Bigg Boss History: ಜಗತ್ತಿನಲ್ಲಿ ಈವರೆಗೂ ನಡೆದಿವೆ 508 ಬಿಗ್​ ಬಾಸ್​ ಸೀಸನ್​ಗಳು; ಇಲ್ಲಿದೆ ದೀರ್ಘ ಇತಿಹಾಸ

|

Updated on: Oct 04, 2023 | 2:21 PM

‘ಬಿಗ್​ ಬಾಸ್​’ ಕಾರ್ಯಕ್ರಮದ ಮೂಲ ರೂಪವಾದ ‘ಬಿಗ್​ ಬ್ರದರ್​’ ಶೋಗೆ 24 ವರ್ಷಗಳ ಇತಿಹಾಸ ಇದೆ. ಈ ರಿಯಾಲಿಟಿ ಶೋ ಶುರುವಾಗಿದ್ದು ನೆದರ್ಲೆಂಡ್​ನಲ್ಲಿ. ಬಳಿಕ ಜಗತ್ತಿನ ಬಹುತೇಕ ರಾಷ್ಟ್ರಗಳಿಗೆ ಇದು ಪಸರಿಸಿತು. ವಿಶ್ವಾದ್ಯಂತ ಈ ಶೋ ಫೇಮಸ್​ ಆಗಿದೆ. ಹಲವು ಭಾಷೆಗಳಲ್ಲಿ ಇದು ಪ್ರಸಾರ ಕಾಣುತ್ತಿದೆ. ಇದರ ಇತಿಹಾಸ ಇಲ್ಲಿದೆ..

Bigg Boss History: ಜಗತ್ತಿನಲ್ಲಿ ಈವರೆಗೂ ನಡೆದಿವೆ 508 ಬಿಗ್​ ಬಾಸ್​ ಸೀಸನ್​ಗಳು; ಇಲ್ಲಿದೆ ದೀರ್ಘ ಇತಿಹಾಸ
ಬಿಗ್​ ಬಾಸ್​, ಬಿಗ್ ಬ್ರದರ್​
Follow us on

ಬಿಗ್​ ಬಾಸ್​ ರಿಯಾಲಿಟಿ ಶೋಗೆ ದೊಡ್ಡ ಅಭಿಮಾನಿ ಬಳಗ ಇದೆ. ಕನ್ನಡ, ಹಿಂದಿ ಮಾತ್ರವಲ್ಲದೇ ಜಗತ್ತಿನ ಅನೇಕ ಭಾಷೆಗಳಲ್ಲಿ ಈ ಕಾರ್ಯಕ್ರಮ ಆಯೋಜನೆಗೊಳ್ಳುತ್ತದೆ. ಹಲವು ದೇಶಗಳಲ್ಲಿ ಈ ರಿಯಾಲಿಟಿ ಶೋ (Bigg Boss Reality Show) ಫೇಮಸ್​ ಆಗಿದೆ. ಬೇರೆ ಎಲ್ಲ ರಿಯಾಲಿಟಿ ಶೋಗಿಂತಲೂ ಬಿಗ್​ ಬಾಸ್​ ತುಂಬ ಭಿನ್ನವಾಗಿದೆ. ಇದರ ವ್ಯಾಪ್ತಿ ಕೂಡ ದೊಡ್ಡದು. ಇದರ ತೆರೆಹಿಂದೆ ಕೆಲಸ ಮಾಡುವ ತಂತ್ರಜ್ಞರ ಸಂಖ್ಯೆಯೂ ದೊಡ್ಡದಾಗಿ ಇರುತ್ತದೆ. ಬಿಗ್​ ಬಾಸ್​ ಮನೆಯೊಳಗೆ ಏನೆಲ್ಲ ನಡೆಯುತ್ತದೆ ಎಂಬುದು ಎಲ್ಲರಿಗೂ ತಿಳಿದಿದೆ. ಟಾಸ್ಕ್​ ಹೇಗೆ ನೀಡಲಾಗುತ್ತದೆ? ವಿಜೇತರ ಆಯ್ಕೆ ಹೇಗೆ ನಡೆಯುತ್ತದೆ ಎಂಬುದನ್ನು ಹೊಸದಾಗಿ ಹೇಳಬೇಕಾಗಿದ್ದಿಲ್ಲ. ವಿಶೇಷ ಏನೆಂದರೆ, ಈವರೆಗೆ ಜಗತ್ತಿನಾದ್ಯಂತ 508 ಬಿಗ್ ಬಾಸ್​ ಶೋಗಳು ನಡೆದಿವೆ! ಬಹುತೇಕ ಕಡೆಗಳಲ್ಲಿ ಇದನ್ನು ‘ಬಿಗ್​ ಬ್ರದರ್​’ (Big Brother) ಎಂದು ಕರೆಯಲಾಗುತ್ತದೆ. ಕನ್ನಡದಲ್ಲಿ 9 ಸೀಸನ್​ಗಳು ಯಶಸ್ವಿಯಾಗಿ ಪೂರ್ಣಗೊಂಡಿವೆ. ‘ಬಿಗ್​ ಬಾಸ್​ ಕನ್ನಡ ಸೀಸನ್​ 10’ ಆರಂಭ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಬಿಗ್​ ಬಾಸ್​ ರಿಯಾಲಿಟಿ ಶೋನ ಇತಿಹಾಸ (Bigg Boss History) ತಿಳಿಯೋಣ.

