ರಾಮ್ ಗೋಪಾಲ್ ವರ್ಮಾ ಕಚೇರಿ ಮುಂದೆ ಗಲಾಟೆ, ‘ವ್ಯೂಹಂ’ ಪೋಸ್ಟರ್ಗೆ ಬೆಂಕಿ
Ram Gopal Varma: ತೆಲುಗು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕಚೇರಿ ಮುಂದೆ ಟಿಡಿಪಿ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ನಿರ್ದೇಶಕ ರಾಮ್ ಗೋಪಾಲ್ ವರ್ಮಾ (Ram Gopal Varma) ಅವರ ಹೈದರಾಬಾದ್ ಕಚೇರಿ ‘ಡೆನ್’ ಎದುರು ಟಿಡಿಪಿ ಕಾರ್ಯಕರ್ತರು ಹಾಗೂ ಎನ್ಟಿಆರ್ ಕುಟುಂಬದ ಅಭಿಮಾನಿಗಳು ಪ್ರತಿಭಟನೆ ನಡೆಸಿದ್ದಾರೆ. ರಾಮ್ ಗೋಪಾಲ್ ವರ್ಮಾ ನಿರ್ದೇಶನ ಮಾಡಿರುವ ‘ವ್ಯೂಹಂ’ ಸಿನಿಮಾದ ಪೋಸ್ಟರ್ಗೆ ಬೆಂಕಿ ಹಚ್ಚಿದ್ದಾರೆ. ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿ, ಪ್ರತಿಭಟನಾಕಾರರನ್ನು ಸ್ಥಳದಿಂದ ನಿರ್ಗಮಿಸುವಂತೆ ಮಾಡಿದ್ದಾರೆ.
ಒಂದು ಕಾಲದ ಭಾರತದ ಟಾಪ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ಕಳೆದ ಕೆಲವು ವರ್ಷಗಳಿಂದ ವಿವಾದಗಳನ್ನು ಹುಟ್ಟುಹಾಕಲೆಂದೇ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಮಿಯಾ ಮಾಲ್ಕೊವಾ ಜೊತೆಗೆ ಪೋರ್ನ್ ಸಿನಿಮಾ ಮಾಡಿದ್ದ ವರ್ಮಾ, ಅದಾದ ಬಳಿಕವೂ ಮಹಿಳೆಯರ ಅಂದವನ್ನೇ ಬಂಡವಾಳವಾಗಿಸಿಕೊಂಡು ಕೆಲವು ಕಳಪೆ ಸಿನಿಮಾಗಳನ್ನು ಮಾಡಿ ತಮ್ಮದೇ ವೆಬ್ಸೈಟ್ನಲ್ಲಿ ಬಿಡುಗಡೆ ಮಾಡಿದ್ದರು. ಅದಾದ ಬಳಿಕ ಎನ್ಟಿಆರ್ ಹಾಗೂ ಚಿರಂಜೀವಿ ಕುಟುಂಬವನ್ನು ಗುರಿಯಾಗಿಸಿಕೊಂಡು ಅವರ ವಿರುದ್ಧ ಜನಾಭಿಪ್ರಾಯ ರೂಪಿಸುವಂತೆ ಸಿನಿಮಾಗಳನ್ನು ಮಾಡಲು ಪ್ರಾರಂಭಿಸಿದರು.
ಇದೀಗ ಅದೇ ಮಾದರಿಯ ‘ವ್ಯೂಹಂ’ ಹೆಸರಿನ ಸಿನಿಮಾವನ್ನು ವರ್ಮಾ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ಆಂಧ್ರ ಪ್ರದೇಶ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರನ್ನು ವಿಲನ್ ರೀತಿ ಹಾಗೂ ನಟ, ರಾಜಕಾರಣಿ ಪವನ್ ಕಲ್ಯಾಣ್ ಅವರನ್ನು ಕಮಿಡಿಯನ್ ರೀತಿ ಬಿಂಬಿಸಲಾಗಿದೆ. ಆಂಧ್ರದ ಪ್ರಸ್ತುತ ಸಿಎಂ ಜಗನ್ ಅನ್ನು ಹೀರೋ ರೀತಿ ತೋರಿಸಲಾಗಿದೆ. ರಾಜಶೇಖರ ರೆಡ್ಡಿ ಸಾವಿಗೆ ಟಿಡಿಪಿ ಪಕ್ಷದ ನಾಯಕ ಚಂದ್ರಬಾಬು ನಾಯ್ಡು ಕಾರಣ ಎಂಬರ್ಥ ಮೂಡುವಂಥಹಾ ದೃಶ್ಯಗಳು ಸಹ ಈ ಸಿನಿಮಾದಲ್ಲಿವೆ ಎನ್ನಲಾಗುತ್ತಿದೆ.
ಇದನ್ನೂ ಓದಿ: RGV: ‘ಗರುಡ ಗಮನ ವೃಷಭ ವಾಹನ’ ನೋಡಿ ಫಿದಾ ಆದ ರಾಮ್ ಗೋಪಾಲ್ ವರ್ಮಾ; ನಿರ್ದೇಶಕ ರಾಜ್ ಬಿ ಶೆಟ್ಟಿಗೆ ಹೇಳಿದ್ದೇನು?
ಇತ್ತೀಚೆಗಷ್ಟೆ ಚಂದ್ರಬಾಬು ನಾಯ್ಡು ಪುತ್ರ ನಾರಾ ಲೋಕೇಶ್, ನ್ಯಾಯಾಲಯಕ್ಕೆ ಮೊರೆ ಹೋಗಿ ಈ ಸಿನಿಮಾದ ಬಿಡುಗಡೆ ವಿರುದ್ಧ ತಡೆಯಾಜ್ಞೆ ತರುವಲ್ಲಿ ಯಶಸ್ವಿಯಾಗಿದ್ದರು. ಬಳಿಕ ಸಿನಿಮಾವನ್ನು ಬೆಂಗಳೂರಿನಲ್ಲಿ ವಿಶೇಷ ಸೆನ್ಸಾರ್ ಕಮಿಟಿ ಮುಂದೆ ಪ್ರಸ್ತುತ ಪಡಿಸಲಾಯ್ತು, ಸಿನಿಮಾ ವೀಕ್ಷಿಸಿದ ಸಮಿತಿಯು ಸಿನಿಮಾಕ್ಕೆ ಮತ್ತೆ ‘ಯು’ ಪ್ರಮಾಣ ಪತ್ರ ನೀಡಿದ್ದು, ಈ ನಿರ್ಣಯ ಟಿಡಿಪಿ ಸದಸ್ಯರು ರೊಚ್ಚಿಗೇಳುವಂತೆ ಮಾಡಿದೆ.
ಆರ್ಜಿವಿ, ‘ವ್ಯೂಹಂ’ ಸಿನಿಮಾವನ್ನು ಬಿಡುಗಡೆ ಮಾಡಿಯೇ ಸಿದ್ಧ ಎಂದು ಪಟ್ಟು ಹಿಡಿದಿದ್ದಾರೆ. ‘ವ್ಯೂಹಂ’ ಸಿನಿಮಾವನ್ನು ಎರಡು ಭಾಗಗಳಾಗಿ ಬಿಡುಗಡೆ ಮಾಡುವುದಾಗಿಯೂ ವರ್ಮಾ ಹೇಳಿದ್ದಾರೆ. ಒಂದು ಸಿನಿಮಾ ಈಗಲೂ ಮತ್ತೊಂದು ಸಿನಿಮಾವನ್ನು ಆಂಧ್ರ ಚುನಾವಣೆ ಘೋಷಣೆ ಆದ ಬಳಿಕ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