
ಸೋಶಿಯಲ್ ಮೀಡಿಯಾದಲ್ಲಿ ಅಯ್ಯೋ ಶ್ರದ್ಧಾ (Aiyyo Shraddha) ಅವರು ಸಖತ್ ಫೇಮಸ್ ಆಗಿದ್ದಾರೆ. ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡಿ ಅವರು ಅನುಭವ ಪಡೆದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಆಗುವ ಅವಕಾಶ ಕೂಡ ಅಯ್ಯೋ ಶ್ರದ್ಧಾಗೆ ಸಿಕ್ಕಿತ್ತು. ಇತ್ತೀಚೆಗೆ ‘ಅಂಕಿತ ಪುಸ್ತಕ ಪ್ರಕಾಶನ’ದ ಮೂರು ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅಯ್ಯೋ ಶ್ರದ್ಧಾ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ಮಾತನಾಡಿದ ಅವರು ತಮ್ಮ ಜೀವನದ ಕೆಲವು ಆಸಕ್ತಿಕರ ವಿಷಯಗಳನ್ನು ಹಂಚಿಕೊಂಡರು. ಕನ್ನಡ (Kannada) ಭಾಷೆ ಜೊತೆಗೆ ತಮಗೆ ಇರುವ ನಂಟಿನ ಬಗ್ಗೆ ಅವರು ವಿವರಿಸಿದರು. 20ನೇ ವಯಸ್ಸಿನ ತನಕ ಅಯ್ಯೋ ಶ್ರದ್ಧಾ (ಶ್ರದ್ಧಾ ಜೈನ್) ಅವರಿಗೆ ಕನ್ನಡವೇ ಬರುತ್ತಿರಲಿಲ್ಲ!
‘ಇಂದು ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಬಂದಿದ್ದೇನೆ ಎಂದರೆ ನನಗೆ ನಂಬೋಕೆ ಆಗುತ್ತಿಲ್ಲ. ಹಿಂತಿರುಗಿ ನೋಡಿದರೆ ನನ್ನ ಮೇಲೆ ಕನ್ನಡದ ಸಾಲ ಇದೆ ಅಂತ ಅನಿಸುತ್ತದೆ. ಈ ಜನ್ಮದಲ್ಲಿ ನಾನು ಆ ಸಾಲವನ್ನು ತೀರಿಸಲೇಬೇಕು. ಕನ್ನಡದಲ್ಲಿ ನಾನು ಏನೋ ಒಂದು ಮಾಡುತ್ತೇನೆ ಎಂಬ ಆತ್ಮವಿಶ್ವಾಸ ಇದೆ. ನನ್ನ ಮತ್ತು ಕನ್ನಡ ಭಾಷೆಯ ಸಂಬಂಧದ ಬಗ್ಗೆ ನಾನು ಬಹಳ ಆಲೋಚನೆ ಮಾಡಿದ್ದೇನೆ’ ಎಂದು ಅವರು ಹೇಳಿದರು.
‘ನಾನು ಹುಟ್ಟಿದ್ದು, ಓದಿದ್ದು ಮುಂಬೈನಲ್ಲಿ. ಕರ್ನಾಟಕಕ್ಕೆ ಬರುತ್ತೇನೆ ಅಂತ ನನಗೆ ಅನಿಸಿಯೇ ಇರಲಿಲ್ಲ. 20ನೇ ವಯಸ್ಸಿನ ತನಕ ನಾನು ಒಂದು ಅಕ್ಷರವೂ ಕನ್ನಡ ಮಾತನಾಡಲಿಲ್ಲ. ನನ್ನ ತಂದೆ-ತಾಯಿ ದಕ್ಷಿಣ ಕನ್ನಡದವರು. ಮಹಾರಾಷ್ಟ್ರದ ಒಂದು ಸರ್ಕಾರಿ ಕನ್ನಡ ಶಾಲೆಯಲ್ಲಿ ನನ್ನ ತಾಯಿ ಕನ್ನಡದ ಶಿಕ್ಷಕಿ ಆಗಿದ್ದರು. ಆದರೂ ನನಗೆ ಕನ್ನಡದ ಗಂಧ-ಗಾಳಿ ತಿಳಿದಿರಲಿಲ್ಲ. ಅಕ್ಕಪಕ್ಕದಲ್ಲಿ ಯಾರೂ ಕನ್ನಡ ಮಾತನಾಡುತ್ತಿರಲಿಲ್ಲ. ಮನೆಯಲ್ಲಿ ನಾವು ತುಳು ಮಾತನಾಡುತ್ತೇವೆ. ಕನ್ನಡ ಕಲಿಯುವ ಪ್ರಸಂಗವೇ ಬರಲಿಲ್ಲ’ ಎಂದಿದ್ದಾರೆ ಶ್ರದ್ಧಾ.
