120 ಕೋಟಿ ರೂ. ತೆರಿಗೆ ಪಾವತಿಸಿದ ಅಮಿತಾಭ್ ಬಚ್ಚನ್; ಹಾಗಾದ್ರೆ ಆದಾಯ ಎಷ್ಟು?
82 ವರ್ಷ ವಯಸ್ಸಿನ ಅಮಿತಾಭ್ ಬಚ್ಚನ್ ಅವರು 2024-25ನೇ ಸಾಲಿನಲ್ಲಿ 120 ಕೋಟಿ ರೂಪಾಯಿ ತೆರಿಗೆ ಪಾವತಿಸಿ ದೇಶದ ಅತಿ ಹೆಚ್ಚು ತೆರಿಗೆ ಪಾವತಿಸಿದ ನಟ ಎನಿಸಿಕೊಂಡಿದ್ದಾರೆ. ಕೌನ್ ಬನೇಗಾ ಕರೋಡ್ಪತಿ ಸೇರಿದಂತೆ ವಿವಿಧ ಚಿತ್ರಗಳು ಮತ್ತು ಬ್ರ್ಯಾಂಡ್ ಅಂಬಾಸಿಡರ್‌ಶಿಪ್‌ನಿಂದ ಅವರು ಈ ವರ್ಷ ನೂರಾರು ಕೋಟಿ ರೂಪಾಯಿ ಗಳಿಸಿದ್ದಾರೆ. ಕಳೆದ ವರ್ಷಕ್ಕಿಂತ ಅವರ ಗಳಿಕೆ ಮತ್ತು ತೆರಿಗೆ ಪಾವತಿಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ.

ಬಾಲಿವುಡ್ ನಟ ಅಮಿತಾಭ್ ಬಚ್ಚನ್ (Amitabh Bachchan) ಅವರಿಗೆ ಈಗ 82 ವರ್ಷ. ಈ ವಯಸ್ಸಿನಲ್ಲೂ ಅವರು ನಿರಂತರವಾಗಿ ಶ್ರಮ ವಹಿಸಿ ಕೆಲಸ ಮಾಡುತ್ತಿದ್ದಾರೆ. ರಿಯಾಲಿಟಿ ಶೋಗಳನ್ನು ನಡೆಸುತ್ತಾ, ಸಿನಿಮಾಗಳನ್ನು ಮಾಡುತ್ತಾ, ಉದ್ಯಮಗಳನ್ನು ನಿರ್ವಹಿಸುತ್ತಾ, ರಿಯಲ್ ಎಸ್ಟೇಟ್ಗಳ ಮೇಲೆ ಹೂಡಿಕೆ ಮಾಡುತ್ತಾ ಇದ್ದಾರೆ. ಈಗ ಅಮಿತಾಭ್ ಬಚ್ಚನ್ ಅವರು 2024-25ನೇ ಸಾಲಿನಲ್ಲಿ ಎಷ್ಟು ತೆರಿಗೆ ಪಾವತಿ ಮಾಡಿದ್ದಾರೆ ಎಂಬ ವಿಚಾರ ರಿವೀಲ್ ಆಗಿದೆ. ಅವರು ಬರೋಬ್ಬರಿ 120 ಕೋಟಿ ರೂಪಾಯಿ ತೆರಿಗೆ ಪಾವತಿಸಿದ್ದಾರೆ. ಈ ಮೂಲಕ ಭಾರತದಲ್ಲಿ ಅತಿ ಹೆಚ್ಚು ತೆರಿಗೆ ಪಾವತಿಸಿದ ಹೀರೋ ಎನಿಸಿಕೊಂಡಿದ್ದಾರೆ.
