Bigg Boss: ಕಿರಿಕ್ ಶುರುವಾಗಿದ್ದು ಎಲ್ಲಿಂದ, ಎಲ್ಲದಕ್ಕೂ ಮೂಲ ಯಾವುದು?
Bigg Boss Kannada 12: ಕಳೆದ ವಾರದ ರೆಸಾರ್ಟ್ ಟಾಸ್ಕ್ ಕೇವಲ ಜಗಳ, ಗದ್ದಲ, ಅತಿಥಿಯಾಗಿ ಬಂದವರು ಹಿಂಸೆ ಕೊಡಲು ಬಳಸಿಕೊಂಡಂತೆ ಕಂಡಿತು. ಅತಿಥಿಗಳಾಗಿ ಕಳೆದ ಸೀಸನ್ನ ಸ್ಪರ್ಧಿಗಳಾದ ಉಗ್ರಂ ಮಂಜು, ಮೋಕ್ಷಿತಾ, ರಜತ್, ತ್ರಿವಿಕ್ರಮ್, ಚೈತ್ರಾ ಕುಂದಾಪುರ ಬಂದಿದ್ದರು. ಆದರೆ ಗಿಲ್ಲಿ ಹಾಗೂ ಅತಿಥಿಗಳ ನಡುವೆ ಭಾರಿ ಜಗಳಗಳೇ ನಡೆದಿವೆ. ಸುದೀಪ್ ಮುಂದೆ ಹಲವರು ಈ ಬಗ್ಗೆ ದೂರು ಹೇಳಿದರು. ಆದರೆ ಎಲ್ಲವೂ ಶುರುವಾಗಿದ್ದು ಎಲ್ಲಿಂದ?

ಬಿಗ್‌ಬಾಸ್ (Bigg Boss) ಮನೆಯಲ್ಲಿ ಈ ವಾರವೆಲ್ಲ ಅತಿಥಿಗಳ ಅಬ್ಬರ ಜೋರಾಗಿತ್ತು. ಈ ಹಿಂದಿನ ಕೆಲ ಸೀಸನ್ಗಳಲ್ಲಿ ವಿಶೇಷವಾಗಿ ಮಾಸ್ಟರ್ ಆನಂದ್, ಶ್ರುತಿ ಅವರಿದ್ದ ಸೀಸನ್ನಲ್ಲಿ ಈ ರೆಸಾರ್ಟ್ ಅಥವಾ ಹೋಟೆಲ್ ಟಾಸ್ಕ್ ಅನ್ನು ಅದ್ಭುತವಾಗಿ ನಿರ್ವಹಿಸಿದ್ದರು. ಆದರೆ ಕಳೆದ ಕೆಲ ಸೀಸನ್ಗಳಲ್ಲಿ ಈ ರೆಸಾರ್ಟ್ ಟಾಸ್ಕ್ ಕೇವಲ ಜಗಳ, ಗದ್ದಲ, ಅತಿಥಿಯಾಗಿ ಬಂದವರು ಹಿಂಸೆ ಕೊಡಲು ಬಳಸಿಕೊಳ್ಳುತ್ತಿದ್ದಾರೆ. ಈ ಸೀಸನ್ನಲ್ಲಿಯೂ ಅದೇ ನಡೆದಿದೆ. ಅತಿಥಿಗಳಾಗಿ ಕಳೆದ ಸೀಸನ್ನ ಸ್ಪರ್ಧಿಗಳಾದ ಉಗ್ರಂ ಮಂಜು, ಮೋಕ್ಷಿತಾ, ರಜತ್, ತ್ರಿವಿಕ್ರಮ್, ಚೈತ್ರಾ ಕುಂದಾಪುರ ಬಂದಿದ್ದರು. ಆದರೆ ಗಿಲ್ಲಿ ಹಾಗೂ ಅತಿಥಿಗಳ ನಡುವೆ ಭಾರಿ ಜಗಳಗಳೇ ನಡೆದಿವೆ.