‘ನಾನು ಇಂಜಿನಿಯರಿಂಗ್ ಮಾಡಲು ಹಾಸನಕ್ಕೆ ಬಂದೆ. ಅಲ್ಲಿನ ಹಾಸ್ಟೆಲ್ನಲ್ಲಿ ಒಂದೇ ಟಿವಿ ಇತ್ತು. ಅದರಲ್ಲಿ ಕನ್ನಡ ಚಾನೆಲ್ಗಳು ಮಾತ್ರ ಬರುತ್ತಿದ್ದವು. ಹಾಗಾಗಿ ನನ್ನ ಕನ್ನಡದ ಮೊದಲ ಗುರುಗಳು ಎಂದರೆ ರವಿಚಂದ್ರನ್ ಅವರು. ಕಾಶಿನಾಥ್ ಅವರ ಸಿನಿಮಾಗಳಲ್ಲಿ ಇರುವ ಬರವಣಿಗೆಯೇ ಬೇರೆ. ಟಿವಿ ವಾಲ್ಯೂಮ್ ಕಡಿಮೆ ಮಾಡಿ ಎಂಬುದೇ ನನ್ನ ಮೊದಲ ಕನ್ನಡದ ವಾಕ್ಯ. ಹಾಗೆ ತುಂಬ ಸಹಜವಾಗಿ ನಾನು ಕನ್ನಡ ಕಲಿತೆ’ ಎಂದು ಅಯ್ಯೋ ಶ್ರದ್ಧಾ ಹೇಳಿದ್ದಾರೆ.
ನಂತರ ಹಿಂದಿಯ ಹಾಡುಗಳನ್ನು ಪ್ರಸಾರ ಮಾಡುತ್ತಿದ್ದ ‘ಫೀವರ್ 104’ ರೆಡಿಯೋ ವಾಹಿನಿಯಲ್ಲಿ ಜಾಕಿಯಾಗಿ ಸೇರಿಕೊಳ್ಳಲು ಅಯ್ಯೋ ಶ್ರದ್ಧಾ ಅವರು ಸಂದರ್ಶನ ನೀಡಿದರು. ‘ಬಾಂಬೆಯಲ್ಲಿ ಸಂದರ್ಶನ ನಡೆಯಿತು. ಹಿಂದಿಯಿಂದ ಕನ್ನಡಕ್ಕೆ ಬದಲಾಗುತ್ತಿದ್ದೇವೆ, ನೀವು ಕನ್ನಡದಲ್ಲಿ ನಿರೂಪಣೆ ಮಾಡಬಹುದಾ ಅಂತ ಅವರು ಕೇಳಿದರು. ಸಂದರ್ಶನ ಮಾಡಿದವರು ಪಂಜಾಬಿ ಆಗಿದ್ದರು. ಆತ್ಮವಿಶ್ವಾಸದಿಂದ ಏನೋ ಹೇಳಿದೆ. ಅದರಿಂದ ಕೆಲಸ ಸಿಕ್ಕೇ ಬಿಡ್ತು. ನಾನು ರೇಡಿಯೋ ಜಾಕಿ ಆದ ಬಳಿಕ ಕೇಳುಗರ ಎದುರು ನನ್ನ ಬಂಡವಾಳ ಸ್ವಲ್ಪ ಬಯಲಾಯ್ತು’ ಎಂದಿದ್ದಾರೆ ಅಯ್ಯೋ ಶ್ರದ್ಧಾ.
