ಬಿಗ್ ಬಾಸ್ ಮನೆಯಲ್ಲಿ ನಡೆದಿದ್ದನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಜಗದೀಶ್

ಅವಾಚ್ಯ ಪದಗಳನ್ನು ಬಳಸಿದ್ದಕ್ಕಾಗಿ ಬಿಗ್ ಬಾಸ್​ ಮನೆಯಿಂದ ಹೊರಬಿದ್ದ ಜಗದೀಶ್ ಅವರು ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಹಲವು ಪ್ರಶ್ನೆಗಳಿಗೆ ಅವರು ಉತ್ತರ ನೀಡಿದ್ದಾರೆ. ಜಗದೀಶ್ ಮತ್ತೆ ಬಿಗ್ ಬಾಸ್​ ಕಾರ್ಯಕ್ರಮಕ್ಕೆ ಬರಬೇಕು ಎಂಬುದು ಅವರ ಅಭಿಮಾನಿಗಳ ಆಸೆ. ಆ ಆಸೆ ಈಡೇರುತ್ತಾ ಅಥವಾ ಇಲ್ಲವಾ ಎಂಬುದನ್ನು ಕಾದು ನೋಡಬೇಕು.

ಬಿಗ್ ಬಾಸ್ ಮನೆಯಲ್ಲಿ ನಡೆದಿದ್ದನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಜಗದೀಶ್
ಜಗದೀಶ್
Edited By:

Updated on: Oct 20, 2024 | 5:15 PM

ಭಾರಿ ಸೆನ್ಸೇಷನ್ ಸೃಷ್ಟಿ ಮಾಡಿರುವ ಜಗದೀಶ್ ಅವರು ಬಿಗ್ ಬಾಸ್​ ಮನೆಯಿಂದ ಹೊರಬಂದ ಬಳಿಕ ಮೊದಲ ಸಂದರ್ಶನ ನೀಡಿದ್ದಾರೆ. ತಮ್ಮ ಬಿಗ್ ಬಾಸ್​ ಜರ್ನಿಯನ್ನು ಅವರು ಮೆಲುಕು ಹಾಕಿದ್ದಾರೆ. ‘ಬಿಗ್ ಬಾಸ್ ಎಂಬುದು ನಮ್ಮ ರಿಯಲ್ ವ್ಯಕ್ತಿತ್ವವನ್ನು ತೋರಿಸುವಂತಹ ಒಂದು ಕನ್ನಡಿ ಇದ್ದ ಹಾಗೆ. ಯಾರಿಗಾದರೂ ಸುಳ್ಳು ಪತ್ತೆ ಪರೀಕ್ಷೆ ಮಾಡಬೇಕು ಎಂದರೆ ಅದಕ್ಕೆ ಬಿಗ್ ಬಾಸ್​ ಒಂದು ಹೊಸ ತಂತ್ರಜ್ಞಾನ. ಯಾರಿಗಾದರೂ ನಿಜ ಬಾಯಿ ಬಿಡಿಸಬೇಕು ಎಂದರೆ ಒಳಗಡೆ ನಾಲ್ಕು ದಿನ ಕಳಿಸಬೇಕು. 5ನೇ ದಿನ ಅವರ ನಿಜವಾದ ಬಣ್ಣ, ನಿಜವಾದ ಮಾತು, ಅವರ ಮನಸ್ಸಿನಲ್ಲಿ ಏನಿದೆ ಎಂಬುದು ಬಿಡಿಬಿಡಿಯಾಗಿ ಜನರಿಗೆ ಗೊತ್ತಾಗುತ್ತದೆ’ ಎಂದಿದ್ದಾರೆ ಜಗದೀಶ್.

‘ನಾನು ಬಿಗ್ ಬಾಸ್​ನಲ್ಲಿ ಸಖತ್ ಎಂಜಾಯ್ ಮಾಡಿದ್ದೇನೆ. ಇದು ನನಗೆ ಹೊಸ ಪ್ರಯೋಗ, ಹೊಸ ಕ್ಷೇತ್ರ. ಇಲ್ಲಿ ನಾನು ಎ, ಬಿ, ಸಿ, ಡಿ ಕಲಿಯುತ್ತಿರುವ ವಿದ್ಯಾರ್ಥಿ. ಅಲ್ಲಿ ಇರುವ ಎಲ್ಲರೂ ಪಿಹೆಚ್​ಡಿ ಪಡೆದವರು. ಸಿನಿಮಾ, ಧಾರಾವಾಹಿಯಿಂದ ಬಂದವರು. ಅಂಥವರ ಮುಂದೆ ನಾನು ಏನು ಪ್ರಯತ್ನ ಮಾಡಿದೆನೋ ಗೊತ್ತಿಲ್ಲ. ನಾನು ತಯಾರಿ ಮಾಡಿಕೊಂಡು ಅಲ್ಲಿಗೆ ಹೋಗಿರಲಿಲ್ಲ. ಮಾಂಜಾ ಕೊಡಬೇಕು ಅಂತ ಹೋಗಿದ್ದೆ. ಮಾಂಜಾ ಕೊಟ್ಟೆ’ ಎಂದು ಜಗದೀಶ್ ಹೇಳಿದ್ದಾರೆ.

