ಬಿಗ್ಬಾಸ್ ಕನ್ನಡ ಸೀಸನ್ 12: ಈ ಬಾರಿಯ ಮನೆ ಹೀಗಿದೆ ನೋಡಿ
Bigg Boss Kannada season 12: ಬಿಗ್ಬಾಸ್ ಕನ್ನಡ 12 ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಇದೆ. ಈ ಬಾರಿ ಬಿಗ್ಬಾಸ್ ಮನೆಗೆ ಯಾರು ಹೋಗಲಿದ್ದಾರೆ ಎಂಬುದರ ಜೊತೆಗೆ ಈ ಬಾರಿ ಬಿಗ್ಬಾಸ್ ಮನೆ ಹೇಗಿರಲಿದೆ ಎಂಬ ಬಗ್ಗೆಯೂ ಕುತೂಹಲ ಇದೆ. ಅಂದಹಾಗೆ ಈ ಬಾರಿ ಇಡೀ ಕರ್ನಾಟಕವನ್ನು ಪ್ರತಿಬಿಂಬಿಸುತ್ತಿದೆ ಬಿಗ್ಬಾಸ್ ಮನೆ. ಹೊಸ ಬಿಗ್ಬಾಸ್ ಮನೆಯ ಸಣ್ಣ ಝಲಕ್ ಇಲ್ಲಿದೆ ನೋಡಿ...

ಬಿಗ್ಬಾಸ್ ಕನ್ನಡ ಸೀಸನ್ 12 (Bigg Boss Kannada season 12) ಪ್ರಾರಂಭಕ್ಕೆ ಕೆಲವೇ ಗಂಟೆಗಳಷ್ಟೆ ಬಾಕಿ ಇದೆ. ಈ ಬಾರಿ ಮನೆಯ ಒಳಗೆ ಯಾರ್ಯಾರು ಹೋಗಲಿದ್ದಾರೆ ಎಂಬ ಬಗ್ಗೆ ಈಗಾಗಲೇ ಚರ್ಚೆ ಶುರುವಾಗಿದೆ. ನಿನ್ನೆ ಮಾಸ್ಕ್ ಧರಿಸಿದ ವ್ಯಕ್ತಿಯೊಬ್ಬ ನಾನು ಬಿಗ್ಬಾಸ್ ಮನೆಗೆ ಹೋಗುತ್ತಿದ್ದೇನೆ ಎಂದು ಸಾರ್ವಜನಿಕರ ಬಳಿ ಹೇಳುತ್ತಿರುವ ವಿಡಿಯೋ ಅನ್ನು ಚಾನೆಲ್ ಹಂಚಿಕೊಂಡಿತ್ತು. ಪ್ರತಿ ಬಾರಿ ಬಿಗ್ಬಾಸ್ ಸ್ಪರ್ಧಿಗಳು ಯಾರಾಗಲಿದ್ದಾರೆ ಎಂಬ ಕುತೂಹಲದ ಜೊತೆಗೆ ಬಿಗ್ಬಾಸ್ ಮನೆ ಈ ಬಾರಿ ಹೇಗಿರಲಿದೆ ಎಂಬ ಕುತೂಹಲವೂ ಸಹ ಪ್ರೇಕ್ಷಕರಿಗೆ ಇರುತ್ತದೆ. ಕಿಚ್ಚ ಸುದೀಪ್ ಅವರು ಬಿಗ್ಬಾಸ್ ಮನೆಯ ಝಲಕ್ ಒಂದನ್ನು ತೋರಿಸಿದ್ದಾರೆ.
ಪ್ರತಿ ಬಾರಿ ಬಿಗ್ಬಾಸ್ ಮನೆಯನ್ನು ಭಿನ್ನವಾಗಿ, ಐಶಾರಾಮಿಯಾಗಿ, ಅದ್ಧೂರಿಯಾಗಿ ಮತ್ತು ಕಲರ್ ಫುಲ್ ಆಗಿ ನಿರ್ಮಾಣ ಮಾಡುತ್ತಾರೆ ಆಯೋಜಕರು. ಕಳೆದ ಬಾರಿ ಬೆಂಗಳೂರಿನ ಹೊರಭಾಗದ ಖಾಸಗಿ ಜಾಗದಲ್ಲಿ ಬಿಗ್ಬಾಸ್ ಮನೆ ನಿರ್ಮಿಸಲಾಗಿತ್ತು. ಇದರಿಂದಾಗಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಯ್ತು, ಸ್ಥಳೀಯ ಆಡಳಿತದವರು ಕೆಲವು ನೊಟೀಸ್ಗಳನ್ನು ಸಹ ನೀಡಿದ್ದರು. ಅದೇ ಕಾರಣಕ್ಕೆ ಈ ಬಾರಿ ಇನ್ನೋವೇಟಿವ್ ಫಿಲಂ ಸಿಟಿಯಲ್ಲಿ ಬಿಗ್ಬಾಸ್ ಮನೆಯನ್ನು ನಿರ್ಮಾಣ ಮಾಡಲಾಗಿದೆ. ಈ ಬಾರಿಯ ಮನೆಯ ಹೌಸ್ಟೂರ್ನ ಪ್ರೋಮೊ ಅನ್ನು ಕಲರ್ಸ್ ವಾಹಿನಿ ಹಂಚಿಕೊಂಡಿದೆ.
