ಈ ಬಾರಿ ಬಿಗ್ಬಾಸ್ ಮನೆಗೆ ಹೋಗುವವರು ಯಾರು? ಇಲ್ಲಿದೆ ಸಂಭಾವ್ಯ ಪಟ್ಟಿ
Bigg Boss Kannada: ಬಿಗ್ಬಾಸ್ ಕನ್ನಡ ಸೀಸನ್ 11 ಸೆಪ್ಟೆಂಬರ್ 29ಕ್ಕೆ ಪ್ರಾರಂಭವಾಗಲಿದೆ. ಪ್ರತಿಬಾರಿಯಂತೆ ಈ ಬಾರಿಯೂ ಸಹ ಬಿಗ್ಬಾಸ್ ಮನೆ ಸೇರುವ ಸ್ಪರ್ಧಿಗಳ ಬಗ್ಗೆ ಕುತೂಹಲ ಮೂಡಿದೆ. ಈ ಬಾರಿ ಬಿಗ್ಬಾಸ್ ಮನೆ ಸೇರುವ ಸಂಭಾವ್ಯ ಸ್ಪರ್ಧಿಗಳ ಪಟ್ಟಿ ಇಲ್ಲಿದೆ.
ಬಿಗ್ಬಾಸ್ ಕನ್ನಡ ಸೀಸನ್ 11 ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದೆ. ನಿನ್ನೆಯಷ್ಟೆ ಕಿಚ್ಚ ಸುದೀಪ್ ಸೇರಿದಂತೆ ಬಿಗ್ಬಾಸ್ ಆಯೋಜಕರು ಸುದ್ದಿಗೋಷ್ಠಿ ನಡೆಸಿ ಈ ಬಾರಿಯ ಬಿಗ್ಬಾಸ್ 11 ರ ವಿಶೇಷತೆಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಈ ಬಾರಿ ಬಿಗ್ಬಾಸ್ ಸ್ಪರ್ಧಿಗಳ ಆಯ್ಕೆ ಭಿನ್ನವಾಗಿರಲಿದೆ, ಕಳೆದ ಬಾರಿ ವೋಟಿಂಗ್ ಆಧಾರದಲ್ಲಿ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗಿತ್ತು. ಇಬ್ಬರು ಸ್ಪರ್ಧಿಗಳನ್ನು ವೇದಿಕೆ ಮೇಲಿಂದಲೇ ವಾಪಸ್ ಕಳಿಸಲಾಗಿತ್ತು. ಕಡಿಮೆ ಮತ ಪಡೆದ ಕೆಲವರನ್ನು ಹೋಲ್ಡ್ನಲ್ಲಿ ಇಡಲಾಗಿತ್ತು. ಈ ಬಾರಿ ವೋಟಿಂಗ್ ಇರಲಿದೆಯಾದರೂ ಕಳೆದ ಬಾರಿಗಿಂತಲೂ ಭಿನ್ನವಾಗಿರಲಿದೆ ಎನ್ನಲಾಗುತ್ತಿದೆ.
ಇನ್ನು ಈ ಬಾರಿ ಯಾವ ಸೆಲೆಬ್ರಿಟಿಗಳು ಬಿಗ್ಬಾಸ್ ಮನೆಗೆ ಹೋಗಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ. ಈಗಾಗಲೇ ಕೆಲವು ಹೆಸರುಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿವೆ. ಅದರಲ್ಲಿ ಪ್ರಮುಖವಾಗಿ ಕೇಳಿ ಬರುತ್ತಿರುವುದು ನಟ ಸುನಿಲ್ ಹೆಸರು. ‘ಎಕ್ಸ್ಕ್ಯೂಸ್ ಮೀ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿರುವ ಸುನಿಲ್ ಈ ಬಾರಿ ಬಿಗ್ಬಾಸ್ ಮನೆಗೆ ಹೋಗಲಿದ್ದಾರೆ ಎಂಬ ಮಾತುಗಳು ಜೋರಾಗಿಯೇ ಕೇಳಿ ಬರುತ್ತಿದೆ.
ಪ್ರತಿ ಸೀಸನ್ನಲ್ಲೂ ಕಮಿಡಿಯನ್ ಅನ್ನು ಶೋಗೆ ಕಳಿಸಲಾಗುತ್ತದೆ ಈ ಬಾರಿ ಕಮಿಡಿಯನ್ ಕೋಟಾನಲ್ಲಿ ಹುಲಿ ಕಾರ್ತಿಕ್ ಬಿಗ್ಬಾಸ್ ಮನೆಗೆ ಹೋಗಲಿದ್ದಾರೆ ಎನ್ನಲಾಗುತ್ತಿದೆ. ಹಿಂದಿನ ಶೋಗಳಲ್ಲಿ ಕಮಿಡಿಯನ್ಗಳು ಚೆನ್ನಾಗಿ ಪ್ರದರ್ಶನ ನೀಡಿದ್ದಾರೆ. ಕೆಲವರು ಕಪ್ ಸಹ ಗೆದ್ದಿದ್ದಾರೆ. ಈ ಬಾರಿ ಹುಲಿ ಕಾರ್ತಿಕ್ ಹೇಗೆ ಆಡಲಿದ್ದಾರೆ, ಹೇಗೆ ರಂಜಿಸಲಿದ್ದಾರೆ ಕಾದು ನೋಡಬೇಕಿದೆ.
