
ಸಿನಿಮಾ (Cinema) ಉದ್ಯಮ ಎಂಬುದು ಸಾಕಷ್ಟು ಏರಿಳಿತ ಇರುವ ಉದ್ಯಮ. ಸಿನಿಮಾ ಹಿಟ್ ಆದರೆ ನಿರ್ಮಾಪಕ ರಾತ್ರೋ ರಾತ್ರಿ ಶ್ರೀಮಂತನಾಗುತ್ತಾನೆ, ನಟಿಸಿರುವ ನಟ-ನಟಿಯರು, ತಂತ್ರಜ್ಞರೆಲ್ಲ ಸ್ಟಾರ್ ಆಗುತ್ತಾರೆ. ಆದರೆ ಸಿನಿಮಾ ಸೋತಿತೆಂದರೆ ನಿರ್ಮಾಪಕ ಬೀದಿ ಪಾಲಾಗುತ್ತಾನೆ. ಸಿನಿಮಾನಲ್ಲಿ ಕೆಲಸ ಮಾಡಿರುವ ನಟ-ನಟಿಯರಿಗೆ ಸಂಭಾವನೆ ಸಿಕ್ಕಿರುತ್ತದೆ, ಅವರು ಮತ್ತೊಂದು ಅವಕಾಶ ಅರಸಿ ಹೊರಡುತ್ತಾರೆ. ಇದು ನಿರ್ಮಾಪಕರಿಗೆ ಭಾರಿ ಹೊಡೆತ ನೀಡುತ್ತಿದೆ. ಇದೇ ಕಾರಣಕ್ಕೆ ತಮಿಳು ನಿರ್ಮಾಪಕರು ದಿಟ್ಟ ನಿರ್ಧಾರವೊಂದು ಮಾಡಿದ್ದಾರೆ.
ಇತ್ತೀಚೆಗೆ ತಮಿಳಿನ ಕೆಲವು ದೊಡ್ಡ ಬಜೆಟ್ ಸಿನಿಮಾಗಳು ಒಂದರ ಹಿಂದೊಂದರಂತೆ ಸೋತಿವೆ. ಕಮಲ್ ಹಾಸನ್ ನಟನೆಯ ‘ಥಗ್ ಲೈಫ್’, ರಜನೀಕಾಂತ್ ನಟನೆಯ ‘ಕೂಲಿ’ ಸಹ ನಿರೀಕ್ಷಿತ ಪ್ರದರ್ಶನ ಕಂಡಿಲ್ಲ. ‘ಮದರಾಸಿ’, ಸೂರ್ಯ ನಟನೆಯ ‘ಕಂಗುವ’ ವಿಕ್ರಂ ನಟನೆಯ ‘ವೀರ ಧೀರ ಶೂರನ್’ ಇನ್ನೂ ಕೆಲವು ದೊಡ್ಡ ಬಜೆಟ್ ಸಿನಿಮಾಗಳು ಫ್ಲಾಪ್ ಆದವು. ಇದೇ ಕಾರಣಕ್ಕೆ ತಮಿಳಿನ ನಿರ್ಮಾಪಕರ ಸಂಘದ ಸದಸ್ಯರು ಒಟ್ಟಿಗೆ ಸಭೆ ನಡೆಸಿ ಹಂಚಿಕೆ ಆಧಾರದಲ್ಲಿ ಸಿನಿಮಾ ಮಾಡುವ ನಿರ್ಧಾರವನ್ನು ತಳೆದಿದ್ದಾರೆ.
ಇನ್ನು ಮುಂದೆ ತಮಿಳಿನಲ್ಲಿ ನಿರ್ಮಾಣ ಆಗುವ ದೊಡ್ಡ ಬಜೆಟ್ ಸಿನಿಮಾಗಳು ಅಥವಾ ಸ್ಟಾರ್ ನಟರ ಸಿನಿಮಾಗಳು ಹಂಚಿಕೆ ಆಧಾರದಲ್ಲಿ ನಿರ್ಮಾಣ ಆಗಲಿವೆ. ಸಿನಿಮಾ ಗೆದ್ದರೆ ಬಂದ ಲಾಭದಲ್ಲಿ ಸಿನಿಮಾದ ಸ್ಟಾರ್ ನಟ, ಪ್ರಮುಖ ತಂತ್ರಜ್ಞರಿಗೆ ಪಾಲು ಇರಲಿದೆ. ಒಂದೊಮ್ಮೆ ಸಿನಿಮಾ ಸೋತರೆ ನಿರ್ಮಾಪಕರ ಜೊತೆಗೆ ನಟರ, ತಂತ್ರಜ್ಞರು ಸಹ ಹಣ ತುಂಬಿಕೊಡಬೇಕಾಗಿರುತ್ತದೆ.
