‘ಲೋಕಃ’ ನಾಯಕಿ ಕಲ್ಯಾಣಿ ಯಾರು? ಹಿನ್ನೆಲೆ ಏನು ಗೊತ್ತೆ?
Lokah movie heroine: ಮಲಯಾಳಂ ಸಿನಿಮಾ ‘ಲೋಕಃ’ ಚಿತ್ರಮಂದಿರಗಳಲ್ಲಿ ಸಖತ್ ಸದ್ದು ಮಾಡುತ್ತಿದೆ. ನಾಯಕಿ ಪ್ರಧಾನ ಸಿನಿಮಾ ಒಂದು ಬಾಕ್ಸ್ ಆಫೀಸ್ನಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ಅಬ್ಬರಿಸುತ್ತಿರುವುದು ಅಪರೂಪ. ಇದೊಂದು ಮಹಿಳಾ ಸೂಪರ್ ಹೀರೋ ಸಿನಿಮಾ ಆಗಿರುವುದು ಮತ್ತೊಂದು ವಿಶೇಷ. ಅಂದಹಾಗೆ ಸಿನಿಮಾದ ನಾಯಕಿ ಕಲ್ಯಾಣಿ ಪ್ರಿಯದರ್ಶನ್ ಯಾರು? ಈ ನಟಿಯ ಹಿನ್ನೆಲೆ ಏನು?

ಮಲಯಾಳಂ ಸಿನಿಮಾ ‘ಲೋಕಃ’ ಚಿತ್ರಮಂದಿರಗಳಲ್ಲಿ ಸಖತ್ ಸದ್ದು ಮಾಡುತ್ತಿದೆ. ಕಳೆದ ವಾರ ಬಿಡುಗಡೆ ಆದ ಈ ಸಿನಿಮಾ ಕೇವಲ ಒಂದು ವಾರದಲ್ಲಿ ನೂರು ಕೋಟಿ ಕಲೆಕ್ಷನ್ ದಾಟಿದೆ. ಇದೊಂದು ನಾಯಕಿ ಪ್ರಧಾನ ಸಿನಿಮಾ ಆಗಿದ್ದು, ನಾಯಕಿಯಾಗಿ ಕಲ್ಯಾಣಿ ಪ್ರಿಯದರ್ಶನ್ ನಟಿಸಿದ್ದಾರೆ. ಭಾರತದಲ್ಲಿ ಈ ವರೆಗೆ ನಿರ್ಮಾಣವಾಗಿರುವ ಸೂಪರ್ ಹೀರೋ ಸಿನಿಮಾಗಳಲ್ಲಿಯೇ ಉತ್ತಮವಾದ ಹಾಗೂ ಅತ್ಯಂತ ಕಡಿಮೆ ಬಜೆಟ್ನಲ್ಲಿ ನಿರ್ಮಾಣಗೊಂಡು ಅತ್ಯುತ್ತಮ ಗುಣಮಟ್ಟದ ಸಿನಿಮಾ ಎಂಬ ಖ್ಯಾತಿ ಗಳಿಸಿಕೊಂಡಿದೆ. ಸಿನಿಮಾದ ನಾಯಕಿ ಕಲ್ಯಾಣಿಗಂತೂ ಹೊಗಳಿಕೆಗಳ ಸುರಿಮಳೆಯೇ ಆಗುತ್ತಿದೆ.