ಇದನ್ನೂ ಓದಿ:ಬಿಗ್ಬಾಸ್ ಹೊಸ ಪ್ರೋಮೊ: ಸ್ವರ್ಗ-ನರಕದ ಕತೆ ಹೇಳಿದ ಸುದೀಪ್
ಇನ್ನು ಇತ್ತೀಚೆಗಿನ ಕೆಲ ಸೀಸನ್ನಲ್ಲಿ ಯೂಟ್ಯೂಬರ್ಗಳಿಗೆ ಸಹ ಬಿಗ್ಬಾಸ್ ಸ್ಪರ್ಧಿಗಳಾಗಿ ಅವಕಾಶ ಕೊಡಲಾಗುತ್ತಿದೆ. ಈ ಹಿಂದೆಲ್ಲ ರಘು ವೈನ್ಸ್, ಸೋಷಿಯಲ್ ಮೀಡಿಯಾ ಸೆನ್ಸೇಷನ್ ನವಾಜ್, ಇನ್ನೂ ಕೆಲವು ಯೂಟ್ಯೂಬರ್ಗಳನ್ನು ಸ್ಪರ್ಧಿಯಾಗಿ ಸೇರಿಸಲಾಗಿತ್ತು. ಈ ಬಾರಿ ಸಹ ಇಬ್ಬರು ಜನಪ್ರಿಯ ಯೂಟ್ಯೂಬರ್ಗಳನ್ನು ಸ್ಪರ್ಧಿಗಳಾಗಿ ಆಯ್ಕೆ ಮಾಡಲಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ‘ಕಲಾಮಾಧ್ಯಮ’ದ ಪರಮೇಶ್ ಅವರನ್ನು ಕೇಳಲಾಗಿದೆ ಎನ್ನಲಾಗುತ್ತಿದೆ ಆದರೆ ಅವರು ಸ್ಪರ್ಧಿಯಾಗಿ ಬರುವ ಬಗ್ಗೆ ಖಾತ್ರಿ ಇಲ್ಲ. ಒಬ್ಬ ಮೊಟೊ ವ್ಲಾಗರ್ ಬಿಗ್ಬಾಸ್ ಮನೆಗೆ ಬರುತ್ತಾರೆ ಎನ್ನಲಾಗುತ್ತಿದೆ. ಇನ್ನು ರೀಲ್ಸ್ನಿಂದಲೇ ಜನಪ್ರಿಯವಾಗಿರುವ ರೀಲ್ಸ್ ರೇಷ್ಮಾ ಬಿಗ್ಬಾಸ್ ಸ್ಪರ್ಧಿಯಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಕಿರುತೆರೆಯಿಂದ ಹಲವರನ್ನು ಬಿಗ್ಬಾಸ್ಗೆ ಕರೆದುಕೊಳ್ಳಲಾಗುತ್ತದೆ. ಕಿರುತೆರೆಯ ತಾರೆಯರೇ ಹೆಚ್ಚು ಮಂದಿ ಬಿಗ್ಬಾಸ್ಗೆ ಆಗಮಿಸಿದ್ದಾರೆ. ಹಲವರು ಗೆದ್ದಿದ್ದಾರೆ ಸಹ. ಈ ಬಾರಿ ನಕಲಿ ದರ್ಶನ್, ಅವಿನಾಶ್ ಅವರನ್ನು ಬಿಗ್ಬಾಸ್ಗೆ ಕರೆತರುವುದು ಬಹುತೇಕ ಖಾತ್ರಿ ಎನ್ನಲಾಗುತ್ತಿದೆ. ಅವಿನಾಶ್, ಥೇಟ್ ದರ್ಶನ್ ರೀತಿಯೇ ಇದ್ದು, ಅವರು ಈ ಬಾರಿ ಬಿಗ್ಬಾಸ್ ಮನೆಗೆ ಬರಲಿದ್ದಾರೆ.
ನಟಿ ಪ್ರೇಮಾಗೂ ಆಫರ್ ಹೋಗಿದೆ ಎನ್ನಲಾಗುತ್ತಿದೆ. ಕಿರುತೆರೆ ನಟಿಯರಾದ ಸುಕೃತಾ ನಾಗ್, ನಟಿ ಭವ್ಯಾ. ನಟರಾದ ದೀಪಕ್ ಗೌಡ, ಗೌರವ್ ಶೆಟ್ಟಿ, ಯೂಟ್ಯೂಬ್ ಕಿರುಚಿತ್ರಗಳಿಂದ ಹೆಸರು ಗಳಿಸಿರುವ ನಟರೊಬ್ಬರು ಸಹ ಎಂಟ್ರಿ ಕೊಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇನ್ನು ಹಿಂದೂಪರ ಹೋರಾಟಗಾರ್ತಿಯಾಗಿ ಗುರುತಿಸಿಕೊಂಡು ಬಳಿಕ ವಂಚನೆ, ಬೆದರಿಕೆ ಪ್ರಕರಣದಲ್ಲಿ ಜೈಲು ಸೇರಿದ್ದ ಚೈತ್ರಾ ಕುಂದಾಪುರ ಸಹ ಬಿಗ್ಬಾಸ್ಗೆ ಬರಲಿದ್ದಾರೆ ಎನ್ನಲಾಗುತ್ತಿದೆ. ಸೆಪ್ಟೆಂಬರ್ 29 ರಂದು ಬಿಗ್ಬಾಸ್ ಕನ್ನಡ ಸೀಸನ್ 11 ಪ್ರಾರಂಭವಾಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