KBC 13: ₹ 12.5 ಲಕ್ಷ ಮೊತ್ತದ ಕ್ರಿಕೆಟ್ ಕುರಿತ ಪ್ರಶ್ನೆಗೆ ತಪ್ಪಾದ ಉತ್ತರ ನೀಡಿದ ಸ್ಪರ್ಧಿ; ನೀವು ಉತ್ತರಿಸಬಲ್ಲಿರಾ?
Amitabh Bachchan: ಕೆಬಿಸಿ 13ರ ಸ್ಪರ್ಧೆಯಲ್ಲಿ ಹಾಟ್ ಸೀಟ್ನಲ್ಲಿ ಕುಳಿತ ಸ್ಪರ್ಧಿಯೋರ್ವರು ಕ್ರಿಕೆಟ್ಗೆ ಸಂಬಂಧಪಟ್ಟ ₹ 12.5 ಲಕ್ಷ ಮೊತ್ತದ ಪ್ರಶ್ನೆಗೆ ತಪ್ಪಾದ ಉತ್ತರ ನೀಡಿದ್ದಾರೆ. ನೀವು ಉತ್ತರಿಸಬಲ್ಲಿರಾ?
ಬಾಲಿವುಡ್ನ ಖ್ಯಾತ ನಟ ಅಮಿತಾಭ್ ಬಚ್ಚನ್ ನಡೆಸಿಕೊಡುತ್ತಿರುವ ಕೌನ್ ಬನೇಗಾ ಕರೋಡ್ಪತಿಯ (ಕೆಬಿಸಿ) 13ನೇ ಸೀಸನ್ ವೀಕ್ಷಕರ ಗಮನ ಸೆಳೆದಿದೆ. ಈಗಾಗಲೇ ಈರ್ವರು ಕೋಟ್ಯಧಿಪತಿಗಳು ಸ್ಪರ್ಧೆಯಲ್ಲಿ ಹೊರಹೊಮ್ಮಿದ್ದಾರೆ. ಅಲ್ಲದೇ ಪ್ರತಿ ವಾರ ಭಾಗವಹಿಸುವ ಸೆಲೆಬ್ರಿಟಿಗಳು ಕಾರ್ಯಕ್ರಮದ ರಂಗನ್ನು ಹೆಚ್ಚಿಸಿದ್ದಾರೆ. ಅಲ್ಲದೇ ಇತರ ಸ್ಪರ್ಧಿಗಳೂ ಉತ್ತಮವಾಗಿ ಆಟವಾಡಿ, ಒಳ್ಳೆಯ ಮೊತ್ತವನ್ನೇ ಗೆಲ್ಲುತ್ತಿದ್ದಾರೆ. ಕೆಲವೊಮ್ಮೆ ತಪ್ಪು ಉತ್ತರದಿಂದ ಬಹುಮಾನದ ಮೊತ್ತ ಕಡಿಮೆಯಾಗಿರುವುದೂ ಇದೆ. ಇತ್ತೀಚಿನ ಸಂಚಿಕೆಯೊಂದರಲ್ಲೂ ಸ್ಪರ್ಧಿಯೋರ್ವರಿಗೆ ಹೀಗೇ ಆಯಿತು. ಕಳೆದ ಸಂಚಿಕೆಯಲ್ಲಿ ಛತ್ತೀಸಗಡ ರಾಜ್ಯದ ಹೇಮಾ ಸಾಹು ಎಂಬ ಸ್ಪರ್ಧಿಯೋರ್ವರು ಹಾಟ್ ಸೀಟ್ ಅಲಂಕರಿಸಿದ್ದರು. ಪ್ರಸ್ತುತ ಯುಪಿಎಸ್ಸಿಗೆ ತಯಾರಿ ನಡೆಸುತ್ತಿರುವ ಅವರು, ಪೊಲೀಸ್ ಅಧಿಕಾರಿಯಾಗುವ ಗುರಿಯನ್ನಿಟ್ಟುಕೊಂಡಿದ್ದಾರೆ.