ಅಮಿತಾಭ್ ಬಚ್ಚನ್ ಅವರು ಹಂತ ಹಂತವಾಗಿ ತೆರಿಗೆ ಪಾವತಿ ಮಾಡಿದ್ದಾರೆ. ಕೊನೆಯ ಕಂತಿನಲ್ಲಿ ಅವರು 52.50 ಕೋಟಿ ರೂಪಾಯಿ ಪಾವತಿ ಮಾಡಿದ್ದಾರೆ. ಮಾರ್ಚ್ 15ರಂದು ಅಮಿತಾಭ್ ಅವರು ಇದನ್ನು ಕಟ್ಟಿದ್ದಾರೆ. ಅಮಿತಾಭ್ ಬಚ್ಚನ್ ಅವರು ‘ಕೌನ್ ಬನೇಗಾ ಕರೋಡ್ಪತಿ’ ಸೀಸನ್ 16 ಅನ್ನು ನಡೆಸಿಕೊಟ್ಟಿದ್ದಾರೆ. ಇದು ಅವರ ಆದಾಯದ ದೊಡ್ಡ ಮೂಲವಾಗಿದೆ.
ಆದಾಯ ಎಷ್ಟು?
82ನೇ ವಯಸ್ಸಿನಲ್ಲೂ ಅಮಿತಾಭ್ ಬಚ್ಚನ್ ಅವರು ಬೇಡಿಕೆ ಉಳಿಸಿಕೊಂಡಿದ್ದಾರೆ. ‘ಕೌನ್ ಬನೇಗಾ ಕರೋಡ್ಪತಿ’ಯನ್ನು ಅವರು ನಡೆಸಿಕೊಟ್ಟರೆ ಕಾರ್ಯಕ್ರಮಕ್ಕೆ ಮತ್ತಷ್ಟು ಕಳೆ ಬರುತ್ತದೆ. ಈ ಆರ್ಥಿಕ ವರ್ಷದಲ್ಲಿ (2024-25) ಅಮಿತಾಭ್ ಬಚ್ಚನ್ ಅವರು 350 ಕೋಟಿ ರೂಪಾಯಿ ಸಂಪಾದಿಸಿದ್ದಾರೆ. ಇದರಲ್ಲಿ ಬ್ರ್ಯಾಂಡ್ಗಳ ಪ್ರಚಾರ, ಸಿನಿಮಾ ಸಂಭಾವನೆ ಕೂಡ ಸೇರಿದೆ.
ಕಳೆದ ವರ್ಷ ಅಮಿತಾಭ್ ಬಚ್ಚನ್ ಅವರು 72 ಕೋಟಿ ರೂಪಾಯಿ ತೆರಿಗೆ ಪಾವತಿ ಮಾಡಿದ್ದರು. ಈ ಬಾರಿ ಅವರ ಗಳಿಕೆಯಲ್ಲಿ ತೀವ್ರ ಗತಿಯಲ್ಲಿ ಏರಿಕೆ ಕಂಡಿದೆ. ಭಾರತದ ಶ್ರೀಮಂತ ನಟ ಶಾರುಖ್ ಖಾನ್ ಅವರು ಬರೋಬ್ಬರಿ 92 ಕೋಟಿ ರೂಪಾಯಿ ತೆರಿಗೆ ಪಾವತಿಸಿ ಈ ಸಾಲಿನಲ್ಲಿ ಎರಡನೇ ಸ್ಥಾನದಲ್ಲಿ ಇದ್ದಾರೆ.
ಇದನ್ನೂ ಓದಿ: ‘ಕಲ್ಕಿ 2898 ಎಡಿ’ ಶೂಟ್ಗೆ ರೆಡಿ ಆದ ಬಾಲಿವುಡ್ ನಟ ಅಮಿತಾಭ್ ಬಚ್ಚನ್
ಸಿನಿಮಾ ವಿಚಾರ
ಅಮಿತಾಭ್ ಬಚ್ಚನ್ ಅವರು ಶೀಘ್ರವೇ ‘ಕಲ್ಕಿ 2898 ಎಡಿ’ ಚಿತ್ರದ ಸೀಕ್ವೆಲ್ನಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಶೂಟ್ ಶೀಘ್ರವೇ ಆರಂಭ ಆಗಬೇಕಿದೆ. ‘ಸೆಕ್ಷನ್ 84’ ಚಿತ್ರದಲ್ಲೂ ಅವರು ನಟಿಸಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 12:59 pm, Tue, 18 March 25