ಬಿಗ್ಬಾಸ್ ಮನೆಯಲ್ಲಿ ಉಗ್ರಂ ಮಂಜು ಮಹಾಪ್ರಭುಗಳಾಗಿ ಬದಲಾಗಿದ್ದಾರೆ. ಅವರಿಗೆ ಕೆಲ ವಿಶೇಷ ಅಧಿಕಾರವನ್ನು ಬಿಗ್ಬಾಸ್ ನೀಡಿದ್ದಾರೆ. ಮಂಗಳವಾರದ ಎಪಿಸೋಡ್ನಲ್ಲಿ ಉಗ್ರಂ ಮಂಜು ಅಲಿಯಾಸ್ ಮಹಾಪ್ರಭುಗಳು ನಾಮಿನೇಷನ್ ಪ್ರಕ್ರಿಯೆ ನಡೆಸಿಕೊಟ್ಟರು. ಸ್ಪರ್ಧಿಗಳು ಸೂಕ್ತ ಕಾರಣ ನೀಡಿ ನಾಮಿನೇಷನ್ ಮಾಡಬೇಕಿತ್ತು. ಅವರು ನೀಡಿದ ಕಾರಣ ಸರಿ ಎನಿಸದೇ ಇದ್ದರೆ ಅಲ್ಲಿಯೇ ಯಾರು ನಾಮಿನೇಟ್ ಆಗಿರುತ್ತಾರೋ ಅವರು ವಾದ ಸಹ ಮಾಡಬಹುದಿತ್ತು. ಇಬ್ಬರ ವಾದ ಆಲಿಸಿದ ಮಹಾಪ್ರಭುಗಳು ಯಾರನ್ನು ನಾಮಿನೇಟ್ ಮಾಡಬೇಕು ಎಂದು ನಿಶ್ಚಯಿಸಬೇಕಿತ್ತು. ಸ್ಪರ್ಧಿಗಳೆಲ್ಲ ಈ ನಾಮಿನೇಷನ್ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡರು ಆದರೆ ಹೈರಾಣಾಗಿದ್ದು ಮಾತ್ರ ಮಹಾಪ್ರಭು ಉಗ್ರಂ ಮಂಜು.
ಸ್ಪರ್ಧಿಗಳು ಪರಸ್ಪರರ ಮೇಲೆ ತೋಚಿದ ಕಾರಣಗಳನ್ನು ನೀಡಿದರು. ನಾಮಿನೇಟ್ ಆದವರು ಸಹ ತಮ್ಮನ್ನು ನಾಮಿನೇಟ್ ಮಾಡಿದವರ ಮೇಲೆ ಏರಿ ಹೋಗಿ ಜಗಳ ಮಾಡಿದರು. ಮೋಕ್ಷಿತಾ, ತ್ರಿವಿಕ್ರಮ್ ಅನ್ನು ಗೋಮುಖ ವ್ಯಾಘ್ರ ಎಂದರೆ, ತ್ರಿವಿಕ್ರಮ್, ಮೋಕ್ಷಿತಾ ಅವರನ್ನು ಎರಡು ತಲೆ ನಾಗರ ಎಂದು ಜರಿದರು. ಹಲವು ಸನ್ನಿವೇಶಗಳಲ್ಲಿ ಪರಸ್ಪರ ಜೋರು ವಾಗ್ವಾದವನ್ನು ಸ್ಪರ್ಧಿಗಳು ಮಾಡಿದರು.
ಎಲ್ಲರ ವಾದ, ಪ್ರತಿವಾದ ಕೇಳಿ ಕೊನೆ-ಕೊನೆಗೆ ಮಹಾಪ್ರಭುಗಳು ಹೈರಾಣಾಗಿ ತಲೆ ಮೇಲೆ ಕೈಹೊತ್ತು ಕೂತು ಬಿಟ್ಟರು. ಯಾರನ್ನು ನಾಮಿನೇಟ್ ಮಾಡಬೇಕು? ಯಾರನ್ನು ಮಾಡಬಾರದು? ಯಾರು ಕೊಟ್ಟ ಕಾರಣ ಸರಿಯಾಗಿದೆ ಯಾರು ಕೊಟ್ಟ ಕಾರಣ ತಪ್ಪು ಎಂಬುದು ಪರಾಮರ್ಶಿಸಿ ಪರಾಮರ್ಶಿಸಿ ಕೊನೆ ಕೊನೆಗೆ ಅವರೇ ತಾಳ್ಮೆ ಕಳೆದುಕೊಂಡರು. ಸರಿಯಾಗಿ ಕಾರಣ ಕೊಡದೇ ಇದ್ದಾಗ ನಾಮಿನೇಟ್ ಮಾಡಲು ಬಂದವರನ್ನೇ ನಾಮಿನೇಟ್ ಮಾಡಿದರು.
ಇದನ್ನೂ ಓದಿ:Bigg Boss Kannada: ರಜತ್ ಮಾತಿಗೆ ನಾಚಿ ನೀರಾದ ಚೈತ್ರಾ ಕುಂದಾಪುರ
ಶೋಭಾ ಶೆಟ್ಟಿ, ಚೈತ್ರಾ ಕುಂದಾಪುರ ಇನ್ನೂ ಕೆಲವು ಸ್ಪರ್ಧಿಗಳು ಮಹಾಪ್ರಭುಗಳ ನಿರ್ಧಾರದ ಮೇಲೆ ಅಸಮಾಧಾನವನ್ನೂ ಸಹ ವ್ಯಕ್ತಪಡಿಸಿದರು. ನಾಮಿನೇಷನ್ ಸಮಯದಲ್ಲಿ ಒಂದೆರಡು ಬಾರಿ ಸ್ಪರ್ಧಿಗಳ ಮೇಲೆ ಆಕ್ರೋಶವನ್ನೂ ಸಹ ಉಗ್ರಂ ಮಂಜು ವ್ಯಕ್ತಪಡಿಸಿದರು. ಮಹಾಪ್ರಭು ಸ್ಥಾನಕ್ಕೆ ಗೌರವ ಕೊಡದ ಶೋಭಾ ಶೆಟ್ಟಿ ಮೇಲೆ ಆಕ್ರೋಶ ವ್ಯಕ್ತಪಡಿಸಿದರು. ಚೈತ್ರಾ ಕುಂದಾಪುರ ವಿರುದ್ಧವೂ ಏರು ದನಿಯಲ್ಲಿ ಮಾತನಾಡಿದರು. ಚೈತ್ರಾ ಕುಂದಾಪುರ ಅವರಿಗೆ ಮಹಾಪ್ರಭುಗಳ ನಿರ್ಣಯ ಏಕಪಕ್ಷೀಯ, ಪೂರ್ವಾಗ್ರಹ ಪೀಡಿದ ನಿರ್ಣಯ ಎಂದು ಎನಿಸಿತು. ಉದ್ದೇಶಪೂರ್ವಕವಾಗಿ ಮಹಾಪ್ರಭುಗಳು ಕೆಲವರನ್ನು ಬಚಾವ್ ಮಾಡಿದರು. ತಮ್ಮ ಆತ್ಮೀಯರನ್ನು ನಾಮಿನೇಟ್ ಆಗಲು ಬಿಡಲಿಲ್ಲ ಎಂಬ ಅಭಿಪ್ರಾಯ ಸ್ಪರ್ಧಿಗಳಿಂದ ಕೇಳಿ ಬಂತು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