
ಬಿಗ್ಬಾಸ್ನ 12ನೇ ಸೀಸನ್ (Bigg Boss Kannada 12) ನಡೆಯುತ್ತಿದೆ. ಆದರೆ ಸ್ಪರ್ಧಿಗಳನ್ನು ಹೊರಗೆ ಹೋಗಿ ಎಂದು ಸುದೀಪ್ ಹೇಳಿದವರಲ್ಲ. ಸ್ಪರ್ಧಿಗಳೇ ಸ್ವತಃ ಹೊರಗೆ ಹೋಗುತ್ತೇವೆ ಕಳಿಸಿಕೊಡಿ ಎಂದಾಗಲೂ ಸಹ ಸುದೀಪ್ ಅವರನ್ನು ತಡೆದಿದ್ದು ಇದೆ. ಸ್ವತಃ ಸುದೀಪ್ ಅವರೇ ಬಿಗ್ಬಾಸ್ ಮನೆಯ ಬಾಗಿಲು ತೆಗೆದು ಹೊರಗೆ ಹೋಗಿ ಎಂದಿದ್ದು ಇಲ್ಲ. ಸ್ವತಃ ಸುದೀಪ್ ಅವರೇ ಹೇಳಿದಂತೆ 12 ಸೀಸನ್ಗಳಲ್ಲಿ ಸುದೀಪ್, ಬಿಗ್ಬಾಸ್ ಮನೆಯ ಬಾಗಿಲನ್ನು ಒತ್ತಾಯದಿಂದ ತೆಗೆಸಿದ್ದು ಎರಡು ಬಾರಿ ಮಾತ್ರವೇ ಅಂತೆ. ಬಿಗ್ಬಾಸ್ 12 ಶೋ ಶುರುವಾಗಿ ಎರಡನೇ ವಾರಕ್ಕೆ ಸುದೀಪ್ ಅವರು ಮನೆ ಬಾಗಿಲು ತೆಗೆಸಿದ್ದರು.
ಸುದೀಪ್ ಅವರು ವಾರಾಂತ್ಯದ ಪಂಚಾಯಿತಿಯನ್ನು ನಗುತ್ತಾ, ನಗಿಸುತ್ತಾ ಪ್ರಾರಂಭ ಮಾಡಿದರು. ಬಳಿಕ ಕಳೆದ ವಾರ ಕಾಕ್ರೂಚ್ ಸುಧಿಗೆ ನೀಡಲಾಗಿದ್ದ ಅಸುರ ಟಾಸ್ಕ್ ಬಗ್ಗೆ ವಿಚಾರಿಸಿದರು. ಆ ಟಾಸ್ಕ್ ಮಾಡುವುದು ತಮಗೆ ಬಹಳ ಕಷ್ಟವಾಯ್ತು, ಇಡೀ ಮನೆಯ ಮಂದಿಯೇ ಅಸುರರಂತೆ ವರ್ತಿಸಿದರು. ನಾನಲ್ಲ, ನಿಜವಾದ ಅಸುರ, ದೆವ್ವ-ಭೂತ ಬಂದರೂ ಸಹ ಇವರ ಜೊತೆಗೆ ಇರಲಾರನು, ನಾನು ಒಂದೇ ದಿನಕ್ಕೆ ಸುಸ್ತಾಗಿ ಪ್ರಯತ್ನ ಕೈಬಿಟ್ಟೆ ಎಂದೆಲ್ಲ ಹೇಳಿದರು. ಮನೆಯ ಸದಸ್ಯರು ಸಹ ಅಸುರ ನಿಜವಾಗಿಯೂ ಅಸುರನ ರೀತಿ ಇರಲಿಲ್ಲ ಜೋಕರ್ ರೀತಿ ಇದ್ದ ಎಂದೂ, ತಾವೆಲ್ಲ ಹೇಗೆ ಅಸುರನನ್ನು ಕಾಡಿಸಿದೆವು ಎಂದೆಲ್ಲ ಹೇಳಿದರು.
ಎಲ್ಲರ ಮಾತಿನಿಂದ ಸುದೀಪ್ಗೆ ಸಿಟ್ಟು ನೆತ್ತಿಗೆ ಹತ್ತಿತು. ನಿಮಗೆ ಶೋನ ಗಂಭೀರತೆಯೇ ಅರ್ಥವಾಗುತ್ತಿಲ್ಲ. ಯಾರಿಗಾದರೂ ಈಗಲೂ ಸಹ ನನಗೆ ಟಾಸ್ಕ್ ಮಾಡಲು ಆಗುತ್ತಿಲ್ಲ. ನನಗೆ ಶೋ ಅರ್ಥವಾಗುತ್ತಿಲ್ಲ, ನನಗೆ ಕಮ್ಯಾಂಡ್ ಮಾಡಲು ಬರುತ್ತಿಲ್ಲ, ಮನೆಯ ನೆನಪು ಬರುತ್ತಿದೆ ಇತ್ಯಾದಿ-ಇತ್ಯಾದಿ ಅನಿಸುತ್ತಿರುವವರು ಈಗಲೇ ಮನೆ ಬಿಟ್ಟು ಹೋಗಿ’ ಎಂದು ಹೇಳಿ ಬಿಗ್ಬಾಸ್ ಮನೆಯ ಬಾಗಿಲು ತೆಗೆಸಿದರು. ಆದರೆ ಯಾರೂ ಸಹ ತಮಗೆ ಹೊರಗೆ ಹೋಗಲು ಇಷ್ಟವಿಲ್ಲ ಎಂದರು.
