ಸಂಧ್ಯಾ ಥಿಯೇಟರ್ ಕಾಲ್ತುಳಿತ ಪ್ರಕರಣವನ್ನು ನೆಪವಾಗಿಟ್ಟುಕೊಂಡು ಅಲ್ಲು ಅರ್ಜುನ್ ವಿರುದ್ಧ ದ್ವೇಷ ತೀರಿಸಿಕೊಳ್ಳುವ ಕಾರ್ಯವನ್ನು ತೆಲಂಗಾಣ ಸರ್ಕಾರ ಮಾಡುತ್ತಿದೆ ಎಂಬ ಅಭಿಪ್ರಾಯ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗುತ್ತಿದೆ. ಅಲ್ಲು ಅರ್ಜುನ್ ಬಂಧನ, ಅದರ ನಂತರ ಸಿಎಂ ರೇವಂತ್ ರೆಡ್ಡಿ, ಅಸೆಂಬ್ಲಿಯಲ್ಲಿ ಆಡಿದ ಮಾತುಗಳು, ತೆಲಂಗಾಣ ಸರ್ಕಾರದ ಸಚಿವರು, ಕಾಂಗ್ರೆಸ್ ಶಾಸಕರು ಆಡಿದ ಮಾತುಗಳು, ಅಲ್ಲು ಅರ್ಜುನ್ ಮನೆ ಮೇಲೆ ನಡೆದ ದಾಳಿ ಇನ್ನಿತರೆಗಳನ್ನು ನೋಡಿದರೆ ಇದು ನಿಜವಿರಬಹುದು ಅನಿಸುತ್ತದೆ. ಅದಕ್ಕೆ ತಕ್ಕಂತೆ ಈಗ ಕಾಂಗ್ರೆಸ್ ಶಾಸಕನೊಬ್ಬ ಅಲ್ಲು ಅರ್ಜುನ್ಗೆ ಬೆದರಿಕೆ ಹಾಕಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿರುವ ತೆಲಂಗಾಣ ಕಾಂಗ್ರೆಸ್ ಶಾಸಕ ಭೂಪತಿ ರೆಡ್ಡಿ, ‘ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಬಗ್ಗೆ ಅಲ್ಲು ಅರ್ಜುನ್ ಯಾವುದೇ ರೀತಿಯ ಟೀಕೆ ಮಾಡಿದರೂ ಸಹ ಸಹಿಸುವುದಿಲ್ಲ’ ಎಂದಿದ್ದಾರೆ. ಅಲ್ಲದೆ, ರೇವಂತ್ ರೆಡ್ಡಿ ಬಗ್ಗೆ ಅಲ್ಲು ಅರ್ಜುನ್ ಅಥವಾ ಅವರ ಅಭಿಮಾನಿಗಳು ಟೀಕೆ ಮಾಡಿದರೆ ತೆಲಂಗಾಣ ರಾಜ್ಯದಲ್ಲಿ ಅಲ್ಲು ಅರ್ಜುನ್ರ ಸಿನಿಮಾ ಬಿಡುಗಡೆ ಆಗದಂತೆ ತಡೆ ಹಿಡಿಯಲಾಗುವುದು ಎಂದು ಬೆದರಿಕೆ ಸಹ ಹಾಕಿದ್ದಾರೆ ಭೂಪತಿ ರೆಡ್ಡಿ.
‘ನಮ್ಮ ಸಿಎಂ ರೇವಂತ್ ರೆಡ್ಡಿ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಇರಲಿ. ನಿನ್ನದು ಆಂಧ್ರ ಪ್ರದೇಶ, ಇಲ್ಲಿಗೆ (ತೆಲಂಗಾಣ) ಬದುಕಲು ಬಂದಿದ್ದೀಯ. ನಿನಗೆ 100% ಎಚ್ಚರಿಕೆ ಕೊಡುತ್ತಿದ್ದೇವೆ. ಒಸ್ಮಾನಾ ಯೂನಿವರ್ಸಿಟಿಯ ಜಾಯಿಂಟ್ ಆಕ್ಷನ್ ಸಮಿತಿಯ ಕೆಲ ಸದಸ್ಯರು ನಿನ್ನ ಮನೆ ಬಳಿ ಬಂದು ಗಲಾಟೆ ಮಾಡಿದ್ದಾರೆ. ಇನ್ನು ಮುಂದಾದರೂ ನೀನು ಸುಮ್ಮನೆ ಇರಲಿಲ್ಲ ಎಂದರೆ ನಿನ್ನ ಸಿನಿಮಾಗಳನ್ನು ತೆಲಂಗಾಣದಲ್ಲಿ ನಿಷೇಧ ಮಾಡಬೇಕಾಗುತ್ತದೆ’ ಎಂದಿದ್ದಾರೆ ಭೂಪತಿ ರೆಡ್ಡಿ.