‘ಬಿಗ್​ ಬ್ರದರ್​’ ಶೋಗೆ 24 ವರ್ಷಗಳ ಇತಿಹಾಸ ಇದೆ. ಇದು ನೆದರ್ಲೆಂಡ್​ ಮೂಲದ ಬನಿಜೆ (Banijay) ಕಂಪನಿಯ ಪ್ರಾಡಕ್ಟ್​. ಭಾರತದಲ್ಲಿ ‘ಎಂಡಮೋಲ್​ ಶೈನ್​ ಗ್ರೂಪ್​’ ಈ ರಿಯಾಲಿಟಿ ಶೋನ ಫ್ರಾಂಚೈಸ್​ ಹೊಂದಿದೆ. ಬೇರೆ ಬೇರೆ ದೇಶಗಳಲ್ಲಿ 63 ಫ್ರಾಂಚೈಸ್​ನಲ್ಲಿ ಈ ಕಾರ್ಯಕ್ರಮ ನಡೆದಿದೆ. ಪ್ರತಿ ಸೀಸನ್​ನಲ್ಲೂ ಹೊಸ ಹೊಸ ಅಂಶಗಳನ್ನು ಸೇರಿಸಲಾಗುತ್ತದೆ. ಪ್ರದೇಶಕ್ಕೆ ಅನುಗುಣವಾಗಿ ಕಾರ್ಯಕ್ರಮದ ಸ್ವರೂಪದಲ್ಲಿ ಮಾರ್ಪಾಡು ಮಾಡಲಾಗುತ್ತಾ ಬರಲಾಗಿದೆ. ಬಿಗ್​ ಬಾಸ್​ ಅಥವಾ ಬಿಗ್​ ಬ್ರದರ್​ನ ವಿಸ್ತಾರ ಜಗದಗಲ ಹರಡಿಕೊಂಡಿದೆ. ವರ್ಷದಿಂದ ವರ್ಷಕ್ಕೆ ಹೊಸ ಹೊಸ ದೇಶಗಳು ಇದರ ಪ್ರಸಾರ ಆರಂಭಿಸುತ್ತಿವೆ.

ಮೊದಲ ಶೋ ನಡೆದಿದ್ದು 1999ರಲ್ಲಿ:

ನೆದರ್ಲೆಂಡ್​ನಲ್ಲಿ ಮೊದಲ ಬಾರಿಗೆ 1999ರಲ್ಲಿ ‘ಬಿಗ್​ ಬ್ರದರ್​​’ ಕಾರ್ಯಕ್ರಮ ನಡೆಯಿತು. ಡಚ್​​ ಭಾಷೆಯ ‘ವೆರೋನಿಕಾ’ ವಾಹಿನಿಯಲ್ಲಿ ಅದು ಪ್ರಸಾರ ಆಯಿತು. ಬಳಿಕ ಆ ರಿಯಾಲಿಟಿ ಶೋ ಅಮೆರಿಕಕ್ಕೆ ಕಾಲಿಟ್ಟಿತು. ಆರಂಭದ ಸೀಸನ್​ನಲ್ಲಿ ಬಿಗ್​ ಬ್ರದರ್​ ಮನೆಯ ಸ್ವರೂಪ ತುಂಬ ಸರಳವಾಗಿತ್ತು. ಬರುಬರುತ್ತಾ ಸಾಕಷ್ಟು ಬದಲಾವಣೆಗಳು ಆದವು. ವರ್ಷಗಳು ಕಳೆದಂತೆ ಬಿಗ್​ ಬ್ರದರ್​ ತುಂಬ ಫೇಮಸ್​ ಆಯಿತು. ಬೇರೆ ಬೇರೆ ದೇಶಗಳಿಗೆ ಇದು ಕಾಲಿಟ್ಟಿತು. ಹಲವು ಭಾಷೆಗಳಲ್ಲಿ ಪ್ರಸಾರ ಆರಂಭಿಸಿತು.

ಇದನ್ನೂ ಓದಿ: ‘ಜಿಯೋ ಸಿನಿಮಾ’ದಲ್ಲಿ 24 ಗಂಟೆಯೂ ಬಿಗ್​ ಬಾಸ್​ ಉಚಿತ ಪ್ರಸಾರ; ವೀಕ್ಷಕರಿಗೂ ಬಹುಮಾನ ಗೆಲ್ಲುವ ಅವಕಾಶ