ಅಂದಹಾಗೆ ಈ ಸಿನಿಮಾದ ನಾಯಕಿ ಕಲ್ಯಾಣಿ ಪ್ರಿಯದರ್ಶನ್ ನಟಿಯಾಗಲು ಚಿತ್ರರಂಗಕ್ಕೆ ಬಂದವರಲ್ಲ. ಅವರ ಆಸೆ ಬೇರೆಯೇ ಇತ್ತು. ಕಲ್ಯಾಣಿ ಪ್ರಿಯದರ್ಶನ್, ಲೆಜೆಂಡರಿ ಸಿನಿಮಾ ನಿರ್ದೇಶಕ ಪ್ರಿಯದರ್ಶನ್ ಹಾಗೂ ಖ್ಯಾತ ಮಲಯಾಳಂ ನಟಿ ಲಿಸ್ಸಿ ಅವರ ಪುತ್ರಿ. ಕಲ್ಯಾಣಿ ಜನಿಸಿದ್ದು ಚೆನ್ನೈನಲ್ಲಿ. ಅವರ ಪ್ರಾಥಮಿಕ ಶಿಕ್ಷಣ ಮುಗಿದಿದ್ದು ಸಹ ಚೆನ್ನೈನಲ್ಲಿಯೇ. ಬಳಿಕ ಸಿಂಗಪುರಕ್ಕೆ ತೆರಳಿ ಅಲ್ಲಿ ಪದವಿ ಪಡೆದರು. ಅಲ್ಲಿಯೇ ನಾಟಕಗಳಲ್ಲಿಯೂ ನಟಿಸಿದರು. ಬಳಿಕ ನ್ಯೂಯಾರ್ಕ್ಗೆ ಹೋಗಿ ಆರ್ಕಿಟೆಕ್ಚರ್ ಕಲಿತು ಬಂದರು.
ಕಲ್ಯಾಣಿಗೆ ಕಲಾ ನಿರ್ದೇಶಕಿ ಆಗಬೇಕು ಎಂಬ ದೊಡ್ಡ ಆಸೆಯಿತ್ತಂತೆ. ಅವರು ಖ್ಯಾತ ಪ್ರೊಡಕ್ಷನ್ ಡಿಸೈನರ್ ಸಾಬು ಸಿರಿಲ್ ಅವರ ಅಭಿಮಾನಿಯಾಗಿದ್ದರಂತೆ. ತಂದೆಯ ಶಿಫಾರಸ್ಸಿನ ಮೇರೆಗೆ ಸಾಬು ಸಿರಿಲ್ ಅವರ ಸಹಾಯಕಿಯಾಗಿ ಹಲವು ಸಿನಿಮಾಗಳಿಗೆ ಕೆಲಸ ಸಹ ಮಾಡಿದ್ದಾರೆ. ಹೃತಿಕ್ ನಟನೆಯ ‘ಕ್ರಿಶ್ 3’, ವಿಕ್ರಂ ನಟನೆಯ ‘ಇರು ಮುಗನ್’ ಸಿನಿಮಾಗಳಿಗೆ ಕೆಲಸ ಮಾಡಿದ್ದಾರೆ. ಅದಾದ ಬಳಿಕ ಕಲ್ಯಾಣಿಯ ಮನಸ್ಸು ನಟನೆಯ ಕಡೆಗೆ ಹೊರಳಿತಂತೆ.
ಕರ್ನಾಟಕದ ನೀನಾಸಂ ಮಾದರಿಯಲ್ಲಿಯೇ ನಟನಾ ಶಾಲೆಯಾಗಿರುವ ಪಾಂಡಿಚೆರಿಯ ಆದಿಶಕ್ತಿ ಆರ್ಟ್ಸ್ ಸೇರಿಕೊಂಡ ಕೆಲ ಸಮಯ ನಟನೆಯ ಪಟ್ಟುಗಳನ್ನು ಕಲಿತು, 2017 ರಲ್ಲಿ ತೆಲುಗಿನ ಯುವ ನಟ ಅಖಿಲ್ ಅಕ್ಕಿನೇನಿ ಜೊತೆಗೆ ‘ಹಲೊ’ ಸಿನಿಮಾ ಮೂಲಕ ನಾಯಕಿಯಾಗಿ ಎಂಟ್ರಿ ನೀಡಿದರು. ಆದರೆ ಮೊದಲ ಸಿನಿಮಾ ಅವರ ಕೈ ಹಿಡಿಯಲಿಲ್ಲ. ಅದಾದ ಬಳಿಕ ಒಂದರ ಹಿಂದೊಂದು ಸಿನಿಮಾಗಳಲ್ಲಿ ನಟಿಸಿದರಾದರು ‘ಮಾನಾಡು’ ಸಿನಿಮಾ ಅವರ ಮೊದಲ ಹಿಟ್. ಆದರೆ ಆ ಸಿನಿಮಾದಿಂದ ಹೆಸರು ಬಂದಿದ್ದು ನಾಯಕ ಸಿಂಭು ಮತ್ತು ವಿಲನ್ ಎಸ್ಜೆ ಸೂರ್ಯಗೆ.
