‘ಹನುಮಾನ್​’ ಚಿತ್ರಕ್ಕಾಗಿ 75 ಸಿನಿಮಾಗಳ ಅವಕಾಶ ಕೈಚೆಲ್ಲಿದ್ದ ನಟ ತೇಜ ಸಜ್ಜಾ

ಬಾಕ್ಸ್​ ಆಫೀಸ್​ನಲ್ಲಿ ಬಂಗಾರದ ಬೆಳೆ ತೆಗೆದಿರುವ ‘ಹನುಮಾನ್​’ ಸಿನಿಮಾದಿಂದ ನಟ ತೇಜ ಸಜ್ಜಾ ಅವರ ಜನಪ್ರಿಯತೆ ಹೆಚ್ಚಾಗಿದೆ. ಅವರ ಅಭಿಮಾನಿ ಬಳಗ ಕೂಡ ದೊಡ್ಡದಾಗಿದೆ. ಅಂದಹಾಗೆ, ಅವರಿಗೆ ಈ ಯಶಸ್ಸು ಸಿಕ್ಕಿದ್ದು ಏಕಾಏಕಿಯಾಗಿ ಅಲ್ಲ. ಈ ಚಿತ್ರಕ್ಕಾಗಿ ಅವರು ತುಂಬ ಕಷ್ಟಪಟ್ಟಿದ್ದಾರೆ. ಹಲವು ಸಿನಿಮಾಗಳನ್ನು ರಿಜೆಕ್ಟ್​ ಮಾಡಿದ್ದಾರೆ. ಆ ಕುರಿತು ಅವರೀಗ ಮಾತಾಡಿದ್ದಾರೆ.

‘ಹನುಮಾನ್​’ ಚಿತ್ರಕ್ಕಾಗಿ 75 ಸಿನಿಮಾಗಳ ಅವಕಾಶ ಕೈಚೆಲ್ಲಿದ್ದ ನಟ ತೇಜ ಸಜ್ಜಾ
ತೇಜ ಸಜ್ಜಾ
Follow us
ಮದನ್​ ಕುಮಾರ್​
|

Updated on: Feb 04, 2024 | 1:03 PM

ತೆಲುಗಿನ ನಟ ತೇಜ ಸಜ್ಜಾ (Teja Sajja) ಅವರಿಗೆ 2024ರ ಆರಂಭದಲ್ಲೇ ಭರ್ಜರಿ ಗೆಲುವು ಸಿಕ್ಕಿದೆ. ಅವರು ನಟಿಸಿದ ‘ಹನುಮಾನ್​’ ಸಿನಿಮಾ (Hanuman Movie) ಸೂಪರ್​ ಹಿಟ್​ ಆಗಿದೆ. ದೇಸಿ ಸೂಪರ್​ ಹೀರೋ ಕಾನ್ಸೆಪ್ಟ್​ ಹೊಂದಿರುವ ಈ ಸಿನಿಮಾದಲ್ಲಿ ಅವರ ನಟನೆ ಕಂಡು ಅಭಿಮಾನಿಗಳು ಭೇಷ್​ ಎಂದಿದ್ದಾರೆ. ವಿಶ್ವ ಬಾಕ್ಸ್​ ಆಫೀಸ್​ನಲ್ಲಿ ಈ ಸಿನಿಮಾ 250 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್​ ಮಾಡಿದೆ. ಹಾಗಂತ ತೇಜ ಸಜ್ಜಾ ಅವರಿಗೆ ಈ ಗೆಲುವು ಸಿಕ್ಕಿರುವುದು ರಾತ್ರೋರಾತ್ರಿ ಅಲ್ಲ. ‘ಹನುಮಾನ್​’ ಸಿನಿಮಾಗಾಗಿ ಅವರು ಸಾಕಷ್ಟು ತ್ಯಾಗ ಮಾಡಿದ್ದಾರೆ. ಅನೇಕ ಸಿನಿಮಾಗಳ ಅವಕಾಶವನ್ನು ತ್ಯಜಿಸಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ಕುರಿತು ಮಾತನಾಡಿದ್ದಾರೆ.

‘ಹನುಮಾನ್​’ ಸಿನಿಮಾದ ಕೆಲಸಗಳು ಪೂರ್ಣಗೊಳ್ಳಲು ಎರಡೂವರೆ ವರ್ಷಗಳ ಸಮಯ ಹಿಡಿಯಿತು. ‘ಈ ಸಮಯದಲ್ಲಿ ನಾನು ಮಾಡಿದ್ದು ಇದೊಂದೇ ಸಿನಿಮಾ. ನನಗೆ ಬೇರೆ ಅವಕಾಶಗಳು ಕೂಡ ಬರುತ್ತಿದ್ದವು. ಅಂದಾಜು 70ರಿಂದ 75 ಪ್ರಾಜೆಕ್ಟ್​ಗಳನ್ನು ನಾನು ರಿಜೆಕ್ಟ್​ ಮಾಡಿದೆ. ಅದರಲ್ಲಿ ಕೊನೇ ಪಕ್ಷ 15 ಪ್ರಾಜೆಕ್ಟ್​ಗಳು ಚೆನ್ನಾಗಿದ್ದವು. ಆದರೆ ನಾನು ಯಾವಾಗಲೂ ಹನುಮಾನ್​ ಸಿನಿಮಾಗೆ ಕಮಿಟ್​ ಆಗಿದ್ದೆ’ ಎಂದು ತೇಜ ಸಜ್ಜಾ ಹೇಳಿದ್ದಾರೆ.

