
ರಾಮ್ ಚರಣ್ (Ram Charan) ನಟನೆಯ ದೊಡ್ಡ ಬಜೆಟ್ ಸಿನಿಮಾ ‘ಪೆದ್ದಿ’ ನಾಳೆ (ಜೂನ್ 4) ಬಿಡುಗಡೆ ಆಗುತ್ತಿದೆ. ಸಿನಿಮಾದ ಬಗ್ಗೆ ರಾಮ್ ಚರಣ್ ಅವರಿಗೆ ಭಾರಿ ನಿರೀಕ್ಷೆ ಇದೆ. ಸಿನಿಮಾ ಸಹ ಚೆನ್ನಾಗಿ ಮೂಡಿ ಬಂದಿದೆ ಎನ್ನಲಾಗುತ್ತಿದ್ದು, ಸಿನಿಮಾವನ್ನು ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಲು ಹಾಗೂ ಸಿನಿಮಾದಿಂದ ಒಳ್ಳೆಯ ಲಾಭ ಪಡೆದುಕೊಳ್ಳಲು ನಿರ್ಮಾಪಕರು ಮುಂದಾಗಿದ್ದಾರೆ. ಆಂಧ್ರ, ಕರ್ನಾಟಕ, ಮಹಾರಾಷ್ಟ್ರ, ಅಮೆರಿಕ ಇನ್ನೂ ಹಲವೆಡೆ ಭರ್ಜರಿಯಾಗಿ ಪ್ರೀಮಿಯರ್ ಶೋ ಆಯೋಜಿಸಿದ್ದಾರೆ. ಆದರೆ ತೆಲುಗು ರಾಜ್ಯವಾದ ತೆಲಂಗಾಣದಲ್ಲಿ ‘ಪೆದ್ದಿ‘ ಸಿನಿಮಾದ ಟಿಕೆಟ್ ಬೆಲೆ ಹೆಚ್ಚಳಕ್ಕೆ ಮತ್ತು ಪ್ರೀಮಿಯರ್ ಶೋಗೆ ಅವಕಾಶ ಸಿಕ್ಕಿರಲಿಲ್ಲ. ‘ಪೆದ್ದಿ’ ಟಿಕೆಟ್ ಬೆಲೆ ಹೆಚ್ಚಳಕ್ಕೆ ಸಾಕಷ್ಟು ವಿರೋಧವೂ ಇತ್ತು. ವಿರೋಧದ ನಡುವೆಯೂ ಇದೀಗ ಸಿನಿಮಾದ ಟಿಕೆಟ್ ಬೆಲೆ ಹೆಚ್ಚಳಕ್ಕೆ ಅನುಮತಿ ಧಕ್ಕಿದೆ.
ತೆಲಂಗಾಣದಲ್ಲಿ ಸಿನಿಮಾಗಳ ಪ್ರೀಮಿಯರ್ ಶೋ, ಟಿಕೆಟ್ ಬೆಲೆ ಹೆಚ್ಚಳದ ಬಗ್ಗೆ ಸಾಕಷ್ಟು ಚರ್ಚೆ ಕಳೆದ ಒಂದು ವರ್ಷದಿಂದಲೂ ನಡೆಯುತ್ತಿದೆ. ಪ್ರಕರಣ ನ್ಯಾಯಾಲಯದಲ್ಲಿ ಸಹ ಇದ್ದು, ನ್ಯಾಯಾಲಯ ಸಹ ಈ ಟಿಕೆಟ್ ಬೆಲೆ ಹೆಚ್ಚಳದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ. ಇತ್ತೀಚೆಗಷ್ಟೆ ‘ಪೆದ್ದಿ’ ಚಿತ್ರತಂಡ ಸಹ ಟಿಕೆಟ್ ಬೆಲೆ ಹೆಚ್ಚಳಕ್ಕಾಗಿ ಅನುಮತಿ ಕೋರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿತ್ತು, ಆದರೆ ಅದರ ವಿಚಾರಣೆಗೆ ಮುಂಚೆಯೇ ಅರ್ಜಿಯನ್ನು ಹಿಂಪಡೆದಿತ್ತು.