2006ರಲ್ಲಿ ಭಾರತಕ್ಕೆ ಎಂಟ್ರಿ

‘ಬಿಗ್​ ಬ್ರದರ್​’ ಶೋ 2006ರಲ್ಲಿ ಭಾರತಕ್ಕೆ ಕಾಲಿಟ್ಟಿತು. ಇಲ್ಲಿನ ನೇಟಿವಿಟಿಗೆ ಅನುಗುಣವಾಗಿ ಇದರ ಹೆಸರನ್ನು ‘ಬಿಗ್​ ಬಾಸ್​’ ಎಂದು ಬದಲಾಯಿಸಿಕೊಳ್ಳಲಾಯಿತು. ಹಿಂದಿಯ ಮೊದಲ ಬಿಗ್​ ಬಾಸ್​ ಶೋ 2006-07ರಲ್ಲಿ ಪ್ರಸಾರ ಆಯಿತು. ಅಲ್ಲಿಂದ ಇಂದಿನ ತನಕ 16 ಸೀಸನ್​ಗಳು ಯಶಸ್ವಿಯಾಗಿ ಮುಗಿದಿವೆ. 17ನೇ ಸೀಸನ್​ ಶೀಘ್ರದಲ್ಲೇ ಆರಂಭ ಆಗಲಿದೆ. ಕನ್ನಡದಲ್ಲಿ 2013ರಲ್ಲಿ ಬಿಗ್​ ಬಾಸ್​ ಆರಂಭ ಆಯಿತು. ಈವರೆಗೆ 9 ಸೀಸನ್​ ಪೂರ್ಣಗೊಂಡಿದ್ದು ಅಕ್ಟೋಬರ್​ 8ರಂದು 10ನೇ ಸೀಸನ್​ಗೆ ಅದ್ದೂರಿ ಚಾಲನೆ ಸಿಗಲಿದೆ. ಫ್ರಾನ್ಸ್​ನಲ್ಲಿ ‘ಲಾಫ್ಟ್​ ಸ್ಟೋರಿ’ ಮತ್ತು ‘ಸೀಕ್ರೆಟ್​ ಸ್ಟೋರಿ’ ಎಂಬ ಹೆಸರಲ್ಲಿ ಬಿಗ್​ ಬ್ರದರ್​ ಶೋ ನಡೆಯುತ್ತದೆ. ಹಾಗೆಯೇ ಬೇರೆ ಬೇರೆ ಪ್ರದೇಶಗಳಲ್ಲಿ ಈ ಶೋಗೆ ಭಿನ್ನವಾದ ಹೆಸರುಗಳು ಇವೆ.

‘ಬಿಗ್ ಬ್ರದರ್​’ ಹೆಸರು ಬಂದಿದ್ದು ಹೇಗೆ?

ಇಂಗ್ಲಿಷ್​ನ ಖ್ಯಾತ ಲೇಖಕ ಜಾರ್ಜ್​ ಆರ್ವೆಲ್​ ಬರೆದ ‘1984’ ಕಾಂದಬರಿಯಲ್ಲಿನ ಒಂದು ಪಾತ್ರದ ಹೆಸರು ಬಿಗ್ ಬ್ರದರ್​. ಅದನ್ನೇ ಸ್ಫೂರ್ತಿಯಾಗಿ ಇಟ್ಟುಕೊಂಡು ಈ ರಿಯಾಲಿಟಿ ಶೋಗೆ ‘ಬಿಗ್​ ಬ್ರದರ್​’ ಎಂದು ನಾಮಕರಣ ಮಾಡಲಾಯಿತು. ಈ ಕಾದಂಬರಿ ಪ್ರಕಟ ಆಗಿದ್ದು 1949ರಲ್ಲಿ. ಎಲ್ಲರ ಮೇಲೆ ಕಣ್ಣು ಇಡುವುದು ಈ ಬಿಗ್ ಬ್ರದರ್​ ಪಾತ್ರದ ಗುಣ. ಆ ಕಾರಣದಿಂದಲೇ ಈ ಹೆಸರು ಸೂಕ್ತವಾಗಿ ಹೊಂದಿಕೊಂಡಿತು. ಭಾರತದಲ್ಲಿ ಇದನ್ನು ‘ಬಿಗ್​ ಬಾಸ್​’ ಎಂದು ಬದಲಾಯಿಸಿಕೊಳ್ಳಲಾಯಿತು. ಕನ್ನಡ, ಹಿಂದಿ, ತೆಲುಗು, ಮಲಯಾಳಂ, ತಮಿಳು, ಬೆಂಗಾಲಿ ಮತ್ತು ಮರಾಠಿ ಭಾಷೆಯಲ್ಲೂ ‘ಬಿಗ್​ ಬಾಸ್​’ ಎಂದೇ ಈ ಶೋ ಪ್ರಸಿದ್ಧಿ ಪಡೆದಿದೆ.

