ಬಿಗ್ಬಾಸ್ ಕನ್ನಡ: ನಾಳೆ ಸಿಗಲಿದೆ ಎಲ್ಲ ಪ್ರಶ್ನೆಗಳಿಗೂ ಉತ್ತರ
Bigg Boss Kannada season 12: ಬಿಗ್ಬಾಸ್ ಸೀಸನ್ ಮತ್ತೆ ಪ್ರಾರಂಭವಾಗಿದೆ. ಬೇರೆ ಬೇರೆ ಭಾಷೆಗಳಲ್ಲಿ ಬಿಗ್ಬಾಸ್ ಹೊಸ ಸೀಸನ್ನ ಪ್ರೋಮೊಗಳು, ಘೋಷಣೆಗಳು ಹರಿದಾಡುತ್ತಿವೆ. ಇದೀಗ ಕನ್ನಡ ಬಿಗ್ಬಾಸ್ ಸೀಸನ್ 12ರ ಅಪ್ಡೇಟ್ ಸಹ ಹೊರಬೀಳಲಿದೆ. ಈ ಬಾರಿ ನಿರೂಪಕರು ಯಾರಿರಲಿದ್ದಾರೆ. ಈ ಸೀಸನ್ನ ವಿಶೇಷತೆಗಳೇನು? ಎಲ್ಲ ಪ್ರಶ್ನೆಗಳಿಗೆ ಜೂನ್ 30ರಂದು ಉತ್ತರ ಸಿಗಲಿದೆ.

ಬಿಗ್ಬಾಸ್ ಕನ್ನಡ ಸೀಸನ್ 11 (Bigg Boss Kannada) ಮುಗಿದು ತಿಂಗಳುಗಳಾಗಿವೆ. ಇದೀಗ 12ನೇ ಸೀಸನ್ಗೆ ತಯಾರಿ ಆರಂಭವಾಗಿದೆ. ಆದರೆ ಈ ಬಾರಿಯ ಬಿಗ್ಬಾಸ್ ಸ್ಪರ್ಧಿಗಳ ಕಾರಣಕ್ಕೆಲ್ಲದೆ ಆಯೋಜಕರು ಮತ್ತು ನಿರೂಪಕರ ಕಾರಣಕ್ಕೆ ಭಾರಿ ಗಮನ ಸೆಳೆದಿದೆ. ಕನ್ನಡದಲ್ಲಿ ಬಿಗ್ಬಾಸ್ ರಿಯಾಲಿಟಿ ಶೋ ಆರಂಭ ಆದಾಗಿನಿಂದಲೂ ಸುದೀಪ್ ಅವರೇ ಬಿಗ್ಬಾಸ್ ನಿರೂಪಣೆ ಮಾಡಿಕೊಂಡು ಬಂದಿದ್ದಾರೆ. ಅವರ ಗೈರು ಹಾಜರಿಯಲ್ಲಿ ಸಹ ಯಾರೊಬ್ಬರೂ ಸಹ ಆ ವೇದಿಕೆ ಏರಿದ್ದಿಲ್ಲ. ಆದರೆ ತಾವು ಇನ್ನು ಮುಂದೆ ಬಿಗ್ಬಾಸ್ ನಿರೂಪಣೆ ಮಾಡುವುದಿಲ್ಲ ಎಂದು ಸುದೀಪ್ ಘೋಷಣೆ ಮಾಡಿದ್ದಾರೆ.
ಇದೀಗ ಬಿಗ್ಬಾಸ್ ಆಯೋಜಕರು ಹೊಸ ನಿರೂಪಕರಿಗೆ ಹುಡುಕಾಟ ನಡೆಸುತ್ತಿದ್ದಾರೆ. ಕೆಲವು ನಟರನ್ನು ಸಂಪರ್ಕ ಮಾಡಿದ್ದಾರೆ ಎಂಬ ಸುದ್ದಿಗಳು ಹರಿದಾಡಿತ್ತು. ಡಾಲಿ ಧನಂಜಯ್, ರಿಷಬ್ ಶೆಟ್ಟಿ, ರಮೇಶ್ ಅರವಿಂದ್ ಇನ್ನೂ ಕೆಲವು ಹೆಸರುಗಳು ತುಸು ಜೋರಾಗಿಯೇ ಕೇಳಿ ಬಂದಿತ್ತು. ಆದರೆ ಯಾವುದೂ ಸಹ ಅಧಿಕೃತ ಆಗಿರಲಿಲ್ಲ. ಆದರೆ ಈಗ ಎಲ್ಲ ಪ್ರಶ್ನೆಗಳಿಗೆ ನಾಳೆ (ಜೂನ್ 30) ಉತ್ತರ ಸಿಗಲಿದೆ.
ಇದನ್ನೂ ಓದಿ:ಅರ್ಥವಾಗದ ಹಾಡು ಹಾಡುತ್ತಾ ಫೋಸು ಕೊಟ್ಟ ಬಿಗ್ಬಾಸ್ ಇಶಾನಿ
ಜೂನ್ 30 ರಂದು ಬಿಗ್ಬಾಸ್ ಕನ್ನಡ ಆಯೋಜಕರು, ಕಲರ್ಸ್ ವಾಹಿನಿ ಬಿಗ್ಬಾಸ್ ಕುರಿತು ಪತ್ರಿಕಾಗೋಷ್ಠಿ ಆಯೋಜನೆ ಮಾಡಿದೆ. ತಾಜ್ ಹೋಟೆಲ್ನಲ್ಲಿ ಪತ್ರಿಕಾಗೋಷ್ಠಿ ಆಯೋಜನೆ ಮಾಡಲಾಗಿದ್ದು, ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ. ಈ ಪತ್ರಿಕಾ ಗೋಷ್ಠಿಯಲ್ಲಿ ಬಿಗ್ಬಾಸ್ ಕನ್ನಡ ಸೀಸನ್ 12 ಅನ್ನು ಯಾರು ನಿರೂಪಣೆ ಮಾಡಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಸಿಗುವ ಬಹುತೇಕ ಸಾಧ್ಯತೆಗಳು ಇವೆ.
ಈಗಾಗಲೇ ಕೆಲವು ಊಹಾಪೋಹಳು ಹರಿದಾಡುತ್ತಿದ್ದು, ಆಯೋಜಕರು ಸುದೀಪ್ ಅವರ ಮನವೊಲಿಸಿದ್ದು, ಸುದೀಪ್ ಅವರೇ ಸೀಸನ್ 12ನ್ನು ಸಹ ನಿರೂಪಣೆ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಇನ್ನೊಂದು ಗಾಳಿಸುದ್ದಿಯ ಪ್ರಕಾರ, ಸುದೀಪ್ ಅವರು ಮತ್ತೊಬ್ಬ ನಿರೂಪಕರೊಬ್ಬರ ಜೊತೆಗೆ ಜಂಟಿಯಾಗಿ ಈ ಸೀಸನ್ ನಡೆಸಿಕೊಡಲಿದ್ದಾರೆ ಎನ್ನಲಾಗುತ್ತಿದೆ. ನಾಳೆ ಹೊಸ ಪ್ರೋಮೋ ಬಿಡುಗಡೆ ಆಗುವ ಸಾಧ್ಯತೆಯೂ ಇದ್ದಂತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




