ಡ್ರೋನ್ ಪ್ರತಾಪ್ (Bigg Boss) ಹೊರಗೆ ಕಳೆದುಕೊಂಡಿದ್ದ ಗೌರವವನ್ನು ಬಿಗ್ಬಾಸ್ (BiggBoss) ಮನೆಯಲ್ಲಿ ಮರಳಿ ಪಡೆದುಕೊಳ್ಳುತ್ತಿದ್ದಾರೆ. ಹೊರಗೆ ಸುಳ್ಳುಗಾರ ಅನಿಸಿಕೊಂಡು ಮಾಧ್ಯಮಗಳಿಂದ, ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆಗೆ ಗುರಿಯಾದ ಡ್ರೋನ್ ಪ್ರತಾಪ್, ಬಿಗ್ಬಾಸ್ ಮನೆಗೆ ಹೋದಾಗಲು ಬಹಳ ವೀಕ್ ಸ್ಪರ್ಧಿಯೇ ಎನಿಸಿಕೊಂಡಿದ್ದರು. ಆದರೆ ವಾರಗಳು ಕಳೆದಂತೆ ತಾವೇನು ಎಂಬುದನ್ನು ಸಾಬೀತು ಮಾಡುತ್ತಲೇ ಬಂದಿದ್ದಾರೆ. ಈ ವಾರವಂತೂ ತಂಡದ ಕ್ಯಾಪ್ಟನ್ ಆಗಿ, ಟಾಸ್ಕ್ ಉಸ್ತುವಾರಿಯಾಗಿ ಅತ್ಯುತ್ತಮವಾಗಿ ಆಡಿ ವಿರೋಧಿಗಳ ಕೈಯಿಂದಲೂ ಭೇಷ್ ಅನ್ನಿಸಿಕೊಂಡಿದ್ದಾರೆ. ಸಹಜವಾಗಿಯೇ ವಾರಾಂತ್ಯದಲ್ಲಿ ಕಿಚ್ಚ ಸುದೀಪ್ ಅವರಿಂದಲೂ ‘ಕಿಚ್ಚನ ಚಪ್ಪಾಳೆ’ ಗಿಟ್ಟಿಸಿಕೊಂಡಿದ್ದಾರೆ.
ಪ್ರತಾಪ್ ಕ್ಯಾಪ್ಟನ್ ಆದಾಗ ತಂಡ ಒಡೆದಿತ್ತು, ಅದನ್ನು ಒಂದು ಮಾಡಿದ್ದು ಮಾತ್ರವೇ ಅಲ್ಲದೆ ಸರಿಯಾದ ಸಮಯದಲ್ಲಿ ಸರಿಯಾದ ಕೆಲವು ನಿರ್ಣಯಗಳನ್ನು ತೆಗೆದುಕೊಂಡು ಆರಂಭದಿಂದ ಗೆಲ್ಲುತ್ತಲೇ ಬಂದರು. ಮಾತ್ರವಲ್ಲದೆ ತಂಡ, ಪ್ರತಾಪ್ ಮೇಲೆ ಪ್ರಭಾವ ಬೀರಿ ನಿಯಮ ಮೀರಿ ಆಡುವಂತೆ ಹೇಳಿದಾಗ ಒತ್ತಡಕ್ಕೆ ಸಿಲುಕಿ ನಿಯಮ ಮೀರಿದರೂ ಸಹ, ಅದನ್ನು ತಂಡದ ಮುಂದೆ ಹೇಳಿ, ನೀವು ಹೇಳಿದ್ದು ತಪ್ಪು ಎಂದರು. ಅದನ್ನು ಎದುರಾಳಿ ತಂಡದ ಕ್ಯಾಪ್ಟನ್ಗೂ ಹೇಳಿದರು.
ಇದನ್ನೆಲ್ಲ ಗಮನಿಸಿದ ಕಿಚ್ಚ ಸುದೀಪ್, ನಿಯತ್ತಾಗಿ ಆಡಿದ್ದು ಮಾತ್ರವೇ ಅಲ್ಲದೆ, ತಮ್ಮದೇ ತಂಡ ತಪ್ಪು ಮಾಡಿದಾಗ ಅದನ್ನು ಅವರ ಮುಂದೆಯೇ ಹೇಳಿ ಧೈರ್ಯ ತೋರಿಸಿದ್ದಕ್ಕೆ ಪ್ರತಾಪ್ಗೆ ಕಿಚ್ಚನ ಚಪ್ಪಾಳೆಯನ್ನು ನೀಡಿದರು. ಆ ಸಮಯದಲ್ಲಿ ಭಾವುಕರಾದ ಡ್ರೋನ್ ಪ್ರತಾಪ್, ”ಇದು ಬಹಳ ವಿಶೇಷ ಸಮಯ, ಹೊರಗೆ ನನ್ನನ್ನು ಸುಳ್ಳುಗಾರ, ಮೋಸಗಾರ ಎಂದರು. ನಾನೂ ಸಹ ಕೆಲವಾರು ತಪ್ಪುಗಳನ್ನು ಮಾಡಿದ್ದೀನಿ ಅದನ್ನು ಒಪ್ಪಿಕೊಳ್ಳುತ್ತೀನಿ. ಆದರೆ ಹೊರಗೆ ಒಂದು ಬದಿಯ ಸತ್ಯವಷ್ಟೆ ಗೊತ್ತು, ಎಲ್ಲರೂ ಒಂದಾಗಿ ಒಬ್ಬನ ಮೇಲೆ ಯುದ್ಧ ಮಾಡಿದರೆ ಸ್ಪಷ್ಟನೆ ಕೊಡುವುದು ಹೇಗೆ? ಆದರೆ ಬಿಗ್ಬಾಸ್ ಮನೆಯ ಒಳಗೆ ಕ್ಯಾಮೆರಾಗಳಿವೆ ಎಲ್ಲವೂ ದಾಖಲಾಗುತ್ತಿದೆ. ಇಲ್ಲಿ ನಾನು ಏನೋ ಅದೇ ಆಗಿ ಕಾಣುತ್ತೀನಿ. ಇಲ್ಲಿ ಒಬ್ಬರ ತಪ್ಪು ಮಾತ್ರವೇ ಕಾಣುವುದಿಲ್ಲ ಎರಡೂ ಕಡೆಯವರ ತಪ್ಪೂ ಸಹ ಕಾಣುತ್ತದೆ” ಎಂದರು.