ಪ್ರತಿ ಬಾರಿಯಂತೆ ಈ ಬಾರಿಯೂ ಸಹ ಮನೆಯನ್ನು ಭಿನ್ನವಾಗಿ, ಅದ್ಧೂರಿಯಾಗಿ, ಐಶಾರಾಮಿಯಾಗಿ ನಿರ್ಮಾಣ ಮಾಡಲಾಗಿದೆ. ಕಿಚ್ಚ ಸುದೀಪ್ ಅವರು ಬಿಗ್ಬಾಸ್ ಮನೆಯನ್ನು ಪ್ರೇಕ್ಷಕರಿಗೆ ತೋರಿಸಿಕೊಟ್ಟಿದ್ದಾರೆ. ರಿಚ್ ಆಗಿರುವ ಕರ್ನಾಟಕದವನ್ನು ಒಂದೇ ಕಡೆ ಸ್ಕೆಚ್ ಮಾಡಿದರೆ ಹೇಗಿರುತ್ತದೆಯೋ ಹಾಗಿದೆ ಬಿಗ್ಬಾಸ್ ಮನೆ ಎಂದಿದ್ದಾರೆ ಕಿಚ್ಚ. ಅವರು ಹೇಳಿದಂತೆಯೇ ಇಡೀ ಕರ್ನಾಟಕವನ್ನು ಪ್ರತಿಬಿಂಬಿಸುತ್ತಿದೆ ಈ ಬಾರಿಯ ಬಿಗ್ಬಾಸ್ ಮನೆ.
View this post on Instagram
ಮೈಸೂರು ಅರಮನೆ, ದಸರಾ, ಹೊಯ್ಸಳ, ಬೇಲೂರು-ಹಳೆಬೀಡಿನ ಶಿಲ್ಪಗಳು, ಯಕ್ಷಗಾನ, ಭರತ ನಾಟ್ಯ, ಡೊಳ್ಳು ಕುಣಿತ ಹೀಗೆ ಕರ್ನಾಟಕದ ಅನೇಕ ಸಂಸ್ಕೃತಿಯ ಪ್ರತಿರೂಪಗಳು ಈ ಬಾರಿಯ ಬಿಗ್ಬಾಸ್ ಮನೆಯಲ್ಲಿವೆ. ಬಿಗ್ಬಾಸ್ ಮನೆಯ ಪ್ರತಿ ಗೋಡೆಯ ಮೇಲೂ ಕರ್ನಾಟಕದ ಸಂಸ್ಕೃತಿಕ ವೈಭವವನ್ನು ನೆನಪಿಸುವ ಚಿತ್ರಗಳನ್ನು ರಚಿಸಲಾಗಿದೆ. ಇವುಗಳ ಜೊತೆಗೆ ಬೇಲೂರು, ಹಳೆಬೀಡು, ಹಂಪಿಯ ಕೆಲವು ವಿಗ್ರಹಗಳನ್ನು ಆಧುನಿಕ ವಸ್ತುಗಳನ್ನು ಬಳಸಿ ನಿರ್ಮಿಸಲಾಗಿದೆ. ಒಟ್ಟಾರೆಯಾಗಿ ಬಿಗ್ಬಾಸ್ ಮನೆ ಇಡೀ ಕರ್ನಾಟಕವನ್ನು ಪ್ರತಿಬಿಂಬಿಸುತ್ತಿದೆ.
ಪ್ರೋಮೊನಲ್ಲಿ ಮಾತನಾಡಿರುವ ಸುದೀಪ್, ‘ಅರಮನೆಯನ್ನು ಉಳಿಸಿಕೊಳ್ಳಲು ಎಷ್ಟೋ ಯುದ್ಧಗಳು ನಡೆದು ಹೋಗಿವೆ. ಆದರೆ ಈ ಅರಮನೆಯಲ್ಲಿ ಉಳಿದುಕೊಳ್ಳಲು ಯುದ್ಧಗಳೇ ನಡೆಯಲಿವೆ’ ಎಂದಿದ್ದಾರೆ. ಅದು ನಿಜವೂ ಹೌದು. ಅರಮನೆಯಂಥಹಾ ಬಿಗ್ಬಾಸ್ ಮನೆಯಲ್ಲಿ ಉಳಿದುಕೊಳ್ಳಲು ಸ್ಪರ್ಧಿಗಳು ಪ್ರತಿ ದಿನ, ಪ್ರತಿ ಕ್ಷಣ ಇತರೆ ಸ್ಪರ್ಧಿಗಳೊಂದಿಗೆ ಸ್ಪರ್ಧೆ ನಡೆಸುತ್ತಾರೆ, ಕಿತ್ತಾಡುತ್ತಾರೆ, ರಾಜಕೀಯ ಮಾಡುತ್ತಾರೆ. ಕೈ-ಕೈ ಮಿಲಾಯಿಸುವ ಹಂತಕ್ಕೂ ಹೋಗುತ್ತಾರೆ. ಈ ಬಾರಿಯೂ ಇವೆಲ್ಲ ಮತ್ತೆ ಪುನರಾವರ್ತನೆ ಆಗಲಿವೆ. ಅಂದಹಾಗೆ ಬಿಗ್ಬಾಸ್ ಕನ್ನಡ ಸೀಸನ್ 12 ನಾಳೆ ಅಂದರೆ ಭಾನುವಾರ ಸಂಜೆ ಪ್ರಾರಂಭ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




