ಫಿನಾಲೆಯಲ್ಲಿ ವಿನ್ನರ್ ಹಿಡಿಯುವ ಟ್ರೋಫಿಯ ಅನಾವರಣ ಮಾಡಲಾಗಿದೆ. ‘ಬಿಗ್ ಬಾಸ್ ಕನ್ನಡ ಸೀಸನ್ 11’ ಶೋನಲ್ಲಿ ಟ್ರೋಫಿ ಗೆಲ್ಲುವ ಕನಸಿನೊಂದಿಗೆ 6 ಸ್ಪರ್ಧಿಗಳು ಫಿನಾಲೆ ಸೇರಿದ್ದಾರೆ. 113ನೇ ದಿನದಲ್ಲಿ ಆಕರ್ಷಕ ಟ್ರೋಫಿಯನ್ನು ದೊಡ್ಮನೆ ಒಳಗೆ ತರಲಾಗಿದೆ. ಅದರ ಎದುರು ಕುಳಿತು ಸ್ಪರ್ಧಿಗಳು ತಮ್ಮ ಮನದ ಮಾತುಗಳನ್ನು ಹೇಳಿಕೊಂಡಿದ್ದಾರೆ. ತಮಗೆ ಈ ಟ್ರೋಫಿ ಯಾಕೆ ಮುಖ್ಯ ಎಂಬುದನ್ನು ಎಲ್ಲರೂ ವಿವರಿಸಿದ್ದಾರೆ. ಟ್ರೋಫಿ ನೋಡಿದ ತಕ್ಷಣ ಉಗ್ರಂ ಮಂಜು, ಮೋಕ್ಷಿತಾ ಪೈ ಅವರು ಎಮೋಷನಲ್ ಆಗಿದ್ದಾರೆ.
ಮೋಕ್ಷಿತಾ ಪೈ ಅವರು ಕಿರಿತೆರೆ ಸೀರಿಯಲ್ಗಳಲ್ಲಿ ನಟಿಸುತ್ತಿದ್ದರು. ಅವರಿಗೆ ಬಿಗ್ ಬಾಸ್ನಲ್ಲಿ ಸ್ಪರ್ಧಿಸುವ ಅವಕಾಶ ಸಿಕ್ಕಿತು. ಈಗ ಫಿನಾಲೆ ತಲುಪಿದ್ದಾರೆ. ‘ಬಿಗ್ ಬಾಸ್ನಿಂದ ಫೋನ್ ಬಂದಾಗ ಬೆಂಬಲ ನೀಡಿದ್ದು ಅಮ್ಮ. ಅದು ಅವರ ಕನಸು. ಪ್ರಾಮಾಣಿಕವಾಗಿ ಆಟ ಆಡಿದ್ದೇನೆ. ಫಿನಾಲೆ ವಾರದಲ್ಲಿ ಕುಳಿತಿದ್ದು ನನಗೆ ಸರ್ಪೈಸ್. ಟ್ರೋಫಿ ನೋಡಿ ದಿಗ್ಭಮೆ ಆಯಿತು. ಅಮ್ಮನ ಆಶೀರ್ವಾದ, ದೇವರ ಆಶೀರ್ವಾದ ಮತ್ತು ಜನರ ಪ್ರೀತಿ ಇದ್ದರೆ ಟ್ರೋಫಿ ನನ್ನದಾಗತ್ತೆ. 12 ವಾರ ನಾಮಿನೇಟ್ ಆಗಿದ್ದವಳನ್ನು ಜನರು ಇಲ್ಲಿಯ ತನಕ ಉಳಿಸಿದ್ದಾರೆ. ಜನರು ಮನಸ್ಸು ಮಾಡಿದರೆ ಈ ಟ್ರೋಫಿ ನನ್ನದಾಗತ್ತೆ’ ಎಂದು ಮೋಕ್ಷಿತಾ ಪೈ ಹೇಳಿದ್ದಾರೆ.