ಇದನ್ನೂ ಓದಿ:ಲೋಕಃ’ ಸರಣಿಯಲ್ಲಿ ಬರಲಿವೆ ಐದು ಸಿನಿಮಾ; ಬಜೆಟ್ ಎಷ್ಟು ಕೋಟಿ ರೂಪಾಯಿ?
ಆದರೆ 2022 ರಲ್ಲಿ ಬಂದ ‘ಹೃದಯಂ’ ಸಿನಿಮಾ ಕಲ್ಯಾಣಿಯ ಅದೃಷ್ಟ ಬದಲಾಯಿಸಿತು. ‘ಹೃದಯಂ’ ಸಿನಿಮಾದ ಕೊನೆಯಲ್ಲಿ ಮಾತ್ರವೇ ಕಲ್ಯಾಣಿ ಕಾಣಿಸಿಕೊಳ್ಳುತ್ತಾರೆ ಆದರೆ ಆ ಪಾತ್ರ ಭಾರಿ ಜನಪ್ರಿಯವಾಯ್ತು. ‘ಹೃದಯಂ’ಗೆ ಮುಂಚೆ ಎಂಟು ಸಿನಿಮಾಗಳಲ್ಲಿ ಕಲ್ಯಾಣಿ ನಟಿಸಿದ್ದರು. ಆದರೆ ಅವರಿಗೆ ಪ್ರತ್ಯೇಕ ಗುರುತು ತಂದುಕೊಟ್ಟಿದ್ದು ‘ಹೃದಯಂ’ ಸಿನಿಮಾ. ‘ಹೃದಯಂ’ ಬಳಿಕ ಒಂದರ ಹಿಂದೊಂದರಂತೆ ಮಲಯಾಳಂ ಸಿನಿಮಾಗಳಲ್ಲಿ ಕಲ್ಯಾಣಿ ನಟಿಸಿದರು. ‘ತಲ್ಲುಮಾಲ’, ‘ಬ್ರೋ ಡ್ಯಾಡಿ’, ‘ಸೇಸಂ’, ‘ಆಂಟೊನಿ’ ಹೀಗೆ ಸಾಲು-ಸಾಲು ಹಿಟ್ ಸಿನಿಮಾಗಳಲ್ಲಿ ನಾಯಕಿಯಾಗಿ ಗಮನ ಸೆಳೆದರು.
‘ಲೋಕಃ’ ಸಿನಿಮಾ ಈಗ ಕಲ್ಯಾಣಿ ವೃತ್ತಿ ಜೀವನದ ಬಲುದೊಡ್ಡ ಹಿಟ್ ಆಗಿದೆ. ನಾಯಕಿ ಪ್ರಧಾನ ಸಿನಿಮಾ ಆಗಿರುವ ಕಾರಣ ಕಲ್ಯಾಣಿ, ಇಡೀ ಕತೆಯನ್ನು ಹೆಗಲ ಮೇಲೆ ಹೊತ್ತು ಸಾಗಿದ್ದಾರೆ. ಅದ್ಭುತವಾದ ಆಕ್ಷನ್ ದೃಶ್ಯಗಳಲ್ಲಿಯೂ ಕಾಣಿಸಿಕೊಂಡಿದ್ದು, ತಾವೆಷ್ಟು ವರ್ಸಟೈಲ್ ನಟಿ ಎಂದು ತೋರಿಸಿಕೊಟ್ಟಿದ್ದಾರೆ. ಇದೀಗ ನಾಲ್ಕು ವರ್ಷಗಳ ಬಳಿಕ ತಮಿಳು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ‘ಜೀನಿ’ ಮತ್ತು ‘ಮಾರ್ಷಲ್’ ಹೆಸರಿನ ಸಿನಿಮಾಗಳಲ್ಲಿ ಕಲ್ಯಾಣಿ ನಾಯಕಿಯಾಗಿ ನಟಿಸುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




