ಬಿಗ್ಬಾಸ್ ಕನ್ನಡ ಸೀಸನ್ 11 ಚಾಲ್ತಿಯಲ್ಲಿದೆ. ಸ್ಪರ್ಧಿಗಳು ಉತ್ತಮವಾಗಿ ಆಡುತ್ತಿದ್ದಾರೆ. ಗೆಲ್ಲುವ ಭರವಸೆ ಮೂಡಿಸಿದ್ದ ಕೆಲವರು ಈಗಾಗಲೇ ಮನೆಗೆ ಹೋಗಿದ್ದಾರೆ. ಗೆಲ್ಲುವುದೇ ಇಲ್ಲ ಎಂದುಕೊಂಡಿದ್ದವರು ಕೆಲವರು ಇಲ್ಲಿವರೆಗೆ ಬಂದಿದ್ದಾರೆ. ಬಿಗ್ಬಾಸ್ ಕನ್ನಡ ಸೀಸನ್ 11, 2024 ರ ಸೆಪ್ಟೆಂಬರ್ 29 ರಂದು ಆರಂಭವಾಗಿತ್ತು. ಶೋ ಆರಂಭವಾಗಿ ಮೂರು ತಿಂಗಳಾಗಿದೆ. ಸರಿಯಾಗಿ ಹೇಳಬೇಕೆಂದರೆ 97 ದಿನಗಳು ಕಳೆದಿವೆ. ಇನ್ನೂ ಒಂಬತ್ತು ಮಂದಿ ಸ್ಪರ್ಧಿಗಳು ಮನೆಯಲ್ಲಿದ್ದಾರೆ. ಈ ಸೀಸನ್ನ ಫಿನಾಲೆ ಎಂದು ನಡೆಯಲಿದೆ ಎಂಬ ಪ್ರಶ್ನೆ ಎಲ್ಲರಿಗೂ ಇತ್ತು. ಇದಕ್ಕೆ ಈಗ ಸ್ವತಃ ಸುದೀಪ್ ಉತ್ತರ ನೀಡಿದ್ದಾರೆ.
ಶನಿವಾರದ ಎಪಿಸೋಡ್ನಲ್ಲಿ ಈ ಬಗ್ಗೆ ಮಾತನಾಡಿದ ಸುದೀಪ್, ಬಿಗ್ಬಾಸ್ ಫಿನಾಲೆಗೆ ಇನ್ನೆಷ್ಟು ವಾರ ಬಾಕಿ ಇದೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಸುದೀಪ್ ಹೇಳಿರುವಂತೆ ಇನ್ನು ಫಿನಾಲೆಗೆ ಇನ್ನು ಮೂರು ವಾರ ಇದೆಯಂತೆ. ಅಂದರೆ ಇನ್ನು 21 ದಿನದಲ್ಲಿ ಶೋ ಫಿನಾಲೆ ನಡೆದು ಈ ಬಾರಿ ವಿನ್ನರ್ ಯಾರು ಎಂಬುದು ಖಾತ್ರಿ ಆಗಲಿದೆ. ಶೋ ಅಂತ್ಯವಾಗಲಿದೆ, ಮಾತ್ರವಲ್ಲದೆ ಬಿಗ್ಬಾಸ್ ಜೊತೆ ಸುದೀಪ್ ಅವರ ಪಯಣವೂ ಅಂತ್ಯವಾಗಲಿದೆ.
