
ಬಿಗ್ಬಾಸ್ ಮನೆಯಲ್ಲಿ ಪ್ರತಿ ಬಾರಿಯಂತೆ ಈ ಬಾರಿಯೂ ಸಹ ನಟ-ನಟಿಯರೇ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದಾರೆ. ಪ್ರತಿ ಬಾರಿಯೂ ಬಿಗ್ಬಾಸ್ ಮನೆಯಲ್ಲಿ ಕಲಾವಿದರಿಗೇ ಆದ್ಯತೆ ಹೆಚ್ಚು. ಈಗಾಗಲೇ ಹಲವು ನಟ-ನಟಿಯರು, ಕಮಿಡಿಯನ್ಗಳು ಮನೆಗೆ ಬಂದಿದ್ದಾರೆ. ಬಿಗ್ಬಾಸ್ ಮನೆಗೆ ಬಹುತೇಕ ಟಿವಿ ಕಲಾವಿದರೇ ಹೆಚ್ಚಾಗಿ ಬರುತ್ತಾರೆ. ಸಿನಿಮಾ ನಟ-ನಟಿಯರು ಅದರಲ್ಲೂ ಹೊಸದಾಗಿ ಚಿತ್ರರಂಗಕ್ಕೆ ಕಾಲಿಟ್ಟವರು ಬಿಗ್ಬಾಸ್ಗೆ ಬರುವುದು ಅಪರೂಪ ಆದರೆ ಇದೀಗ ಸಿನಿಮಾ ನಾಯಕಿಯೊಬ್ಬರು ಬಿಗ್ಬಾಸ್ ಮನೆಗೆ ಕಾಲಿಟ್ಟಿದ್ದಾರೆ.
ಕೆಲ ತಿಂಗಳ ಹಿಂದಷ್ಟೆ ಬಿಡುಗಡೆ ಆಗಿರುವ ಯೋಗರಾಜ್ ಭಟ್ ನಿರ್ದೇಶನದ ಸಿನಿಮಾ ‘ಮನದ ಕಡಲು’ ಸಿನಿಮಾನಲ್ಲಿ ನಾಯಕಿಯಾಗಿ ನಟಿಸಿರುವ ರಾಶಿಕಾ ಶೆಟ್ಟಿ ಅವರು ಇದೀಗ ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಅಂದಹಾಗೆ ರಾಶಿಕಾ ಅವರು ಸಿನಿಮಾ ನಟಿಯಾಗಿರುವುದಕ್ಕೆ ಖ್ಯಾತ ನಟಿ ರಮ್ಯಾ ಅವರು ಕಾರಣವಂತೆ. ಅದು ಹೇಗೆಂದು ಅವರು ವಿವರಿಸಿದ್ದಾರೆ.
ನಟಿ ರಮ್ಯಾ ಹಾಗೂ ರಕ್ಷಿತಾ ಅವರು ಒಟ್ಟಿಗೆ ನಟಿಸಿದ್ದ ಕವಿತಾ ಲಂಕೇಶ್ ನಿರ್ದೇಶನ ಮಾಡಿದ್ದ ‘ತನನಂ-ತನನಂ’ ಸಿನಿಮಾನಲ್ಲಿ ರಾಶಿಕಾ ಬಾಲನಟಿಯಾಗಿ ಕಾಣಿಸಿಕೊಂಡಿದ್ದರಂತೆ. ಆ ಸಿನಿಮಾದ ಒಂದು ಬಲು ಜನಪ್ರಿಯ ಹಾಡಿನಲ್ಲಿ ರಾಶಿಕಾ ಶೆಟ್ಟಿ ರಮ್ಯಾ ಒಟ್ಟಿಗೆ ಡ್ಯಾನ್ಸ್ ಮಾಡಿದ್ದರಂತೆ. ಆ ಒಂದು ಕಾರಣದಿಂದಾಗಿಯೇ ರಾಶಿಕಾ ನಟಿಯಾಗಬೇಕು ಎಂದು ನಿರ್ಧರಿಸಿದರಂತೆ.
ಅದರಂತೆ ಹಲವಾರು ಕಡೆಗಳಲ್ಲಿ ಆಡಿಷನ್ಗಳನ್ನು ರಾಶಿಕಾ ಕೊಡುತ್ತಾ ಬಂದಿದ್ದರಂತೆ. ಆದರೆ ಎಲ್ಲ ಕಡೆ ರಿಜೆಕ್ಟ್ ಆಗಿದ್ದಾರೆ ಅಂತಿಮವಾಗಿ ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಅವರಿಂದ ಕಾಲ್ ಬಂದಿದೆ. ಅವರ ನಿರ್ದೇಶನದ ‘ಮನದ ಕಡಲು’ ಸಿನಿಮಾನಲ್ಲಿ ರಾಶಿಕಾ ಶೆಟ್ಟಿ ನಾಯಕಿಯಾಗಿ ನಟಿಸಿದರು. ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಸಾಧಾರಣ ಹಿಟ್ ಆಯ್ತು. ಇದೀಗ ರಾಶಿಕಾ ಬಿಗ್ಬಾಸ್ ಮನೆಗೆ ಬಂದಿದ್ದಾರೆ.
ರಾಶಿಕಾಗೆ ಎಲ್ಲವೂ ತುಸು ಹೆಚ್ಚೇ ಅಂತೆ. ಕೋಪ, ಪ್ರೀತಿ, ನಗು, ಮಾತು ಎಲ್ಲವೂ ಹೆಚ್ಚಂತೆ. ಮೊದಲು ಮಾತನಾಡಿ, ಮೊದಲು ಕೋಪ ತೋರಿಸಿ ಆಮೇಲೆ ಆ ಬಗ್ಗೆ ಯೋಚನೆ ಮಾಡುತ್ತಾರಂತೆ. ಅಂದಹಾಗೆ ರಾಶಿಕಾಗೆ ಹೊಟ್ಟೆ ಹಸಿವು ಹೆಚ್ಚಂತೆ, ಪ್ರತಿ ಎರಡು ಗಂಟೆಗೆ ಏನಾದರೂ ತಿನ್ನುತ್ತಲೇ ಇರಬೇಕಂತೆ ಅವರು. ಆದರೆ ಬಿಗ್ಬಾಸ್ನಲ್ಲಿ ಹಸಿವಿನೊಂದಿಗೆ ಹೇಗೆ ಹೋರಾಡುತ್ತಾರೋ ನೋಡಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:38 pm, Sun, 28 September 25