ಬಹುತೇಕ ಒಂದೇ ನಿಯಮ:

ಜಗತ್ತಿನಾದ್ಯಂತ ನಡೆಯುವ ಈ ರಿಯಾಲಿಟಿ ಶೋನ ಗುಣಲಕ್ಷಣ ಬಹುತೇಕ ಒಂದೇ ರೀತಿ ಇದೆ. ಸಾಮಾನ್ಯವಾಗಿ 16ರಿಂದ 20 ಸ್ಪರ್ಧಿಗಳು ಬಿಗ್​ ಬಾಸ್​ ಮನೆಯೊಳಗೆ ಎಂಟ್ರಿ ನೀಡುತ್ತಾರೆ. ಕೆಲವು ಕಡೆಗಳಲ್ಲಿ ಕೇವಲ 10 ಮಂದಿ ಭಾಗವಹಿಸಿದ್ದೂ ಉಂಟು. ಪ್ರತಿ ವಾರ ಒಬ್ಬರ ಎಲಿಮಿನೇಷನ್​ ನಡೆಯುತ್ತದೆ. ಕೊನೆಯಲ್ಲಿ ಉಳಿಯುವ ಸ್ಪರ್ಧಿಯನ್ನು ವಿನ್ನರ್​ ಎಂದು ಘೋಷಣೆ ಮಾಡಲಾಗುತ್ತಿದೆ. ಸಾಮಾನ್ಯವಾಗಿ ಈ ಶೋ 3 ತಿಂಗಳ ಕಾಲ ನಡೆಯುತ್ತದೆ. ಈ ಬೇಸಿಕ್​ ನಿಯಮಗಳನ್ನು ಇಟ್ಟುಕೊಂಡು, ಪ್ರಾದೇಶಿಕತೆಗೆ ಅನುಗುಣವಾಗಿ ಒಂದಷ್ಟು ಬದಲಾವಣೆಗಳನ್ನು ಮಾಡಿಕೊಂಡು ಕಾರ್ಯಕ್ರಮ ನಡೆಸಲಾಗುತ್ತಿದೆ.

ಇದನ್ನೂ ಓದಿ: ಟ್ರೋಲ್​ ಆದ ಬಿಗ್​ ಬಾಸ್​ ಸ್ಪರ್ಧಿಗಳ ಬಗ್ಗೆ ಪ್ರಶ್ನೆ: ಸುದ್ದಿಗೋಷ್ಠಿಯಲ್ಲಿ ಕಿಚ್ಚ ಸುದೀಪ್​ ಗರಂ

ಸ್ಪಿನ್​ ಆಫ್​ ಸೀಸನ್​ಗಳು:

ಸಮಯಕ್ಕೆ ತಕ್ಕಂತೆ ಬಿಗ್​ ಬ್ರದರ್​ನ ಸ್ಪಿನ್​ ಆಫ್​ಗಳು ಕೂಡ ಬಂದಿವೆ. ಯುನೈಟೆಡ್​ ಕಿಂಗ್​ಡಮ್​ನಲ್ಲಿ ‘ಬಿಗ್​ ಬ್ರದರ್​: ಸೆಲೆಬ್ರಿಟಿ ಹೈಜಾಕ್​’ ಎಂಬ ಕಾರ್ಯಕ್ರಮ ಮಾಡಲಾಯಿತು. ಕೆಲವು ದೇಶಗಳಲ್ಲಿ ‘ಬಿಗ್​ ಬ್ರದರ್​ ವಿಐಪಿ’ ಶೋ ನಡೆದಿದೆ. 2006ರಲ್ಲಿ ನೆದರ್ಲೆಂಡ್​ನಲ್ಲಿ ‘ಹೋಟೆಲ್​ ಬಿಗ್​ ಬ್ರದರ್​’ ಶೋ ಮಾಡಿ, ಅದರಿಂದ ಬಂದ ಹಣವನ್ನು ಚಾರಿಟಿಗೆ ಬಳಸಲಾಯಿತು. ಕನ್ನಡದಲ್ಲಿ ಬಿಗ್​ ಬಾಸ್​ ಮಿನಿ ಸೀಸನ್​ ಕೂಡ ಪ್ರಸಾರ ಆಯಿತು. ಅದರಲ್ಲಿ ಸೀರಿಯಲ್​ ಸೆಲೆಬ್ರಿಟಿಗಳು ಮಾತ್ರ ಭಾಗಿ ಆಗಿದ್ದರು. ಇನ್ನು, ಒಟಿಟಿ ಫೇಮಸ್​ ಆದ ಬಳಿಕ ‘ಬಿಗ್​ ಬಾಸ್​ ಒಟಿಟಿ’ ಸೀಸನ್​ ಕೂಡ ಆರಂಭ ಆಯಿತು. ಹಿಂದಿ, ಕನ್ನಡದಲ್ಲೂ ಈ ಪ್ರಯೋಗ ನಡೆದಿದೆ.

ಕಾನೂನಿನ ಕಿರಿಕ್​:

ಏಪ್ರಿಲ್​ 2000ರಲ್ಲಿ ಕಾಸ್ಟವೇ ಕಂಪನಿಯೂ ಎಂಡಮೋಲ್​ ಕಂಪನಿ ವಿರುದ್ಧ ಕೇಸ್​ ದಾಖಲಿಸಿತ್ತು. ತನ್ನ ‘ಸರ್ವೈವ್​’ ರಿಯಾಲಿಟಿ ಶೋನ ಪರಿಕಲ್ಪನೆಯನ್ನು ಕದ್ದು ಎಂಡಮೋಲ್​ ಕಂಪನಿಯು ‘ಬಿಗ್​ ಬ್ರದರ್​’ ಶೋ ತಯಾರಿಸಿದೆ ಎಂದು ಕಾಸ್ಟವೇ ಕಂಪನಿ ದೂರು ನೀಡಿತ್ತು. ಆದರೆ ಆ ಕೇಸ್​ನಲ್ಲಿ ಎಂಡಮೋಲ್​ ಕಂಪನಿಗೆ ಜಯವಾಯಿತು. ಈ ಮೊದಲೇ ಹೇಳಿದಂತೆ ಜಾರ್ಜ್​ ಆರ್ವೆಲ್​ ಬರೆದ ‘1984’ ಕಾದಂಬರಿಯ ‘ಬಿಗ್ ಬ್ರದರ್​’ ಪಾತ್ರದಿಂದಲೇ ಈ ಶೋನ ಹೆಸರು ಮತ್ತು ಕಾನ್ಸೆಪ್ಟ್​ ಮೂಡಿಬಂದಿದೆ. ಹಾಗಾಗಿ 2000ನೇ ಇಸವಿಯಲ್ಲಿ ಜಾರ್ಜ್​ ಆರ್ವೆಲ್​ ಫೌಂಡೇಷನ್​ ಮೂಲಕ ಸಿಬಿಎಸ್​ ಟಿಲಿವಿಷನ್​ ಮತ್ತು ಎಂಡಮೋಲ್​ ಕಂಪನಿ ವಿರುದ್ಧ ಕಾಪಿರೈಟ್​ ಉಲ್ಲಂಘನೆಯ ದೂರು ದಾಖಲಾಯಿತು. ಹಲವು ಬಾರಿ ನಡೆದ ವಾದ ಸರಣಿಯಲ್ಲಿ ಸಿಬಿಎಸ್​ ಟಿಲಿವಿಷನ್​ ಮತ್ತು ಎಂಡಮೋಲ್​ ಕಂಪನಿಗೆ ಹಿನ್ನಡೆ ಆಯಿತು. ಬಳಿಕ ಬಹಿರಂಗಪಡಿಸದ ಒಂದು ಮೊತ್ತಕ್ಕೆ ಕೇಸ್​ ರಾಜಿ ಮಾಡಿಕೊಳ್ಳಲಾಯಿತು.

ಇದನ್ನೂ ಓದಿ: ‘ಬಿಗ್​ ಬಾಸ್​ ಕನ್ನಡ ಸೀಸನ್​ 10’ ಸುದ್ದಿಗೋಷ್ಠಿ: ಹೊಸ ಸೀಸನ್​ ಬಗ್ಗೆ ಕಿಚ್ಚ ಸುದೀಪ್​ ಹೇಳೋದೇನು?

ಹಲವು ದೇಶದಲ್ಲಿ ಬಿಗ್​ ಬ್ರದರ್​:

ನೆದರ್ಲೆಂಡ್​, ಅಮೆರಿಕ, ಯುನೈಟೆಡ್​ ಕಿಂಗ್​ಡಮ್​, ಭಾರತ, ಆಫ್ರಿಕಾ, ಅರ್ಜೆಂಟೈನಾ, ಆಸ್ಪ್ರೇಲಿಯಾ, ಬೆಲ್ಜಿಯಂ, ಬ್ರೆಸಿಲ್​, ಬಲ್ಗೇರಿಯಾ, ಕೆನಡ, ಚಿಲಿ, ಚೀನಾ, ಕೊಲಂಬಿಯಾ, ಡೆನ್ಮಾರ್ಕ್​, ಫಿನ್ಲೆಂಡ್​, ಫ್ರಾನ್ಸ್​, ಜರ್ಮನಿ, ಗ್ರೀಸ್​, ಹಂಗೇರಿಯಾ, ಇಂಡೋನೇಷಿಯಾ, ಇಸ್ರೇಲ್​, ಇಟಲಿ, ಮೆಕ್ಸಿಕೋ, ಮಂಗೋಲಿಯಾ, ನೈಜೀರಿಯಾ, ನಾರ್ವೆ, ಪಾಕಿಸ್ತಾನ​, ಪನಾಮಾ, ಪೆರು, ಫಿಲಿಪಿಯನ್ಸ್​, ಪೋಲೆಂಡ್​, ಪೋರ್ಚುಗಲ್​, ರೊಮೇನಿಯಾ, ರಷ್ಯಾ, ಸ್ಲೊವೆನಿಯಾ, ದಕ್ಷಿಣ ಆಫ್ರಿಕಾ, ಸ್ಪೇನ್​, ಸ್ವೀಡನ್​, ಸಿಡ್ಜರ್​ಲೆಂಡ್​, ಥೈಲೆಂಡ್​, ಟರ್ಕಿ, ಉಕ್ರೇನ್​, ವಿಯಾಟ್ನಾಂ ಸೇರಿದಂತೆ ಇನ್ನೂ ಅನೇಕ ದೇಶಗಳಲ್ಲಿ ಬಿಗ್​ ಬ್ರದರ್​ ರಿಯಾಲಿಟಿ ಶೋ ನಡೆಸಲಾಗುತ್ತದೆ. ಕೆಲವು ಕಡೆಗಳಲ್ಲಿ ಶೋ ನಿಲ್ಲಿಸಲಾಗಿದೆ.

