Dinesh Phadnis: ‘ಸಿಐಡಿ’ ಧಾರಾವಾಹಿ ನಟ ದಿನೇಶ್ ಫಡ್ನಿಸ್ ಇನ್ನಿಲ್ಲ; ಲಿವರ್ ಸಮಸ್ಯೆಯಿಂದ ನಿಧನ
Fredericks: ಹಿಂದಿ ಕಿರುತೆರೆಯ ಖ್ಯಾತ ನಟ ದಿನೇಶ್ ಫಡ್ನಿಸ್ ಅವರು ನಿಧನರಾಗಿದ್ದಾರೆ. ಈ ಕಹಿ ಸುದ್ದಿ ಕೇಳಿ ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದಾರೆ. ‘ಸಿಐಡಿ’ ಸೀರಿಯಲ್ ಮೂಲಕ ದಿನೇಶ್ ಅವರು ಫೇಮಸ್ ಆಗಿದ್ದರು. ತೀವ್ರ ಅನಾರೋಗ್ಯದಿಂದ ಅವರು ಕೊನೆಯುಸಿರು ಎಳೆದಿದ್ದಾರೆ. ಪತ್ನಿ ನಯನಾ ಮತ್ತು ಪುತ್ರಿ ತನು ಅವರನ್ನು ದಿನೇಶ್ ಅಗಲಿದ್ದಾರೆ.
ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾಗಿದ್ದ ‘ಸಿಐಡಿ’ಯಲ್ಲಿ ಫ್ರೆಡ್ರಿಕ್ಸ್ (Fredericks) ಎಂಬ ಪಾತ್ರ ಮಾಡುತ್ತಿದ್ದ ನಟ ದಿನೇಶ್ ಫಡ್ನಿಸ್ ನಿಧನರಾಗಿದ್ದಾರೆ. ಲಿವರ್ ಸಮಸ್ಯೆಯಿಂದ (Liver Damage) ಅವರು ಬಳಲುತ್ತಿದ್ದರು. ಕೆಲವೇ ದಿನಗಳ ಹಿಂದೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿ ಆಗದೇ ಅವರು ಮೃತರಾಗಿದ್ದಾರೆ. ಡಿಸೆಂಬರ್ 2ರಿಂದ ಅವರನ್ನು ವೆಂಟಿಲೇಟರ್ನಲ್ಲಿ ಇರಿಸಲಾಗಿತ್ತು. ಸೋಮವಾರ (ಡಿಸೆಂಬರ್ 4) ರಾತ್ರಿ ಅವರು ನಿಧನರಾದರು ಎಂದು ತಿಳಿದುಬಂದಿದೆ. ಇಂದು (ಡಿ.5) ದಿನೇಶ್ ಫಡ್ನಿಸ್ (Dinesh Phadnis) ಅವರ ಅಂತ್ಯಕ್ರಿಯೆ ನಡೆಯಲಿದೆ.
ದಿನೇಶ್ ಫಡ್ನಿಸ್ ಅವರಿಗೆ ಹೃದಯಾಘಾತ ಆಗಿತ್ತು ಎಂದು ಕೆಲವು ಮಾಧ್ಯಮಗಳಲ್ಲಿ ವರದಿ ಆಗಿತ್ತು. ಆದರೆ ಅವರಿಗೆ ಹೃದಯಾಘಾತ ಆಗಿಲ್ಲ ಎಂದು ಅವರ ಸ್ನೇಹಿತ ದಯಾನಂದ್ ಶೆಟ್ಟಿ ಸ್ಪಷ್ಟನೆ ನೀಡಿದ್ದರು. ‘ಇದು ಬೇರೆ ಚಿಕಿತ್ಸೆ. ಅದರ ಬಗ್ಗೆ ನಾನು ಪ್ರತಿಕ್ರಿಯೆ ನೀಡಲಾರೆ’ ಎಂದು ಅವರು ಹೇಳಿದ್ದರು. ‘ಸಿಐಡಿ’ ಸೀರಿಯಲ್ನಲ್ಲಿ ದಿನೇಶ್ ಮತ್ತು ಫಡ್ನಿಸ್ ಜೊತೆಯಾಗಿ ನಟಿಸಿದ್ದರು.
