ಟ್ರೋಲ್ಗೆ ಗುರಿಯಾಗಿದ್ದ ಅನು ಬೆಂಬಲಕ್ಕೆ ’ಆನೆ‘, ಟ್ರೋಲಿಗರಿಗೆ ಖಡಕ್ ಎಚ್ಚರಿಕೆ
Vinay Gowda: ಕೀಳು ಅಭಿರುಚಿ ಟ್ರೋಲ್ಗೆ ಗುರಿಯಾದ ಸಮಾಜ ಸೇವಕಿ ಅನು ಅವರ ಬೆಂಬಲಕ್ಕೆ ನಿಂತಿದ್ದಾರೆ ನಟ, ಬಿಗ್ಬಾಸ್ 10 ಖ್ಯಾತಿಯ ವಿನಯ್ ಗೌಡ. ಟ್ರೋಲ್ ಮಾಡುವವರಿಗೆ ಎಚ್ಚರಿಕೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣಕ್ಕೆ (Social Media) ಅಂಟಿದ ಪಿಡುಗು ಈ ಟ್ರೋಲಿಂಗ್ ಅಥವಾ ನಿಂದನೆ. ಅದರಲ್ಲಿಯೂ ಈ ಪಿಡುಗೆಗೆ ಹೆಚ್ಚು ಗುರಿಯಾಗುತ್ತಿರುವವರು ಮಹಿಳೆಯರೇ. ಅವಾಚ್ಯ ಶಬ್ದಗಳಿಂದ ನಿಂದಿಸುವುದು, ವ್ಯಂಗ್ಯ ಮಾಡುವುದು, ಚಿತ್ರಗಳನ್ನು, ವಿಡಿಯೋಗಳನ್ನು ಕದ್ದು ತಿರುಚಿ ಹರಿ ಬಿಡುವುದು, ಸುಳ್ಳು ಸುದ್ದಿಗಳನ್ನು ಹಬ್ಬಿಸುವುದು ಹೀಗೆ ಹಲವು ಕೆಟ್ಟ ಅನುಭವಗಳನ್ನು ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯರು ಎದುರಿಸುತ್ತಿದ್ದಾರೆ. ನಟಿಯರು, ಇನ್ಸ್ಟಾ ಮಾಡೆಲ್ಗಳಂತೂ ನಿಂದನೆ, ಅಶ್ಲೀಲ ಪದಗಳನ್ನು ಪ್ರತಿನಿತ್ಯ ಎದುರಿಸುತ್ತಿದ್ದಾರೆ. ನಟಿಯರಷ್ಟೆ ಅಲ್ಲದೆ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವವರನ್ನೂ ಸಹ ಈ ಪಿಡುಗು ಬಿಟ್ಟಿಲ್ಲ. ಸರ್ಕಾರಿ ಶಾಲೆಗಳಿಗೆ ಬಣ್ಣ ಹಚ್ಚುವುದು ಸೇರಿದಂತೆ ತಮ್ಮ ಕೈಲಾದ ಸೇವೆಯನ್ನು ಮಾಡುತ್ತಾ ಬರುತ್ತಿರುವ ಯುವತಿ ಅನು ಅವರು ಇತ್ತೀಚೆಗೆ ತೀವ್ರ ಟ್ರೋಲಿಂಗ್ ಎದುರಿಸಿದ್ದರು. ಟ್ರೋಲಿಂಗ್ನಿಂದಾಗಿ ಹತಾಷರಾಗಿ ಕಣ್ಣೀರು ಹಾಕುತ್ತಾ ವಿಡಿಯೋ ಒಂದನ್ನು ಸಹ ಪ್ರಕಟಿಸಿದ್ದರು. ಇದೀಗ ಅವರ ಬೆಂಬಲವಾಗಿ ಬಿಗ್ಬಾಸ್ ಖ್ಯಾತಿಯ ನಟ ವಿನಯ್ ಗೌಡ ನಿಂತಿದ್ದಾರೆ.
ಅನು (ಅನು ಅಕ್ಕ) ಅವರಿಗೆ ಬೆಂಬಲ ನೀಡಿ ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಪ್ರಕಟಿಸಿರುವ ವಿನಯ್ ಗೌಡ, ‘ಅಕ್ಕ ಎಂಬುವರು ಅಪ್ಲೋಡ್ ಮಾಡಿರುವ ವಿಡಿಯೋ ನೋಡಿ ಬಹಳ ಬೇಸರವಾಯ್ತು. ಅವರು ಸ್ವಂತ ಹಣ ಖರ್ಚು ಮಾಡಿ ಸಮಾಜ ಸೇವೆ ಮಾಡುತ್ತಿದ್ದಾರೆ. ಸರ್ಕಾರಿ ಶಾಲೆಗಳ ಉಳಿವಿಗೆ ಪ್ರಯತ್ನ ಮಾಡುತ್ತಿದ್ದಾರೆ. ಅಂಥಹವರನ್ನು ನಿಂದಿಸುತ್ತಿರುವವರು ಎಂಥಹಾ ಕೆಟ್ಟ ಜನ ಇರಬಹುದು. ನಕಲಿ ಐಡಿಗಳನ್ನು ಇಟ್ಟುಕೊಂಡು ಕಮೆಂಟ್ ಮಾಡುತ್ತಿರುತ್ತಾರೆ, ಅದರಿಂದ ನಿಮಗೆ ಏನು ಸಿಗುತ್ತದೆ? ನೀವು ಮಾಡುತ್ತಿರುವ ಕೆಲಸ ನಿಮಗೇ ಇಷ್ಟವಾಗುತ್ತದೆಯೇ? ಒಮ್ಮೆ ಕನ್ನಡಿಯಲ್ಲಿ ಮುಖ ನೋಡಿಕೊಳ್ಳಿ’ ಎಂದಿದ್ದಾರೆ ವಿನಯ್.
