ಬಿಗ್ಬಾಸ್ (BiggBoss) ಮನೆಯಲ್ಲಿ ರಾಕ್ಷಸರು ಅಟ್ಟಹಾಸ ಮೆರೆದಿದ್ದಾರೆ, ಅಟ್ಟಹಾಸ ಸಹಿಸಿಕೊಳ್ಳುತ್ತಿರುವ ಗಂಧರ್ವರು ರಾಕ್ಷಸರಾಗುವ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಮಂಗಳವಾರದ ಎಪಿಸೋಡ್ನಲ್ಲಿ ಆಗಿದ್ದಿಷ್ಟು, ಬಿಗ್ಬಾಸ್ ಮನೆಯಲ್ಲಿ ಋಣಾತ್ಮಕ ವ್ಯಕ್ತಿತ್ವದರ್ಯಾರು, ಸಕಾರಾತ್ಮಕ ವ್ಯಕ್ತಿತ್ವದವರ್ಯಾರು ಆಯ್ಕೆ ಮಾಡಲು ಬಿಗ್ಬಾಸ್ ಹೇಳಿದರು. ನೆಗೆಟಿವ್ ವ್ಯಕ್ತಿಗಳಿಗೆ ಕಪ್ಪು ಹೂವು, ಧನಾತ್ಮಕ ವ್ಯಕ್ತಿಗೆ ಬಿಳಿ ಹೂವು ಕೊಡುವಂತೆ ಹೇಳಲಾಗಿತ್ತು.
ಅಂತೆಯೇ ಮನೆಯ ಸದಸ್ಯರೆಲ್ಲರೂ ತಮಗೆ ಯಾರು ನೆಗೆಟಿವ್ ವ್ಯಕ್ತಿ ಎನ್ನಿಸುತ್ತಾರೋ ಅವರಿಗೆ ಕಪ್ಪು ಗುಲಾಬಿಯನ್ನು, ಪಾಸಿಟಿವ್ ಎನ್ನಿಸಿದ ವ್ಯಕ್ತಿಗೆ ಬಿಳಿ ಹೂವನ್ನೂ ನೀಡಿದರು. ಸಂಗೀತಾ ಹೆಚ್ಚು ಕಪ್ಪು ಹೂವು ಪಡೆದರೆ, ವರ್ತೂರು ಸಂತೋಷ್ಗೆ ಹೆಚ್ಚು ಬಿಳಿ ಗುಲಾಬಿ ಬಂದವು. ಅಂತೆಯೇ ಬಿಗ್ಬಾಸ್ ಈ ವಾರದ ಟಾಸ್ಕ್ಗಳಿಗೆ ಸಂಗೀತಾರನ್ನು ಒಂದು ತಂಡದ ಲೀಡರ್ ಮಾಡಿದರೆ, ವರ್ತೂರು ಅವರನ್ನು ಇನ್ನೊಂದು ತಂಡದ ಲೀಡರ್ ಮಾಡಿದರು.
ನೆಗೆಟಿವ್ ಪಡೆದ ಸಂಗೀತಾ ತಂಡಕ್ಕೆ ರಾಕ್ಷಸರಂತೆ ವರ್ತಿಸುವಂತೆಯೂ, ಪಾಸಿಟಿವ್ ಪಡೆದ ವರ್ತೂರು ತಂಡಕ್ಕೆ ಗಂಧರ್ವರಂತೆ ವರ್ತಿಸಲು ಹೇಳಿದರು. ಸಂಗೀತಾ ತಂಡದಲ್ಲಿ ಕಾರ್ತಿಕ್, ಡ್ರೋನ್, ತನಿಷಾ, ಸಿರಿ, ಅವಿ ಅವರು, ವರ್ತೂರು ತಂಡದಲ್ಲಿ ವಿನಯ್, ಮೈಖಲ್, ನಮ್ರತಾ, ಪವಿ, ತುಕಾಲಿ ಅವರನ್ನು ಸೇರಿಸಲಾಯ್ತು. ತಂಡವನ್ನು ಆಯ್ಕೆ ಮಾಡಿದ್ದು ಮನೆಯ ಕ್ಯಾಪ್ಟನ್ ಸ್ನೇಹಿತ್.
