
ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿಗಳಾಗಿದ್ದ ಶಿಶಿರ್ ಮತ್ತು ಐಶ್ವರ್ಯಾ ಸಿಂಧೋಗಿ ತಮ್ಮ ಆಟದಿಂದ ಜನಮನ ಗೆದ್ದಿದ್ದರು. ಅಲ್ಲಿಯೇ ಒಳ್ಳೆಯ ಗೆಳೆಯರಾಗಿ ಪರಿಚಯವಾದ ಶಿಶಿರ್ ಶಾಸ್ತ್ರಿ ಹಾಗೂ ಐಶ್ವರ್ಯಾ ಸಿಂಧೋಗಿ ಇದೀಗ ಬಾಳ ಸಂಗಾತಿಗಳಾಗಲಿದ್ದಾರೆ. ಇಂದು (ನವೆಂಬರ್ 22) ಬೆಂಗಳೂರಿನಲ್ಲಿ ಕುಟುಂಬಸ್ಥರು, ಆಪ್ತರು ಮತ್ತು ಕಿರುತೆರೆ ಸ್ನೇಹಿತರ ಸಮ್ಮುಖದಲ್ಲಿ ಉಂಗುರ ಬದಲಾಯಿಸಿಕೊಂಡು ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದೆ. ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ಜೋಡಿಯ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಬಿಗ್ ಬಾಸ್ ಮನೆಯಲ್ಲಿ ಶುರುವಾದ ಪರಿಚಯ, ಶೋ ಮುಗಿದ ನಂತರವೂ ಒಟ್ಟಿಗೆ ಕೆಲಸ ಮಾಡುವ ಮೂಲಕ ಸ್ನೇಹವಾಗಿ ಬೆಳೆದಿತ್ತು. ಬಳಿಕ ಅದು ಪ್ರೀತಿಯಾಗಿ ತಿರುಗಿ ಈಗ ದಾಂಪತ್ಯದ ಹೊಸ್ತಿಲಿಗೆ ತಲುಪಿದೆ. ನಿಶ್ಚಿತಾರ್ಥದ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಿಶಿರ್, ತಮ್ಮ ಪಯಣ ನೇರವಾಗಿ ಪ್ರೀತಿಯಿಂದ ಆರಂಭವಾಗಿರಲಿಲ್ಲ. ಕೆಲಸದ ಮೂಲಕ ಆದ ಪರಿಚಯ ಸ್ನೇಹವಾಯಿತು, ಅದು ಪರಸ್ಪರ ಗೌರವಕ್ಕೆ ದಾರಿ ಮಾಡಿ, ನಿಧಾನವಾಗಿ ಪ್ರೇಮವಾಯಿತು. ಬಿಗ್ ಬಾಸ್ ಮನೆಯಲ್ಲಿದ್ದಾಗ ಪ್ರೀತಿ ಇರಲಿಲ್ಲವಾದರೂ ಐಶ್ವರ್ಯ ಬಗ್ಗೆ ಒಂದು ವಿಶೇಷ ಭಾವನೆ ಇತ್ತು ಎಂದಿದ್ದಾರೆ. ಅಲ್ಲದೆ ಮೊದಲು ಪ್ರಪೋಸ್ ಮಾಡಿದ್ದು ಐಶ್ವರ್ಯಾ ಎಂಬ ಕುತೂಹಲಕರ ಸಂಗತಿಯನ್ನೂ ಹಂಚಿಕೊಂಡಿದ್ದಾರೆ.
ಐಶ್ವರ್ಯಾ ಸಹ ಮಾತನಾಡಿ, ನಾವು ಮದುವೆಯಾಗುತ್ತೇವೆ ಎಂದು ಊಹಿಸಿರಲಿಲ್ಲ, ನಾವು ಯೋಚಿಸುವ ಮುನ್ನವೇ ಜನ ಆ ಬಗ್ಗೆ ಮಾತನಾಡುತ್ತಿದ್ದರು ಎಂದರು. ಆರಂಭದಲ್ಲಿ ಪ್ರೀತಿ ಇರಲಿಲ್ಲ, ಆದರೆ ಶಿಶಿರ್ ಅವರ ಮಾನವೀಯ ಗುಣಗಳ ಬಗ್ಗೆ ಗೌರವವಿತ್ತು. ತಮ್ಮ ಬಗ್ಗೆ ಅವರು ತೋರಿದ ಕಾಳಜಿಯೇ ತಮ್ಮನ್ನು ಗೆದ್ದಿತು ಎಂದು ಹೇಳಿದರು.