ಇದನ್ನೂ ಓದಿ:ವಿನಯ್ ಗೌಡ ಬರ್ತ್ಡೇ ಸೆಲೆಬ್ರೇಷನ್ನಲ್ಲಿ ಆನೆಯೇ ಹೈಲೈಟ್; ಸಂಗೀತಾ ಗೈರು ಹಾಜರಿ
‘ನಿಮ್ಮ ಮನೆಯಲ್ಲಿಯೂ ಅಕ್ಕ, ತಂಗಿಯರು ಇರುತ್ತಾರೆ. ನಿಮ್ಮ ಕುಟುಂಬದ ಹೆಣ್ಣು ಮಕ್ಕಳಿಗೆ, ತಾಯಿಗೆ ಅದೇ ಪದಗಳನ್ನು ಬಳಸಿ ನೋಡಿ. ನಿಮ್ಮ ಕೈಯಲ್ಲಿ ಅದು ಸಾಧ್ಯವಾ? ಪಾಪ ಆ ಯುವತಿ ಅವರಿಗೆ ಆರೋಗ್ಯ ಸರಿಯಿಲ್ಲ ಎಂದರೂ ಇಷ್ಟೆಲ್ಲ ಕೆಲಸ ಮಾಡುತ್ತಿದ್ದಾರೆ. ಪಾಪ ಸಾಲ ಮಾಡಿ ಸಮಾಜ ಸೇವೆ ಮಾಡುತ್ತಿದ್ದಾರೆ. ಎಷ್ಟೋ ಒಳ್ಳೆಯ ಟ್ರೋಲ್, ಮೀಮ್ ಪೇಜ್ಗಳಿವೆ ಅವನ್ನು ನೋಡಿ ಕಲಿತುಕೊಳ್ಳಿ. ಅವರು ಒಂದು ಮೀಮ್ ಹಾಕಿದರೆ ಅದರಲ್ಲೊಂದು ಪಾಸಿಟಿವಿಟಿ ಇರುತ್ತದೆ. ದಯವಿಟ್ಟು ಅಂಥಹವರನ್ನು ನೋಡಿ ಕಲಿತುಕೊಳ್ಳಿ’ ಎಂದಿದ್ದಾರೆ.
View this post on Instagram
‘ಮುಂದೆ ಸೈಬರ್ ಕ್ರೈಂಗೆ ದೂರು ಹೋಗುತ್ತದೆ. ಯಾರ್ಯಾರು ಆ ಯುವತಿಗೆ ಕೆಟ್ಟದಾಗಿ ಕಮೆಂಟ್ ಮಾಡಿದ್ದೀರೋ ಅವರ ವಿಳಾಸಗಳು ಸಿಗುತ್ತವೆ. ಸಿಕ್ಕಮೇಲೆ ಏನಾಗುತ್ತದೆ ಎಂಬುದನ್ನು ಊಹಿಸಿಕೊಳ್ಳಿ. ಅಮ್ಮ-ಅಕ್ಕ ಎಂದೆಲ್ಲ ಮಾತನಾಡುವುದು ನಮಗೆ ಬರಲ್ಲ ಎಂದೇನೂ ಅಲ್ಲ. ಆದರೆ ಅನ್ನಬಾರದು ಎಂದು ನಿಶ್ಚಯಿಸಿಕೊಂಡಿದ್ದೇವೆ. ಅದನ್ನು ಹಾಳುಮಾಡಬೇಡಿ. ಅನು ನನ್ನ ತಂಗಿ, ಆಕೆಗೆ ಏನೇ ಆದರೂ ಸಹಿಸಿಕೊಳ್ಳುವುದಿಲ್ಲ. ನಾನು ಅದನ್ನು ಪರ್ಸನಲ್ ಆಗಿ ತೆಗೆದುಕೊಳ್ಳುತ್ತೇನೆ. ಅನು ನನಗೆ ಬಹಳ ಬೆಂಬಲ ಕೊಟ್ಟಿದ್ದಾರೆ. ನಾನು ಸಹ ಅನು ಅನ್ನು ತಂಗಿ ಎಂದು ಮನಸಾರೆ ಸ್ವೀಕರಿಸಿದ್ದೀನಿ. ದಯವಿಟ್ಟು ಆಕೆಗೆ ತೊಂದರೆ ಕೊಡಬೇಡಿ’ ಎಂದು ಎಚ್ಚರಿಕೆ ದನಿಯಲ್ಲಿಯೇ ಮನವಿ ಮಾಡಿದ್ದಾರೆ ವಿನಯ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