‘ಬಾಸಿಸಂ’ ಮುಗಿದ ಕತೆ: ಸುದೀಪ್ ಸೆಲೆಬ್ರೇಷನ್ ಕೇಕ್ ಚಿತ್ರ ವೈರಲ್
Kichcha Sudeep: ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾ ನಿನ್ನೆ ಬಿಡುಗಡೆ ಆಗಿ ಭರ್ಜರಿ ಕಲೆಕ್ಷನ್ ಮಾಡಿದೆ. ಸಿನಿಮಾದ ಯಶಸ್ಸಿನ ಸಂಭ್ರಮಾಚರಣೆ ವೇಳೆ ಸುದೀಪ್ ಕತ್ತರಿಸಿದ ಕೇಕ್ನ ಚಿತ್ರ ಇದೀಗ ವೈರಲ್ ಆಗುತ್ತಿದೆ. ಸುದೀಪ್ ಕತ್ತರಿಸಿದ ಆ ಕೇಕ್ ಮೇಲೆ ಬರೆದಿದ್ದು ಏನು? ಚಿತ್ರ ವೈರಲ್ ಆಗುತ್ತಿರುವುದು ಏಕೆ?
ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾ ನಿನ್ನೆ ಬಿಡುಗಡೆ ಆಗಿದೆ. ಸಿನಿಮಾ ಮೊದಲ ದಿನವೇ 8.50 ಕೋಟಿ ಗಳಿಕೆ ಮಾಡಿದ್ದು ಸಿನಿಮಾಕ್ಕೆ ಬಹಳ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಿನಿಮಾದ ಕಲೆಕ್ಷನ್ ಎರಡನೇ ದಿನ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ‘ಮ್ಯಾಕ್ಸ್’ ಸಿನಿಮಾಕ್ಕೆ ಮೊದಲ ದಿನ ಬಹಳ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾದ ಕಾರಣ ಸುದೀಪ್ ಅವರ ನಿವಾಸದಲ್ಲಿ ‘ಮ್ಯಾಕ್ಸ್’ ಚಿತ್ರತಂಡದ ಜೊತೆಗೆ ಸಂಭ್ರಮ ಆಚರಿಸಲಾಗಿದೆ. ಈ ಸಂಭ್ರಮಾಚರಣೆ ವೇಲೆ ಸುದೀಪ್ ಕತ್ತರಿಸಿದ ಕೇಕ್ ಒಂದರ ಫೋಟೊ ಇದೀಗ ವೈರಲ್ ಆಗುತ್ತಿದೆ.
ನಿನ್ನೆ ರಾತ್ರಿ ನಡೆದ ಸಂಭ್ರಮಾಚರಣೆಯಲ್ಲಿ ಕೇಕ್ಗಳನ್ನು ಕತ್ತರಿಸಿ ಸುದೀಪ್ ಮತ್ತು ‘ಮ್ಯಾಕ್ಸ್’ ಚಿತ್ರತಂಡ ಸಂಭ್ರಮಿಸಿದೆ. ಈ ವೇಳೆ ಸುದೀಪ್ ಅವರು ‘ಬಾಸಿಸಮ್ ಕಾಲ ಮುಗೀತು, ಮ್ಯಾಕ್ಸಿಸಮ್ ಮ್ಯಾಕ್ಸ್ ಕಾಲ ಶುರುವಾಯ್ತು’ ಎಂದು ಕೇಕ್ ಮೇಲೆ ಬರೆದಿದ್ದು, ಆ ಕೇಕ್ನ ಚಿತ್ರ ಇದೀಗ ವೈರಲ್ ಆಗಿದೆ. ನಟ ದರ್ಶನ್ಗೆ ಟಾಂಗ್ ನೀಡಲೆಂದೇ ‘ಮ್ಯಾಕ್ಸ್’ ಚಿತ್ರತಂಡದವರು ಈ ರೀತಿ ಸಾಲುಗಳನ್ನು ಕೇಕ್ ಮೇಲೆ ಬರೆಸಿದ್ದಾರೆ ಎನ್ನಲಾಗುತ್ತಿದೆ. ಸುದೀಪ್ ಅಭಿಮಾನಿಗಳು