‘ಬಿಗ್ ಬಾಸ್​ ಕಾರ್ಯಕ್ರಮವನ್ನು ಕೋಟ್ಯಂತರ ಜನರು ನೋಡುತ್ತಾರೆ. ಅವರು ಯಾಕೆ ನಮ್ಮನ್ನು ನೋಡಬೇಕು ​ಎಂಬುದನ್ನು ನಾವೇ ಪ್ರಶ್ನೆ ಮಾಡಿಕೊಂಡಾಗ ನಾವು ಏನು ಮಾಡಬೇಕು ಎಂಬುದು ಗೊತ್ತಾಗುತ್ತದೆ. ಅಲ್ಲಿ ಪೈಪೋಟಿ ಅಲ್ಲ, ಒಬ್ಬರಿಗೊಬ್ಬರು ಹೊಡೆದಾಡುವುದೂ ಅಲ್ಲ. ಅಲ್ಲಿ ಪರ್ಫಾರ್ಮೆನ್ಸ್ ಬೇಕಾಗಿದೆ. ಅಲ್ಲಿ ಸೋಲು-ಗೆಲುವು ಮುಖ್ಯ ಅಲ್ಲ. ನಿಮಗೆ ಕೊಡುವ ಟಾಸ್ಕ್​ಗಳನ್ನು ವಿಭಿನ್ನವಾಗಿ ಮಾಡುವುದು ಮುಖ್ಯ. ನಮ್ಮನ್ನು ನಾವು ಬದ್ಧತೆ ಮತ್ತು ಸ್ಪಷ್ಟನೆಯಿಂದ ಪ್ರದರ್ಶನ ಮಾಡಲು ಬಿಗ್ ಬಾಸ್​ ಇದೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಬಿಗ್​ಬಾಸ್​ನಿಂದ ಹೊರಬಂದು ಕೆಲವರಿಗೆ ಕ್ಷಮೆ ಕೇಳಿದ ಜಗದೀಶ್

‘ಮನೆಯೊಳಗೆ ಇಷ್ಟು ದಿನ ಇರುತ್ತೇನೆ ಎಂಬುದನ್ನು ಲೆಕ್ಕಾಚಾರ ಹಾಕಿ ನಾನು ಅಲ್ಲಿಗೆ ಹೋಗಿರಲಿಲ್ಲ. ನಮ್ಮ ಲೆಕ್ಕಾಚಾರ ಏನು ಎಂಬುದನ್ನು ಜನರು ನೋಡಿದ್ದಾರೆ. ನನ್ನನ್ನು ಜನರು ಇಷ್ಟಪಟ್ಟಿದ್ದಾರೆ. ನಟನೆ ಎಂಬುದಕ್ಕೆ ನಾನು ಹೊಸಬ. ನನ್ನಂಥವನು ಫಿಲ್ಮ್ ಇಂಡಸ್ಟ್ರಿಯವರಿಗೆ ಟಕ್ಕರ್ ಕೊಟ್ಟಾಗ ಸಹಜವಾಗಿಯೇ ಅವರಿಗೆ ಹರ್ಟ್​ ಆಗಿರುತ್ತದೆ. ಆ ಮನೆಯಲ್ಲಿ 16 ಜನರ ಒಂದು ಗುಂಪು ಆಗಿತ್ತು. ನಾನು ಒಬ್ಬನೇ ಆಗಿದ್ದೆ. ನನಗೆ ಏನೂ ಬೇಜಾರು ಇಲ್ಲ. ಒಂಟಿಯಾಗಿ ಎದುರಿಸಲು ನಾನು ಸಿದ್ಧನಾಗಿದ್ದೆ. ಅವರ ಮೇಲೆ ಅಟ್ಯಾಕ್ ಮಾಡಲು ನಾನು ಮಾನಸಿಕವಾಗಿ ಸಿದ್ಧನಾಗಿದ್ದೆ. ಬಿಗ್ ಬಾಸ್​ನ ಉಡೀಸ್ ಮಾಡ್ತೀನಿ ಅಂತ ನಾನು ಹೇಳಿದ್ದು ಆಟದ ಒಂದು ಭಾಗ’ ಎಂದಿದ್ದಾರೆ ಜಗದೀಶ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.