ಕುತೂಹಲ ಕೆರಳಿಸಿದ ನಾಮಿನೇಷನ್ಸ್, ಉಳಿದುಕೊಂಡಿದ್ದು ಇಬ್ಬರೇ
Bigg Boss Kannada: ಬಿಗ್ಬಾಸ್ ಕನ್ನಡ ಮುಗಿಯಲು ಕೆಲವು ವಾರಗಳು ಮಾತ್ರವೇ ಬಾಕಿ ಇವೆ. ಸ್ಪರ್ಧಿಗಳ ನಡುವೆ ಪೈಪೋಟಿ ಹೆಚ್ಚಾಗಿದೆ. ಪರಸ್ಪರರನ್ನು ಮನೆಯಿಂದ ಹೊರಗೆ ಕಳಿಸುವ ಹುನ್ನಾರದಲ್ಲಿದ್ದಾರೆ. ಅದರಂತೆ ಈ ವಾರ ಮನೆಯಲ್ಲಿರುವ 10 ಸದಸ್ಯರಲ್ಲಿ ಬರೋಬ್ಬರಿ ಎಂಟು ಮಂದಿ ನಾಮಿನೇಟ್ ಆಗಿದ್ದಾರೆ. ಇವರಲ್ಲಿ ಯಾರು ಹೊರಗೆ ಹೋಗುತ್ತಾರೆಯೋ ಕಾದು ನೋಡಬೇಕಿದೆ.
ಫಿನಾಲೆ ವಾರ ಹತ್ತಿರವಾಗುತ್ತಾ ಬರುತ್ತಿದೆ. ಬಿಗ್ಬಾಸ್ ಮನೆಯಲ್ಲಿ ಉಳಿದುಕೊಳ್ಳಬೇಕೆಂಬ ಕಸರತ್ತು ಸಹ ಸ್ಪರ್ಧಿಗಳಿಂದ ಹೆಚ್ಚಾಗುತ್ತಿದೆ. ಎಲ್ಲ ಸ್ಪರ್ಧಿಗಳು ತಮ್ಮ ಪ್ರತಿಸ್ಪರ್ಧಿಗಳನ್ನು ಮನೆಯಿಂದ ಹೊರಗೆ ಹಾಕಬೇಕೆಂಬ ತವಕದಲ್ಲಿದ್ದಾರೆ. ಈ ವಾರ ಬಿಗ್ಬಾಸ್ ಮನೆಯಲ್ಲಿ ರೆಸಾರ್ಟ್ ಟಾಸ್ಕ್ ಮಾಡಿಸಲಾಗಿದ್ದು, ಎದುರಾಳಿಗಳನ್ನು ಕುಗ್ಗಿಸಲು, ಸಂಕಷ್ಟಕ್ಕೆ ದೂಡಲು ಎರಡೂ ತಂಡಗಳು ಶಕ್ತಿಮೀರಿ ದುಷ್ಟತನ ಪ್ರದರ್ಶಿಸಿವೆ. ನಿನ್ನೆಯ ಎಪಿಸೋಡ್ನಲ್ಲಿ ನಾಮಿನೇಷನ್ ಪ್ರಕ್ರಿಯೆ ನಡೆದಿದ್ದು, ಈ ವಾರ ಇರುವ ಹತ್ತು ಜನರಲ್ಲಿ ಎಂಟು ಮಂದಿ ನಾಮಿನೇಟ್ ಆಗಿದ್ದಾರೆ.
ಯಾವ ಸ್ಪರ್ಧಿ ಯಾರನ್ನು ನಾಮಿನೇಟ್ ಮಾಡುತ್ತಾರೋ ಅವರ ತಲೆ ಮೇಲೆ ಬಾಟಲಿ ಒಡೆಯುವಂತೆ ಬಿಗ್ಬಾಸ್ ಸೂಚಿಸಿದ್ದರು. ಈ ಬಾಟಲಿ ನಕಲಿ ಬಾಟಲಿ ಆಗಿತ್ತು. ಅಂತೆಯೇ ಪ್ರತಿಯೊಬ್ಬ ಸ್ಪರ್ಧಿಯು ತಾನು ನಾಮಿನೇಟ್ ಮಾಡಲು ಇಚ್ಛಿಸಿದ ಸ್ಪರ್ಧಿಯನ್ನು ಕರೆದು ಮುಂದೆ ಕೂರಿಸಿಕೊಂಡು ನಾಮಿನೇಟ್ ಮಾಡಲು ಕಾರಣ ನೀಡಿ ತಲೆ ಮೇಲೆ ಬಾಟಲಿ ಒಡೆದರು.