ಇದನ್ನೂ ಓದಿ: ರಾಮನಾಗಿ ಮಹೇಶ್​ ಬಾಬು, ಹನುಮಂತನಾಗಿ ಚಿರಂಜೀವಿ? ಇದು ‘ಜೈ ಹನುಮಾನ್​’ ಪ್ಲ್ಯಾನ್​

ಸಾಧಾರಣ ಬಜೆಟ್​ನಲ್ಲಿ ಸಿದ್ಧವಾದ ‘ಹನುಮಾನ್​’ ಸಿನಿಮಾ ಗಲ್ಲಾಪಟ್ಟಿಗೆಯಲ್ಲಿ ಬಂಗಾರದ ಬೆಳೆ ತೆಗೆದಿದೆ. ಬಹಳ ಕಷ್ಟಪಟ್ಟು ಈ ಸಿನಿಮಾ ಮಾಡಿದ್ದನ್ನು ತೇಜ ಸಜ್ಜಾ ಈಗ ನೆನಪಿಸಿಕೊಂಡಿದ್ದಾರೆ. ‘ಈ ಸಿನಿಮಾದ ಸೂಪರ್​ ಹೀರೋ ಲುಕ್​ಗಾಗಿ ನಾವು 25 ಲುಕ್​ ಟೆಸ್ಟ್​ ಮಾಡಿದೆವು. ಸಾಮಾನ್ಯವಾಗಿ ಬೇರೆ ನಟರು ಎರಡು-ಮೂರು ಲುಕ್​ ಟೆಸ್ಟ್​ ಮಾಡುತ್ತಾರೆ ಅಷ್ಟೇ. ಸಾಹಸ ದೃಶ್ಯಗಳ ಶೂಟಿಂಗ್​ ತುಂಬ ಕಷ್ಟಕರ ಆಗಿತ್ತು. ಅಂಥ ಎಲ್ಲ ದೃಶ್ಯಗಳಲ್ಲೂ ನಾನೇ ಸ್ವತಃ ಅಭಿನಯಿಸಿದ್ದೇನೆ’ ಎಂದಿದ್ದಾರೆ ತೇಜ ಸಜ್ಜಾ.

ಇದನ್ನೂ ಓದಿ: 250 ಕೋಟಿ ರೂಪಾಯಿ ಕಲೆಕ್ಷನ್​; ವಿಶ್ವ ಬಾಕ್ಸ್​ ಆಫೀಸ್​ನಲ್ಲಿ ‘ಹನುಮಾನ್​’ ಸಾಧನೆ

ಪ್ರಶಾಂತ್​ ವರ್ಮಾ ಅವರ ನಿರ್ದೇಶನದಲ್ಲಿ ಮೂಡಿಬಂದ ‘ಹನುಮಾನ್​’ ಸಿನಿಮಾ ಜನವರಿ 12ರಂದು ಬಿಡುಗಡೆ ಆಯಿತು. ಅಮೃತಾ ಅಯ್ಯರ್​, ರಾಜ್​ ದೀಪಕ್​ ಶೆಟ್ಟಿ, ವಿನಯ್​ ರೈ, ವರಲಕ್ಷ್ಮೀ ಶರತ್​ಕುಮಾರ್​ ಮುಂತಾದವರು ನಟಿಸಿದ್ದಾರೆ. ಸಂಕ್ರಾಂತಿ ಸಂದರ್ಭದಲ್ಲಿ ತೆರೆಕಂಡ ಸ್ಟಾರ್​ ಹೀರೋಗಳ ಸಿನಿಮಾಗಳಿಗೂ ‘ಹನುಮಾನ್​’ ಟಫ್​ ಪೈಪೋಟಿ ನೀಡಿದೆ. ಈ ಸಿನಿಮಾ ಗೆದ್ದಿರುವುದರಿಂದ ಅದಕ್ಕೆ ಸೀಕ್ವೆಲ್​ ಸಿದ್ಧವಾಗುತ್ತಿದೆ. ಸೀಕ್ವೆಲ್​ಗೆ ‘ಜೈ ಹನುಮಾನ್​’ ಎಂದು ಶೀರ್ಷಿಕೆ ಇಡಲಾಗಿದೆ. ಇತ್ತೀಚೆಗಷ್ಟೇ ಅದರ ಸ್ಕ್ರಿಪ್ಟ್​ ಪೂಜೆ ಮಾಡಲಾಗಿದೆ. ‘ಹನುಮಾನ್​’ ಸಿನಿಮಾ ಗೆದ್ದ ಬಳಿಕ ತೇಜ ಸಜ್ಜಾ ಅವರ ಡಿಮ್ಯಾಂಡ್​ ಹೆಚ್ಚಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