ಶನಿವಾರದ ಎಪಿಸೋಡ್ನಲ್ಲಿ ಈ ವಾರ ಮನೆಯಲ್ಲಿ ನಡೆದ ಜಗಳಗಳೇ ಮುಖ್ಯವಾಗಿ ಚರ್ಚೆಯ ವಿಷಯವಾಗಿದ್ದವು. ಮೊದಲಿಗೆ ಸುದೀಪ್ ಎಲ್ಲರ ಅಭಿಪ್ರಾಯಗಳನ್ನು ಕೇಳುತ್ತಾ ಬಂದರು. ಮನೆಯಲ್ಲಿ ಬಹುತೇಕ ಎಲ್ಲರೂ ಬೆರಳು ತೋರಿಸಿದ್ದು ಗಿಲ್ಲಿಯ ಮೇಲೆ. ಅತಿಥಿಗಳಾಗಿ ಬಂದಿದ್ದ ರಜತ್ ಮತ್ತು ಉಗ್ರಂ ಮಂಜು ಅಂತೂ ಗಿಲ್ಲಿ ವಿರುದ್ಧ ದೂರಿನ ಬಾಣಗಳನ್ನು ಎಸೆದರು. ಮನೆಯ ಕ್ಯಾಪ್ಟನ್ ಅಭಿ, ರಘು, ಸ್ಪಂದನಾ ಅವರುಗಳು ಸಹ ಗಿಲ್ಲಿ ವಿರುದ್ಧ ದೂರುಗಳನ್ನು ಹೇಳಿದರು.
ಗಿಲ್ಲಿ ಸಹ ತಮ್ಮಿಂದ ಕೆಲ ತಪ್ಪುಗಳು ಆದವು ಎಂದರು. ಆದರೆ ಅತಿಥಿಗಳು ಸಹ ಉದ್ದೇಶಪೂರ್ವಕವಾಗಿ ತಮ್ಮೊಂದಿಗೆ ಹಾಗೆ ನಡೆದುಕೊಂಡರು. ನನ್ನನ್ನು ಮಾತನಾಡುವಂತೆ ಮಾಡಿದರು ಎಂದರು. ಕಾವ್ಯಾ ಸಹ, ಬಂದ ಅತಿಥಿಗಳಿಗೆ ಗಿಲ್ಲಿಯನ್ನು ಕಂಟ್ರೋಲ್ ಮಾಡುವ ಉದ್ದೇಶ ಇದ್ದಂತೆ ಇತ್ತು. ಹಲವು ಬಾರಿ ಗಿಲ್ಲಿಯನ್ನು ಕೆದಕಿ ಕೆದಕಿ ರೇಗಿಸುತ್ತಿದ್ದನ್ನು ನೋಡಿದ್ದೆ ಎಂದರು.
ಇದನ್ನೂ ಓದಿ:ಎಲ್ಲಾ ಸ್ಪರ್ಧಿಗಳು ಹೊರಕ್ಕೆ: ಖಾಲಿ ಖಾಲಿಯಾಗಿರುವ ಬಿಗ್‌ಬಾಸ್ ಮನೆ ಹೇಗಿದೆ ನೋಡಿ
ಆದರೆ ಇದೆಲ್ಲ ಪ್ರಾರಂಭವಾಗಿದ್ದು ಎಲ್ಲಿ ಎಂಬ ಪ್ರಶ್ನೆ ಬಂದಾಗ ಮತ್ತೆ ಅದು ಬಂದು ನಿಂತಿದ್ದು ಗಿಲ್ಲಿಯ ಬಳಿಗೆ. ಸ್ಪರ್ಧಿಗಳು ಮನೆಗೆ ಬಂದ ಬಳಿಕ ಹಾಲ್ನಲ್ಲಿ ಮಂಜು ಅವರ ಮದುವೆ ಕುರಿತಾಗಿ ಬಿಗ್‌ಬಾಸ್ ಶುಭಾಶಯ ಕೋರಿದರು. ಆ ವೇಳೆಯಲ್ಲಿ ಗಿಲ್ಲಿ, ಎಷ್ಟನೇ ಮದುವೆ ಎರಡನೇಯದ್ದಾ, ಮೂರನೇಯ್ದ? ಎಂದು