ಕಳೆದ ವಾರ ಸಂಗೀತಾ ಶೃಂಗೇರಿ (Sangeetha) ಕ್ಯಾಪ್ಟನ್ ಆಗಿದ್ದ ತಂಡಕ್ಕೆ ಈ ವಾರ ಡ್ರೋನ್ ಪ್ರತಾಪ್ ಕ್ಯಾಪ್ಟನ್ ಆಗಿದ್ದರು. ಚೆನ್ನಾಗಿಯೇ ತಂಡವನ್ನು ಮುನ್ನಡೆಸಿ ವಾರದ ಟಾಸ್ಕ್ನಲ್ಲಿ ಗೆಲ್ಲುವಂತೆ ಸಹ ಮಾಡಿದ್ದಾರೆ. ಆರಂಭದಲ್ಲಿ ಪ್ರತಾಪ್ರ ನಾಯಕತ್ವವನ್ನು ಮೆಚ್ಚಿಕೊಂಡಿದ್ದ ಸ್ವಂತ ತಂಡದ ಸದಸ್ಯರೇ ಇದೀಗ ವಾರದ ಅಂತ್ಯಕ್ಕೆ ಬಂದಾಗ ನಾಯಕನ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಆದರೆ ಡ್ರೋನ್ ಪ್ರತಾಪ್ ಅನ್ನು ಬದ್ಧ ವೈರಿಯಂತೆ ಕಾಣುತ್ತಿದ್ದ ವಿನಯ್ ಹಾಗೂ ಅವರ ತಂಡ ಡ್ರೋನ್ ಪ್ರತಾಪ್ ಬಗ್ಗೆ ಮೆಚ್ಚುಗೆಗಳ ಸುರಿಮಳೆಯನ್ನೇ ಸುರಿಸಿದೆ.
ಬುಧವಾರದ ಎಪಿಸೋಡ್ನಲ್ಲಿ ನಡೆದ ಟಾಸ್ಕ್ನಲ್ಲಿ ಪ್ರತಾಪ್ ತಂಡ ಗೆದ್ದಿತಾದರೂ, ಆ ಟಾಸ್ಕ್ನ ಉಸ್ತುವಾರಿ ಹಾಗೂ ತಂಡದ ನಾಯಕ ಆಗಿದ್ದ ಡ್ರೋನ್ ಪ್ರತಾಪ್ಗೆ ಆ ಗೆಲುವು ಇಷ್ಟವಾಗಿರಲಿಲ್ಲ. ಏಕೆಂದರೆ ತಮ್ಮ ತಂಡ ಆ ಟಾಸ್ಕ್ನಲ್ಲಿ ನಿಯತ್ತಿನಿಂದ ಆಡಲಿಲ್ಲ ಎಂಬುದು ಪ್ರತಾಪ್ ಅಭಿಪ್ರಾಯ. ತಮ್ಮ ಅಭಿಪ್ರಾಯವನ್ನು ತಮ್ಮ ತಂಡದ ಮುಂದೆ ಧೈರ್ಯವಾಗಿಯೇ ಪ್ರತಾಪ್ ಹೇಳಿಕೊಂಡರು. ಅದು ತಂಡದ ತನಿಷಾ, ಕಾರ್ತಿಕ್, ವರ್ತೂರು ಸಂತೋಷ್ ಅವರಿಗೆ ಹಿಡಿಸಲಿಲ್ಲ. ವರ್ತೂರು ಅವರಿಗೆ ತುಸು ಹೆಚ್ಚೇ ಹಿಡಿಸಲಿಲ್ಲ.
