ಒಂದು ಫೋನ್ ಕರೆಯಿಂದ ಬಿಗ್​​ಬಾಸ್ ಬಾಗಿಲು ತೆಗೆಸಿದ ಕಿಚ್ಚ ಸುದೀಪ್

Bigg Boss Kannada 12: ಬಿಗ್​​ಬಾಸ್ ಕನ್ನಡ ಸೀಸನ್ 12 ಮತ್ತೆ ಪ್ರಾರಂಭವಾಗಿದೆ. ಸ್ಪರ್ಧಿಗಳನ್ನೆಲ್ಲ ಈಗಾಗಲೇ ಈಗಲ್​​ಟನ್ ರೆಸಾರ್ಟ್​​ನಿಂದ ಮತ್ತೆ ಬಿಗ್​​ಬಾಸ್ ಮನೆಗೆ ತಂದು ಬಿಡಲಾಗಿದೆ. ಬಿಗ್​​ಬಾಸ್ ಶೋ ಮತ್ತೆ ಪ್ರಾರಂಭ ಆಗುವಲ್ಲಿ ಕಿಚ್ಚ ಸುದೀಪ್ ಅವರ ಶ್ರಮ ಸಾಕಷ್ಟಿದೆ. ಅವರ ಕೆಲವು ಕರೆಗಳಿಂದಲೇ ಶೋ ಪುನಃ ಪ್ರಾರಂಭಕ್ಕೆ ಅವಕಾಶ ದೊರೆತಿದೆ.

ಒಂದು ಫೋನ್ ಕರೆಯಿಂದ ಬಿಗ್​​ಬಾಸ್ ಬಾಗಿಲು ತೆಗೆಸಿದ ಕಿಚ್ಚ ಸುದೀಪ್
Bigg Boss Kannada

Updated on: Oct 09, 2025 | 8:02 AM

ಬಿಗ್​​ಬಾಸ್ ಕನ್ನಡ ಶೋ (Bigg Boss Kannada 12) ಮತ್ತೆ ಪ್ರಾರಂಭವಾಗಿದೆ. ಈಗಲ್​​ಟನ್ ರೆಸಾರ್ಟ್​​ನಲ್ಲಿದ್ದ ಎಲ್ಲ ಸ್ಪರ್ಧಿಗಳನ್ನು ಮತ್ತೆ ಬಿಗ್​​ಬಾಸ್ ಮನೆಗೆ ಕರೆತರಲಾಗಿದೆ. ಜಾಲಿವುಡ್​​ ಸ್ಟುಡಿಯೋನ ಇತರೆ ಎಲ್ಲ ಚಟುವಟಿಕೆಗಳು ಈಗಲೂ ಬಂದ್ ಆಗಿವೆ ಆದರೆ ಬಿಗ್​​ಬಾಸ್​​ ಶೋಗೆ ಮಾತ್ರವೇ ಪ್ರತ್ಯೇಕವಾಗಿ ಅವಕಾಶ ನೀಡಲಾಗಿದೆ. ಹೀಗೆ ಪ್ರತ್ಯೇಕ ಅವಕಾಶ ಸಿಗುವ ಹಿಂದೆ ನಟ, ಬಿಗ್​​ಬಾಸ್ ನಿರೂಪಕ ಕಿಚ್ಚ ಸುದೀಪ್ ಅವರ ಶ್ರಮವಿದೆ. ಸುದೀಪ್ ಅವರು ಮಾಡಿದ ಕರೆಗಳಿಂದ, ಪ್ರಯತ್ನಗಳಿಂದಲೇ ಬಿಗ್​​ಬಾಸ್ ಶೋಗೆ ಅವಕಾಶ ಸಿಕ್ಕಿದೆ ಎನ್ನಲಾಗುತ್ತಿದೆ.

ನಿನ್ನೆ ಮಾಲಿನ್ಯ ನಿಯಂತ್ರಣ ಅಧಿಕಾರಿಗಳು ಸುದ್ದಿಗೋಷ್ಠಿ ನಡೆಸಿ ಜಾಲಿವುಡ್​ಗೆ ಬೀಗ ಹಾಕುವುದಕ್ಕೂ ಬಿಗ್​​ಬಾಸ್ ಶೋಗೂ ಸಂಬಂಧವಿಲ್ಲ ಎಂದ ಬಳಿಕ ಕಿಚ್ಚ ಸುದೀಪ್ ಅವರು ಕೆಲ ರಾಜಕಾರಣಿಗಳಿಗೆ ಕರೆ ಮಾಡಿ, ಏನೂ ತಪ್ಪಿಲ್ಲದ ಬಿಗ್​​ಬಾಸ್ ಶೋ ಅನ್ನು ಮತ್ತೆ ನಡೆಸಿಕೊಡಲು ಅನುಮತಿ ನೀಡುವಂತೆ ಮನವಿ ಮಾಡಿದ್ದರು. ಅವರೇ ಹೇಳಿರುವಂತೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಕರೆ ಮಾಡಿ ಮನವಿ ಮಾಡಿದ್ದರಂತೆ. ಸುದೀಪ್ ಅವರ ಈ ಕಾರ್ಯದಲ್ಲಿ ನಲಪಾಡ್ ಸಹ ಸಹಾಯ ಮಾಡಿದ್ದಾಗಿ ಅವರೇ ಹೇಳಿಕೊಂಡಿದ್ದಾರೆ.

