ತೆಲಂಗಾಣ ಸಿನಿಮಾ ಪ್ರದರ್ಶಕರ ದಿಟ್ಟ ನಿರ್ಧಾರ, ನಿರ್ಮಾಪಕರಿಗೆ ಆತಂಕ

|

Updated on: May 28, 2024 | 5:45 PM

ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳನ್ನು ತಾತ್ಕಾಲಿಕವಾಗಿ ಮುಚ್ಚುವ ನಿರ್ಧಾರ ತಳೆದಿದ್ದ ತೆಲಂಗಾಣ ಸಿನಿಮಾ ಪ್ರದರ್ಶಕರು ಇದೀಗ ಮತ್ತೊಂದು ದಿಟ್ಟ ನಿರ್ಧಾರದ ಮೂಲಕ ನಿರ್ಮಾಪಕರಿಗೆ, ವಿತರಕರಿಗೆ ಶಾಕ್ ನೀಡಿದ್ದಾರೆ.

ತೆಲಂಗಾಣ ಸಿನಿಮಾ ಪ್ರದರ್ಶಕರ ದಿಟ್ಟ ನಿರ್ಧಾರ, ನಿರ್ಮಾಪಕರಿಗೆ ಆತಂಕ
ಥಿಯೇಟರ್
Follow us on

ಕರ್ನಾಟಕದಲ್ಲಿ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬರುತ್ತಿಲ್ಲ ಎಂಬ ಕೂಗು ಇತ್ತೀಚೆಗೆ ಹೆಚ್ಚಾಗಿದೆ. ಫಿಲಂ ಚೇಂಬರ್ ಈ ಬಗ್ಗೆ ಇತ್ತೀಚೆಗಷ್ಟೆ ನಿರ್ಮಾಪಕರು, ವಿತರಕರ ಸಭೆ ಸಹ ನಡೆಸಿದೆ. ಇದೇ ಪರಿಸ್ಥಿತಿ ನೆರೆಯ ಆಂಧ್ರ ಹಾಗೂ ತೆಲಂಗಾಣಗಳಲ್ಲಿಯೂ ಇದೆ. ಅಲ್ಲಿಯೂ ಸಹ ಹೊಸ ತೆಲುಗು ಸಿನಿಮಾಗಳಿಲ್ಲದೆ ಚಿತ್ರಮಂದಿರಗಳು (Theater) ಸಂಕಷ್ಟಕ್ಕೆ ಸಿಲುಕಿವೆ. ತೆಲಂಗಾಣದಲ್ಲಿ ಈಗಾಗಲೇ 10 ದಿನಗಳ ಕಾಲ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳನ್ನು ಮುಚ್ಚುವ ನಿರ್ಧಾರ ಮಾಡಲಾಗಿತ್ತು. ಇದೀಗ ಅಲ್ಲಿನ ಪ್ರದರ್ಶಕರು ಮತ್ತೊಂದು ನಿರ್ಧಾರ ತೆಗೆದುಕೊಂಡಿದ್ದಾರೆ. ಇದು ನಿರ್ಮಾಪಕರ ಆತಂಕಕ್ಕೆ ಕಾರಣವಾಗಿದೆ.

ತೆಲುಗು ರಾಜ್ಯಗಳಲ್ಲಿ ಸ್ಟಾರ್ ಸಿನಿಮಾ ಬಿಡುಗಡೆ ಆದಾಗ ಬೆನಿಫಿಟ್ ಶೋಗಳನ್ನು ಆಯೋಜಿಸಲಾಗುತ್ತಿತ್ತು. ಅದು ಬಹುತೇಕ ಅಭಿಮಾನಿಗಳಿಗೆ ಮೀಸಲಾಗಿರುತ್ತಿತ್ತು. ಆದರೆ ಇನ್ನುಮುಂದೆ ಬೆನಿಫಿಟ್ ಶೋಗಳನ್ನು ಪ್ರದರ್ಶಿಸುವುದಿಲ್ಲ ಎಂಬ ದಿಟ್ಟ ನಿರ್ಧಾರವನ್ನು ತೆಲಂಗಾಣ ಪ್ರದರ್ಶಕರು ಕೈಗೊಂಡಿದ್ದಾರೆ. ಇದು ನಿರ್ಮಾಪಕರಿಗೆ ದೊಡ್ಡ ಹೊಡೆತ ಕೊಟ್ಟಂತಾಗಿದೆ. ಬೆನಿಫಿಟ್ ಶೋಗಳ ಟಿಕೆಟ್ ಬೆಲೆ ಹೆಚ್ಚಿರುತ್ತಿತ್ತು, ಇದು ನಿರ್ಮಾಪಕರ ಜೇಬು ತುಂಬಿಸುತ್ತಿತ್ತು, ಈಗ ಬೆನಿಫಿಟ್ ಶೋಗಳು ರದ್ದಾಗಿರುವುದರಿಂದ ನಿರ್ಮಾಪಕರಿಗೆ ಹೊಡೆತ ಬಿದ್ದಿದೆ.

