ರಾಶಿಕಾ ಎದುರು ತಪ್ಪೊಪ್ಪಿಕೊಂಡು ದೊಡ್ಡ ಅವಕಾಶ ನೀಡಿದ ಗಿಲ್ಲಿ; ಅಶ್ವಿನಿಯಿಂದಲೂ ಮೆಚ್ಚುಗೆ

ಬಿಗ್ ಬಾಸ್ ಕನ್ನಡ ಮನೆಯಲ್ಲಿ ಗಿಲ್ಲಿ ಹಾಗೂ ರಾಶಿಕಾ ನಡುವಿನ ವೈರತ್ವ ಕೊನೆಗೊಂಡಿದೆ. ತಂಡಕ್ಕಾಗಿ ರಾಶಿಕಾ ಅವರ ಅಸಾಮಾನ್ಯ ಶ್ರಮವನ್ನು ಗುರುತಿಸಿದ ಗಿಲ್ಲಿ, ಅವರನ್ನು ಕ್ಯಾಪ್ಟನ್ಸಿ ರೇಸ್‌ಗೆ ಆಯ್ಕೆ ಮಾಡಿದ್ದಾರೆ. ಹಿಂದಿನ ತಪ್ಪಿತಸ್ಥ ಭಾವನೆ ಹಾಗೂ ರಾಶಿಕಾ ಅವರ ಬದ್ಧತೆ, ಗಿಲ್ಲಿಯ ಈ ಅಚ್ಚರಿಯ ನಿರ್ಧಾರಕ್ಕೆ ಕಾರಣವಾಗಿದೆ.

ರಾಶಿಕಾ ಎದುರು ತಪ್ಪೊಪ್ಪಿಕೊಂಡು ದೊಡ್ಡ ಅವಕಾಶ ನೀಡಿದ ಗಿಲ್ಲಿ; ಅಶ್ವಿನಿಯಿಂದಲೂ ಮೆಚ್ಚುಗೆ
ಬಿಗ್ ಬಾಸ್

Updated on: Nov 21, 2025 | 7:34 AM

ಬಿಗ್ ಬಾಸ್ ಮನೆಯಲ್ಲಿ ರಾಶಿಕಾ ಅವರನ್ನು ಕಂಡರೆ ಗಿಲ್ಲಿ ಉರಿದುರಿದು ಬೀಳುತ್ತಿದ್ದರು. ರಾಶಿಕಾ ಕೂಡ ಅಷ್ಟೇ, ಗಿಲ್ಲಿಯನ್ನು ಕಂಡರೆ ಮುಖವನ್ನು ತಿರುಗಿಸಿ ಹೋಗುತ್ತಿದ್ದರು. ಆದರೆ, ಈ ವಾರ ಅವರು ಬದಲಾಗಿದ್ದಾರೆ. ಗಿಲ್ಲಿ ತಂಡಕ್ಕಾಗಿ ಮೂರು ಬಾರಿಯೂ ಆಟ ಆಡಿದ್ದಾರೆ. ಮೂರು ಬಾರಿಯೂ ಅವರ ಶ್ರಮ ಎದ್ದು ಕಾಣುತ್ತಿತ್ತು. ಇದನ್ನು ಗಮನಿಸಿದ ಗಿಲ್ಲಿ ಅವರು ಕ್ಯಾಪ್ಟನ್ಸಿ ರೇಸ್​ಗೆ ರಾಶಿಕಾರನ್ನು ಆಯ್ಕೆ ಮಾಡಿದರು.

ಈ ಬಾರಿ ಬ್ಲ್ಯೂ ಟೀಂ ಹಾಗೂ ರೆಡ್ ಟೀಂ ಎಂದು ಎರಡು ತಂಡಗಳಿದ್ದವು. ಬ್ಲ್ಯೂ ತಂಡಕ್ಕೆ ಗಿಲ್ಲಿ ಕ್ಯಾಪ್ಟನ್ ಆದರೆ, ರೆಡ್ ಟೀಂಗೆ ಅಶ್ವಿನಿ ನಾಯಕಿ. ಇಬ್ಬರೂ ತಮ್ಮ ತಂಡಕ್ಕೆ ಯಾರನ್ನು ಬೇಕೋ ಅವರನ್ನು ಆಯ್ಕೆ ಮಾಡಿಕೊಂಡು ಟಾಸ್ಕ್ ಆಡಬೇಕಿತ್ತು. ಪ್ರತಿ ಬಾರಿಯೂ ತಂಡಕ್ಕ ಬೇರೆ ಸದಸ್ಯರನ್ನು ಆಯ್ಕೆ ಮಾಡುವ ಅವಕಾಶ ಇತ್ತು. ರಾಶಿಕಾ ಅವರು ಮೂರು ಬಾರಿ ಗಿಲ್ಲಿ ತಂಡಕ್ಕಾಗಿ ಆಟ ಆಡಿದರು.