ನಿನ್ನೆ (ಅಕ್ಟೋಬರ್ 08) ರಾತ್ರಿ 11:30 ಸುಮಾರಿಗೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಟ್ವೀಟ್ ಮಾಡಿ, ‘ಬಿಗ್​​ಬಾಸ್ ಕನ್ನಡ ಶೋ ಚಿತ್ರೀಕರಣ ಆಗುತ್ತಿರುವ ಬಿಡದಿಯ ಜಾಲಿವುಡ್ ಸ್ಟುಡಿಯೋ ಮೇಲಿನ ತಡೆಯನ್ನು ತೆರವು ಮಾಡುವಂತೆ ಬೆಂಗಳೂರು ದಕ್ಷಿಣ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದೀನಿ. ಪರಿಸರ ನೈರ್ಮಲ್ಯ ಕಾಪಾಡುವುದು ಪ್ರಮುಖ ಆದ್ಯತೆಯಾಗಿ ಉಳಿದಿದ್ದರೂ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ನಿಗದಿಪಡಿಸಿದ ಮಾನದಂಡಗಳಿಗೆ ಅನುಗುಣವಾಗಿ ಉಲ್ಲಂಘನೆಗಳನ್ನು ಪರಿಹರಿಸಲು ಸ್ಟುಡಿಯೋಗೆ ಸಮಯ ನೀಡಲಾಗುವುದು. ಕನ್ನಡ ಮನರಂಜನಾ ಉದ್ಯಮವನ್ನು ಬೆಂಬಲಿಸಲು ನಾನು ಬದ್ಧನಾಗಿರುತ್ತೇನೆ, ಜೊತೆಗೆ ಪರಿಸರ ಸಂರಕ್ಷಣೆಯ ಬಗ್ಗೆ ನಮ್ಮ ಜವಾಬ್ದಾರಿಯನ್ನು ಎತ್ತಿಹಿಡಿಯುತ್ತೇನೆ’ ಎಂದಿದ್ದರು.

ಇದನ್ನೂ ಓದಿ:ಬಿಗ್​ಬಾಸ್ ಕನ್ನಡ: ನಾಳೆ ಸಿಗಲಿದೆ ಎಲ್ಲ ಪ್ರಶ್ನೆಗಳಿಗೂ ಉತ್ತರ

ಡಿಸಿಎಂ ಅವರ ಈ ಟ್ವೀಟ್​​ಗೆ ಪ್ರತಿಕ್ರಿಯೆ ನೀಡಿರುವ ಕಿಚ್ಚ ಸುದೀಪ್, ‘ಅಗತ್ಯ ಸಮಯದಲ್ಲಿ ಅಗತ್ಯ ನೆರವು ನೀಡಿದ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಧನ್ಯವಾದಗಳು, ಹಾಗೆಯೇ ಜಾಲಿವುಡ್ ಸ್ಟುಡಿಯೋನಲ್ಲಿ ಆಗಿರುವ ಸಮಸ್ಯೆಗೂ ಬಿಗ್​​ಬಾಸ್ ಕನ್ನಡಕ್ಕೂ ಸಂಬಂಧವಿಲ್ಲ, ಬಿಗ್​​ಬಾಸ್ ಕನ್ನಡ ಶೋನಿಂದ ಯಾವುದೇ ತಪ್ಪು ಆಗಿಲ್ಲವೆಂದು ಗುರುತಿಸಿದ ಅಧಿಕಾರಿಗಳಿಗೂ ಧನ್ಯವಾದಗಳು. ನನ್ನ ಕರೆಗೆ ಶೀಘ್ರವೇ ಸ್ಪಂದಿಸಿದ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಹಾಗೂ ಸಹಾಯ ಮಾಡಿದ ನಲಪಾಡ್ ಅವರಿಗೆ ಧನ್ಯವಾದಗಳು. ಬಿಗ್​​ಬಾಸ್ ಕನ್ನಡ ಸದಾ ಇರಲಿದೆ’ ಎಂದಿದ್ದಾರೆ.

ಬಿಗ್​​ಬಾಸ್ ಶೋ ಬಂದ್ ಮಾಡಿರುವ ಹಿಂದೆ ರಾಜಕೀಯ ದ್ವೇಷ ಇದೆ ಎಂಬ ಸುದ್ದಿ ನಿನ್ನೆ ಹರಿದಾಡಿತ್ತು. ಸುದೀಪ್ ಈ ಹಿಂದೆ ಬಿಜೆಪಿ ಪರ ನಿಂತಿದ್ದೂ ಸಹ ಬಿಗ್​​ಬಾಸ್ ಕನ್ನಡ ಶೋ ಬಂದ್ ಆಗಲು ಪರೋಕ್ಷ ಕಾರಣವಾಗಿದೆ ಎಂಬ ಚರ್ಚೆ ನಡೆದಿತ್ತು. ಆದರೆ ಇದೀಗ ಸುದೀಪ್ ಅವರ ಮನವಿಗೆ ಶೀಘ್ರವಾಗಿ ಸ್ಪಂದಿಸಿರುವ ಡಿಸಿಎಂ, ರಾಜಕೀಯ ದ್ವೇಷದ ಆರೋಪಗಳೆಲ್ಲ ಸುಳ್ಳೆಂದು ಸಾಬೀತು ಮಾಡಿದ್ದಾರೆ. ಇಂದಿನಿಂದ ಮತ್ತೆ ಬಿಗ್​​ಬಾಸ್ ಶೋ ಪ್ರಾರಂಭ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:58 am, Thu, 9 October 25