ಹೇಮಾ ಅವರು ಹತ್ತನೇ ಪ್ರಶ್ನೆಯಾದ ₹ 3.2 ಲಕ್ಷ ಮೊತ್ತದ ಪ್ರಶ್ನೆಗೆ ಸರಿ ಉತ್ತರ ನೀಡಿದರು. ಇದರ ನಂತರದ ₹ 6.4 ಲಕ್ಷದ ಪ್ರಶ್ನೆಗೂ ಸರಿಯುತ್ತರವನ್ನು ನೀಡಿದರು. ಆದರೆ ಅವರ ಓಟಕ್ಕೆ ತಡೆಯನ್ನು ಹಾಕಿದ್ದು 12 ನೇ ಪ್ರಶ್ನೆ. ₹ 12.5 ಲಕ್ಷ ಮೊತ್ತದ ಕ್ರಿಕೆಟ್ ಕುರಿತಾದ ಈ ಪ್ರಶ್ನೆಗೆ ಹೇಮಾಗೆ ಸರಿಯುತ್ತರ ತಿಳಿದಿರಲಿಲ್ಲ. ಪ್ರಶ್ನೆ ಹೀಗಿತ್ತು. ‘ಮೆರಿಲ್ಬೋನ್ ಕ್ರಿಕೆಟ್ ಕ್ಲಬ್ನ ಗೌರವ ಅಜೀವ ಸದಸ್ಯತ್ವವನ್ನು ಪಡೆದ ಭಾರತದ ಮೊದಲ ಮಹಿಳಾ ಕ್ರೀಡಾಪಟು ಯಾರು?’ ಇದಕ್ಕೆ ಆಯ್ಕೆಗಳ ರೂಪದಲ್ಲಿ ಡಯಾನಾ ಇದುಜಿ, ಮಿಥಾಲಿ ರಾಜ್, ಜೂಲನ್ ಗೋಸ್ವಾಮಿ, ಅಂಜುಮ್ ಚೋಪ್ರಾರ ಹೆಸರುಗಳಿದ್ದವು.
ಈ ಪ್ರಶ್ನೆಗೆ ಸರಿಯಾದ ಉತ್ತರ ಅಂಜುಮ್ ಚೋಪ್ರಾ ಆಗಿತ್ತು. ಆದರೆ ಇದನ್ನು ತಪ್ಪಾಗಿ ಉತ್ತರಿಸಿದ ಹೇಮಾರ ಬಹುಮಾನದ ಮೊತ್ತ ₹ 6.4 ಲಕ್ಷದಿಂದ ₹ 3.2 ಲಕ್ಷಕ್ಕೆ ಕುಸಿಯಿತು. ಗೆದ್ದ ಹಣವನ್ನು ಮಕ್ಕಳ ವಿದ್ಯಾಭ್ಯಾಸಕ್ಕೆ ಮೀಸಲಿಡುವುದಾಗಿ ಅವರು ತಿಳಿಸಿದ್ದಾರೆ. ಇತ್ತೀಚೆಗಷ್ಟೇ ಕೆಬಿಸಿಯಲ್ಲಿ ಸಾಹಿಲ್ ಅಹಿರ್ವಾರ್ ಎನ್ನುವ 19 ವರ್ಷದ ಯುವಕ ₹ 1 ಕೋಟಿ ಗೆದ್ದಿದ್ದರು. ಅದಕ್ಕೂ ಮುನ್ನ ಓರ್ವರು ಕೋಟ್ಯಧಿಪತಿಯಾಗಿದ್ದರು. ಒಟ್ಟು ಈ ಸೀಸನ್ನಲ್ಲಿ ಈರ್ವರು ಕೋಟ್ಯಧಿಪತಿಗಳು ಕೆಬಿಸಿಯಲ್ಲಿ ಹೊರಹೊಮ್ಮಿದ್ದಾರೆ.
ಇದನ್ನೂ ಓದಿ:
ಕೆಬಿಸಿಯಲ್ಲಿ 1 ಕೋಟಿ ಮೊತ್ತದ ಈ ಪ್ರಶ್ನೆಗೆ ಉತ್ತರ ತಿಳಿಯದೇ ಕ್ವಿಟ್ ಮಾಡಿದ ಸ್ಪರ್ಧಿ; ನೀವು ಉತ್ತರಿಸಬಲ್ಲಿರಾ?
KBC 13: ನಾನ್ ಸ್ಟಾಪ್ ಸಾಂಸಾರಿಕ ಸಮಸ್ಯೆ ಹೇಳಿಕೊಂಡ ಜೋಡಿ; ಉತ್ತರ ತೋಚದೇ ತಲೆ ಮೇಲೆ ಕೈಹೊತ್ತು ಕುಳಿತ ಅಮಿತಾಭ್