ಅತ್ಯಾಚಾರದ ಶಾಕಿಂಗ್​ ಘಟನೆ:

ಬಿಗ್​ ಬಾಸ್​ ಎಂದರೆ ವಿವಾದಗಳು ಇದ್ದೇ ಇರುತ್ತವೆ. ಆದರೆ ಎಲ್ಲದಕ್ಕೂ ಒಂದು ಮಿತಿ ಇರಬೇಕು. ಕೆಲವೊಮ್ಮೆ ಬಿಗ್ ಬಾಸ್​ ಮನೆಯೊಳಗೆ ಅತ್ಯಾಚಾರ ನಡೆಯುವ ಹಂತಕ್ಕೂ ಪರಿಸ್ಥಿತಿ ಕೈಮೀರಿ ಹೋದ ಉದಾಹರಣೆ ಇದೆ. ದಕ್ಷಿಣ ಆಫ್ರಿಕಾದ ಬಿಗ್ ಬಾಸ್​ ಶೋನಲ್ಲಿ ಈ ಘಟನೆ ನಡೆದಿತ್ತು. ಮಹಿಳೆ ಮತ್ತು ಪುರುಷ ಸ್ಪರ್ಧಿಗಳು ರಾತ್ರಿ ಮಲಗುವುದಕ್ಕೂ ಮುನ್ನ ತುಂಬ ಆಪ್ತವಾಗಿ ನಡೆದುಕೊಂಡಿದ್ದರು. ಆಕೆಯೊಂದಿಗೆ ತಾನು ಲೈಂಗಿಕ ಕ್ರಿಯೆ ನಡೆಸಿದ್ದಾಗಿ ಪುರುಷ ಸ್ಪರ್ಧಿಯು ಮರುದಿನ ಹೇಳಿಕೊಂಡ. ಅದರಿಂದ ಆಕೆಗೆ ಶಾಕ್​ ಆಯಿತು. ಅದಕ್ಕೆ ತಮ್ಮ ಅನುಮತಿ ಇರಲಿಲ್ಲ ಎಂದು ಆಕೆ ಹೇಳಿದರು. ಒಪ್ಪಿಗೆ ಇಲ್ಲದೆ ಲೈಂಗಿಕ ಕ್ರಿಯೆ ನಡೆಸಿದ ಆರೋಪದಲ್ಲಿ ಆ ಪುರುಷ ಸ್ಪರ್ಧಿಯನ್ನು ಮನೆಯಿಂದ ಹೊರಗೆ ಕಳಿಸಿ ಅರೆಸ್ಟ್​ ಮಾಡಿಸಲಾಯಿತು. ರಕ್ಷಣೆ ಮತ್ತು ಕೌನ್ಸಲಿಂಗ್​ ಸಲುವಾಗಿ ಮಹಿಳಾ ಸ್ಪರ್ಧಿಯನ್ನೂ ಮನೆಯಿಂದ ಹೊರಗೆ ಕಳಿಸಲಾಯಿತು. ಬಳಿಕ ಯಾವುದೇ ಸ್ಪರ್ಧಿಗಳು ಇಂತಹ ಅಶ್ಲೀಲ ಕೆಲಸ ಮಾಡಬಾರದು ಎಂದು ಕಟ್ಟುನಿಟ್ಟಾಗಿ ಆದೇಶಿಸಲಾಯಿತು.

ಇದನ್ನೂ ಓದಿ: ‘ಬಾಂಬ್​ಗಿಂತಲೂ ಸ್ಫೋಟಕವಾದಂತಹ ಸ್ಪರ್ಧಿಗಳು ಬರ್ತಾರೆ’: ಬಿಗ್​ ಬಾಸ್​ ಬಗ್ಗೆ ಕೌತುಕ ಹೆಚ್ಚಿಸಿದ ಸಲ್ಮಾನ್​ ಖಾನ್​

‘ಬಿಗ್​ ಬಾಸ್​ ಬ್ರೆಜಿಲ್​’ನಲ್ಲಿಯೂ ಕೂಡ ಪುರುಷ ಸ್ಪರ್ಧಿಯೊಬ್ಬನು ಅತ್ಯಾಚಾರಕ್ಕೆ ಪ್ರಯತ್ನಿಸಿದನ್ನು ವೀಕ್ಷಕರು ಗಮನಿಸಿದರು. ಬಳಿಕ ಪೊಲೀಸರು ಬಿಗ್ ಬಾಸ್​ ಮನೆಗೆ ಬಂದು ಆ ವ್ಯಕ್ತಿಯನ್ನು ಬಂಧಿಸಿದರು. ಆ ವ್ಯಕ್ತಿಯನ್ನು ಟಿವಿ ಶೋನಿಂದ ಬ್ಯಾನ್​ ಮಾಡಲಾಯಿತು. 2006ರಲ್ಲಿ ನಡೆದ ಆಸ್ಟ್ರೇಲಿಯಾದ ಬಿಗ್​ ಬ್ರದರ್​ ಕಾರ್ಯಕ್ರಮದಲ್ಲೂ ಇಬ್ಬರು ಪುರುಷ ಸ್ಪರ್ಧಿಗಳು ಮಹಿಳಾ ಸ್ಪರ್ಧಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ್ದರು. ಆ ದೃಶ್ಯವನ್ನು ತಡರಾತ್ರಿ ‘ಬಿಗ್​ ಬಾಸ್​: ವಯಸ್ಕರಿಗೆ ಮಾತ್ರ’ ಎಂಬ ಸಂಚಿಕೆಯಲ್ಲಿ ಪ್ರಸಾರ ಮಾಡಲಾಯಿತು. ಬಳಿಕ ಆ ಶೋ ರದ್ದು ಮಾಡಲಾಯಿತು. ಲೈಂಗಿಕ ಕಿರುಕುಳ ನೀಡಿದ ಆ ಇಬ್ಬರು ಪುರುಷರನ್ನು ಬಿಗ್​ ಬಾಸ್​ ಮನೆಯಿಂದ ಹೊರಗೆ ಕಳಿಸಲಾಯಿತು.