ಕೇಕ್ನ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಅಸಲಿಗೆ ಇದೇ ಸಮಯದಲ್ಲಿ ದರ್ಶನ್ ನಟನೆಯ ‘ಡೆವಿಲ್’ ಸಿನಿಮಾ ಬಿಡುಗಡೆ ಆಗಬೇಕಿತ್ತು. ಆದರೆ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿಯಾಗಿ ಜೈಲು ಸೇರಿದ ಕಾರಣ ಚಿತ್ರೀಕರಣ ನಡೆಯಲಿಲ್ಲ. ‘ಡೆವಿಲ್’ ಸಿನಿಮಾ ಬಿಡುಗಡೆ ಆಗುವ ಸಮಯಕ್ಕೆ ಸರಿಯಾಗಿ ಈಗ ಸುದೀಪ್ರ ‘ಮ್ಯಾಕ್ಸ್’ ಸಿನಿಮಾ ಬಿಡುಗಡೆ ಆಗಿದೆ. ಮಾತ್ರವಲ್ಲದೆ ಸಿನಿಮಾ ಮೊದಲ ದಿನವೇ ಭರ್ಜರಿ ಕಲೆಕ್ಷನ್ ಮಾಡಿರುವ ಜೊತೆಗೆ ದೊಡ್ಡ ಮಟ್ಟದ ಭರವಸೆಯನ್ನೂ ಸಹ ಮೂಡಿಸಿದೆ. ಈ ಕಾರಣಕ್ಕಾಗಿ ‘ಮ್ಯಾಕ್ಸ್’ ಚಿತ್ರತಂಡ ಇಂಥಹಾ ಕೇಕ್ ಒಂದನ್ನು ಕತ್ತರಿಸಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ:‘ಮ್ಯಾಕ್ಸ್’ ಗೆದ್ದಿದ್ದಕ್ಕೆ ಸುದೀಪ್ ಹಾಗೂ ತಂಡದ ‘ಮ್ಯಾಕ್ಸಿಮಮ್’ ಸಂಭ್ರಮಾಚರಣೆ
ಸುದೀಪ್ ಕತ್ತರಿಸಿದ ‘ಬಾಸಿಸಮ್ ಕಾಲ ಮುಗೀತು, ಮ್ಯಾಕ್ಸಿಸಮ್ ಮ್ಯಾಕ್ಸ್ ಕಾಲ ಶುರುವಾಯ್ತು’ ಕೇಕ್ನ ಚಿತ್ರ ವೈರಲ್ ಆಗುತ್ತಿದ್ದಂತೆ ದರ್ಶನ್ ಅಭಿಮಾನಿಗಳು ಸಹ ತಮ್ಮದೇ ಒರಟು ಶೈಲಿಯಲ್ಲಿ ಪ್ರತಿಕ್ರಿಯೆ ನೀಡಲು ಆರಂಭಿಸಿದ್ದಾರೆ. ನಿಂದನೆ, ಟೀಕೆಗಳನ್ನು ಮಾಡುತ್ತಿದ್ದಾರೆ. ಇದರ ನಡುವೆ ‘ಮ್ಯಾಕ್ಸ್’ ಸಿನಿಮಾದ ಬಗ್ಗೆ ಸುಳ್ಳು ಸುದ್ದಿಗಳನ್ನು ಸಹ ಕೆಲವರು ಹಂಚಿಕೊಂಡಿದ್ದಾರೆ. ಟಿವಿ9 ಹೆಸರು ಬಳಸಿಕೊಂಡು, ಲೋಗೋ ತಿದ್ದಿ, ‘ಮ್ಯಾಕ್ಸ್’ ಸಿನಿಮಾದ ವಿರುದ್ಧ ನೆಗೆಟಿವ್ ವರದಿಗಳನ್ನು ಹಂಚಿಕೊಳ್ಳಲಾಗುತ್ತಿದೆ.
ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾ ಮೊದಲ ದಿನ 8.50 ಕೋಟಿ ರೂಪಾಯಿ ಹಣ ಗಳಿಕೆ ಮಾಡಿದೆ. ಆಂಧ್ರ, ತೆಲಂಗಾಣದಲ್ಲಿಯೂ ಸಿನಿಮಾ ಒಳ್ಳೆಯ ಪ್ರದರ್ಶನ ಕಾಣುತ್ತಿದೆ. ಚೆನ್ನೈನಲ್ಲೂ ಸಿನಿಮಾಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