ರಾಜಕೀಯ: ಆಸ್ಕರ್ ಗೆದ್ದ ಹಾಡಿನ ಗಾಯಕನಿಗೆ ಕೊನೆಗೂ ಕೋಟಿಯ ಭರವಸೆ
Natu Natu song: ಆರ್ಆರ್ಆರ್ ಸಿನಿಮಾದ ‘ನಾಟು ನಾಟು’ ಹಾಡು ಭಾರಿ ದೊಡ್ಡ ಕ್ರೇಜ್ ಸೃಷ್ಟಿಸಿದೆ. ಈ ಹಾಡಿಗೆ ಆಸ್ಕರ್ ಸಹ ಬಂದಿದೆ. ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ಮತ್ತು ಹಾಡು ಬರೆದಿರುವ ಚಂದ್ರಬೋಸ್ಗೆ ಪ್ರಶಸ್ತಿಗಳು ದೊರೆತಿವೆ. ಆದರೆ ಹಾಡಿರುವ ರಾಹುಲ್ ಸಿಪ್ಲಿಗಂಜ್ ಅನ್ನು ನಿರ್ಲಕ್ಷ್ಯ ಮಾಡಲಾಗಿದೆ. ಇದೀಗ ಸಿಎಂ ಅವರೇ ರಾಹುಲ್ಗೆ ಪ್ರಶಸ್ತಿ ಘೋಷಿಸಿದ್ದಾರೆ. ಅದು ನಿಜಕ್ಕೂ ಅವರ ಕೈ ಸೇರುತ್ತಾ?

ಭಾರತಕ್ಕೆ ಆಸ್ಕರ್ ಗೆದ್ದುಕೊಟ್ಟ ಸಿನಿಮಾ ಯಾವುದೆಂದರೆ ‘ಆರ್ಆರ್ಆರ್’ ಎನ್ನುತ್ತೇವೆ. ಅದರಲ್ಲೂ ಆ ಸಿನಿಮಾದ ‘ನಾಟು ನಾಟು’ ಹಾಡಿಗೆ ಆಸ್ಕರ್ ಪ್ರಶಸ್ತಿ ಬಂತು. ‘ನಾಟು ನಾಟು’ ಹಾಡಿಗೆ ಸಂಗೀತ ನೀಡಿದ ಎಂಎಂ ಕೀರವಾಣಿ ಹಾಗೂ ಸಾಹಿತ್ಯ ಬರೆದ ಚಂದ್ರಭೋಸ್ ಅವರಿಗೆ ಆಸ್ಕರ್ ಬಂತು. ಈ ಇಬ್ಬರಿಗೂ ಸಾಕಷ್ಟು ಜನಪ್ರಿಯತೆ, ಸನ್ಮಾನಗಳು, ಪಾರಿತೋಷಕಗಳು, ಬಹುಮಾನಗಳು, ನಗದು ಬಹುಮಾನಗಳು ಬಂದವು. ಆದರೆ ‘ನಾಟು ನಾಟು’ ಹಾಡು ಹಾಡಿದ ಗಾಯಕನನ್ನು ಮಾತ್ರ ಎಲ್ಲರೂ ಮರೆತರು. ಹೀಗೆ ಮರೆತದ್ದೆ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿ ಈಗ ಗಾಯಕನಿಗೆ ಕೊನೆಗೂ ಒಂದು ಕೋಟಿ ರೂಪಾಯಿ ಹಣದ ಭರವಸೆ ದೊರೆತಿದೆ. ಆದರೆ ನಗದು ಕೈಗೆ ಯಾವಾಗ ಬರುತ್ತದೆಯೋ ನೋಡಬೇಕು.
ತೆಲುಗಿನಲ್ಲಿ ‘ನಾಟು ನಾಟು’ ಸಿನಿಮಾ ಹಾಡನ್ನು ಹಾಡಿರುವುದು ಗಾಯಕ ರಾಹುಲ್ ಸಿಪ್ಲಿಗಂಜ್. ‘ನಾಟು ನಾಟು’ ಹಾಡಿಗೆ ಆಸ್ಕರ್ ಬಂದಾಗ ಎಲ್ಲರೂ ಕೀರವಾಣಿ, ಚಂದ್ರಭೋಸ್ ಅನ್ನು ಅಭಿನಂದಿಸಿದರು ಆದರೆ ರಾಹುಲ್ ಸಿಪ್ಲಿಗಂಜ್ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳಲಿಲ್ಲ. ‘ಆರ್ಆರ್ಆರ್’ಗೆ ಆಸ್ಕರ್ ಬಂದಾಗ ಆಗಿದ್ದ ತೆಲಂಗಾಣ ಸರ್ಕಾರದ ಸಿಎಂ ಚಂದ್ರಶೇಖರ್ ರಾವ್ ಹಾಗೂ ಇತರರು ಚಿತ್ರತಂಡವನ್ನು ಸನ್ಮಾನಿಸಿದ್ದರು, ಕೀರವಾಣಿ, ಚಂದ್ರಭೋಸ್ಗೆ ನಗದು ಬಹುಮಾನ ಘೋಷಣೆ ಮಾಡಿದ್ದರು. ಆದರೆ ಗಾಯಕ ರಾಹುಲ್ ಸಿಪ್ಲಿಗಂಜ್ ಅನ್ನು ಮರೆತಿದ್ದರು.