ಬಿಗ್ಬಾಸ್ ಮನೆಯಲ್ಲಿ ಇನ್ನೂ ಒಂಬತ್ತು ಮಂದಿ ಇದ್ದಾರೆ. ಈ ವಾರ ಯಾವುದೇ ಎಲಿಮಿನೇಷನ್ ಇರುವುದಿಲ್ಲ ಏಕೆಂದರೆ ಈ ವಾರ ನಾಮಿನೇಷನ್ ಸಹ ಆಗಿಲ್ಲ. ಫಿನಾಲೆ ವಾರಕ್ಕೆ ಸಾಮಾನ್ಯವಾಗಿ ಐದು ಜನ ಬರುತ್ತಾರೆ. ಹಾಗಾಗಿ ಮುಂದಿನ ವಾರ ಇಬ್ಬರನ್ನು ಎಲಿಮಿನೇಟ್ ಮಾಡುವ ಸಾಧ್ಯತೆ ಇದೆ. ಅದರ ಮುಂದಿನ ವಾರ ಒಬ್ಬರನ್ನು ಎಲಿಮಿನೇಟ್ ಮಾಡಿ ಕೊನೆಯ ವಾರಕ್ಕೆ ಆರು ಅಥವಾ ಐದು ಮಂದಿಯನ್ನು ಉಳಿಸಿಕೊಳ್ಳುವ ಸಾಧ್ಯತೆ ಇದೆ.
ಇದನ್ನೂ ಓದಿ:ಬಿಗ್ಬಾಸ್ ಕನ್ನಡ: ಮೊದಲ ವಾರ ಎಲಿಮಿನೇಟ್ ಆಗಿದ್ದು ಇವರೇನಾ?
ಬಿಗ್ಬಾಸ್ ಸೀಸನ್ 11 ಹಲವು ಏರಿಳಿತಗಳನ್ನು ಕಂಡಿದೆ. ಶೋ ಪ್ರಾರಂಭವಾದ ಒಂದೆರಡು ವಾರ ವೀಕ್ಷಕರಿಂದ ತೀವ್ರ ಟೀಕೆಗೆ ಗುರಿಯಾಗಿತ್ತು. ಲಾಯರ್ ಜಗದೀಶ್ರ ಅವಾಚ್ಯ ಶಬ್ದಗಳು, ಪದೇ ಪದೇ ಜಗಳಗಳು ಬೇಸರ ಮೂಡಿಸಿದ್ದವು. ಇದರ ಜೊತೆಗೆ ಬಿಗ್ಬಾಸ್ ಮನೆಯಲ್ಲಿ ಮಾಡಲಾಗಿದ್ದ ಸ್ವರ್ಗ-ನರಕ ಕಾನ್ಸೆಪ್ಟ್ ಸಹ ತೀವ್ರ ಟೀಕೆಗೆ ಗುರಿಯಾಗಿತ್ತು. ಸ್ಪರ್ಧಿಗಳನ್ನು ಜೈಲಿನಲ್ಲಿ ಇರಿಸುವ ಮೂಲಕ ಮಾನವ ಹಕ್ಕುಗಳ ಉಲ್ಲಂಘನೆ ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು. ಪೊಲೀಸರು ಸಹ ಬಿಗ್ಬಾಸ್ ಸೆಟ್ಗೆ ಭೇಟಿ ನೀಡಿ ವೀಕ್ಷಣೆ ನಡೆಸಿದ್ದರು. ಮಾನವ ಹಕ್ಕು ಆಯೋಗವೂ ಸಹ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿತ್ತು.
ಹಲವು ಅಡೆ-ತಡೆಗಳ ಬಳಿಕ ಇದೀಗ ಇನ್ನು ಮೂರು ವಾರದಲ್ಲಿ ಬಿಗ್ಬಾಸ್ 11 ರ ಫಿನಾಲೆ ನಡೆಯಲಿದೆ. ಸುದೀಪ್ ಅವರು ಇನ್ನು ಮುಂದೆ ಬಿಗ್ಬಾಸ್ ನಿರೂಪಣೆ ಮಾಡುವುದಿಲ್ಲ ಎಂದು ಘೋಷಣೆ ಮಾಡಿದ್ದಾರೆ. ಅವರಿಗೆ ಬಿಗ್ಬಾಸ್ ಹೇಗೆ ಸೆಂಡಾಫ್ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