ಇದನ್ನೂ ಓದಿ:‘ಅಲ್ಲು ಅರ್ಜುನ್ ಯುದ್ಧ ಗೆದ್ದಿಲ್ಲ, ಸಿನಿಮಾ ಮಾಡಿ ಹಣ ಮಾಡಿಕೊಂಡಿದ್ದಾರೆ ಅಷ್ಟೇ’; ಸಿಎಂ ರೇವಂತ್ ರೆಡ್ಡಿ
ತೆಲಂಗಾಣ ವಿಧಾನಸಭೆಯಲ್ಲಿ ಮಾತನಾಡಿದ್ದ ಸಿಎಂ ರೇವಂತ್ ರೆಡ್ಡಿ, ಅಲ್ಲು ಅರ್ಜುನ್ ಬಗ್ಗೆ ಕೆಲ ಆರೋಪಗಳನ್ನು ಮಾಡಿದ್ದರು. ಮಹಿಳೆ ಸತ್ತ ಸುದ್ದಿಯನ್ನು ಪೊಲೀಸರು ಹೇಳಿದಾಗಲೂ ಅಲ್ಲು ಅರ್ಜುನ್ ಚಿತ್ರಮಂದಿರದಿಂದ ಹೊರಗೆ ಹೋಗಲು ನಿರಾಕರಿಸಿದರು. ಮಹಿಳೆಯ ಸಾವಿಗೆ ಸರಿಯಾಗಿ ಸ್ಪಂದಿಸಿಲ್ಲ ಇನ್ನಿತರೆ ಆರೋಪಗಳನ್ನು ಅವರು ಮಾಡಿದ್ದರು. ಆದರೆ ಬಳಿಕ ಪತ್ರಿಕಾಗೋಷ್ಠಿ ನಡೆಸಿದ ಅಲ್ಲು ಅರ್ಜುನ್, ರೇವಂತ್ ರೆಡ್ಡಿ ಮಾಡಿದ ಆರೋಪಗಳನ್ನು ತಳ್ಳಿ ಹಾಕಿದರು. ರೇವಂತ್ ರೆಡ್ಡಿ ತಮ್ಮ ಬಗ್ಗೆ ಸುಳ್ಳು ಹೇಳುತ್ತಿದ್ದಾರೆ ಎಂದು ಅಲ್ಲು ಅರ್ಜುನ್ ಪರೋಕ್ಷವಾಗಿ ಹೇಳಿದರು. ಅದಾದ ಬಳಿಕ ಕೆಲ ಅನಾಮಿಕರು ಅಲ್ಲು ಅರ್ಜುನ್ ಮನೆ ಮೇಲೆ ದಾಳಿ ಮಾಡಿದ್ದರು. ಇದಕ್ಕೆ ರೇವಂತ್ ರೆಡ್ಡಿ ಕಾರಣ ಎನ್ನಲಾಗಿತ್ತು.
ಇದೀಗ ಅಲ್ಲು ಅರ್ಜುನ್ ಮೇಲೆ ನೇರವಾಗಿ ಬೆದರಿಕೆ ಹಾಕಲಾಗಿದೆ. ತೆಲಂಗಾಣದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಸರ್ಕಾರದ ಶಾಸಕ ನೇರವಾಗಿ ಅಲ್ಲು ಅರ್ಜುನ್ಗೆ ಬೆದರಿಕೆ ಹಾಕಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