ಬಿಗ್​ ಬ್ರದರ್​ ಗೇಮ್​:

ಎಲ್ಲ ಜನಪ್ರಿಯ ಸಿನಿಮಾ, ಕಾದಂಬರಿಯನ್ನು ಆಧರಿಸಿ ಮೊಬೈಲ್​ ಗೇಮ್​ಗಳು ಬಂದಿವೆ. ಅದೇ ರೀತಿ ಬಿಗ್​ ಬ್ರದರ್ ಕಾರ್ಯಕ್ರಮದ ಮೊಬೈಲ್​ ಗೇಮ್​ ಕೂಡ ಇದೆ. 2020ರ ಮೇ ತಿಂಗಳಲ್ಲಿ ಇದನ್ನು ಅನೌನ್ಸ್​ ಮಾಡಲಾಯಿತು. 2020ರ ಅಕ್ಟೋಬರ್​ 15ರಂದು ಆ್ಯಪಲ್​ ಮತ್ತು ಆ್ಯಂಡ್ರಾಯ್ಡ್​ನಲ್ಲಿ ಅಧಿಕೃತವಾಗಿ ಈ ಗೇಮ್​ ಲಾಂಚ್​ ಆಯಿತು. 2021ರ ಜುಲೈ 29ರಂದು ಇದರ ಮೊದಲ ಸೀಸನ್​ ಮುಕ್ತಾಯ ಆಯಿತು. ಅದರ ವಿನ್ನರ್​ಗೆ 33,270 ಡಾಲರ್​ ಬಹುಮಾನದ ಹಣ ಸಿಕ್ಕಿತು.

ಸ್ಪರ್ಧಿಗಳ ಭವಿಷ್ಯ ಬದಲು:

ಬಿಗ್​ ಬಾಸ್​ ಕಾರ್ಯಕ್ರಮದಲ್ಲಿ ವಿವಾದಗಳು ಇವೆ ಎಂಬುದು ನಿಜ. ಆದರೆ ಈ ಶೋನಲ್ಲಿ ಭಾಗವಹಿಸಿದ ಅನೇಕ ಸ್ಪರ್ಧಿಗಳಿಗೆ ಹೊಸ ಬದುಕು ಸಿಕ್ಕಿದೆ. ಜನಸಾಮಾನ್ಯರ ವಲಯದಿಂದ ಬಂದ ಸ್ಪರ್ಧಿಗಳು ಈ ಶೋನಲ್ಲಿ ಗಮನ ಸೆಳೆದು, ಸೆಲೆಬ್ರಿಟಿ ಪಟ್ಟ ಪಡೆದ ಉದಾಹರಣೆಗಳೂ ಇವೆ. ಈ ಶೋನಲ್ಲಿ ಭಾಗವಹಿಸಿದವರಿಗೆ ಸಿನಿಮಾಗಳಲ್ಲಿ ಹೇರಳ ಅವಕಾಶ ಸಿಕ್ಕಿದ್ದುಂಟು. 2011ರಲ್ಲಿ ಮಾಜಿ ನೀಲಿ ತಾರೆ ಸನ್ನಿ ಲಿಯೋನ್​ ಅವರು ‘ಬಿಗ್​ ಬಾಸ್​ ಹಿಂದಿ ಸೀಸನ್​ 5’ರಲ್ಲಿ ಭಾಗವಹಿಸಿದರು. ಅದರಿಂದ ಭಾರತದಲ್ಲಿ ಅವರಿಗೆ ಸಿಕ್ಕಾಪಟ್ಟೆ ಜನಪ್ರಿಯತೆ ಸಿಕ್ಕಿತು. ಅಶ್ಲೀಲ ಸಿನಿಮಾಗಳ ಹಿನ್ನೆಲೆ ಇರುವ ಅವರನ್ನು ಈ ಕಾರ್ಯಕ್ರಮಕ್ಕೆ ಕರೆತಂದಿದ್ದರಿಂದ ಅನೇಕರು ವಿರೋಧ ಕೂಡ ವ್ಯಕ್ತಪಡಿಸಿದ್ದರು. ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ದೂರು ಕೂಡ ನೀಡಲಾಯಿತು. ಸನ್ನಿ ಲಿಯೋನ್​ ಬಿಗ್​ ಬಾಸ್​ನಲ್ಲಿ ಇದ್ದಾಗಲೇ ನಿರ್ಮಾಪಕ, ನಿರ್ದೇಶಕ ಮಹೇಶ್​ ಭಟ್​ ಅವರು ‘ಜಿಸ್ಮ್​ 2’ ಸಿನಿಮಾದ ಅವಕಾಶ ನೀಡಿದರು. ಅದರಿಂದಾಗಿ ಸನ್ನಿ ಲಿಯೋನ್​ ಅವರಿಗೆ ಬಾಲಿವುಡ್​ಗೆ ಎಂಟ್ರಿ ನೀಡುವ ಅವಕಾಶ ಸಿಕ್ಕಿತು. ಆ ಬಳಿಕ ಅವರ ಇಮೇಜ್​ ಬದಲಾಯಿತು. ಇಂಥ ಹಲವು ಉದಾಹರಣೆಗಳು ಬಿಗ್​ ಬಾಸ್​ ಮನೆಯಲ್ಲಿ ಸಿಗುತ್ತವೆ.

