
ಅನುಷ್ಕಾ ಶೆಟ್ಟಿ (Anushka Shetty) ದಕ್ಷಿಣ ಭಾರತ ಚಿತ್ರರಂಗದ ಸ್ಟಾರ್ ನಟಿಯಾಗಿ ಮೆರೆದವರು. ಆದರೆ ‘ಬಾಹುಬಲಿ 2’ ಸಿನಿಮಾದ ಬಳಿಕ ಚಿತ್ರರಂಗದಿಂದ ಬ್ರೇಕ್ ತೆಗೆದುಕೊಂಡರು. ವರ್ಷಕ್ಕೆ ಕನಿಷ್ಟ ಐದಾರು ಸಿನಿಮಾಗಳಲ್ಲಿ ನಟಿಸುತ್ತಿದ್ದ ಅನುಷ್ಕಾ ಶೆಟ್ಟಿ ‘ಬಾಹುಬಲಿ 2’ ಸಿನಿಮಾದ ಬಳಿಕ ವರ್ಷಕ್ಕೆ ಒಂದು ಸಿನಿಮಾದಲ್ಲಿ ನಟಿಸಲು ಆರಂಭಿಸಿದರು. 2021, 22 ರಲ್ಲಿ ಒಂದೂ ಸಿನಿಮಾನಲ್ಲಿ ನಟಿಸಲಿಲ್ಲ. ಅನುಷ್ಕಾ ಶೆಟ್ಟಿ ನಿವೃತ್ತಿ ಪಡೆದಿದ್ದಾರೆ ಎಂಬ ಸುದ್ದಿಯೂ ಹರಿದಾಡಿತ್ತು. ಆದರೆ 23ರಲ್ಲಿ ‘ಮಿಸ್ ಶೆಟ್ಟಿ, ಮಿಸ್ಟರ್ ಪೋಲಿಶೆಟ್ಟಿ’ ಮೂಲಕ ಕಮ್ ಬ್ಯಾಕ್ ಮಾಡಿದ ಅನುಷ್ಕಾ, ಈಗ ಮತ್ತೆ ಸಿನಿಮಾಗಳಲ್ಲಿ ಸಕ್ರಿಯರಾಗಿದ್ದಾರೆ.
ಆದರೆ ಕಮ್ ಬ್ಯಾಕ್ ಬಳಿಕ ಕೇವಲ ಮಹಿಳಾ ಪ್ರಧಾನ ಸಿನಿಮಾಗಳಲ್ಲಿಯೇ ಅನುಷ್ಕಾ ನಟಿಸುತ್ತಿದ್ದಾರೆ. ಇದೀಗ ಅವರ ನಟನೆಯ ‘ಘಾಟಿ’ ಹೆಸರಿನ ಸಿನಿಮಾ ತೆರೆಗೆ ಬಂದಿದೆ. ಸಿನಿಮಾ ಇಂದಷ್ಟೆ ಬಿಡುಗಡೆ ಆಗಿದೆ. ಆದರೆ ಸಿನಿಮಾ ಬಿಡುಗಡೆಯ ಹಿಂದಿನ ದಿನ ಚಿತ್ರತಂಡಕ್ಕೆ ಸಂಕಷ್ಟ ಎದುರಾಗಿದೆ. ಸಿನಿಮಾದ ಮೇಲೆ ತೆಲಂಗಾಣ ಪೊಲೀಸ್ ಇಲಾಖೆಯ ವಿಭಾಗವೊಂದು ಹದ್ದಿನ ಕಣ್ಣಿಟ್ಟಿದೆ. ಸಿನಿಮಾದಲ್ಲಿನ ಕೆಲ ಅಂಶಗಳು ಸಮಾಜಕ್ಕೆ ಹಾನಿಕಾರಕವಾಗಿವೆ ಎಂದು ಸಹ ಹೇಳಿದೆ.
ತೆಲಂಗಾಣ ಪೊಲೀಸ್ ಇಲಾಖೆ ಮಾದಕ ವಸ್ತು ನಿಗ್ರಹ ವಿಭಾಗಕ್ಕೆ ಈಗಲ್ ಎಂದು ಹೆಸರಿದ್ದು, ಈಗಲ್ ನಿನ್ನೆ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಅನುಷ್ಕಾ ಶೆಟ್ಟಿ ನಟನೆಯ ‘ಘಾಟಿ’ ಸಿನಿಮಾದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದೆ. ‘ಘಾಟಿ’ ಸಿನಿಮಾದ ಟ್ರೈಲರ್ನಲ್ಲಿ ಆಕ್ಷೇಪಣಕಾರಿ ಅಂಶಗಳಿವೆ. ಈ ಸಿನಿಮಾ ಗಾಂಜಾ ಉತ್ಪಾದನೆ ಮತ್ತು ಸೇವನೆಗೆ ಪ್ರಚೋದನೆ ಮತ್ತು ಪ್ರಚಾರವನ್ನು ನೀಡುತ್ತಿರುವ ಅನುಮಾನ ವ್ಯಕ್ತವಾಗಿದ್ದು, ಈ ಸಿನಿಮಾದ ಮೇಲೆ ನಾವು ಗಮನ ಹರಿಸಲಿದ್ದೇವೆ’ ಎಂದಿದೆ.
