
ಗೌರವ ಧನ ಹೆಚ್ಚಳಕ್ಕೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಹೋರಾಟಕ್ಕೆ ಕೆಲವಾರು ಸಂಘಟನೆಗಳು ಈಗಾಗಲೇ ಬೆಂಬಲ ಸೂಚಿಸಿವೆ. ನಿನ್ನೆ ನಟಿ ರಮ್ಯಾ ಅವರು ಸಹ ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಪೋಸ್ಟ್ ಹಂಚಿಕೊಂಡಿದ್ದರು. ಇಂದು (ನವೆಂಬರ್ 22) ನಟಿ ಮಾಜಿ ಸಂಸದೆ ಸುಮಲತಾ ಅಂಬರೀಶ್ ಅವರು ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಬೆಂಬಲ ಸೂಚಿಸಿದ್ದು, ಕಾರ್ಯಕರ್ತೆಯರ ಪರವಾಗಿ ಸಿಎಂ ಡಿಕೆ ಶಿವಕುಮಾರ್ ಅವರಿಗೆ ಮನವಿಯನ್ನು ಮಾಡಿದ್ದಾರೆ. ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ತುರ್ತಾಗಿ ಪರಿಗಣಿಸುವಂತೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ. ಈ ಪತ್ರವನ್ನು ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಆಶಾ ಕಾರ್ಯಕರ್ತೆಯರು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಅನಿವಾರ್ಯ ಭಾಗ ಎಂದು ಪತ್ರದಲ್ಲಿ ಹೇಳಿರುವ ಸುಮಲತಾ, ತಾಯಿ-ಮಗುವಿನ ಆರೋಗ್ಯ, ಲಸಿಕೆ ಹಾಗೂ ಸಮುದಾಯ ಆರೋಗ್ಯ ಸೇವೆಗಳಲ್ಲಿ ಅವರು ನೀಡುತ್ತಿರುವ ಕೊಡುಗೆಗೆ ಮನ್ನಣೆ ಮತ್ತು ನ್ಯಾಯಯುತ ಪರಿಹಾರ ಎರಡೂ ಸಿಗಬೇಕು ಎಂದಿದ್ದಾರೆ. ಇಷ್ಟು ಮಹತ್ವದ ಜವಾಬ್ದಾರಿ ಹೊತ್ತ ಮಹಿಳೆಯರು ಕೇವಲ ₹5,000 ಮಾಸಿಕ ಗೌರವಧನದಲ್ಲಿ ಬದುಕಬೇಕೆಂದು ನಿರೀಕ್ಷಿಸುವುದು ತೀವ್ರ ಕಳವಳಕಾರಿ. ಅದನ್ನು ₹15,000ಕ್ಕೆ ಹೆಚ್ಚಿಸಬೇಕೆಂಬ ಬೇಡಿಕೆ ಆರ್ಥಿಕ ಘನತೆಯ ಮೂಲಭೂತ ಮಟ್ಟಕ್ಕಾಗಿ ಮಾಡಿರುವ ಸಮಂಜಸ ಮನವಿ. ಜೀವನ ವೆಚ್ಚ ಹೆಚ್ಚಿರುವ ಬೆಂಗಳೂರಿನಂತಹ ನಗರದಲ್ಲಿ ಇಷ್ಟು ಅಲ್ಪ ಮೊತ್ತದಲ್ಲಿ ಬದುಕುವುದು ದೊಡ್ಡ ಸವಾಲು ಎಂದೂ ಅವರು ಹೇಳಿದ್ದಾರೆ. ‘ಇತರರ ಯೋಗಕ್ಷೇಮಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟವರು, ತಮ್ಮದೇ ಮೂಲಭೂತ ಜೀವನೋಪಾಯಕ್ಕಾಗಿ ಹೋರಾಡುವ ಸ್ಥಿತಿ ಬರಬಾರದು’ ಎಂದು ಮುಖ್ಯಮಂತ್ರಿಗಳು ವೈಯಕ್ತಿಕವಾಗಿ ಮಧ್ಯಪ್ರವೇಶಿಸಬೇಕೆಂದು ಕೋರಿದ್ದಾರೆ.
ಇದನ್ನೂ ಓದಿ:ಆಶಾ ಕಾರ್ಯಕರ್ತೆಯರ ಪ್ರತಿಭಟನೆ: ಆರೋಗ್ಯ ಸಚಿವರ ಸಭೆ ವಿಫಲ, ಬೇಡಿಕೆ ಈಡೇರುವವರೆಗೂ ಹೋರಾಟ ಮುಂದುವರಿಕೆ
ಆಶಾ ಕಾರ್ಯಕರ್ತೆಯರು ನವೆಂಬರ್ 17ರ ಮಂಗಳವಾರದಿಂದ ಫ್ರೀಡಂ ಪಾರ್ಕ್‌ನಲ್ಲಿ ಹಗಲು-ರಾತ್ರಿ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದು, ತಿಂಗಳಿಗೆ 15,000 ನಿಗದಿತ ಗೌರವಧನಕ್ಕೆ ಆಗ್ರಹಿಸುತ್ತಿದ್ದಾರೆ. ಸಾವಿರಾರು ಮಹಿಳೆಯರು ಚಳಿಯನ್ನೂ ಲೆಕ್ಕಿಸದೆ ರಾತ್ರಿಯಿಡೀ ಪ್ರತಿಭಟನೆ ಮುಂದುವರಿಸಿದ್ದಾರೆ. ಬಾಕಿ ಪ್ರೋತ್ಸಾಹಧನ ಪಾವತಿ, ಉತ್ತಮ ನಿವೃತ್ತಿ ಸೌಲಭ್ಯ ಹಾಗೂ ಆಗಸ್ಟ್ 2026ರಲ್ಲಿ ಜಾರಿಗೆ ಬಂದ ‘ಸಮಸ್ತ’ ಮೊಬೈಲ್ ಆ್ಯಪ್ ಮೂಲಕ ಕಡ್ಡಾಯ ಕೆಲಸವನ್ನು ಕೈಬಿಡುವುದು ಅವರ ಇತರ ಬೇಡಿಕೆಗಳಾಗಿವೆ.
ನವೆಂಬರ್ 19ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಶಾ ಕಾರ್ಯಕರ್ತೆಯರ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿದರು. ಧರಣಿ ಕೈಬಿಟ್ಟು ಸರ್ಕಾರವನ್ನು ನಂಬುವಂತೆ ಕೋರಿದ ಅವರು, ಗೌರವಧನ ಹೆಚ್ಚಳದ ಬೇಡಿಕೆಯನ್ನು ವಿಧಾನಸಭೆ ಅಧಿವೇಶನಕ್ಕೆ ಮುನ್ನ ಹಣಕಾಸು ಇಲಾಖೆ ಮತ್ತು ಸಚಿವ ಸಂಪುಟದ ಮುಂದೆ ಇಟ್ಟು ಪರಿಶೀಲಿಸುವುದಾಗಿ ಭರವಸೆ ನೀಡಿದ್ದರು, ಆದರೆ ಕಾರ್ಯಕರ್ತೆಯರು ಲಿಖಿತ ಆದೇಶವನ್ನು ಕೋರುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