ಮೂರು ಪಂದ್ಯಗಳ ಪೈಕಿ ಗಿಲ್ಲಿ ಅವರು ಗೆದ್ದಿದ್ದು ಒಂದು ಬಾರಿ ಮಾತ್ರ. ಈ ರೀತಿ ಗೆದ್ದಾಗ ಯಾರನ್ನು ಕ್ಯಾಪ್ಟನ್ಸಿ ರೇಸ್​ಗೆ ಆಯ್ಕೆ ಮಾಡಬೇಕು ಎಂಬುದು ಅವರ ಎದುರು ಇರೋ ದೊಡ್ಡ ಚಾಲೆಂಜ್​ಗಳಲ್ಲಿ ಒಂದಾಗಿತ್ತು. ಆಗ ಅವರು ಯೋಚಿಸಿ ರಾಶಿಕಾ ಹೆಸರನ್ನು ತೆಗೆದುಕೊಂಡರು. ಇದಕ್ಕೆ ಒಂದೊಳ್ಳೆಯ ಕಾರಣವನ್ನೂ ನೀಡಿದರು.

‘ಮೂರು ಬಾರಿ ರಾಶಿಕಾ ನನ್ನ ತಂಡಕ್ಕೆ ಆಡಿದ್ದಾರೆ. ಇಷ್ಟೇ ಅಲ್ಲ ಕಳೆದ ಬಾರಿ ಕಬ್ಬಡ್ಡಿ ಆಟದಲ್ಲಿ ಅವರು ಕ್ಯಾಪ್ಟನ್ಸಿ ರೇಸ್​ನಲ್ಲಿ ಇರಬೇಕಿತ್ತು. ಅದಕ್ಕೆ ನಾನೇ ಅಡ್ಡಗಾಲು ಹಾಕಿದೆ. ಆ ಗಿಲ್ಟ್ ಈಗಲೂ ನನ್ನನ್ನು ಕಾಡುತ್ತಿದೆ’ ಎಂದು ಅವರು ಹೇಳಿದರು. ಈ ಕಾರಣದಿಂದ ಅವರು ಕ್ಯಾಪ್ಟನ್ಸಿ ರೇಸ್​ಗೆ ರಾಶಿಕಾ ಅವರನ್ನು ಗಿಲ್ಲಿ ನಟ ಆಯ್ಕೆ ಮಾಡಿದರು.

ಇದನ್ನೂ ಓದಿ: ವುಮನ್ ಕಾರ್ಡ್​ ಪ್ಲೇ ಮಾಡಿದ ಅಶ್ವಿನಿ? ಗೌರವ ನಿರೀಕ್ಷಿಸೋರು ಬಳಕೆ ಮಾಡೋ ಪದಗಳು ಎಂಥದ್ದು ನೋಡಿ

ಇದರಿಂದ ರಾಶಿಕಾ ಖುಷಿಪಟ್ಟರು. ರಾಶಿಕಾ ಹೆಸರನ್ನು ಸೂಚಿಸುತ್ತಿದ್ದಂತೆ ಅಶ್ವಿನಿ ಅವರ ಚಪ್ಪಾಳೆ ತಟ್ಟಿ, ‘ನೀವು ಅರ್ಹವಾದ ವ್ಯಕ್ತಿ’ ಎಂದರು. ರಾಶಿಕಾನ ಯಾವ ಕಾರಣಕ್ಕೂ ಗಿಲ್ಲಿ ಆಯ್ಕೆ ಮಾಡೋದಿಲ್ಲ ಎಂದು ಅಶ್ವಿನಿ ಹಾಗೂ ಜಾನ್ವಿ ಮಾತನಾಡಿಕೊಂಡಿದ್ದರು. ಆದರೆ, ಅವರ ಲೆಕ್ಕಾಚಾರವನ್ನು ಗಿಲ್ಲಿ ತಲೆಕೆಳಗೆ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.