ಬಿಗ್ಬಾಸ್ನಲ್ಲಿ ಈ ವಾರ ಭವ್ಯಾ ಕ್ಯಾಪ್ಟನ್ ಆಗಿದ್ದಾರೆ. ಕಳೆದ ವಾರವೂ ಅವರೇ ಕ್ಯಾಪ್ಟನ್ ಆಗಿದ್ದರು. ಇದು ಮೂರನೇ ಬಾರಿ ಭವ್ಯಾ ಕ್ಯಾಪ್ಟನ್ ಆಗಿದ್ದಾರೆ. ಆದರೆ ಈ ಬಾರಿ ಅವರು ಮೋಸ ಆಡಿ ಕ್ಯಾಪ್ಟನ್ ಆಗಿದ್ದಾರೆ. ಭವ್ಯಾ ಮೋಸ ಮಾಡಿ ಕ್ಯಾಪ್ಟನ್ ಆಗಿರುವ ವಿಷಯ ಮನೆಯಲ್ಲಿ ಎಷ್ಟೋ ಜನರಿಗೆ ಗೊತ್ತೆ ಇರಲಿಲ್ಲ. ಆದರೆ ಗೊತ್ತಿದ್ದ ಕೆಲವರು ಮೌನವಾಗಿಯೇ ಇದ್ದು, ಮೋಸದಾಟಕ್ಕೆ ಬೆಂಬಲ ಸೂಚಿಸಿದ್ದರು. ಇದೀಗ ಸುದೀಪ್ ಎಲ್ಲರ ಸುಳ್ಳನ್ನು ಹೊರಗೆಳೆದರು. ಆದರೆ ಭವ್ಯಾ ಸಿಕ್ಕಿಬಿದ್ದರೂ ಸುಳ್ಳು ಹೇಳುವುದು ಬಿಟ್ಟಿರಲಿಲ್ಲ. ಆಗ ಸುದೀಪ್ ತಮ್ಮದೇ ಶೈಲಿಯಲ್ಲಿ ಎಚ್ಚರಿಕೆ ನೀಡಿದರು.
ಒಂಬತ್ತನೇ ಸಂಖ್ಯೆಯ ಬುಟ್ಟಿಯಲ್ಲಿರುವ ಚೆಂಡುಗಳನ್ನು ಬುಟ್ಟಿಗೆ ಹಾಕುವ ಟಾಸ್ಕ್ ಅನ್ನು ಕ್ಯಾಪ್ಟೆನ್ಸಿ ಟಾಸ್ಕ್ ಆಗಿ ನೀಡಲಾಗಿತ್ತು. ರಜತ್, ಮೋಕ್ಷಿತಾ, ಭವ್ಯಾ, ತ್ರಿವಿಕ್ರಮ್, ಧನರಾಜ್ ಅವರುಗಳು ಟಾಸ್ಕ್ನಲ್ಲಿದ್ದರು. ಉಗ್ರಂ ಮಂಜು, ಚೈತ್ರಾ ಅವರುಗಳು ಉಸ್ತುವಾರಿ ಆಗಿದ್ದರು. ಈ ವೇಳೆ ಭವ್ಯಾ, ಬೇರೆ ಸಂಖ್ಯೆಯ ಡಬ್ಬಿಯಿಂದ ಬಿದ್ದ ಚೆಂಡನ್ನು ಎತ್ತಿಕೊಂಡು ಬುಟ್ಟಿಗೆ ಹಾಕಿ ಟಾಸ್ಕ್ ಗೆದ್ದರು ಮಾತ್ರವಲ್ಲದೆ ಮನೆಯ ಕ್ಯಾಪ್ಟನ್ ಸಹ ಆದರು. ಭವ್ಯಾ ನಿಯಮ ಮುರಿದಿದ್ದನ್ನು ರಜತ್ ನೋಡಿದರೂ ಸಹ ಹೇಳಿರಲಿಲ್ಲ. ಇದನ್ನು ಸುದೀಪ್ ವಿಡಿಯೋ ತೋರಿಸಿ ಪ್ರಶ್ನೆ ಮಾಡಿದರು.