ಉಗ್ರಂ ಮಂಜು ಅವರು ಬಿಗ್ ಬಾಸ್ ಟ್ರೋಫಿಯ ಎದುರು ಕಣ್ಣೀರು ಹಾಕಿದರು. ‘ನನ್ನ ತಾಯಿ ತಂದೆ, ತಂಗಿಯರ ಆಸೆ ಇದು. ಕಲಾವಿದನಾಗಬೇಕು ಅಂತ ಬಂದು ಮನೆ ಮಠ ಇಲ್ಲದೇ ಬೆಂಗಳೂರಲ್ಲಿ ಕಾಲ ಕಳೆದೆ. 200 ಸಿನಿಮಾ ಮಾಡಿದರೂ ಒಂದು ಅವಾರ್ಡ್ ಬಂದಿಲ್ಲ. ಈ ಮನೆಯಲ್ಲಿ ಏಳು-ಬೀಳು ಕಂಡು ಜೀವಿಸಿದ್ದೀನಿ. ವ್ಯಕ್ತಿತ್ವ ಉಳಿಸಿಕೊಂಡಿದ್ದೇನೆ. ಕೆಲವೊಂದನ್ನು ಬಿಟ್ಟುಕೊಡೀಕೆ ಆಗಲ್ಲ. ಈ ಮನೆಯಲ್ಲಿ ನನ್ನ ಕಡೆಯಿಂದಲೂ ತಪ್ಪು ಆಗಿರಬಹುದು. ಕೆಲವರಿಗೆ ನೋವು ನೀಡಿರಬಹುದು. ಇಷ್ಟು ವರ್ಷ ಇಲ್ಲದೇ ಇರುವುದನ್ನು ಇಲ್ಲಿ ಕಲಿತಿದ್ದೇನೆ’ ಎಂದರು ಮಂಜು.
ಇದನ್ನೂ ಓದಿ: ಬಿಗ್ ಬಾಸ್ಗೆ ಬಂದ 2ನೇ ವಾರದಲ್ಲೇ ನಾನು ಕಪ್ ಗೆದ್ದೆ; ತಮ್ಮದೇ ಲೆಕ್ಕಾಚಾರ ತಿಳಿಸಿದ ಹನುಮಂತ
ರಜತ್ ಕೂಡ ಟ್ರೋಫಿ ಎದುರು ಮನದ ಮಾತು ಹಂಚಿಕೊಂಡರು. ‘ನನ್ನ ಮಾತಿನಿಂದ ಹರ್ಟ್ ಆಗಿದ್ದರೆ ಕ್ಷಮೆ ಇರಲಿ. ವೈಲ್ಡ್ ಕಾರ್ಡ್ ಮೂಲಕ ಬಂದು ಘಟಾನುಘಟಿಗಳನ್ನು ಹೊರಗೆ ಹಾಕಿ ಫಿನಾಲೆಗೆ ಬಂದಿದ್ದೀನಿ ಅಂದರೆ ನನಗೆ ಎಷ್ಟು ಪ್ರೀತಿ ಸಿಕ್ಕಿದೆ ಎಂಬುದು ತಿಳಿಯುತ್ತಿದೆ. ಕಪ್ ನನಗೆ ತುಂಬ ಮುಖ್ಯ. ಅದನ್ನೂ ಮೀರಿ ನಾನು ಈ ಶೋಗೆ ಬಂದಿದ್ದು ಜನರ ಪ್ರೀತಿಗೆ. ವ್ಯಕ್ತಿತ್ವದಲ್ಲಿ ನಾನು ಏರುಪೇರು ಮಾಡಿಕೊಂಡಿಲ್ಲ. ಹೊರಗೆ ಇದ್ದಂತೆಯೇ ನಾನು ಇಲ್ಲಿ ಇದ್ದೇನೆ’ ಎಂದು ಅವರು ಹೇಳಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.