘ಪರಾಶಕ್ತಿ’ ಸಹ ರಾಜಕೀಯ ವಿಷಯವನ್ನು ಒಳಗೊಂಡ ಸಿನಿಮಾ ಆಗಿದೆ. ಹಿಂದಿ ಹೇರಿಕೆಯ ವಿರುದ್ಧ ತಮಿಳರು ಮಾಡಿದ ಹೋರಾಟದ ಕತೆಯನ್ನು ‘ಪರಾಶಕ್ತಿ’ ಸಿನಿಮಾ ಒಳಗೊಂಡಿದೆ. ಅಲ್ಲದೆ, ಸಿನಿಮಾದ ನಿರ್ಮಾಪಕರು ಸಹ ತಮಿಳುನಾಡಿನ ಆಡಳಿತ ಪಕ್ಷವಾದ ಡಿಎಂಕೆಯ ಆಪ್ತರಾಗಿದ್ದು, ಸಿನಿಮಾನಲ್ಲಿ ಡಿಎಂಕೆ ಪರವಾದ ಹಲವು ಅಂಶಗಳನ್ನು ಸೇರಿಸಲಾಗಿದೆ ಎಂಬ ಟೀಕೆ ವ್ಯಕ್ತವಾಗಿದೆ. ಇವುಗಳ ಜೊತೆಗೆ ಇದೀಗ ತಮಿಳುನಾಡು ಕಾಂಗ್ರೆಸ್, ‘ಪರಾಶಕ್ತಿ’ ಸಿನಿಮಾದ ವಿರುದ್ಧ ದನಿ ಎತ್ತಿದ್ದು ಸಿನಿಮಾವನ್ನು ಬ್ಯಾನ್ ಮಾಡಬೇಕೆಂದು ಒತ್ತಾಯಿಸಿದೆ.

ತಮಿಳುನಾಡು ಯುವ ಕಾಂಗ್ರೆಸ್ ‘ಪರಾಶಕ್ತಿ’ ಸಿನಿಮಾದ ವಿರುದ್ಧ ದನಿ ಎತ್ತಿದ್ದು, ಈ ಸಿನಿಮಾ ಇತಿಹಾಸವನ್ನು ತಿರುಚುವ ಕೆಲಸ ಮಾಡುತ್ತಿದೆ ಎಂದಿದೆ. ಸಿನಿಮಾನಲ್ಲಿ ತೋರಿಸಿರುವಂತೆ 1965 ರಲ್ಲಿ ಕಾಂಗ್ರೆಸ್ ಸರ್ಕಾರವು, ಪೋಸ್ಟ್ ಆಫೀಸ್ ಹುದ್ದೆಗೆ ಹಿಂದಿಯಲ್ಲಿ ಅಪ್ಲಿಕೇಷನ್ ತುಂಬುವಂತೆ ಆದೇಶಿಸರಲಿಲ್ಲ. ಅಲ್ಲದೆ ಸಿನಿಮಾದ ನಾಯಕ ಶಿವಕಾರ್ತಿಕೇಯನ್ ನಿರ್ವಹಿಸಿರುವ ಪಾತ್ರ, 1965 ಫೆಬ್ರವರಿ 12 ರಂದು ಕೊಯಮತ್ತೂರಿನಲ್ಲಿ ಇಂದಿರಾ ಗಾಂಧಿಯನ್ನು ಭೇಟಿ ಮಾಡುವ ದೃಶ್ಯವಿದೆ. ಅಸಲಿಗೆ ಆ ಸಮಯದಲ್ಲಿ ಅವರು ಕೊಯಮತ್ತೂರಿಗೆ ಬಂದಿರಲೇ ಇಲ್ಲ. ಅಲ್ಲದೆ, ಸಿನಿಮಾದ ಕೆಲವು ದೃಶ್ಯಗಳಲ್ಲಿ ಇಂದಿರಾ ಗಾಂಧಿಯನ್ನು ಟೀಕಿಸುವ ದೃಶ್ಯವಿದೆ. ಇಂದಿರಾ ಗಾಂಧಿ, ಕೆ ಕಾಮರಾಜ್, ಲಾಲ್ ಬಹದ್ಧೂರ್ ಶಾಸ್ತ್ರಿ ಅವರ ನಿಜ ಚಿತ್ರಗಳನ್ನು ಬಳಸಲಾಗಿದೆ ಹಾಗೂ ಪೊಲ್ಲಚ್ಚಿಯಲ್ಲಿ 200ಕ್ಕೂ ಹೆಚ್ಚು ಜನರನ್ನು ಕೊಲ್ಲಲಾಗಿದೆ ಎಂದು ಕ್ಲೈಮ್ಯಾಕ್ಸ್​​ನಲ್ಲಿ ತೋರಿಸಲಾಗಿದೆ. ಇದಕ್ಕೆ ಯಾವುದೇ ಸಾಕ್ಷ್ಯ ಸಹ ಇಲ್ಲ’ ಎಂದಿದ್ದಾರೆ ತಮಿಳುನಾಡು ಯುವ ಕಾಂಗ್ರೆಸ್ ಉಪಾಧ್ಯಕ್ಷ ಭಾಸ್ಕರನ್.

ಇದನ್ನೂ ಓದಿ:‘ಜನ ನಾಯಗನ್’ ಪ್ರಕರಣ ಕೋರ್ಟ್​​ನಲ್ಲಿರುವಾಗ ವಿಜಯ್​ಗೆ ಸಿಬಿಐನಿಂದ ಸಂಕಷ್ಟ

ಈ ಸಿನಿಮಾ ಇತಿಹಾಸವನ್ನು ತಿರುಚುವ, ತಪ್ಪು ಮಾಹಿತಿಯನ್ನು ಜನಗಳಿಗೆ ತಲುಪಿಸುವ ಕಾರ್ಯವನ್ನು ಮಾಡುತ್ತಿದ್ದು, ಈ ಕೂಡಲೇ ಈ ಸಿನಿಮಾವನ್ನು ಬ್ಯಾನ್ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಇದರ ಜೊತೆಗೆ ‘ಪರಾಶಕ್ತಿ’ ಸಿನಿಮಾಕ್ಕೆ ನೆಗೆಟಿವ್ ಪ್ರಚಾರ ಮಾಡಲಾಗುತ್ತಿದೆ ಎಂದು ಸಹ ಸಿನಿಮಾದ ಕ್ರಿಯೇಟಿವ್ ನಿರ್ದೇಶಕ ದೇವ್ ರಾಮಂತ್ ಆರೋಪ ಮಾಡಿದ್ದು, ದಳಪತಿ ವಿಜಯ್ ಅಭಿಮಾನಿಗಳು ಉದ್ದೇಶಪೂರ್ವಕವಾಗಿ ‘ಪರಾಶಕ್ತಿ’ ಸಿನಿಮಾದ ವಿರುದ್ಧ ನೆಗೆಟಿವ್ ಸುದ್ದಿಗಳನ್ನು ಹಬ್ಬುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ. ‘ಪರಾಶಕ್ತಿ’ ಸಿನಿಮಾವನ್ನು ಸುಧಾ ಕೊಂಗರ ನಿರ್ದೇಶನ ಮಾಡಿದ್ದು, ಸಿನಿಮಾನಲ್ಲಿ ಶಿವಕಾರ್ತಿಕೇಯನ್ ಜೊತೆಗೆ ಕನ್ನಡದ ನಟಿ ಶ್ರೀಲೀಲಾ ಸಹ ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