ರಾಜೇಶ್ ನಟರಂಗ ಹಾಗೂ ಛಾಯಾ ಸಿಂಗ್ (Chaya Singh) ಅಭಿನಯದ ‘ಅಮೃತಧಾರೆ’ ಧಾರಾವಾಹಿ ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿದೆ. ಈಗಾಗಲೇ ಐದು ಎಪಿಸೋಡ್ಗಳು ಪ್ರಸಾರ ಕಂಡಿದ್ದು, ಧಾರಾವಾಹಿ ಎಲ್ಲ ಕಡೆಗಳಿಂದ ಮೆಚ್ಚುಗೆ ಪಡೆಯುತ್ತಿದೆ. ರಾಜೇಶ್ ನಟರಂಗ (Rajesh Nataranga) ಅವರು ಗೌತಮ್ ದೀವಾನ್ ಆಗಿ ಕಾಣಿಸಿಕೊಂಡರೆ ಛಾಯಾ ಸಿಂಗ್ ಅವರು ಭೂಮಿಕಾ ಸದಾಶಿವ್ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಇವರ ಕೆಮಿಸ್ಟ್ರಿ ಕೆಲಸ ಮಾಡಿದೆ. ಈ ಮೊದಲು ಇಬ್ಬರೂ ಅಣ್ಣ-ತಂಗಿ ಪಾತ್ರದಲ್ಲಿ ಕಾಣಿಸಿಕೊಡಿದ್ದರು ಅನ್ನೋದು ವಿಶೇಷ. ಅಂದಹಾಗೆ, ಇದು ಇಂದು ನಿನ್ನೆಯ ಮಾತಲ್ಲ. ಬರೋಬ್ಬರಿ 23 ವರ್ಷಗಳ ಹಿಂದಿನ ಮಾತು.
ರಾಜೇಶ್ ನಟರಂಗ ಅವರು ಕಿರುತೆರೆ ಮೂಲಕ ಬಣ್ಣದ ಬದುಕು ಆರಂಭಿಸಿದವರು. ಹಲವು ಧಾರಾವಾಹಿಗಳಲ್ಲಿ ನಟಿಸಿ ಅವರು ಫೇಮಸ್ ಆಗಿದ್ದಾರೆ. ತಮ್ಮ ಹಾಗೂ ಛಾಯಾ ಸಿಂಗ್ ನಡುವಿನ ಫ್ರೆಂಡ್ಶಿಪ್ ಬಗ್ಗೆ ಮಾತನಾಡುವಾಗ ಅವರು ಕೆಲ ಅಚ್ಚರಿಯ ವಿಚಾರ ಬಿಚ್ಚಿಟ್ಟಿದ್ದಾರೆ. ಇವರದ್ದು 23 ವರ್ಷಗಳ ಪರಿಚಯ ಅನ್ನೋದು ವಿಶೇಷ. ಈ ಕುರಿತು ರಾಜೇಶ್ ನಟರಂಗ ಅವರು ಮಾತನಾಡಿದ್ದಾರೆ.
‘ಇಟಿವಿ ಕನ್ನಡ ಆಗತಾನೇ (2000ನೇ ಇಸ್ವಿ) ಆರಂಭ ಆಗಿತ್ತು. ಆಗ ಮಧ್ಯಾಹ್ನ ಒಂದು ಧಾರಾವಾಹಿ ಪ್ರಸಾರ ಕಾಣುತ್ತಿತ್ತು. ಈ ಧಾರಾವಾಹಿಯಲ್ಲಿ ನಾನು, ವೈಶಾಲಿ ಕಾಸರವಳ್ಳಿ, ದತ್ತಣ್ಣ, ಛಾಯಾ ಮೊದಲಾದವರು ನಟಿಸಿದ್ದೆವು. ಛಾಯಾ ನನ್ನ ತಂಗಿ ಪಾತ್ರ ಮಾಡಿದ್ದರು. ಆ ಬಳಿಕ ಅವರು ಹಲವು ಸಿನಿಮಾ ಮಾಡಿದರು. ಅವರು ಓರ್ವ ಅದ್ಭುತ ನಟಿ’ ಎಂದಿದ್ದಾರೆ ರಾಜೇಶ್ ನಟರಂಗ.
ಇದನ್ನೂ ಓದಿ: ‘ಜೊತೆ ಜೊತೆಯಲಿ’ ಧಾರಾವಾಹಿಗೆ ‘ಅಮೃತಧಾರೆ’ ಹೋಲಿಕೆ; ಪ್ರತಿಕ್ರಿಯೆ ನೀಡಿದ ರಾಜೇಶ್ ನಟರಂಗ
‘ಅಮೃತಧಾರೆ’ ಧಾರಾವಾಹಿ ಮದುವೆ, ಸಂಬಂಧಗಳ ಕುರಿತು ಇದೆ. ಗೌತಮ್ ಆಗರ್ಭ ಶ್ರೀಮಂತ. ಆತನಿಗೆ ವಯಸ್ಸು 45 ದಾಟಿದರೂ ಇನ್ನೂ ಮದುವೆ ಆಗಿಲ್ಲ. ನಾಯಕಿ ಭೂಮಿಕಾಗೆ ಈಗ 35 ವರ್ಷ ವಯಸ್ಸು. ಆಕೆಗೂ ಮದುವೆ ಆಗಿಲ್ಲ. ಆಕೆಯೂ ಸಂಗಾತಿಯ ಹುಡುಕಾಟದಲ್ಲಿದ್ದಾಳೆ. ಧಾರಾವಾಹಿಯಲ್ಲಿ ಈಗತಾನೇ ನಾಯಕ, ನಾಯಕಿ ಮಧ್ಯೆ ಪರಿಚಯ ಆಗುತ್ತಿದೆ. ನಾಯಕ-ನಾಯಕಿ ಮಧ್ಯೆ ಆರಂಭದಲ್ಲೇ ದ್ವೇಷ ಹುಟ್ಟಿಕೊಂಡಿದೆ. ನಂತರ ಇದು ಪ್ರೀತಿಗೆ ತಿರುಗುತ್ತದೆ ಅನ್ನೋದರಲ್ಲಿ ಯಾವುದೇ ಅನುಮಾನ ಇಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