ಇದರ ಜೊತೆಗೆ ತೆಲಂಗಾಣದ ಸಿನಿಮಾ ಪ್ರದರ್ಶಕ ಹಾಗೂ ವಿತರಕರ ಸಂಘವು ರಾಜ್ಯದಲ್ಲಿ ‘ಪೆದ್ದಿ’ ಸಿನಿಮಾದ ಟಿಕೆಟ್ ಬೆಲೆ ಹೆಚ್ಚಳಕ್ಕೆ ಅನುಮತಿ ನೀಡಬಾರದು ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದರು. ಇದೆಲ್ಲದರ ನಡುವೆಯೂ ಸಹ ಸರ್ಕಾರ ರಿಸ್ಕ್ ತೆಗೆದುಕೊಂಡು ‘ಪೆದ್ದಿ’ ಸಿನಿಮಾದ ಟಿಕೆಟ್ ದರ ಹೆಚ್ಚಳಕ್ಕೆ ಅನುಮತಿ ನೀಡಿದೆ. ಜೊತೆಗೆ ಪ್ರೀಮಿಯರ್ ಶೋಗಳ ಪ್ರದರ್ಶನಕ್ಕೂ ಸಹ ಅನುಮತಿ ನೀಡಿದೆ.
ಇದನ್ನೂ ಓದಿ:ಜಾನ್ವಿ ಕಪೂರ್ ಮೈಮೇಲೆ ಬೀಳಲು ಬಂದ ರಾಮ್ ಚರಣ್ ಅಭಿಮಾನಿ; ವಿಡಿಯೋ ವೈರಲ್
ಈ ಬಗ್ಗೆ ಆದೇಶವನ್ನೇ ಹೊರಡಿಸಿರುವ ಸರ್ಕಾರ, ಜೂನ್ 3 ರಂದು ಅಂದರೆ ಇಂದು ರಾತ್ರಿ 8 ಗಂಟೆಗೆ ಪ್ರೀಮಿಯರ್ ಶೋ ಪ್ರದರ್ಶನಕ್ಕೆ ಅವಕಾಶ ನೀಡಿದ್ದು, ಪ್ರೀಮಿಯರ್ ಶೋಗೆ ಜಿಎಸ್ಟಿ ಸಹಿತ ಗರಿಷ್ಠ 600 ರೂಪಾಯಿ ಟಿಕೆಟ್ ನಿಗದಿ ಪಡಿಸಬಹುದು ಎಂದಿದೆ. ಅದಾದ ಬಳಿಕ ಸಿನಿಮಾ ಬಿಡುಗಡೆ ಆದ ದಿನದಿಂದ ಮುಂದಿನ 10 ದಿನಗಳ ವರೆಗೆ ಸಿಂಗಲ್ ಸ್ಕ್ರೀನ್ಗಳಲ್ಲಿ 100 ರೂಪಾಯಿ ಮತ್ತು ಮಲ್ಟಿಪ್ಲೆಕ್ಸ್ಗಳಲ್ಲಿ 125 ರೂಪಾಯಿ ಟಿಕೆಟ್ ದರವನ್ನು ಹೆಚ್ಚಿಸಲು ಹಾಗೂ ಪ್ರತಿದಿನ ಐದು ಶೋಗಳನ್ನು ಪ್ರದರ್ಶಿಸಲು ಸಹ ಅನುಮತಿ ನೀಡಲಾಗಿದೆ.
ಆದರೆ ಇವುಗಳ ಜೊತೆಗೆ ಷರತ್ತೊಂದನ್ನು ಸರ್ಕಾರವು ವಿಧಿಸಿದ್ದು, ಈ ವಿಶೇಷ ಶೋಗಳಿಂದ ಗಳಿಸುವ ಲಾಭದ 20% ಹಣವನ್ನು ತೆಲುಗು ಸಿನಿಮಾ ಕಾರ್ಮಿಕರ ಕಲ್ಯಾಣ ನಿಧಿಗೆ ನೀಡಬೇಕು ಎಂದು ಸಹ ಹೇಳಿದೆ. ಜೊತೆಗೆ ಸಿನಿಮಾ ಪ್ರದರ್ಶನಕ್ಕೆ ಮುಂಚೆ ಮಾದಕ ವ್ಯಸನ ವಿರೋಧಿ ಜಾಗೃತಿ ಜಾಹೀರಾತುಗಳನ್ನು ಚಿತ್ರಮಂದಿರಗಳಲ್ಲಿ ಪ್ರದರ್ಶಿಸಲು ಸೂಚಿಸಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