ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಲು ನಿರ್ಧರಿಸಿದ ಅಶ್ವಿನಿ ಗೌಡ: ಉಪವಾಸ ಶುರು
ಗೌರವ ಕೊಟ್ಟು ಮಾತನಾಡಿಸಿಲ್ಲ ಎಂಬ ಕಾರಣಕ್ಕೆ ಅಶ್ವಿನಿ ಗೌಡ ಹಾಗೂ ರಘು ನಡುವೆ ಜಗಳ ಆಗಿದೆ. ‘ಅಶ್ವಿನಿ ಅಲ್ಲ.. ಅಶ್ವಿನಿ ಗೌಡ ಅವರೇ ಅಂತ ಕರೆಯಬೇಕು’ ಎಂದು ಅಶ್ವಿನಿ ಗೌಡ ಹಠ ಹಿಡಿದಿದ್ದಾರೆ. ತಮಗೆ ನೋವಾಗಿದೆ ಎಂದು ವಾದಿಸಿದ ಅಶ್ವಿನಿ ಗೌಡ ಅವರು ಮನೆ ಬಿಟ್ಟು ಹೋಗಲು ತೀರ್ಮಾನಿಸಿದ್ದಾರೆ.

ನಟಿ, ಹೋರಾಟಗಾರ್ತಿ ಅಶ್ವಿನಿ ಗೌಡ (Ashwini Gowda) ಅವರು ಬಿಗ್ ಬಾಸ್ ಮನೆಯಲ್ಲಿ ಸ್ಟ್ರಾಂಗ್ ಸ್ಪರ್ಧಿ ಎನಿಸಿಕೊಂಡಿದ್ದಾರೆ. ಹಲವು ಬಾರಿ ಅವರು ಇನ್ನುಳಿದ ಸ್ಪರ್ಧಿಗಳ ಜೊತೆ ಕಿರಿಕ್ ಮಾಡಿಕೊಂಡಿದ್ದಾರೆ. ಈಗ ಮನೆಯ ಕ್ಯಾಪ್ಟನ್ ಆಗಿರುವ ರಘು (Bigg Boss Raghu) ಜೊತೆ ಅಶ್ವಿನಿ ಗೌಡ ಜಗಳ ಮಾಡಿಕೊಂಡಿದ್ದಾರೆ. ಜಗಳದ ನಡುವೆ ಏಕವಚನ ಬಳಕೆ ಆಗಿದೆ. ಇದರಿಂದಾಗಿ ಅಶ್ವಿನಿ ಗೌಡಗೆ ನೋವಾಗಿದೆ. ಹಾಗಾಗಿ, ಅವರು ಬಿಗ್ ಬಾಸ್ (Bigg Boss Kannada Season 12) ಮನೆಯಿಂದಲೇ ಹೊರಗೆ ಹೋಗಬೇಕು ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಮುಖ್ಯದ್ವಾರದ ಕಡೆಗೆ ಹೋಗಿ ಬಾಗಿಲು ತೆಗೆಯುವಂತೆ ಅಶ್ವಿನಿ ಗೌಡ ಅವರು ಕೂಗಾಡಿದ್ದಾರೆ.
ಜಗಳ ಶುರುವಾಗಿದ್ದು ಹೇಗೆ? ಪೌಡರ್ ರೂಮ್ ಕ್ಲೀನ್ ಮಾಡುವ ಕೆಲಸವನ್ನು ಅಶ್ವಿನಿ ಗೌಡ ಅವರಿಗೆ ವಹಿಸಲಾಗಿತ್ತು. ಆದರೆ ಅವರು ಅದಕ್ಕೆ ವಿಳಂಬ ಮಾಡಿದ್ದರು. ಅದನ್ನು ಬಂದು ರಘು ಪ್ರಶ್ನಿಸಿದಾಗ ಬೆನ್ನು ನೋವಿನ ಕಾರಣ ನೀಡಿ 10 ನಿಮಿಷದ ನಂತರ ಕೆಲಸ ಮಾಡುವುದಾಗಿ ಅಶ್ವಿನಿ ಗೌಡ ಹೇಳಿದರು. 10 ನಿಮಿಷದಲ್ಲಿ ಬೆನ್ನು ನೋವು ಹೋಗುತ್ತಾ ಎಂದು ರಘು ಕೇಳಿದರು. ಆಗ ಮಾತಿಗೆ ಮಾತು ಬೆಳೆದು ಜಗಳ ಶುರುವಾಯಿತು.
