ಕೊನೆಗೂ ಬುದ್ಧಿ ಬಂತಾ ಮಂಜಣ್ಣನಿಗೆ, ಗೌಥಮಿ ಫ್ರೆಂಡ್ಶಿಪ್ ಕಟ್
Bigg Boss Kannada: ಬಿಗ್ಬಾಸ್ ಆರಂಭ ಆದಾಗಿನಿಂದಲೂ ಗೌತಮಿ ಮತ್ತು ಮಂಜು ಒಳ್ಳೆಯ ಗೆಳೆಯರು. ಆದರೆ ಮಂಜು, ತುಸು ಅತಿಯಾಗಿಯೇ ಗೌತಮಿಯ ಗೆಳೆತನಕ್ಕೆ ಜೋತು ಬಿದ್ದಿದ್ದಾರೆ ಎಂಬ ಭಾವನೆ ಮೂಡುತ್ತಿದೆ. ಗೌತಮಿಯ ಗುಲಾಮರಂತೆ ಸಹ ಮಂಜು ವರ್ತಿಸಿದ್ದು ಇದೆ. ಈ ಬಗ್ಗೆ ಸುದೀಪ್ ಹಲವು ಬಾರಿ ಟೀಕೆ ಮಾಡಿದ್ದಾರೆ. ಇದೀಗ ಕೊನೆಗೂ ಮಂಜಣ್ಣನಿಗೆ ಬುದ್ಧಿ ಬಂದಂತೆ ಇದೆ.
ಬಿಗ್ಬಾಸ್ ಕನ್ನಡ ಸೀಸನ್ 11 ಆರಂಭ ಆದಾಗಿನಿಂದಲೂ ಮಂಜಣ್ಣ ಮತ್ತು ಗೌತಮಿ ಗೆಳೆಯರಾಗಿದ್ದಾರೆ. ಮೊದಲಿಗೆ ಈ ಗುಂಪಿನಲ್ಲಿ ಮೋಕ್ಷಿತಾ ಸಹ ಇದ್ದರು. ಆದರೆ ಕೆಲ ವಾರಗಳ ನಂತರ ಈ ಗೆಳೆತನದಿಂದ ತಮಗೆ ಹಾನಿ ಆಗುತ್ತಿದೆ ಎಂದು ಅರಿವಾಗಿ ಗುಂಪಿನಿಂದ ಹೊರಗೆ ಹೋಗಿ ಒಂಟಿಯಾಗಿ ಆಡಲು ಪ್ರಾರಂಭಿಸಿದರು. ಆದರೆ ಗೌತಮಿ ಮತ್ತು ಮಂಜು ಗೆಳೆಯರಾಗೇ ಇದ್ದಾರೆ. ಅದರಲ್ಲೂ ಮಂಜು ಅವರು ಒಂದು ರೀತಿ ಗೌತಮಿ ಅವರ ನಿಯಂತ್ರಣದಲ್ಲಿ ಇರುವಂತೆ, ಅವರ ಗುಲಾಮರಂತೆ ವರ್ತಿಸಿದ್ದು ಸಹ ಇದೆ. ಸುದೀಪ್ ಸೇರಿದಂತೆ ಹಲವರು ಮಂಜು ಅವರನ್ನು ಇದೇ ವಿಷಯಕ್ಕೆ ಟೀಕೆ ಮಾಡಿದ್ದಾರೆ. ಆದರೆ ಮಂಜು ಅವರು ಗೌತಮಿಯ ಗೆಳೆತನ ಬಿಟ್ಟಿಲ್ಲ. ಆದರೆ ಈಗ ಕೊನೆಗೂ ಮಂಜಣ್ಣನಿಗೆ ಬುದ್ಧಿ ಬಂದಂತೆ ಇದೆ.
