ಕೌನ್ ಬನೇಗಾ ಕರೋಡ್​ಪತಿ 17ನೇ ಸೀಸನ್ ಶೀಘ್ರ ಶುರು; ಸಿಹಿ ಸುದ್ದಿ ನೀಡಿದ ಅಮಿತಾಭ್ ಬಚ್ಚನ್

ನಟ ಅಮಿತಾಭ್ ಬಚ್ಚನ್ ಅವರು ‘ಕೌನ್ ಬನೇಗಾ ಕರೋಡ್​ಪತಿ’ ಕಾರ್ಯಕ್ರಮ ನಡೆಸಿಕೊಡಲು ಮತ್ತೆ ಸಜ್ಜಾಗಿದ್ದಾರೆ. ಈ ಬಗ್ಗೆ ಅವರು ಗುಡ್ ನ್ಯೂಸ್ ನೀಡಿದ್ದಾರೆ. ಹೊಸ ಪ್ರೋಮೋ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ರಿಜಿಸ್ಟ್ರೇಷನ್ ದಿನಾಂಕದ ಬಗ್ಗೆ ಮಾಹಿತಿ ನೀಡಲಾಗಿದೆ. ಈ ಪ್ರೋಮೋ ವೈರಲ್ ಆಗಿದೆ.

ಕೌನ್ ಬನೇಗಾ ಕರೋಡ್​ಪತಿ 17ನೇ ಸೀಸನ್ ಶೀಘ್ರ ಶುರು; ಸಿಹಿ ಸುದ್ದಿ ನೀಡಿದ ಅಮಿತಾಭ್ ಬಚ್ಚನ್
Amitabh Bachchan

Updated on: Apr 04, 2025 | 10:55 PM

ದಿಗ್ಗಜ ನಟ ಅಮಿತಾಭ್ ಬಚ್ಚನ್ (Amitabh Bachchan) ಅವರು 82ನೇ ವಯಸ್ಸಿನಲ್ಲೂ ಬಿಡುವಿಲ್ಲದೇ ಕೆಲಸ ಮಾಡುತ್ತಿದ್ದಾರೆ. ಸಿನಿಮಾ ಮತ್ತು ಕಿರುತೆರೆಯಲ್ಲಿ ಅವರು ಆ್ಯಕ್ಟೀವ್ ಆಗಿದ್ದಾರೆ. ಜಾಹೀರಾತುಗಳಲ್ಲಿ ಅಭಿನಯಿಸುತ್ತಲೇ ಅವರು ಬ್ಯುಸಿ ಆಗಿದ್ದಾರೆ. ಜನಪ್ರಿಯ ‘ಕೌನ್ ಬನೇಗಾ ಕರೋಡ್​ಪತಿ’ (Kaun Banega Crorepati) ಕಾರ್ಯಕ್ರಮವನ್ನು ಅವರು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಕಳೆದ ತಿಂಗಳಷ್ಟೇ ಈ ರಿಯಾಲಿಟಿ ಶೋ 16ನೇ ಸೀಸನ್ ಅಂತ್ಯಗೊಂಡಿತ್ತು. ಅದಾಗಿ ಕೆಲವೇ ದಿನಗಳು ಕಳೆಯುವುದರೊಳಗೆ 17ನೇ ಸೀಸನ್​ ಬಗ್ಗೆ ಮಾಹಿತಿ ನೀಡಲಾಗಿದೆ. ಶೀಘ್ರದಲ್ಲೇ ‘ಕೌನ್ ಬನೇಗಾ ಕರೋಡ್​ಪತಿ’ 17ನೇ ಸೀಸನ್ (KBC 17) ಆರಂಭ ಆಗಲಿದೆ. ಇದನ್ನು ತಿಳಿಸಲು ಹೊಸ ಪ್ರೋಮೋ ಬಿಡುಗಡೆ ಮಾಡಲಾಗಿದೆ.

ಸೋನಿ ಟಿವಿಯಲ್ಲಿ ‘ಕೌನ್ ಬನೇಗಾ ಕರೋಡ್​ಪತಿ’ ರಿಯಾಲಿಟಿ ಶೋ ಮೂಡಿಬರುತ್ತಿದೆ. ಅಮಿತಾಭ್ ಬಚ್ಚನ್ ಅವರು ಈ ಶೋ ನಡೆಸಿಕೊಡುವ ಶೈಲಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ಕಾರ್ಯಕ್ರಮಕ್ಕೆ ದೊಡ್ಡ ವೀಕ್ಷಕವರ್ಗ ಇದೆ. ಅನೇಕ ಸೆಲೆಬ್ರಿಟಿಗಳು ಕೂಡ ಈ ಶೋನಲ್ಲಿ ಭಾಗಿಯಾಗಿದ್ದಾರೆ. ಅನೇಕರ ಬದುಕು ಈ ಕಾರ್ಯಕ್ರಮದಿಂದ ಬದಲಾಗಿದೆ.