ಬೆನಿಫಿಟ್ ಶೋ ಮಾತ್ರವೇ ಅಲ್ಲದೆ ವಿಶೇಷ ಶೋಗಳು, ಮಿಡ್ ನೈಟ್ ಶೋಗಳನ್ನು ಸಹ ರದ್ದು ಮಾಡಲಾಗಿದೆ. ತೀರಾ ದೊಡ್ಡ ಸ್ಟಾರ್ ನಟರ ಸಿನಿಮಾಗಳಿಗೆ ಮಾತ್ರವೇ ವಿಶೇಷ ಶೋಗಳನ್ನು ಹಾಕುವ ನಿರ್ಧಾರವನ್ನು ತೆಲಂಗಾಣದ ಸಿನಿಮಾ ಪ್ರದರ್ಶಕರು ಕೈಗೊಂಡಿದ್ದಾರೆ. ‘ಕಲ್ಕಿ’, ‘ಪುಷ್ಪ’, ‘ದೇವರ’ ಅಂಥಹಾ ಭಾರಿ ಬಜೆಟ್ ಸಿನಿಮಾಗಳಿಗೆ ಮಾತ್ರವೇ ವಿಶೇಷ ಪ್ರದರ್ಶನಗಳು, ಮಿಡ್ ನೈಟ್ ಶೋಗಳು ಇರಲಿವೆ. ಸ್ಟಾರ್ ನಟರಲ್ಲದ ಸಿನಿಮಾಗಳಿಗೆ ವಿಶೇಷ ಶೋಗಳನ್ನು ನೀಡುವುದಿಲ್ಲವೆಂದು ಪ್ರದರ್ಶಕರು ಹೇಳಿದ್ದಾರೆ.

ಇದನ್ನೂ ಓದಿ:ರಾಜ್ಯದಲ್ಲಿ ಚಿತ್ರಮಂದಿರಗಳ ಬಂದ್ ಬಗ್ಗೆ ನಿರ್ಧಾರ ಪ್ರಕಟಿಸಿದ ಫಿಲಂ ಚೇಂಬರ್

ತೆಲಂಗಾಣದಲ್ಲಿ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ನಷ್ಟದಲ್ಲಿದ್ದು, ದೊಡ್ಡ ಸಿನಿಮಾಗಳು ಇಲ್ಲದೇ ಇರುವ ಕಾರಣ, ಚಿತ್ರಮಂದಿರಗಳು ನಷ್ಟದಲ್ಲಿವೆ ಎಂದು ಕಾರಣ ನೀಡಿ ಕೆಲ ದಿನಗಳ ಕಾಲ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳನ್ನು ಮುಚ್ಚಲಾಗಿತ್ತು. ‘ಗ್ಯಾಂಗ್ಸ್ ಆಫ್ ಗೋಧಾವರಿ’ ಸಿನಿಮಾ ಬಿಡುಗಡೆಗೆ ಮತ್ತೆ ಚಿತ್ರಮಂದಿರಗಳನ್ನು ತೆರೆಯುವುದಾಗಿ ಹೇಳಲಾಗಿತ್ತು. ಅಂತೆಯೇ ತೆಲಂಗಾಣದಲ್ಲಿ ಈಗಾಗಲೇ ಕೆಲವು ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ ಎನ್ನಲಾಗುತ್ತಿದೆ.

ಕರ್ನಾಟಕದಲ್ಲಿಯೂ ಸಹ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಆತಂಕದಲ್ಲಿದ್ದು, ಕೋವಿಡ್ ಬಳಿಕ ಹಲವಾರು ಚಿತ್ರಮಂದಿರಗಳು ಬಾಗಿಲು ಹಾಕಿವೆ. ತೆಲಂಗಾಣದಂತೆ ಇಲ್ಲಿಯೂ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳನ್ನು ಕೆಲ ಸಮಯದವರೆಗೆ ಮುಚ್ಚುವ ಬಗ್ಗೆ ಚರ್ಚೆ ನಡೆದಿತ್ತು. ಆದರೆ ಫಿಲಂ ಚೇಂಬರ್ ಅಧ್ಯಕ್ಷರು, ಕರ್ನಾಟಕದಲ್ಲಿ ಚಿತ್ರಮಂದಿರಗಳನ್ನು ಮುಚ್ಚುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