ಇದನ್ನೂ ಓದಿ:ಬಿಗ್ ಬಾಸ್ ಮನೆಗೆ ‘ಕಿಚ್ಚಾಸ್ ಕಿಂಗ್ಸ್ ಬೆಂಗಳೂರು’ ರೇಸ್ ಕಾರ್ ಎಂಟ್ರಿ: ಖುಷಿಪಟ್ಟ ಸ್ಪರ್ಧಿಗಳು
ನಿಶ್ಚಿತಾರ್ಥಕ್ಕೂ ಮುನ್ನ ಈ ಜೋಡಿ ಚಿತ್ರರಂಗದ ಗಣ್ಯರು ಹಾಗೂ ರಾಜಕೀಯ ನಾಯಕರನ್ನು ಖುದ್ದಾಗಿ ಭೇಟಿಯಾಗಿ ಆಹ್ವಾನ ಪತ್ರಿಕೆ ನೀಡಿದ್ದರು. ಕೆಲವು ದಿನಗಳ ಹಿಂದೆ ಕ್ರಿಯೇಟಿವ್ ವಿಡಿಯೋ ಮೂಲಕ ಸುದ್ದಿಯನ್ನು ಅಧಿಕೃತವಾಗಿ ಪ್ರಕಟಿಸಿದ್ದ ಇವರು, ಟ್ರೋಲರ್‌ಗಳಿಗೂ ಹಾಸ್ಯಭರಿತವಾಗಿ ಉತ್ತರ ನೀಡಿದ್ದರು. ತಮ್ಮ ಬದುಕನ್ನು ಕಾಮೆಂಟ್ ವಿಭಾಗದಲ್ಲೇ ಬರೆದು, ಕೆಲವೇ ದಿನಗಳಲ್ಲಿ ಬ್ರೇಕಪ್ ಆಗುತ್ತದೆ ಎನ್ನುತ್ತಿದ್ದವರಿಗೆ ನಗುತ್ತಲೇ ತಿರುಗೇಟು ಕೊಟ್ಟ ಜೋಡಿ, ತಾವು ಅಣ್ಣ-ತಂಗಿ, ಬೆಸ್ಟ್ ಫ್ರೆಂಡ್ಸ್ ಅಥವಾ ಸಿಚುಯೇಷನ್‌ಶಿಪ್‌ನಲ್ಲಿಲ್ಲ, ಬದಲಿಗೆ ಜೀವನದ ಪಯಣವನ್ನು ಒಟ್ಟಿಗೆ ಆರಂಭಿಸುತ್ತಿದ್ದೇವೆ ಎಂದಿತ್ತು. ಅಭಿಮಾನಿಗಳು ಪ್ರೀತಿಯಿಂದ ಕರೆಯುತ್ತಿದ್ದ “ಐಶಿರ್” ಇನ್ನು ಕೇವಲ ಹ್ಯಾಶ್‌ಟ್ಯಾಗ್ ಆಗಿ ಉಳಿಯುವುದಿಲ್ಲ ಎಂದೂ ಸ್ಪಷ್ಟಪಡಿಸಿತ್ತು.
ಬಿಗ್ ಬಾಸ್ ಸಹಸ್ಪರ್ಧಿಗಳು, ಕಿರುತೆರೆ ಹಾಗೂ ಚಂದನವನದ ಗಣ್ಯರು ಮತ್ತು ಅಭಿಮಾನಿಗಳು ನವಜೋಡಿಗೆ ಶುಭ ಹಾರೈಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:02 pm, Sun, 22 November 26