ಅಶ್ವಿನಿ ಗೌಡ ಅವರನ್ನು ರಘು ಅವರು ಏಕವಚನದಲ್ಲಿ ಕರೆದರು. ಅದರಿಂದ ಅಶ್ವಿನಿ ಗೌಡ ಟ್ರಿಗರ್ ಆದರು. ‘ನನ್ನನ್ನು ಅಶ್ವಿನಿ ಅಂತ ಕರೆಯಬಾರದು. ಅಶ್ವಿನಿ ಗೌಡ ಅವರೇ ಅಂತಲೇ ಮಾತನಾಡಿಸಬೇಕು’ ಎಂದು ತಾಕೀತು ಮಾಡಿದರು. ತಮ್ಮನ್ನು ಏಕವಚನದಲ್ಲಿ ಕರೆದ ರಘು ಮೇಲೆ ಅಶ್ವಿನಿ ರೇಗಾಡಿದರು. ‘ನೀನು ಯಾವನೋ? ನಿಮ್ಮ ಮನೆಯ ಹೆಣ್ಮಕ್ಕಳಿಗೆ ಹೋಗಿ ನೀನು ತಾನು ಅಂದುಕೊ. ನಾನು ನಿನಗೆ ಬುದ್ಧಿ ಕಲಿಸುತ್ತೇನೆ. ಇಲ್ಲಿ ಬುದ್ಧಿ ಕಲಿಸದೇ ಇದ್ದರೆ ಹೊರಗೆ ಹೋಗಿ ಇದ್ದನ್ನೇ ಮಾಡುತ್ತೀಯ ನೀನು’ ಎಂದು ಅಶ್ವಿನಿ ಗೌಡ ಕೂಗಾಡಿದರು.
ಬಳಿಕ ಅವರು ಕ್ಯಾಮೆರಾ ಎದುರು ನಿಂತು ತಮ್ಮ ನಿರ್ಧಾರ ತಿಳಿಸಿದರು. ‘ಪ್ರತಿ ದಿನ ಹೀಗೆಯೇ ಆಗುತ್ತಿದೆ. ಟಾರ್ಗೆಟ್ ಮಾಡುತ್ತಿದ್ದಾರೆ. ತೇಜೋವಧೆ ಆಗುತ್ತಿದೆ. ಹೆಣ್ಮಕ್ಕಳನ್ನು ಏಕವಚನದಲ್ಲಿ ಮಾತನಾಡಿಸುವುದು ಜಾಸ್ತಿ ಆಗಿದೆ. ಇಂಥವರಿಗೆ ಈ ಮನೆಯಲ್ಲಿ ಜಾಗ ಇರಬಾರದು. 8 ವಾರದಿಂದ ನಾನು ಏನು ಮಾಡಿದ್ದೀನಿ ಅಂತ ಕೇಳಿದ್ದಾರೆ. ನಾನು ಏನೂ ಮಾಡಿಲ್ಲ ಎಂಬುದಾದರೆ ನನ್ನನ್ನು ಹೊರಗೆ ಕಳಿಸಿ. ದಯವಿಟ್ಟು ನೀವು ಮಧ್ಯ ಪ್ರವೇಶ ಮಾಡಬೇಕು. ಇಂಥ ವ್ಯಕ್ತಿಯಿಂದ ನನ್ನ ಗೌರವವನ್ನು ಕಳೆದುಕೊಂಡು ನಾನು ಆಟ ಮುಂದುವರಿಸಬೇಕು ಎಂಬ ಹಣೆಬರಹ ನನಗೆ ಏನೂ ಇಲ್ಲ. ಇದು ನನ್ನ ಮನವಿ. ಇಲ್ಲವಾದರೆ ನನ್ನನ್ನು ಮನೆಗೆ ಕಳಿಸಿಕೊಡಿ’ ಎಂದು ಅಶ್ವಿನಿ ಗೌಡ ಹೇಳಿದ್ದಾರೆ. ಬಳಿಕ ಉಪವಾಸ ಆರಂಭಿಸಿದ್ದಾರೆ.
ಇದನ್ನೂ ಓದಿ: ‘ಸತ್ತೋದರೂ ತೊಂದರೆ ಇಲ್ಲ, ಮರ್ಯಾದೆ ಬಿಟ್ಟು ಬದುಕಲಾರೆ’: ಕಣ್ಣೀರು ಹಾಕುತ್ತಾ ಹೇಳಿದ ಅಶ್ವಿನಿ
‘ಅಶ್ವಿನಿ ಅವರದ್ದೇ ತಪ್ಪು. ಶುರು ಮಾಡಿದ್ದು ಅವರೇ. ಕ್ಯಾಪ್ಟನ್ ಬಂದು ಹೇಳಿದಾಗ ಸರಿಯಾಗಿ ಪ್ರತಿಕ್ರಿಯಿಸಬೇಕಿತ್ತು’ ಎಂದು ಸೂರಜ್ ಸಿಂಗ್ ಹೇಳಿದರು. ‘ತಾವು ಕೂಡ ರಘುಗೆ ಏಕವಚನದಲ್ಲಿ ಮಾತನಾಡಿದ್ದರಿಂದ ಅಶ್ವಿನಿ ಅವರಿಗೆ ಮಾತನಾಡುವ ಹಕ್ಕು ಇಲ್ಲ’ ಎಂದು ರಿಷಾ ಅಭಿಪ್ರಾಯ ತಿಳಿಸಿದರು. ‘ಈಗ ರಘುಗೆ ಏನೆಲ್ಲ ಆರೋಪ ಮಾಡುತ್ತಿದ್ದಾರೋ ಆ ಎಲ್ಲ ತಪ್ಪುಗಳನ್ನು ಅಶ್ವಿನಿ ಗೌಡ ಕೂಡ ಮಾಡಿದ್ದಾರೆ’ ಎಂದು ಕಾವ್ಯ ಹೇಳಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