ಇದನ್ನೂ ಓದಿ:ಬಿಗ್ಬಾಸ್ ಮೇಲೆ ಕಣ್ಣು ಬಿದ್ದಿದೆ ಎಂದ ಸುದೀಪ್ ಧನ್ಯವಾದ ಹೇಳಿದ್ದು ಯಾರಿಗೆ?
ನಿಮ್ಮಲ್ಲಿ ಯಾರಿಗೂ ಸಹ ಗಾಂಭೀರ್ಯತೆ ಇಲ್ಲ, ಶೋ ಬಗ್ಗೆ ಭಯ ಇಲ್ಲ. ಹೊರಗೆ ಶೋ ನೋಡುತ್ತಿರುವ ಕೋಟ್ಯಂತರ ಜನರ ಬಗ್ಗೆಯೂ ಸಹ ಗೌರವ ಇಲ್ಲ. ಹಾಗೆ ಇಲ್ಲ ಎಂದ ಮೇಲೆ ಶೋನಲ್ಲಿ ಇದ್ದು ಪ್ರಯೋಜನ ಇಲ್ಲ ಎಂದರು. ಈ ಶೋ ಸರಾಗವಾಗಿ ನಡೆಯಲು ಎಷ್ಟೋಂದು ಜನ ಹಗಲು-ರಾತ್ರಿ ಕೆಲಸ ಮಾಡುತ್ತಿದ್ದಾರೆ ಅವರ ಶ್ರಮಕ್ಕೆ ಗೌರವ ಬೇಡವೇ, ನಿಮಗಾಗಿ ಹೊರಗೆ ನಾವುಗಳು ಎಲ್ಲ ಸಮಸ್ಯೆಗಳೊಟ್ಟಿಗೆ ಹೋರಾಡುತ್ತಿದ್ದೇವೆ, ನಿಮ್ಮ ಕುಟುಂಬಗಳನ್ನು ಕಾಯುತ್ತಿದ್ದೇವೆ ಇದಕ್ಕೆ ನಿಮಗೆ ಗೌರವ ಬೇಡವೇ? ಎಂದು ಪ್ರಶ್ನೆ ಮಾಡಿದರು ಸುದೀಪ್.
ಬಳಿಕ ಧನುಶ್, ಧ್ರುವ, ಮಾಳು, ಸ್ಪಂದನ, ಚಂದ್ರಪ್ರಭ, ಜಾನ್ವಿ, ನಿಮ್ಮ ವ್ಯಕ್ತಿತ್ವ ಎಲ್ಲಿ, ನಿಮ್ಮ ಧ್ವನಿ ಎಲ್ಲಿದೆ? ಕ್ರಿಯಾಶೀಲತೆ ಎಲ್ಲಿದೆ? ನೀವೆಲ್ಲ ಗುಂಪಿನಲ್ಲಿ ಕಳೆದು ಹೋಗಿದ್ದೀರಿ. ನೀವು ಬಿಗ್ಬಾಸ್ ಮನೆಯ ಒಳಗೆ ಹೋಗಬೇಕಾದರೆ ಏನು ಹೇಳಿದ್ದಿರಿ ನೆನಪು ಮಾಡಿಕೊಳ್ಳಿ. ನಿಮ್ಮ ಮನೆಯವರಿಗೆ ಏನು ಹೇಳಿದ್ದಿರಿ? ನಿಮಗೆ ನೀವು ಏನು ಹೇಳಿಕೊಂಡಿರಿ ಎಂದು ನೆನಪು ಮಾಡಿಕೊಳ್ಳಿ ಎಂದು ಛಲ ತುಂಬುವ ಪ್ರಯತ್ನ ಮಾಡಿದರು. ಸ್ಪರ್ಧಿಗಳು ಸಹ ನಾವು ಇನ್ನು ಮುಂದೆ ಸಂಪೂರ್ಣ ಶ್ರಮ ಹಾಕಿ ಆಟ ಆಡುವುದಾಗಿ ಹೇಳಿದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:48 pm, Sat, 11 October 25