ಸಂಬಂಧಿಕರು ಮನೆಗೆ ಬಂದಾಗಲೂ ಸಹ ಉಗ್ರಂ ಮಂಜು ಅವರು ಸಹೋದರಿ, ಗೌತಮಿಯ ಗೆಳೆತನವನ್ನು ಈ ಕೂಡಲೇ ಕತ್ತರಿಸುವಂತೆ ಹೇಳಿದರು. ಮಂಜು ಸಹ ಮಾತು ಕೊಟ್ಟಿದ್ದರು. ಇನ್ನು ಗೌತಮಿ ಅವರ ಪತಿ ಬಂದಾಗ, ಗೌತಮಿಗೂ ಇದೇ ಎಚ್ಚರಿಕೆ ನೀಡಿದ್ದರು. ಗೌತಮಿ ಬಳಿ ಎಚ್ಚರಿಕೆಯಿಂದ ಇರುವಂತೆ ಹೇಳಿದ್ದರು. ಇಂದು ಕಿಚ್ಚ ಸುದೀಪ್ ಸಹ ಮಂಜು ಅವರಿಗೆ ಇದೇ ಎಚ್ಚರಿಕೆ ನೀಡಿದರು. ನಾನು ವಾರಗಳಿಂದಲೂ ಇದೇ ವಿಷಯವನ್ನು ನಿಮಗೆ ಹೇಳುತ್ತಿದ್ದೇನೆ ಎಂದರು. ಸ್ವತಃ ಗೌತಮಿ ಸಹ ಒಂದೆರಡು ವಾರದ ಹಿಂದೆ ಮಂಜು ಅವರ ಬಳಿ ಫ್ರೆಂಡ್ ಶಿಫ್ ಬೇಡವೆಂದು ಹೇಳಿದ್ದರು. ಆದರೂ ಮಂಜು ಅದೇ ಚಾಳಿ ಮುಂದುವರೆಸಿದ್ದರು.
ಇದನ್ನೂ ಓದಿ:ತ್ರಿವಿಕ್ರಮ್ ಕೊಬ್ಬಿನ ಮಾತಿಗೆ ತಕ್ಕ ಪಾಠ ಕಲಿಸಿದ ಸುದೀಪ್
ಆದರೆ ಇಂದು ಕೊನೆಗೂ ಮಂಜು ಅವರಿಗೆ ಜ್ಞಾನೋದಯ ಆದಂತಿದೆ. ಸುದೀಪ್ ಅವರು ಇಂದು ಆಕ್ಟಿವಿಟಿ ಒಂದನ್ನು ಮಾಡಿಸಿದರು. ಆಕ್ಟಿವಿಟಿ ರೂಂಗೆ ಒಬ್ಬೊಬ್ಬರನ್ನಾಗಿ ಕರೆಸಿ, ಸಹ ಸ್ಪರ್ಧಿಯ ಫೋಟೊ ಒಂದನ್ನು ಕತ್ತರಿಸಿ, ಅವರು ಇಲ್ಲದಿದ್ದರೆ ನನ್ನ ಆಟ ಸರಾಗವಾಗಿ ಮುಂದೆ ಸಾಗುತ್ತದೆ ಏಕೆಂದು ಕಾರಣ ನೀಡಿ ಎಂದರು. ಬೇರೆ ಬೇರೆ ಸ್ಪರ್ಧಿಗಳು, ಬೇರೆ ಬೇರೆ ಉತ್ತರಗಳನ್ನು ನೀಡಿದರು. ಮಂಜಣ್ಣನ ಟೈಮ್ ಬಂದಾಗ, ಮಂಜಣ್ಣ ನೇರವಾಗಿ ಗೌತಮಿಯ ಚಿತ್ರವನ್ನೇ ಕತ್ತರಿಸಿದರು.
ಗೌತಮಿಯ ಚಿತ್ರ ಕತ್ತರಿಸಿದಾಗಲೂ ಸಹ ಮಂಜಣ್ಣ, ಗೌತಮಿಯ ಗುಣಗಾನವನ್ನೇ ಮಾಡಿದರು. ಅವರು ಬಹಳ ಒಳ್ಳೆಯ ಗೆಳತಿ, ನನ್ನ ಕೇರ್ ಮಾಡುತ್ತಾರೆ. ಆದರೆ ಫಿನಾಲೆ ಹತ್ತಿರ ಬರುತ್ತಿದ್ದು ಫಿನಾಲೆ ಮುಗಿಯುವ ವರೆಗೂ ನಾನು ಅವರ ಗೆಳೆತನದಿಂದ ದೂರ ಉಳಿಯುತ್ತೇನೆ. ಒಂದು ವೇಳೆ ಈ ಮನೆಯಲ್ಲಿ ಅವರು ಇಲ್ಲದೇ ಹೋದರೆ ನನ್ನ ಆಟ ಇನ್ನಷ್ಟು ವೇಗವಾಗಿ ಮುಂದೆ ಹೋಗುತ್ತದೆ’ ಎಂದು ಮಂಜು ಹೇಳಿದರು. ವಿಶೇಷವೆಂದರೆ ಗೌತಮಿ ಸಹ ಮಂಜು ಅವರ ಚಿತ್ರವನ್ನೇ ಕತ್ತರಿಸಿ, ಮಂಜು ಜೊತೆ ಗೆಳೆತನಕ್ಕೆ ಅಂತ್ಯ ಹಾಡಲೇ ಬೇಕು ಎಂದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