ಬಿಗ್ಬಾಸ್ ಮನೆಯಲ್ಲಿ ಇರುವ ಹತ್ತು ಜನರಲ್ಲಿ ಈ ವಾರ ಬರೋಬ್ಬರಿ ಎಂಟು ಮಂದಿ ನಾಮಿನೇಟ್ ಆಗಿದ್ದಾರೆ. ಇಬ್ಬರು ಮಾತ್ರವೇ ನಾಮಿನೇಷನ್ನಿಂದ ಉಳಿದುಕೊಂಡಿದ್ದಾರೆ. ಅದರಲ್ಲಿ ಒಬ್ಬರನ್ನು ನಾಮಿನೇಟ್ ಮಾಡುವಂತಿರಲಿಲ್ಲವಾದ್ದರಿಂದ ಅವರು ಉಳಿದುಕೊಂಡರೆ, ಯಾರಿಂದಲೂ ನಾಮಿನೇಟ್ ಆಗದೆ ಉಳಿದುಕೊಂಡವರು ಕೇವಲ ಒಬ್ಬರು ಮಾತ್ರವೇ.
ಇದನ್ನೂ ಓದಿ:ಎದುರಾಳಿಗಳ ಕಾಟಕ್ಕೆ ಬಿಗ್ಬಾಸ್ ಮುಂದೆ ಕಣ್ಣೀರು ಹಾಕಿದ ಭವ್ಯಾ
ತ್ರಿವಿಕ್ರಮ್, ಉಗ್ರಂ ಮಂಜು, ಗೌತಮಿ, ಧನರಾಜ್, ಹನುಮಂತು ಅವರುಗಳು ನಾಮಿನೇಟ್ ಆಗಿದ್ದಾರೆ. ಪ್ರತಿ ವಾರ ನಾಮಿನೇಟ್ ಆಗುವ ಮೋಕ್ಷಿತಾ ಮತ್ತು ಚೈತ್ರಾ ಕುಂದಾಪುರ ಈ ವಾರವೂ ನಾಮಿನೇಟ್ ಆಗಿದ್ದಾರೆ. ಇನ್ನು ಐಶ್ವರ್ಯಾ ಅವರು ಹಾಗೋ ಹೀಗೋ ನಾಮಿನೇಷನ್ನಿಂದ ಉಳಿದುಕೊಂಡಿದ್ದರು ಆದರೆ ಕ್ಯಾಪ್ಟನ್ ಭವ್ಯಾ ಗೌಡ, ಐಶ್ವರ್ಯಾ ಅವರನ್ನು ನೇರವಾಗಿ ನಾಮಿನೇಟ್ ಮಾಡಿರುವ ಕಾರಣ ಅವರು ಸಹ ಪಟ್ಟಿ ಸೇರಿಕೊಂಡಿದ್ದಾರೆ. ಇನ್ನು ಭವ್ಯಾ ಗೌಡ ಕ್ಯಾಪ್ಟನ್ ಆಗಿರುವ ಕಾರಣ ಅವರನ್ನು ನಾಮಿನೇಟ್ ಮಾಡುವಂತಿರಲಿಲ್ಲ. ಇನ್ನು ರಜತ್ ಅವರನ್ನು ಮನೆಯ ಯಾವ ಸದಸ್ಯರೂ ಸಹ ನಾಮಿನೇಟ್ ಮಾಡಲಿಲ್ಲ.
ಈ ಸೀಸನ್ನಲ್ಲಿ ಈವರೆಗೆ ಡಬಲ್ ಎಲಿಮಿನೇಷನ್ ಆಗಿಲ್ಲ, ಈ ವಾರ ಎಂಟು ಮಂದಿ ನಾಮಿನೇಟ್ ಆಗಿದ್ದು, ಈ ವಾರ ಡಬಲ್ ಎಲಿಮಿನೇಷನ್ ಆಗಬಹುದಾ ಎಂಬ ಅನುಮಾನವೂ ಇದೆ. ಈ ವಾರವೂ ಸಹ ಮನೆಯ ಸದಸ್ಯರು ಹಲವು ತಪ್ಪುಗಳನ್ನು ಮಾಡಿದ್ದು, ಈ ವಾರವೂ ಸಹ ಸುದೀಪ್ರಿಂದ ಬುದ್ಧಿಮಾತು ಕೇಳಲು ಅಣಿಯಾಗಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