ವಿಜಯ್ ಸೇತುಪತಿ (Vijay Sethupathi) ಮೇಲೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ(Kempegowda International Airport Bengaluru) ಹಲ್ಲೆ ಮಾಡಿದ ಪ್ರಕರಣ ದೊಡ್ಡ ಮಟ್ಟದಲ್ಲಿ ಹೈಪ್ ಪಡೆದುಕೊಂಡಿತ್ತು. ಇದಕ್ಕೆ ಸಾಕಷ್ಟು ಜನರು ವಿರೋಧ ವ್ಯಕ್ತಪಡಿಸಿದ್ದರು. ಹಲ್ಲೆ ಮಾಡಿದ ವ್ಯಕ್ತಿಗೆ ಶಿಕ್ಷೆ ಆಗಬೇಕು ಎಂದು ಕೆಲವರು ಆಗ್ರಹಿಸಿದ್ದರು. ‘ಈ ಪ್ರಕರಣವನ್ನು ಇಷ್ಟೊಂದು ದೊಡ್ಡದು ಮಾಡುವ ಅವಶ್ಯಕತೆಯೇ ಇರಲಿಲ್ಲ. ಹಲ್ಲೆ ಮಾಡಿದ ವ್ಯಕ್ತಿ ಕುಡಿದಿದ್ದ ಅಷ್ಟೇ’ ಎಂದು ವಿಜಯ್ ಸೇತುಪತಿ ಸ್ಪಷ್ಟಪಡಿಸಿದ್ದರು. ಈ ಬೆನ್ನಲ್ಲೇ ವಿಜಯ್ ಸೇತುಪತಿ ಮೇಲೆ ಹಲ್ಲೆ ಮಾಡಿದರೆ ನಗದು ಬಹುಮಾನ ನೀಡುವುದಾಗಿ ರಾಜಕಾರಣಿ ಒಬ್ಬರು ಘೋಷಿಸಿದ್ದಾರೆ. ಈ ಮೂಲಕ ವಿವಾದ ಹುಟ್ಟುಹಾಕಿದ್ದಾರೆ. ಈ ಹೇಳಿಕೆ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ರಾಜಕಾರಣಿ ಬಗ್ಗೆ ಎಲ್ಲರೂ ದ್ವೇಷ ಕಾರುತ್ತಿದ್ದಾರೆ.
ನವೆಂಬರ್ 2 ರಾತ್ರಿ ನಟ ವಿಜಯ್ ಸೇತು ಪತಿ ಬೆಂಗಳೂರಿಗೆ ಬಂದಿದ್ದರು. ವಿಮಾನದಲ್ಲಿ ಬರುವ ವೇಳೆ ಸಹಪ್ರಯಾಣಿಕನ ಜೊತೆ ವಾಗ್ವಾದ ಏರ್ಪಟ್ಟಿತ್ತು. ವಿಮಾನ ಇಳಿದು ಏರ್ಪೋಟ್ನಿಂದ ಹೊರ ಬರುತ್ತಿದ್ದ ವೇಳೆ ವಿಜಯ್ ಸೇತುಪತಿ ಮತ್ತು ಅವರ ಪಿಎ ಮೇಲೆ ಹಿಂದಿನಿಂದ ಬಂದು ಸಹ ಪ್ರಯಾಣಿಕ ಹಲ್ಲೆಗೆ ಯತ್ನಿಸಿದ್ದ. ಈ ವಿಡಿಯೋ ವೈರಲ್ ಆಗಿತ್ತು. ಇದಕ್ಕೆ ಸಂಬಂಧಿಸಿ ಸ್ಪಷ್ಟನೆ ನೀಡಿದ್ದ ವಿಜಯ್ ಸೇತುಪತಿ, ‘ನಮ್ಮ ಮೇಲೆ ಹಲ್ಲೆಗೆ ಪ್ರಯತ್ನಿಸಿದ ವ್ಯಕ್ತಿ ನನ್ನ ಅಭಿಮಾನಿ ಅಲ್ಲ. ವಿಮಾನದಲ್ಲಿ ಆತ ಸಹ-ಪ್ರಯಾಣಿಕ ಆಗಿದ್ದ. ಪ್ರಯಾಣದ ವೇಳೆ ನಮ್ಮೊಂದಿಗೆ ವಾಗ್ವಾದ ಮಾಡುತ್ತಲೇ ಇದ್ದ. ಆತ ಕುಡಿದಿದ್ದ’ ಎಂದು ವಿಜಯ್ ಸೇತುಪತಿ ಹೇಳಿದ್ದರು.
ಹಲ್ಲೆ ಮಾಡಿದ ವ್ಯಕ್ತಿ ಹೆಸರು ಮಹಾ ಗಾಂಧಿ. ಹಲ್ಲೆ ಬೆನ್ನಲ್ಲೇ ಅವರು ಗಂಭೀರ ಆರೋಪವೊಂದನ್ನು ಮಾಡಿದ್ದರು. ‘ಸ್ವಾತಂತ್ರ್ಯ ಹೋರಾಟಗಾರ ಮುತ್ತುರಾಮಲಿಂಗ ತೇವರ್ಗೆ ವಿಜಯ್ ಸೇತುಪತಿ ಅವಮಾನ ಮಾಡಿದ್ದಾರೆ. ಆ ಕಾರಣಕ್ಕೆ ನಾನು ಹಲ್ಲೆ ಮಾಡಿದ್ದೆ’ ಎಂದು ಮಹಾ ಹೇಳಿಕೊಂಡಿದ್ದಾರೆ. ಇದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಆದರೆ, ಇದನ್ನು ವಿಜಯ್ ಒಪ್ಪಿಕೊಂಡಿಲ್ಲ.
ತಮಿಳುನಾಡಿನ ವಿವಾದಾತ್ಮಕ ರಾಜಕಾರಣಿ ಅರ್ಜುನ್ ಸಂಪತ್ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ‘ವಿಜಯ್ ಸೇತುಪತಿ ಅವರು ಮುತ್ತುರಾಮಲಿಂಗ ತೇವರ್ಗೆ ಅವಮಾನ ಮಾಡಿದ ಬಗ್ಗೆ ಕ್ಷಮೆ ಕೇಳಬೇಕು. ಅವರು ಕ್ಷಮೆ ಕೇಳುವವರೆಗೂ ನಾವು ಬಿಡುವುದಿಲ್ಲ. ಯಾರು ಅವರಿಗೆ ಹೋಗಿ ಒದೆಯುತ್ತಾರೋ, ಪ್ರತಿ ಒದೆತಕ್ಕೆ 1 ಸಾವಿರ ರೂಪಾಯಿ ನೀಡುತ್ತೇವೆ’ ಎಂದಿದ್ದಾರೆ.
ಇದನ್ನೂ ಓದಿ: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ತಮಿಳು ನಟ ವಿಜಯ್ ಸೇತುಪತಿ ಮೇಲೆ ಹಲ್ಲೆಗೆ ಯತ್ನ, ವಿಡಿಯೋ ವೈರಲ್
‘ಬೆಂಗಳೂರಿನ ಹಲ್ಲೆ ಘಟನೆಯನ್ನು ಅನವಶ್ಯಕ ದೊಡ್ಡದು ಮಾಡಲಾಯ್ತು’: ನಟ ವಿಜಯ್ ಸೇತುಪತಿ
Published On - 4:05 pm, Mon, 8 November 21