ಇದನ್ನೂ ಓದಿ: ದಿನದಿನಕ್ಕೂ ಹೆಚ್ಚುತ್ತಿದೆ ಬಿಗ್​ ಬಾಸ್​ ಬೆಡಗಿ ಸೋನು ಗೌಡ ಗ್ಲಾಮರ್​

ಕನ್ನಡದಲ್ಲಿ ಈವರೆಗೆ ವಿನ್​ ಆದ ಸ್ಪರ್ಧಿಗಳು:

ಮೊದಲ ಸೀಸನ್​: ವಿಜಯ್​ ರಾಘವೇಂದ್ರ.
ಎರಡನೇ ಸೀಸನ್​: ಅಕುಲ್​ ಬಾಲಾಜಿ.
ಮೂರನೇ ಸೀಸನ್​: ಶ್ರುತಿ.
ನಾಲ್ಕನೇ ಸೀಸನ್​: ಪ್ರಥಮ್​.
ಐದನೇ ಸೀಸನ್​: ಚಂದನ್​ ಶೆಟ್ಟಿ.
ಆರನೇ ಸೀಸನ್​: ಶಶಿ ಕುಮಾರ್​.
ಏಳನೇ ಸೀಸನ್​: ಶೈನ್​ ಶೆಟ್ಟಿ.
ಎಂಟನೇ ಸೀಸನ್​: ಮಂಜು ಪಾವಗಡ.
ಒಂಭತ್ತನೇ ಸೀಸನ್​: ರೂಪೇಶ್​ ಶೆಟ್ಟಿ.

ಕನ್ನಡದಲ್ಲಿ ಎಲ್ಲ 9 ಸೀಸನ್​ಗಳನ್ನು ನಟ ಕಿಚ್ಚ ಸುದೀಪ್​ ಅವರು ನಿರೂಪಣೆ ಮಾಡಿದ್ದಾರೆ. ಈಗ ಅವರು 10ನೇ ಸೀಸನ್​ ನಡೆಸಿಕೊಡಲು ಸಜ್ಜಾಗಿದ್ದಾರೆ. ಹಿಂದಿಯಲ್ಲಿ ಸಲ್ಮಾನ್​ ಖಾನ್​, ಮಲಯಾಳಂನಲ್ಲಿ ಮೋಹನ್​ಲಾಲ್​, ತಮಿಳಿನಲ್ಲಿ ಕಮಲ್​ ಹಾಸನ್​, ತೆಲುಗಿನಲ್ಲಿ ಅಕ್ಕಿನೇನಿ ನಾಗಾರ್ಜುನ ಅವರು ಈ ಶೋ ನಡೆಸಿಕೊಡುತ್ತಿದ್ದಾರೆ. ಭಾರತದಲ್ಲಿ ಬಿಗ್​ ಬಾಸ್​ ಕಾರ್ಯಕ್ರಮ ಸಖತ್​ ಫೇಮಸ್​ ಆಗಿದೆ. ದಿನದಿಂದ ದಿನಕ್ಕೆ ಇದರ ಬಿಸ್ನೆಸ್​ ಹೆಚ್ಚುತ್ತಿದೆ. ಸಾಕಷ್ಟು ಅದ್ದೂರಿಯಾಗಿ ಕಾರ್ಯಕ್ರಮ ಮೂಡಿಬರುತ್ತಿದೆ. ಕೋಟ್ಯಂತರ ರೂಪಾಯಿ ಬಜೆಟ್​ನಲ್ಲಿ ಇದು ನಿರ್ಮಾಣ ಆಗುತ್ತದೆ. ಈ ಬಾರಿ ಕನ್ನಡದಲ್ಲಿ ಹೊಸದಾಗಿ ಬಿಗ್​ ಬಾಸ್​ ಮನೆ ನಿರ್ಮಾಣ ಆಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 1:45 pm, Wed, 4 October 23