ಇದನ್ನೂ ಓದಿ:ಡ್ರೋನ್ ಪ್ರತಾಪ್ಗೆ ಸ್ವಂತ ತಂಡದ ಟೀಕೆ ಎದುರಾಳಿ ತಂಡದ ಮೆಚ್ಚುಗೆ
ಡ್ರೋನ್ ಪ್ರತಾಪ್ ಬಿಗ್ಬಾಸ್ ಮನೆಯಲ್ಲಿ ಹಲವರ ಗೌರವನ್ನು, ನಂಬಿಕೆಯನ್ನು ಗಳಿಸಿಕೊಂಡಿದ್ದಾರೆ. ಬಿಗ್ಬಾಸ್ ಮನೆಗೆ ಡ್ರೋನ್ ಪ್ರತಾಪ್ ಬಂದ ಆರಂಭದಲ್ಲಿ ತುಕಾಲಿ ಸಂತು, ಸ್ನೇಹಿತ್ ಇನ್ನೂ ಕೆಲವರು ಅವರನ್ನು ಬಹಳ ವ್ಯಂಗ್ಯ ಮಾಡಿದ್ದರು, ಆಡಿಕೊಂಡಿದ್ದರು. ಆಗೆಲ್ಲ ಬಾತ್ರೂಂಗೆ ಹೋಗಿ ಅಳುತ್ತಿದ್ದರು ಪ್ರತಾಪ್. ಆದರೆ ಸುದೀಪ್ ಸ್ಪೂರ್ತಿಯ ಮಾತುಗಳನ್ನು ಆಡಿದ ಬಳಿಕ ಪ್ರತಾಪ್ ಬದಲಾದರು. ಅದಾದ ಬಳಿಕವೂ ಸಹ ವಿನಯ್ ಗೌಡ, ಪ್ರತಾಪ್ ಅನ್ನು ಪದೇ ಪದೇ ಹೆದರಿಸುತ್ತಾ, ಅಗೌರವ ತೋರುವ ರೀತಿ ಮಾತನಾಡುತ್ತಲೇ ಇದ್ದರು. ವಿನಯ್ ತಂಡದವರೇ ಆದ ನಮ್ರತಾ, ಸ್ನೇಹಿತ್ ಸಹ ಪ್ರತಾಪ್ ಬಗ್ಗೆ ಗೌರವ ಇಟ್ಟುಕೊಂಡಿರಲಿಲ್ಲ. ಆದರೆ ಈಗ ವಿರೋಧಿಗಳ ಅಭಿಪ್ರಾಯವೂ ಸಹ ಪ್ರತಾಪ್ ಬಗ್ಗೆ ಬದಲಾಗಿದೆ.
ವಿನಯ್, ಸ್ನೇಹಿತ್ ಹಾಗೂ ನಮ್ರತಾ ಅವರುಗಳೂ ಪ್ರತಾಪ್ ಅನ್ನು ಮೆಚ್ಚಿಕೊಂಡು ಮಾತನಾಡಿದ್ದಾರೆ. ಮಾತ್ರವಲ್ಲ ವಿನಯ್ ಅಂತೂ ನೀನು ನಮ್ಮ ತಂಡದ ಜೊತೆಗೆ ಆಡು ಎಂದು ನೇರವಾಗಿ ಆಹ್ವಾನವನ್ನು ಸಹ ನೀಡಿದ್ದಾರೆ. ನಿನ್ನ ಬಗ್ಗೆ ಗೌರವ ಹೆಚ್ಚಾಗಿದೆ ಎಂದು ಸ್ನೇಹಿತ್ ಹಾಗೂ ನಮ್ರತಾ ಸಹ ಪ್ರತಾಪ್ ಬಳಿ ಖುದ್ದಾಗಿ ಹೇಳಿದ್ದಾರೆ. ವಾರದಿಂದ ವಾರಕ್ಕೆ ಪ್ರತಾಪ್ ಸ್ಟ್ರಾಂಗ್ ಆಗುತ್ತಿದ್ದಾರೆ. ಇದೇ ರೀತಿ ಆಡುತ್ತಿದ್ದರೆ ಪ್ರತಾಪ್ ಫೈನಲ್ ತಲುಪುವ ಸಾಧ್ಯತೆ ದಟ್ಟವಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:36 pm, Sat, 11 November 23