ಇದನ್ನೂ ಓದಿ
82ನೇ ವಯಸ್ಸಿಗೆ ದಿನಕ್ಕೆ 1 ಕೋಟಿ ರೂ. ದುಡಿಯುತ್ತಾರೆ ಅಮಿತಾಭ್
120 ಕೋಟಿ ರೂ. ತೆರಿಗೆ ಪಾವತಿಸಿದ ಅಮಿತಾಭ್ ಬಚ್ಚನ್; ಹಾಗಾದ್ರೆ ಆದಾಯ ಎಷ್ಟು?
ಐಶ್ವರ್ಯಾ-ಅಭಿಷೇಕ್ ವಿಚ್ಛೇದನದ ಬಗ್ಗೆ ಕೊನೆಗೂ ಮೌನ ಮುರಿದ ಅಮಿತಾಭ್
ಅಮಿತಾಭ್ ಆಸ್ತಿ 3000 ಸಾವಿರ ಕೋಟಿ ರೂಪಾಯಿ; ಬ್ಯಾಂಕ್ ಬ್ಯಾಲೆನ್ಸ್ ಎಷ್ಟು?

ಹಲವು ಬಗೆಯ ಪ್ರಶ್ನೆಗಳನ್ನು ಕೇಳಿ, ಸರಿ ಉತ್ತರ ನೀಡಿದವರಿಗೆ ಬಹುಮಾನದ ರೂಪದಲ್ಲಿ ಹಣ ನೀಡುವ ಈ ಕಾರ್ಯಕ್ರಮದಲ್ಲಿ ಮನರಂಜನೆಯ ಜೊತೆಗೆ ಜ್ಞಾನ ಕೂಡ ಸಿಗುತ್ತದೆ. ಹಾಗಾಗಿ ‘ಕೌನ್ ಬನೇಗಾ ಕರೋಡ್​ಪತಿ’ ಕಾರ್ಯಕ್ರಮ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ಈ ಶೋನಲ್ಲಿ ಭಾಗವಹಿಸಲು ಇಚ್ಚಿಸುವವರು ನೋಂದಣಿ ಮಾಡಿಕೊಳ್ಳಬಹುದು. ಏಪ್ರಿಲ್ 14ರಿಂದ ರಿಜಿಸ್​ಟ್ರೇಷನ್ ಆರಂಭ ಆಗಲಿದೆ.

ಸೋನಿ ಟಿವಿ ಬಿಡುಗಡೆ ಮಾಡಿದ ಹೊಸ ಪ್ರೋಮೋ ಇಂಟರೆಸ್ಟಿಂಗ್ ಆಗಿದೆ. ಅಮಿತಾಭ್ ಬಚ್ಚನ್ ಅವರು ಹೊಟ್ಟೆನೋವಿನಿಂದ ಬಳಲುತ್ತಿರುತ್ತಾರೆ. ಅವರನ್ನು ತಪಾಸಣೆ ಮಾಡಲು ಬಂದ ವೈದ್ಯರು ‘ನಿಮ್ಮ ಹೊಟ್ಟೆಯಲ್ಲಿ ಏನೋ ಇದೆ’ ಎನ್ನುತ್ತಾರೆ. ‘ಅಂಥದ್ದು ಏನೂ ತಿಂದಿಲ್ಲ’ ಎಂದು ಅಮಿತಾಭ್ ಬಚ್ಚನ್ ಉತ್ತರ ನೀಡುತ್ತಾರೆ. ‘ಹಾಗಾದ್ರೆ ನಿಮ್ಮ ಹೊಟ್ಟೆಯಲ್ಲಿ ಏನೋ ವಿಷಯ ಇದೆ’ ಎಂದು ಡಾಕ್ಟರ್ ಹೇಳುತ್ತಾರೆ. ಆಗ ಅಮಿತಾಭ್ ಬಚ್ಚನ್ ಅವರು ‘ಕೌನ್ ಬನೇಗಾ ಕರೋಡ್​ಪತಿ 17’ ವಿಷಯವನ್ನು ಬಹಿರಂಗಪಡಿಸುತ್ತಾರೆ.

ಇದನ್ನೂ ಓದಿ: ವಿವಾಹಕ್ಕೂ ಮುನ್ನ ಜಯಾಗೆ ಒಂದು ಕಠಿಣ ಷರತ್ತು ವಿಧಿಸಿದ್ದ ಅಮಿತಾಭ್  

‘ಕೌನ್ ಬನೇಗಾ ಕರೋಡ್​ಪತಿ’ 17ನೇ ಸೀಸನ್​ನ ಹೊಸ ಪ್ರೋಮೋ ವೈರಲ್ ಆಗಿದೆ. ಇದಕ್ಕೆ ಕಮೆಂಟ್ ಮಾಡಿದ ಅಭಿಮಾನಿಗಳು ‘ಕಾತರದಿಂದ ಕಾಯುತ್ತಿದ್ದೇವೆ’ ಎಂದು ಹೇಳಿದ್ದಾರೆ. ಈ ಬಾರಿ ಹಾಟ್​ ಸೀಟ್​ನಲ್ಲಿ ಯಾರೆಲ್ಲ ಕೂರಲಿದ್ದಾರೆ? ಯಾರಿಗೆ ಕೋಟಿ ರೂಪಾಯಿ ಗೆಲ್ಲುವ ಚಾನ್ಸ್ ಸಿಗಲಿದೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.

​ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.