ನಿಮ್ಮ ವಿಡಿಯೋ ಬಹಳ ಕೆಟ್ಟದಾಗಿದೆ: ಚೈತ್ರಾ ಮುಖಕ್ಕೆ ಹೊಡೆದಂತೆ ಮಾತಾಡಿದ ಸುದೀಪ್
ಜಗದೀಶ್ ಅವರನ್ನು ವಿಲನ್ ರೀತಿ ಬಿಂಬಿಸಿ ಇನ್ನುಳಿದವರು ಹೀರೋಗಳಾಗಲು ಪ್ರಯತ್ನಿಸಿದ್ದಾರೆ. ಅಂಥವರ ಬಗ್ಗೆ ಕಿಚ್ಚ ಸುದೀಪ್ ಅವರು ಖಡಕ್ ಆಗಿ ಮಾತನಾಡಿದ್ದಾರೆ. ಭಾನುವಾರದ (ಅಕ್ಟೋಬರ್ 20) ‘ಬಿಗ್ ಬಾಸ್ ಕನ್ನಡ’ ಸಂಚಿಕೆಯನ್ನು ಅವರು ತುಂಬ ಗರಂ ಆಗಿ ನಡೆಸಿಕೊಟ್ಟರು. ಚೈತ್ರಾ ಕುಂದಾಪುರ ಮಾಡಿದ ತಪ್ಪನ್ನು ಸುದೀಪ್ ತೀವ್ರವಾಗಿ ಖಂಡಿಸಿದ್ದಾರೆ.
ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತನಾಡಿದರು ಎಂಬ ಕಾರಣಕ್ಕೆ ಜಗದೀಶ್ ಅವರನ್ನು ಬಿಗ್ ಬಾಸ್ ಮನೆಯಿಂದ ಹೊರಗೆ ಕಳಿಸಲಾಯಿತು. ಜಗದೀಶ್ ಅವರನ್ನು ತಳ್ಳಿದರು ಎಂಬ ಕಾರಣದಿಂದ ರಂಜಿತ್ ಅವರನ್ನು ಕೂಡ ಬಿಗ್ ಬಾಸ್ ಮನೆಯಿಂದ ಹೊರಗೆ ಹಾಕಲಾಗಿದೆ. ಹಾಗಾದ್ರೆ ಈಗ ‘ಬಿಗ್ ಬಾಸ್ ಕನ್ನಡ ಸೀಸನ್ 11’ ಶೋನಲ್ಲಿ ಮನೆ ಒಳಗೆ ಇರುವವರು ಸರಿಯಾಗಿ ಇದ್ದಾರಾ? ಈ ಪ್ರಶ್ನೆಯನ್ನು ಕಿಚ್ಚ ಸುದೀಪ್ ಅವರು ಕೇಳಿದ್ದಾರೆ. ಚೈತ್ರಾ ಕುಂದಾಪುರ ಅವರು ಜಗದೀಶ್ ಬಗ್ಗೆ ಆಡಿದ ಅವಾಚ್ಯ ಪದಗಳನ್ನು ಸುದೀಪ್ ಟೀಕಿಸಿದ್ದಾರೆ.
‘ನೀನು ಒಬ್ಬ ಅಪ್ಪನಿಗೆ ಹೊಟ್ಟಿದ್ರೆ..’ ಎಂದು ಚೈತ್ರಾ ಕುಂದಾಪುರ ಅವರು ಹೇಳಿದ್ದರು. ಆ ವಿಚಾರವನ್ನು ಸುದೀಪ್ ಅವರು ಭಾನುವಾರದ ಸಂಚಿಕೆಯಲ್ಲಿ ಪ್ರಶ್ನಿಸಿದರು. ಈ ಬಗ್ಗೆ ಕೇಳುವಾಗ ಚೈತ್ರಾ ಅವರು ತಮ್ಮ ಈ ಹಿಂದಿನ ಮಾತನ್ನು ಮರೆತಂತೆ ನಟಿಸಿದರು. ತಾವು ಅಂಥ ಮಾತನ್ನು ಹೇಳಿಯೇ ಇಲ್ಲವೇನೋ ಎಂಬಂತೆ ಸೈಲೆಂಟ್ ಆದರು. ಆಗ ಸುದೀಪ್ ಅವರು ತಮ್ಮದೇ ಶೈಲಿಯಲ್ಲಿ ಕ್ಲಾಸ್ ತೆಗೆದುಕೊಂಡರು.