ಅದೇ ವಿಷಯವನ್ನು ಪ್ರತಾಪ್, ಎದುರಾಳಿ ತಂಡದ ನಾಯಕಿ ಸಿರಿ ಬಳಿಯೂ ಹೇಳಿಕೊಂಡಿದ್ದರು. ಅವರಿಂದ ವಿನಯ್ ಹಾಗೂ ತಂಡಕ್ಕೂ ಆ ವಿಷಯ ತಲುಪಿತು. ಆಗ ವಿನಯ್, ಪ್ರತಾಪ್ ಬಗ್ಗೆ ತಂಡದ ಎದುರೇ ಮೆಚ್ಚುಗೆ ಮಾತನ್ನಾಡಿ, ಪ್ರತಾಪ್ ನಿಜಕ್ಕೂ ತಮ್ಮ ತಂಡದ ಎದುರು ನೀವು ಸರಿಯಾಗಿ ಆಡಿಲ್ಲ ಎಂದು ಹೇಳಿದರು ಅವನ ಬಗ್ಗೆ ಗೌರವ ಹೆಚ್ಚಾಗುತ್ತದೆ ಎಂದರು.
ಇದನ್ನೂ ಓದಿ:ಡ್ರೋನ್ ಪ್ರತಾಪ್ ಹೆಸರಲ್ಲಿ ನಡೆಯುತ್ತಿದೆ ವಂಚನೆ; ಎಲ್ಲವನ್ನೂ ಬಿಚ್ಚಿಟ್ಟ ಸ್ಪರ್ಧಿ
ಆ ಬಳಿಕ ವಿನಯ್, ನಮ್ರತಾ, ಸ್ನೇಹಿತ್ ಎಲ್ಲ ಕುಳಿತಿದ್ದಾಗ ವಿನಯ್, ಡ್ರೋನ್ ಪ್ರತಾಪ್ ಅನ್ನು ಕರೆದು ನಿನ್ನ ಬಗ್ಗೆ ಗೌರವ ಹೆಚ್ಚಾಗಿದೆ. ನಿನ್ನನ್ನು ತಪ್ಪಾಗಿ ತಿಳಿದಿದ್ದೆವು, ಇನ್ನು ಮುಂದೆ ನಮ್ಮ ಬಳಿ ನೀನು ಏನಾದರೂ ಹೇಳಬಹುದು, ನಮ್ಮನ್ನು ನಿನ್ನ ಸ್ನೇಹಿತರಂತೆ ನೋಡಬಹುದು ಎಂದರು. ಅದರ ಜೊತೆಗೆ ಅವರದ್ದೇ ತಂಡದಲ್ಲಿರುವ ತನಿಷಾ ಬಗ್ಗೆ ಪ್ರತಾಪ್ ಎದುರು ದೂರುಗಳನ್ನು ಸಹ ಹೇಳಿದರು. ನೀನು ತನಿಷಾರನ್ನು ಸೇಫ್ ಮಾಡಿದ್ದೀಯ ಅದಕ್ಕೆ ನಿನ್ನ ಜೊತೆ ಹಾಗೆ ನಡೆದುಕೊಂಡರು ಎಂದು ನಮ್ರತಾ ಸಹ ತನಿಷಾ ಬಗ್ಗೆ ಪ್ರತಾಪ್ ಎದುರು ದೂರು ಹೇಳಿದರು.
ಮನೆಯಲ್ಲಿ ಡ್ರೋನ್ ಪ್ರತಾಪ್ಗೆ ಆಪ್ತರಲ್ಲಿ ತನಿಷಾ ಒಬ್ಬರು, ಆದರೆ ತನಿಷಾ ವಿರುದ್ಧ ವಿನಯ್ ಹಾಗೂ ತಂಡ ಹೇಳಿರುವ ಚಾಡಿಗಳನ್ನು ಪ್ರತಾಪ್ ಗಂಭೀರವಾಗಿ ತೆಗೆದುಕೊಳ್ಳುತ್ತಾರೆಯೇ, ಅಥವಾ ವಿನಯ್, ಪ್ರತಾಪ್ ಅನ್ನು ಹೊಗಳಿ ಅವರನ್ನು ತಮ್ಮ ತಂಡದ ಭಾಗ ಮಾಡಿಕೊಳ್ಳುವ ಹುನ್ನಾರ ನಡೆಸಿದ್ದಾರೆಯೇ ಮುಂದಿನ ದಿನಗಳಲ್ಲಿ ತಿಳಿಯಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:53 pm, Thu, 9 November 23