Munawar Faruqui: ಬಿಗ್ಬಾಸ್ ವಿಜೇತ ಮುನಾವರ್ ಫಾರೂಖಿ ಬಂಧನ
Munawar Faruqui: ಸ್ಟಾಂಡಪ್ ಕಮಿಡಿಯನ್, ಬಿಗ್ಬಾಸ್ 17 ವಿಜೇತ ಮುನಾವರ್ ಫಾರೂಖಿಯನ್ನು ಮುಂಬೈ ಪೊಲೀಸರು ಬಂಧಿಸಿ ಬಳಿಕ ಬಿಡುಗಡೆ ಮಾಡಿದ್ದಾರೆ. ಪ್ರಕರಣ ಏನು?
ಹಿಂದಿ ಬಿಗ್ಬಾಸ್ ವಿಜೇತ ಮುನಾವರ್ ಫಾರೂಖಿಯನ್ನು ಮುಂಬೈ ಪೊಲೀಸರು ಬಂಧಿಸಿ ಬಳಿಕ ಬಿಡುಗಡೆ ಮಾಡಿದ್ದಾರೆ. ಮುಂಬೈನಲ್ಲಿನ ಹುಕ್ಕಾ ಬಾರ್, ಹುಕ್ಕಾ ಪಾಪ್ಯೂಲರ್ ಮೇಲೆ ತಡರಾತ್ರಿ ದಾಳಿ ನಡೆಸಿದ್ದ ಪೊಲೀಸರು ಬಿಗ್ಬಾಸ್ ವಿಜೇತ ಮುನಾವರ್ ಫಾರೂಖಿ ಸೇರಿದಂತೆ ಇನ್ನೂ 14 ಮಂದಿಯನ್ನು ಬಂಧಿಸಿದ್ದರು. ಎಲ್ಲರ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಬಳಿಕ ಎಲ್ಲರನ್ನೂ ಬಿಡುಗಡೆ ಮಾಡಿರುವುದಾಗಿ ಹೇಳಿದ್ದಾರೆ.
ಮಂಗಳವಾರ ರಾತ್ರಿ ಹುಕ್ಕಾ ಪಾಪ್ಯೂಲರ್ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಬಿಗ್ಬಾಸ್ ಹಿಂದಿ ಸೀಸನ್ 17ರ ವಿಜೇತ, ಸ್ಟಾಂಡಪ್ ಕಮಿಡಿಯನ್ ಮುನಾವರ್ ಫಾರೂಖಿ ಸಹ ಸ್ಥಳದಲ್ಲಿದ್ದರು. ಅವರನ್ನೂ ಸೇರಿದಂತೆ ಅಲ್ಲಿದ್ದ 14 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ದಾಳಿಯ ವೇಳೆ 13,500 ಮೌಲ್ಯದ ಹುಕ್ಕಾ ಪಾಟ್ಗಳು, 4500 ರೂಪಾಯಿ ನಗದು ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪೊಲೀಸರು ದಾಳಿ ನಡೆಸಿದಾಗ ಹಲವಾರು ಮಂದಿ ಸಿಗರೇಟು ಹಾಗೂ ಹುಕ್ಕಾ ಸೇವನೆ ಮಾಡುತ್ತಿದ್ದರಂತೆ.
ಇದನ್ನೂ ಓದಿ:Munawar Faruqui ಕಾನೂನು ವ್ಯವಸ್ಥೆ ಮೇಲೆ ನಂಬಿಕೆ ಇದೆ: ಕಾಮಿಡಿಯನ್ ಮುನಾವರ್ ಫಾರೂಖಿ
ದಾಳಿ ನಡೆಸಿದ ಪೊಲೀಸರು ಬೆಳಗಿನ ಜಾವದ ವರೆಗೆ ತನಿಖೆ ನಡೆಸಿದ್ದಾರೆ. ಕೊನೆಗೆ ಸಿಗರೇಟು ಮತ್ತು ಇತರೆ ತಂಬಾಕು ಪದಾರ್ಥಗಳ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು. ಪ್ರಕರಣ ಜಾಮೀನಿಗೆ ಅರ್ಹವಾಗಿರುವ ಕಾರಣ ಎಲ್ಲರನ್ನೂ ಬಿಟ್ಟು ಕಳುಹಿಸಿದ್ದಾರೆ. ಆದರೆ ಎಲ್ಲರ ವಿರುದ್ಧ ತಂಬಾಕು ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಮುನಾವರ್ ಫಾರೂಖಿ ಜನಪ್ರಿಯ ಸ್ಟಾಂಡಪ್ ಕಮಿಡಿಯನ್. ಕೆಲ ವರ್ಷಗಳ ಹಿಂದೆ ಮುನಾವರ್ ಫಾರೂಖಿ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಬಗ್ಗೆ ಅವಹೇಳನಕಾರಿ ಜೋಕ್ ಒಂದನ್ನು ಶೋನಲ್ಲಿ ಹೇಳಿದ್ದಾರೆಂಬ ಆರೋಪದಲ್ಲಿ ಬಂಧನಕ್ಕೆ ಒಳಗಾಗಿದ್ದರು. ಮುನಾವರ್ ಬಂಧನ ಭಾರಿ ಸುದ್ದಿಯಾಗಿತ್ತು. ಆ ಬಳಿಕ ಕೆಲವು ರಾಜ್ಯಗಳಲ್ಲಿ ಅವರ ಸ್ಟಾಂಡಪ್ ಕಾಮಿಡಿ ಶೋಗಳು ರದ್ದಾಗಿದ್ದವು. ಬಳಿಕ ಮುನಾವರ್ ಕಂಗನಾ ನಡೆಸಿಕೊಟ್ಟ ‘ಲಾಕ್ಅಪ್’ ರಿಯಾಲಿಟಿ ಶೋನಲ್ಲಿ ಭಾಗವಹಿಸಿ ಗೆದ್ದರು. ಬಳಿಕ ಬಿಗ್ಬಾಸ್ ಹಿಂದಿ ಸೀಸನ್ 17ರಲ್ಲಿ ಭಾಗವಹಿಸಿ ಅಲ್ಲಿಯೂ ವಿಜೇತರಾದರು. ಇತ್ತೀಚೆಗಷ್ಟೆ ಸೆಲೆಬ್ರಿಟಿಗಳ ಜೊತೆಗೆ ಸ್ಟ್ರೀಟ್ ಕ್ರಿಕೆಟ್ ಆಡಿದ್ದ ಮುನಾವರ್ ಸಚಿನ್ ತೆಂಡೂಲ್ಕರ್ ವಿಕೆಟ್ ಪಡೆದಿದ್ದರು. ಆ ವಿಡಿಯೋ ಸಖತ್ ವೈರಲ್ ಆಗಿತ್ತು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