‘ನಂತರ ನನಗೆ ಕನ್ನಡದ ಒಂದು ಟಿವಿ ವಾಹಿನಿಯಿಂದ ಕರೆಬಂತು. ಅಲ್ಲಿ ಡ್ಯಾನ್ಸಿಂಗ್ ಸ್ಟಾರ್ ಕಾರ್ಯಕ್ರಮಕ್ಕೆ ನಾನು ನಿರೂಪಕಿ ಆದೆ. ಅಕುಲ್ ಬಾಲಾಜಿ ಬದಲಿಗೆ ನಾನು ನಿರೂಪಣೆ ಮಾಡಲು ಶುರು ಮಾಡಿದೆ. ನಂತರ ನಿರೂಪಣೆ ಬಿಟ್ಟು ಕ್ಯಾಮೆರಾ ಹಿಂದೆ ಬರವಣಿಗೆ ಕೆಲಸ ಮಾಡಿ ಅಂತ ಬಾಸ್ ಹೇಳಿದರು. ನಂತರದ ವರ್ಷಗಳಲ್ಲಿ ನಾನು ಪುನೀತ್ ರಾಜ್ಕುಮಾರ್ ಅವರ ಕನ್ನಡದ ಕೋಟ್ಯಧಿಪತಿ ಶೋನ ಪ್ರೋಮೋ ನಿರ್ದೇಶನ ಮಾಡಿದೆ. ನಿಮಗೆ ಇದನ್ನು ಕಲ್ಪಿಸಿಕೊಳ್ಳಲು ಸಾಧ್ಯವೇ? ಕನ್ನಡದಲ್ಲಿ ನನಗೆ ಈ ರೀತಿಯ ಅವಕಾಶಗಳು ಸಿಕ್ಕವು’ ಎಂದು ಶ್ರದ್ಧಾ ಅವರು ನೆನಪುಗಳನ್ನು ಮೆಲುಕು ಹಾಕಿದ್ದಾರೆ.
ಇದನ್ನೂ ಓದಿ: ಅಯ್ಯೋ ಶ್ರದ್ಧಾಗೆ ಮೋದಿಯಿಂದ ಸಿಕ್ತು ಉತ್ತಮ ಸಲಹೆ; ಪ್ರಧಾನಿ ಭೇಟಿಯ ಪೂರ್ತಿ ವಿವರ ಇಲ್ಲಿದೆ..
‘ನನ್ನ ಮೊದಲ ಸ್ಟ್ಯಾಂಡಪ್ ಕಾಮಿಡಿ ಶೋ ಆಗಿರುವುದು ಕನ್ನಡದಲ್ಲಿ. ಹಾರಲು ನನಗೆ ಕನ್ನಡವು ರೆಕ್ಕೆಗಳನ್ನು ನೀಡಿದೆ. ಕನ್ನಡದ ಶಿಕ್ಷಕಿಯಾಗಿ ನಮ್ಮ ಅಮ್ಮ ಮಾಡಿದ ಪುಣ್ಯ ಇದೆಲ್ಲ ಅಂತ ನನಗೆ ಅನಿಸುತ್ತದೆ. ಕಲರ್ಸ್ ಕನ್ನಡ ವಾಹಿನಿ ಸೇರಿದಾಗ ನನಗೆ ಕನ್ನಡ ಓದಲು ಬರುತ್ತಿರಲಿಲ್ಲ. ಆಗ ನನಗೆ ಅನಕ್ಷರಸ್ಥೆ ಅನಿಸುತ್ತಿತ್ತು. ಆ ಬಳಿಕ ನಾನು ಆ ಆ ಇ ಈ ಬರೆಯುವುದು ಕಲಿತೆ. ಯಾರೂ ಹೇಳದೆಯೇ ನಾನು ಕನ್ನಡ ಕಲಿತೆ. ಅದರಲ್ಲಿ ಇರುವ ಪ್ರೀತಿ ಹೆಚ್ಚು. ಆ ರೀತಿ ಪ್ರೀತಿಯಿಂದಲೇ ನಾವು ಭಾಷೆ ಕಲಿಯಬೇಕು’ ಎಂದು ಅಯ್ಯೋ ಶ್ರದ್ಧಾ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.