ವಿಡಿಯೋ ತೋರಿಸಿ ಹೇಳಿದರೂ ಸಹ ಭವ್ಯಾ ಅದೇ ಸುಳ್ಳುಗಳನ್ನು ಮುಂದುವರೆಸಿದರು. ಆ ಚೆಂಡು ಎಲ್ಲಿಂದ ಬಿದ್ದಿದ್ದು ಎಂಬುದನ್ನು ನಾನು ನೋಡಿರಲಿಲ್ಲ ಎಂದರು. ಆ ನಂತರ ಇನ್ನೊಂದು ವಿಡಿಯೋ ಅನ್ನು ಸುದೀಪ್ ಹಾಕಿದರು. ಅದರಲ್ಲಿ ಸ್ಪಷ್ಟವಾಗಿ ಗೊತ್ತಾಗುತ್ತಿತ್ತು, ಉಸ್ತುವಾರಿಗಳಾದ ಚೈತ್ರಾ ಹಾಗೂ ಮಂಜು ಕೇಳಿದ ಪ್ರಶ್ನೆಗಳಿಗೆ ಭವ್ಯಾ ಬೇಕೆಂದೇ ಸುಳ್ಳು ಹೇಳುತ್ತಿದ್ದಾರೆ ಎಂದು. ಆದರೂ ಸಹ ಮತ್ತೊಮ್ಮೆ ಕೇಳಿದಾಗ ಆಗಲೂ ಭವ್ಯಾ ಸುಳ್ಳನ್ನೇ ಹೇಳಿದರು. ಮೋಸ ಮಾಡಿ ಕ್ಯಾಪ್ಟನ್ ಆಗಿದ್ದಲ್ಲದೆ, ಸುದೀಪ್ ಎದುರು ಆ ಸುಳ್ಳನ್ನೇ ಸತ್ಯ ಮಾಡುವ ಪ್ರಯತ್ನ ಮಾಡಿದರು.
ಇದನ್ನೂ ಓದಿ:‘ಮ್ಯಾಕ್ಸ್’ ಭರ್ಜರಿ ಗೆಲುವಿಗೆ ಕಾರಣ ಯಾರು? ಸುದೀಪ್ ಕೊಟ್ಟರು ಉತ್ತರ
ಆದರೆ ಕಿಚ್ಚ ಸುಮ್ಮನೆ ಬಿಡಲಿಲ್ಲ. ‘ಸುಮ್ಮನೆ ಇರು’ ಎಂದು ನೀವು ಹೇಳಿದ್ದು, ಬೇರೆ ಕಾರಣಕ್ಕೆ ಅಲ್ಲ ಬದಲಿಗೆ ನಾನು ಮೋಸ ಮಾಡುತ್ತಿದ್ದೀನಿ, ನೀನು ನೋಡಿದರೂ ನೋಡದಂತೆ ಇರು ಎಂದು ‘ಸುಮ್ಮನೆ ಇರು, ಸುಮ್ಮನೆ ಇರು’ ಎಂದು ಮೆಲುದನಿಯಲ್ಲಿ ರಜತ್ಗೆ ಹೇಳಿದ್ದು ಎಂದು ಸ್ಪಷ್ಟವಾಗಿ ಹೇಳಿದರು. ರೆಸಾರ್ಟ್ ಟಾಸ್ಕ್ನಲ್ಲಿಯೂ ಸಹ ನಿಯಮ ಮೀರಿ ಅತಿಥಿಗಳಿಗೂ ಮುಂಚೆ ಊಟ ಮಾಡಿದ್ದು ಮಾತ್ರವೇ ಅಲ್ಲದೆ, ನಮಗೆ ಊಟ ಮಾಡಲು ಸಹ ಸಮಯ ಸಿಗುತ್ತಿಲ್ಲ ಎಂದು ಬಿಗ್ಬಾಸ್ ಮುಂದೆ ಕಣ್ಣೀರು ಹಾಕಿದರು. ಒಟ್ಟಾರೆಯಾಗಿ ಭವ್ಯಾ, ಮೋಸ ಮಾಡಿದ್ದು ಮಾತ್ರವೇ ಅಲ್ಲದೆ, ಸಿಕ್ಕಿಬಿದ್ದರೂ ಸಹ ಸುಳ್ಳು ಹೇಳಿ ತಾನು ಮಾಡಿದ್ದೇ ಸರಿ ಎಂದು ಸಾಧಿಸಲು ಯತ್ನಿಸಿ ಸುದೀಪ್ ಕೈಯಲ್ಲಿ ಉಗಿಸಿಕೊಂಡರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