‘ನೀವು ಜಗದೀಶ್ಗೆ ಏನೆಂದು ಹೇಳಿದ್ರಿ? ನಿಮಗೆ ನೆನಪಿದೆಯಾ? ಈಗ ಹೇಳಿ ಅದನ್ನು. ಬೇಕು ಅಂದ್ರೆ ವಿಡಿಯೋ ಹಾಕ್ತೀನಿ. ನಿಮ್ಮ ವಿಡಿಯೋ ತುಂಬ ಕೆಟ್ಟದಾಗಿದೆ. ಜಗದೀಶ್ ಹೇಳಿದ್ರೆ ಫ್ಲೋ ಅಲ್ಲ. ನೀವು ಹೇಳಿದ್ರೆ ಮಾತ್ರ ಫ್ಲೋನಾ?’ ಎಂದು ಕಿಚ್ಚ ಸುದೀಪ್ ಪ್ರಶ್ನಿಸಿದರು. ಅಷ್ಟೇ ಅಲ್ಲದೇ ಬಿಗ್ ಬಾಸ್ ಮನೆಯ ಇನ್ನುಳಿದ ಮಹಿಳಾ ಸದಸ್ಯರಿಗೂ ಸುದೀಪ್ ಕೆಲವು ಪ್ರಶ್ನೆಗಳನ್ನು ಹೇಳಿದರು.
ಇದನ್ನೂ ಓದಿ: ಅವಾಚ್ಯ ಪದ ಬಳಕೆ: ಸುದೀಪ್ ಕೋಪಕ್ಕೆ ಗುರಿಯಾದ ಚೈತ್ರಾ ಕುಂದಾಪುರ
‘ಚೈತ್ರಾ ಹೇಳಿದ ಮಾತು ನಿಮಗೆ ಸರಿ ಎನಿಸುತ್ತಾ ಗೌತಮಿ ಅವರೇ? ತಲೆ ಎತ್ತಿ ಮಾತನಾಡಿ ಭವ್ಯಾ? ವಾಯ್ಸ್ ಬರಲಿ. ಅದೇ ಗಂಡ್ಮಕ್ಕಳಲ್ಲಿ ಯಾರಾದರೂ ಒಬ್ಬರು ಬಂದು ಚೈತ್ರಾ ಹೇಳಿದ ಮಾತು ಹೇಳಿದ್ರೆ ನೀವು ಸುಮ್ಮನೆ ಇರುತ್ತಿದ್ರಾ?’ ಎಂದು ಎಲ್ಲ ಹೆಣ್ಣು ಮಕ್ಕಳಿಗೆ ಸುದೀಪ್ ಪ್ರಶ್ನಿಸಿದರು. ಉತ್ತರ ಕೊಡಲು ಸಾಧ್ಯವಾಗದೇ ಎಲ್ಲ ಮಹಿಳಾ ಸ್ಪರ್ಧಿಗಳು ಮೌನಕ್ಕೆ ಶರಣಾದರು.
ಇಷ್ಟೆಲ್ಲ ಮಾತುಕಥೆ ನಡುವೆ ಚೈತ್ರಾ ಕುಂದಾಪುರ ಅವರು ಸಮರ್ಥನೆ ಮಾಡಿಕೊಳ್ಳಲು ಪ್ರಯತ್ನಿಸಿದರು. ‘ನಿಮ್ಮ ಉತ್ತರ ಚೆನ್ನಾಗಿದ್ದರೆ ಮಾತ್ರ ಮಾತನಾಡಿ. ಇಲ್ಲ ಅಂದ್ರೆ ಸುಮ್ಮಿನಿರಿ. ಇಲ್ಲದಿದ್ರೆ ಇನ್ನೂ ಕೆಳಗೆ ಹೋಗುತ್ತೀರಿ’ ಎಂದು ಸುದೀಪ್ ಅವರು ಖಡಕ್ ಆಗಿ ಹೇಳಿದರು. ಒಟ್ಟಾರೆ ಭಾನುವಾರದ ಸಂಚಿಕೆಯಲ್ಲಿ ಅವರು ಎಲ್ಲರ ತಪ್ಪನ್ನು ತಿಳಿಸಿ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.