ಇದನ್ನೂ ಓದಿ:ಬಿಗ್ಬಾಸ್: ಮತ್ತೆ ಪಾರ್ಟಿ ಬದಲಿಸಿದ ಸಂಗೀತಾ, ವಿನಯ್ ಜೊತೆ ಮತ್ತೆ ವೈರತ್ವ ಶುರು
ಟಾಸ್ಕ್ ಆರಂಭವಾದಾಗ ಸಂಗೀತಾ ಮತ್ತು ತಂಡ ಥೇಟ್ ರಾಕ್ಷಕಸರಂತೆ ವರ್ತಿಸಿದರು. ಅದರಲ್ಲಿಯೂ ಸಂಗೀತಾ ಅಂತೂ ತಮ್ಮ ಖಾಸಗಿ ದ್ವೇಷವನ್ನು ತೀರಿಸಿಕೊಳ್ಳುವಂತೆ ವರ್ತಿಸಿದರು. ವಿನಯ್ ಅನ್ನು ತಮ್ಮ ಹಿಂದೆ ನೆಗೆಯುತ್ತಾ ಬರುವಂತೆ ಮಾಡಿದರು. ನಮ್ರತಾ ಕೈಯಲ್ಲೂ ಕೆಲಸ ಮಾಡಿಸಿಕೊಂಡರು. ಕಾರ್ತಿಕ್ ಸಹ ಟಾಸ್ಕ್ನ ನಿಯಮದಂತೆ ಒಂದು ನಿಮಿಷವೂ ರಾಕ್ಷಸನ ಪಾತ್ರದಿಂದ ಹೊರಬರದೆ ಆಡಿದರು. ಆದರೆ ಅವರ ಆಟ ವೈಯಕ್ತಿಕ ದ್ವೇಷ ತೀರಿಸಿಕೊಳ್ಳುವಂತಿರಲಿಲ್ಲ.
ಡ್ರೋನ್ ಪ್ರತಾಪ್, ಸಿರಿ ಅವರುಗಳು ರಾಕ್ಷಸರಂತೆ ವರ್ತಿಸಲು ಬಹಳ ಕಷ್ಟಪಟ್ಟರು. ತನಿಷಾ ಸಹ ಅತ್ತ ರಾಕ್ಷಸಿಯಂತೆಯೂ ವರ್ತಿಸಲಾಗದೆ, ಇತ್ತ ಒಳ್ಳೆಯವರಾಗೂ ಇರಲಾರದೆ ಹೇಗೋ ಟಾಸ್ಕ್ ಮುಗಿಸಿದರು. ಆದರೆ ಟಾಸ್ಕ್ ಮುಗಿದ ಮೇಲೆ ಗಂಧರ್ವರು, ತಾವು ಅನುಭವಿಸಿದ್ದಕ್ಕೆ ತಕ್ಕ ರಿವೇಂಜ್ ತೀರಿಸಿಕೊಳ್ಳುವುದಾಗಿ ಮಾತನಾಡಿಕೊಂಡರು. ಅಲ್ಲಿಗೆ ಅವರೂ ಸಹ ರಾಕ್ಷಸರಾಗಲು ಅವಕಾಶಕ್ಕಾಗಿ ಕಾಯುತ್ತಿರುವುದು ಸ್ಪಷ್ಟ. ಈ ವಾರವೆಲ್ಲ ಇದೇ ಮಾದರಿಯಲ್ಲಿ ಟಾಸ್ಕ್ಗಳು ನಡೆಯಲಿವೆ. ರಾಕ್ಷಸರ ವೇಷದಲ್ಲಿ ಕೆಲವು ಗಂಧರ್ವರಿದ್ದಾರೆ, ಗಂಧರ್ವರ ವೇಷದಲ್ಲಿ ಕೆಲವು ರಾಕ್ಷಸರಿದ್ದಾರೆ. ಈ ವಾರದ ಟಾಸ್ಕ್ ಮನೆಯಲ್ಲಿ ಸದಸ್ಯರ ನಡುವೆ ಇರುವ ಬಿರುಕನ್ನು ಇನ್ನಷ್ಟು ದೊಡ್ಡದು ಮಾಡುವುದರಲ್ಲಿ ಸಂದೇಹವೇ ಇಲ್ಲ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