ಇದನ್ನೂ ಓದಿ:ಈ ಶುಕ್ರವಾರ ಚಿತ್ರಮಂದಿರಗಳಲ್ಲಿ ಹಬ್ಬ, ಯಾವೆಲ್ಲ ಸಿನಿಮಾ ಬಿಡುಗಡೆ?
ಇದರ ಜೊತೆಗೆ ಸಿನಿಮಾಗಳು ಎಷ್ಟು ವಾರದ ಬಳಿಕ ಒಟಿಟಿಗೆ ಬರಬೇಕು ಎಂಬ ಬಗ್ಗೆಯೂ ನಿಯಮಗಳನ್ನು ರೂಪಿಸಲಾಗಿದೆ. ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುವ ದೊಡ್ಡ ಬಜೆಟ್ ಸಿನಿಮಾಗಳು ಕಡ್ಡಾಯವಾಗಿ ಎಂಟು ವಾರಗಳ ಬಳಿಕವೇ ಒಟಿಟಿಗೆ ಬರಬೇಕು ಎಂಬ ನಿಯಮ ರೂಪಿಸಲಾಗಿದೆ. ಆದರೆ ಸಣ್ಣ ಬಜೆಟ್ ಸಿನಿಮಾಗಳಿಗೆ ವಿನಾಯಿತಿ ನೀಡಿದ್ದು ಅವು ನಾಲ್ಕು ವಾರಗಳಲ್ಲಿ ಒಟಿಟಿಗೆ ಬರಬಹುದಾಗಿದೆ.
ಇದರ ಜೊತೆಗೆ ಸಣ್ಣ ಬಜೆಟ್ ಸಿನಿಮಾಗಳಿಗೆ ಚಿತ್ರಮಂದಿರ ಸಿಗುವಂತೆ ಮಾಡಲು, ಅವುಗಳ ರಿಲೀಸ್ಗೆ ಸಹಕರಿಸಲೆಂದು ಚಿತ್ರಮಂದಿರ ಮಾಲೀಕರು, ವಿತರಕರು ಉಳ್ಳ ಹೊಸ ಸಮಿತಿಯೊಂದನ್ನು ರಚಿಸಲು ಸಹ ನಿರ್ಮಾಪಕರುಗಳು ಸಭೆಯಲ್ಲಿ ನಿರ್ಣಯ ತೆಗೆದುಕೊಂಡಿದ್ದಾರೆ. ಇದರ ಜೊತೆಗೆ ನಿರ್ಮಾಪಕರುಗಳು, ನಟರುಗಳು ವೆಬ್ ಸರಣಿಗಳಿಗೆ ಆದ್ಯತೆ ನೀಡದೆ, ಸಿನಿಮಾಗಳಿಗೆ ಮಾತ್ರವೇ ಆದ್ಯತೆ ನೀಡುವಂತೆ ಒತ್ತಾಯ ಹೇರಲು ಸಭೆ ನಿಶ್ಚಯಿಸಿದೆ. ಸಿನಿಮಾ ವಿಮರ್ಶೆ ಹೆಸರಲ್ಲಿ ಸಿನಿಮಾಗಳಿಗೆ ಹಾನಿ ಮಾಡುತ್ತಿರುವ ಯೂಟ್ಯೂಬ್ ಚಾನೆಲ್ಗಳನ್ನು ಗುರುತಿಸಿ ಅವುಗಳ ವಿರುದ್ಧ ಕ್ರಮಕ್ಕೆ ಸಹ ನಿರ್ಮಾಪಕರು ಮುಂದಾಗಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:19 am, Wed, 12 November 25