ಇದನ್ನೂ ಓದಿ:ಪ್ರಭಾಸ್ ಜೊತೆ ಸಿನಿಮಾ: ಸ್ವೀಟಿ ಅನುಷ್ಕಾ ಶೆಟ್ಟಿ ಹೇಳಿದ್ದೇನು?
‘ಘಾಟಿ’ ಸಿನಿಮಾ ಗಾಂಜಾ ಉತ್ಪಾದಿಸುವ ಮತ್ತು ಅದನ್ನು ಸಾಗಿಸುವ ಸಮುದಾಯವೊಂದರ ಕತೆಯನ್ನು ಒಳಗೊಂಡಿದೆ. ಸಮುದಾಯದ ಯುವತಿಯ ಪಾತ್ರದಲ್ಲಿ ಅನುಷ್ಕಾ ಶೆಟ್ಟಿ ನಟಿಸಿದ್ದಾರೆ. ಸಿನಿಮಾದ ಟ್ರೈಲರ್ನಲ್ಲಿ ಅನುಷ್ಕಾ, ಗಾಂಜಾ ಅನ್ನು ಸಾಗಿಸುತ್ತಿರುವ ಹಲವು ದೃಶ್ಯಗಳಿವೆ. ಸಾಹಸಮಯ ಸಿನಿಮಾ ಇದಾಗಿದ್ದು, ಅನುಷ್ಕಾ ಶೆಟ್ಟಿ ರಫ್ ಆಂಡ್ ಟಫ್ ಅವತಾರದಲ್ಲಿ ಈ ಸಿನಿಮಾನಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಸಿನಿಮಾನಲ್ಲಿ ಗಾಂಜಾ ಸಾಗಾಟದ ಅಂಶ ತೆಲಂಗಾಣ ಮಾದಕ ವಸ್ತು ನಿಗ್ರಹ ದಳದ ಆಕ್ಷೇಪಕ್ಕೆ ಕಾರಣವಾಗಿದೆ.
ತೆಲಂಗಾಣ, ಆಂಧ್ರದಲ್ಲಿ ಮಾದಕ ವಸ್ತು ಸೇವನೆ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗಿವೆ. ಸ್ವತಃ ಸಿಎಂ ರೇವಂತ್ ರೆಡ್ಡಿ, ಮಾದಕ ವಸ್ತು ಬಳಕೆ ನಿಗ್ರಹದಲ್ಲಿ ಸಿನಿಮಾ ನಟ-ನಟಿಯರು ಕೈಜೋಡಿಸಬೇಕು ಎಂದು ಮನವಿ ಮಾಡಿದ್ದರು. ಮಾದಕ ವಸ್ತು ನಿಗ್ರಹಕ್ಕೆ ವಿಶೇಷ ವಿಭಾಗವನ್ನು ಸಹ ಸ್ಥಾಪಿಸಲಾಗಿದೆ.
‘ಘಾಟಿ’ ಸಿನಿಮಾನಲ್ಲಿ ಅನುಷ್ಕಾ ಶೆಟ್ಟಿ ಜೊತೆಗೆ ವಿಕ್ರಂ ಪ್ರಭು, ಚೈತನ್ಯ ರಾವ್ ಮಡ್ಡಿ, ಜಗಪತಿ ಬಾಬು ಅವರುಗಳು ನಟಿಸಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವುದು ಕ್ರಿಶ್ ಜಗರ್ಲಮುಡಿ. ಈ ಹಿಂದೆ ಇವರು ‘ವೇದಂ’, ‘ಗಮ್ಯಂ’, ‘ಎನ್ಟಿಆರ್’, ‘ಗೌತಮಿ ಪುತ್ರ ಶಾತಕರ್ಣಿ’, ‘ಕೃಷ್ಣಂ ವಂದೆ ಜಗದ್ಗುರು’ ಇನ್ನೂ ಕೆಲವು ಹಿಟ್ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