Thanks for making our childhood happy and enjoyable, Rip Legend🥺💔🙏#Fredericks #Dinesh #Cid #RIP #ChennaiFloods #Israel #ChennaiRains #Israel #CycloneMichuang #Andhra #GTA6 #GTA6trailer #Legend #Nellore #Rain #mortalcio @RVCJ_FB pic.twitter.com/kuip2eDSS1
— pradhyumn sharma (@pradhyu78651514) December 5, 2023
ಡಿಟೆಕ್ಟೀವ್ ಕಥಾಹಂದರದ ‘ಸಿಐಡಿ’ ಧಾರಾವಾಹಿಯು 1998ರಿಂದ 2018ರ ತನಕ ಪ್ರಸಾರವಾಯಿತು. ಭಾರತೀಯ ಕಿರುತೆರೆತಲ್ಲಿ ಅತಿ ಹೆಚ್ಚು ಕಾಲ ಪ್ರಸಾರವಾದ ಸೀರಿಯಲ್ಗಳಲ್ಲಿ ಇದು ಕೂಡ ಒಂದು. ಈ ಸೀರಿಯಲ್ನಲ್ಲಿ ದಿನೇಶ್ ಫಡ್ನಿಸ್ ಅವರು ಮಾಡಿದ್ದ ಫ್ರೆಡ್ರಿಕ್ಸ್ ಎಂಬ ಪಾತ್ರವನ್ನು ಜನರು ತುಂಬ ಇಷ್ಟಪಟ್ಟಿದ್ದರು. ನಗು ಉಕ್ಕಿಸುವ ಕಾರಣದಿಂದ ಆ ಪಾತ್ರ ಫೇಮಸ್ ಆಗಿತ್ತು. ದಿನೇಶ್ ಫಡ್ನಿಸ್ ನಿಧನಕ್ಕೆ ಅಭಿಮಾನಿಗಳು, ಆಪ್ತರು ಕಂಬನಿ ಮಿಡಿದಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕೋರಲಾಗುತ್ತಿದೆ.
ಇದನ್ನೂ ಓದಿ: ಭೀಕರ ರಸ್ತೆ ಅಪಘಾತ; ಖ್ಯಾತ ಕಿರುತೆರೆ ನಟ ನಿಧನ, ಮೂವರ ಸ್ಥಿತಿ ಗಂಭೀರ
ನಟನೆ ಮಾತ್ರವಲ್ಲದೇ ಇದೇ ಸೀರಿಯಲ್ನ ಕೆಲವು ಸಂಚಿಕೆಗಳಿಗೆ ಬರಹಗಾರನಾಗಿಯೂ ದಿನೇಶ್ ಫಡ್ನಿಸ್ ಅವರು ಕೆಲಸ ಮಾಡಿದ್ದರು. ‘ತಾರಕ್ ಮೆಹ್ತಾ ಕಾ ಉಲ್ಟಾ ಚಷ್ಮಾ’ ಸೀರಿಯಲ್ನಲ್ಲಿ ಅವರು ಅತಿಥಿ ಪಾತ್ರವನ್ನೂ ಮಾಡಿದ್ದರು. ‘ಸೂಪರ್ 30’, ‘ಸರ್ಫರೋಷ್’ ಮುಂತಾದ ಸಿನಿಮಾಗಳಲ್ಲಿಯೂ ದಿನೇಶ್ ನಟಿಸಿದ್ದರು. 57ನೇ ವಯಸ್ಸಿನಲ್ಲಿ ಅವರು ಇಹಲೋಕ ತ್ಯಜಿಸಿದ್ದಾರೆ. ದೌಲತ್ ನಗರ್ ಚಿತಾಗಾರದಲ್ಲಿ ಅವರ ಅಂತ್ಯಕ್ರಿಯೆ ನೆರವೇರಲಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.