ಕೇಳಿದರು. ಅಲ್ಲಿಂದ ಎಲ್ಲವೂ ಶುರುವಾಯ್ತು ಎಂಬ ನಿಷ್ಕರ್ಷೆಗೆ ಸುದೀಪ್ ಸೇರಿ ಎಲ್ಲರೂ ಬಂದರು. ಗಿಲ್ಲಿ ಸಹ ಅದನ್ನು ಒಪ್ಪಿಕೊಂಡರು. ಅಲ್ಲಿ ಶುರುವಾಯ್ತು, ಅದನ್ನು ಸರಿ ಮಾಡಲು ಇನ್ನೊಂದು ಕಾಮಿಡಿ ಮಾಡೋಣ ಎಂದು ಹೋಗಿ ಅದು ಮತ್ತೆ ಕೆಟ್ಟಿತು, ಎರಡನೇ ಜಗಳ ಇನ್ನೂ ಜೋರಾಯ್ತು ಎಂದರು.
ಸುದೀಪ್ ಅವರು ಗಿಲ್ಲಿಯ ವಿಡಿಯೋ ಸಹ ಪ್ಲೇ ಮಾಡಿದರು. ವಿಡಿಯೋನಲ್ಲಿ ಗಿಲ್ಲಿ, ಅತಿಥಿಗಳಿಗೆ ಸಾಕಷ್ಟು ಟಾಂಗ್ ಕೊಟ್ಟಿದ್ದರು. ಸಾಕಷ್ಟು ಎದುರು ಮಾತನಾಡಿದ್ದರು. ಟಾಸ್ಕ್ನ ನಿಯಮಗಳ ಪ್ರಕಾರ ಗಿಲ್ಲಿ, ಅತಿಥಿಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕಿತ್ತು. ಆದರೆ ಗಿಲ್ಲಿ ಅದನ್ನು ಮೀರಿದ್ದರು. ಮಾತ್ರವಲ್ಲದೆ ಅತಿಥಿಗಳು ಗಿಲ್ಲಿ ಬಳಿ ಪ್ರತ್ಯೇಕವಾಗಿ ‘ನೀನು ಚೆನ್ನಾಗಿ ಆಡುತ್ತಿದ್ದೀಯ, ಇದನ್ನೇ ಮುಂದುವರೆಸು’ ಎಂದೆಲ್ಲ ಹಿತವಚನ ಹೇಳಿದ್ದರು. ಆದರೆ ಗಿಲ್ಲಿ, ಟಾಂಗ್ ಕೊಡುತ್ತಿದ್ದ, ಕ್ಷಮೆ ಕೇಳುತ್ತಿದ್ದ ಮತ್ತೆ ಟಾಂಗ್ ಕೊಡುತ್ತಿದ್ದ. ಅಂತಿಮವಾಗಿ ಸುದೀಪ್, ಗಿಲ್ಲಿಗೆ ಸೂಕ್ತವಾಗಿ ಬುದ್ಧಿವಾದ ಹೇಳಿದರು. ನಾಲಗೆಯಿಂದಲೇ ಇಲ್ಲಿಯವರೆಗೂ ಬಂದಿದ್ದೀಯ. ನಿನಗಾಗಿ ಒಂದು ಹೆಸರು ಗಳಿಸಿದ್ದೀಯ, ಅದರಿಂದಲೇ ಹಾಳಾಗಬೇಡ’ ಎಂದರು. ಗಿಲ್ಲಿ ಸಹ ಸರಿಯೆಂದು ಒಪ್ಪಿಕೊಂಡಿದ್ದಾನೆ. ಮುಂದೇನಾಗುತ್ತದೆ ಕಾದು ನೋಡಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