ಇದನ್ನೂ ಓದಿ:ಆಲಿಯಾ ಭಟ್ ಮನೆಯಲ್ಲಿ ನಿತ್ಯವೂ ಪ್ಲೇ ಆಗುತ್ತೆ ‘ನಾಟು ನಾಟು..’ ಹಾಡು
ಆಗ, ವಿಪಕ್ಷವಾಗಿದ್ದ ಕಾಂಗ್ರೆಸ್ ಇದನ್ನು ಟೀಕಿಸಿತ್ತು. ರಾಹುಲ್ ಸಿಪ್ಲಿಗಂಜ್ ಅವರ ಜಾತಿಯ ಕಾರಣಕ್ಕೆ ಅವರನ್ನು ನಿರ್ಲಕ್ಷಿಸಲಾಗಿದೆ ಎಂದು ಸ್ವತಃ ರೇವಂತ್ ರೆಡ್ಡಿ (ಈಗಿನ ಸಿಎಂ) ಆಗ ಟೀಕೆ ಮಾಡಿದ್ದರು. ಈಗ ರೇವಂತ್ ರೆಡ್ಡಿ ಸಿಎಂ ಆಗಿದ್ದಾರೆ. ಸಿಎಂ ಆಗಿ ಈಗಾಗಲೇ ಸುಮಾರು ಎರಡು ವರ್ಷ ಕಳೆದಿವೆ. ಆದರೆ ಈ ವರೆಗೆ ರಾಹುಲ್ ಸಿಪ್ಲಿಗಂಜ್ಗೆ ಪ್ರಶಸ್ತಿ ಘೋಷಣೆ ಮಾಡಿರಲಿಲ್ಲ. ಆದರೆ ಇತ್ತೀಚೆಗೆ ಬೋನಾಲ ಪಂಡಗ ಕಾರ್ಯಕ್ರಮಕ್ಕೆ ಬಂದಿದ್ದ ರೇವಂತ್ ರೆಡ್ಡಿ, ಆದಷ್ಟು ಶೀಘ್ರವೇ ರಾಹುಲ್ ಸಿಪ್ಲಿಗಂಜ್ಗೆ ಒಂದು ಕೋಟಿ ರೂಪಾಯಿ ಬಹುಮಾನದ ಮೊತ್ತವನ್ನು ಹಸ್ತಾಂತರ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.
ರಾಹುಲ್ ಸಿಪ್ಲಿಗಂಜ್ ಅವರು ಹಿಂದುಳಿದ ಜಾತಿಯವರಾಗಿದ್ದು, ಕ್ಷೌರಿಕ ವೃತ್ತಿಯವರಾಗಿದ್ದಾರೆ. ಅವರ ಜಾತಿಗೆ ಸಾಮಾಜಿಕವಾಗಿ ಹೆಚ್ಚು ಶಕ್ತಿ ಇಲ್ಲದ ಕಾರಣಕ್ಕೆ ಅವರನ್ನು ನಿರ್ಲಕ್ಷಿಸಲಾಗಿದೆ ಎಂದು ಈ ಹಿಂದೆ ವಿಪಕ್ಷ ನಾಯಕ ಆಗಿದ್ದಾಗ ರೇವಂತ್ ರೆಡ್ಡಿ ಅವರೇ ಆರೋಪ ಮಾಡಿ, ರಾಹುಲ್ ಸಿಪ್ಲಿಗಂಜ್ಗೆ ಪ್ರಶಸ್ತಿ ಕೊಡಬೇಕೆಂದು ಒತ್ತಾಯಿಸಿದ್ದರು. ಆದರೆ ಅದು ಆಗಿರಲಿಲ್ಲ. 2023 ರಲ್ಲಿ ರೇವಂತ್ ರೆಡ್ಡಿ ಸಿಎಂ ಆದಾಗಿಂದಲೂ ರಾಹುಲ್ಗೆ ಪ್ರಶಸ್ತಿ ಕೊಡಬೇಕೆಂಬ ಒತ್ತಾಯ ಕೇಳಿ ಬರುತ್ತಲೇ ಇತ್ತು. ಈಗ ಕೊನೆಗೆ ರಾಹುಲ್ ಅವರಿಗೆ ಪ್ರಶಸ್ತಿ ಘೋಷಣೆ ಆಗಿದೆ. ಆದರೆ ಒಂದು ಕೋಟಿ ರೂಪಾಯಿ ಯಾವಾಗ ಅವರ ಕೈ ಸೇರುತ್ತದೆಯೋ ಕಾದು ನೋಡಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:16 pm, Sun, 20 July 25




