ಬಿಗ್ಬಾಸ್: ಒಬ್ಬ ಸ್ಪರ್ಧಿಗೆ 37 ಕೋಟಿಗೂ ಹೆಚ್ಚು ವೋಟ್, ಆದರೂ ಇದೆ ಕಠಿಣ ಸ್ಪರ್ಧೆ
Bigg Boss Kannada 12: ಬಿಗ್ಬಾಸ್ ಕನ್ನಡ ಸೀಸನ್ 12ರ ಫಿನಾಲೆಗೆ ಕೆಲವೇ ಗಂಟೆಗಳು ಬಾಕಿ ಇದೆ. ಕಳೆದ ಸೀಸನ್ ಗೆದ್ದವರಿಗೆ 5.23 ಕೋಟಿ ಮತಗಳು ಬಂದಿದ್ದವೆಂದು ಸುದೀಪ್ ಮಾಹಿತಿ ನೀಡಿದರು. ಆದರೆ ಈ ಸೀಸನ್ನಲ್ಲಿ ದಾಖಲೆಯೇ ನಡೆದಿದ್ದು, ಬಿಗ್ಬಾಸ್ ಗೆಲ್ಲಲಿರುವ ಒಬ್ಬ ಸ್ಪರ್ಧಿಗೆ ವೋಟಿಂಗ್ ಲೈನ್ ಮುಗಿಯುವ ಒಂದು ದಿನಕ್ಕೂ ಮುಂಚೆಯೇ 37 ಕೋಟಿಗೂ ಹೆಚ್ಚು ಮತಗಳು ಬಂದಿವೆ.

ಬಿಗ್ಬಾಸ್ ಕನ್ನಡ ಸೀಸನ್ 12 (Bigg Boss Kannada) ಮುಗಿಯಲು ಒಂದು ದಿನ ಸಹ ಬಾಕಿ ಇಲ್ಲ. ಸದ್ಯಕ್ಕೆ ಮನೆಯಲ್ಲಿ ಆರು ಮಂದಿ ಸ್ಪರ್ಧಿಗಳಿದ್ದು ಆರರಲ್ಲಿ ಒಬ್ಬರು ವಿನ್ನರ್ ಆಗಲಿದ್ದಾರೆ. ಪ್ರೇಕ್ಷಕರು ಈಗಾಗಲೇ ತಮ್ಮಿಷ್ಟದ ಸ್ಪರ್ಧಿಗೆ ಮತ ಚಲಾಯಿಸುತ್ತಿದ್ದಾರೆ. ಭಾನುವಾರ ಬೆಳಿಗ್ಗೆ 10 ಗಂಟೆಯ ವರೆಗೆ ತಮ್ಮಿಷ್ಟದ ಸ್ಪರ್ಧಿಗೆ ಮತ ಚಲಾವಣೆ ಮಾಡಬಹುದಾಗಿರುತ್ತದೆ. ಯಾವ ಸ್ಪರ್ಧಿಗೆ ಹೆಚ್ಚು ಮತಗಳು ಬಂದಿರುತ್ತವೆಯೋ ಆ ಸ್ಪರ್ಧಿಯನ್ನು ವಿಜೇತರಾಗಿ ಘೋಷಣೆ ಮಾಡಲಾಗುತ್ತದೆ. ಆದರೆ ಈ ಬಾರಿ ಬಿಗ್ಬಾಸ್ ಕನ್ನಡ 12 ಈ ವಿಷಯದಲ್ಲಿ ದಾಖಲೆಯನ್ನೇ ಬರೆದಿದೆ. ವೋಟಿಂಗ್ ಲೈನ್ ಕ್ಲೋಸ್ ಆಗಲು ಇನ್ನೂ 12 ಗಂಟೆ ಇರುವಾಗಲೇ ಕೇವಲ ಒಬ್ಬ ಸ್ಪರ್ಧಿಗೆ 37 ಕೋಟಿಗೂ ಹೆಚ್ಚು ಮತಗಳು ಬಂದಿವೆ.
ಸ್ವತಃ ಸುದೀಪ್ ಅವರು ಶನಿವಾರದ ಎಪಿಸೋಡ್ನಲ್ಲಿ ಈ ವಿಷಯ ಹೇಳಿದ್ದಾರೆ. ಕೇವಲ ಒಬ್ಬ ಸ್ಪರ್ಧಿಗೆ 37 ಕೋಟಿ ಮತಗಳು ಬಂದಿವೆ ಎಂದಿದ್ದಾರೆ. ಇದು ಎಷ್ಟು ದೊಡ್ಡ ಸಂಖ್ಯೆ ಎಂಬುದನ್ನು ಉದಾಹರಣೆಯನ್ನು ಸಹ ಸುದೀಪ್ ನೀಡಿದರು. ಕಳೆದ ಸೀಸನ್ ಅಂದರೆ 11ನೇ ಸೀಸನ್ನಲ್ಲಿ ವಿನ್ನರ್ ಆದವರರಿಗೆ 5 ಕೋಟಿ ಮತಗಳು ಬಂದಿದ್ದವು, ಆದರೆ ಈ ಬಾರಿ ಗೆಲ್ಲಲಿರುವ ಸ್ಪರ್ಧಿಗೆ ಅದರ ಆರು ಪಟ್ಟು ಹೆಚ್ಚು ಮತಗಳು ಈಗಾಗಲೇ ಬಂದು ಬಿಟ್ಟಿದೆ. ನಾಳೆಯ ವೇಳೆಗೆ ಈ ಅಂತರ ಇನ್ನೂ ಹೆಚ್ಚಾಗಲಿದೆ.
ಸುದೀಪ್ ಅವರು ಈ ಬಗ್ಗೆ ಸ್ಪರ್ಧಿಗಳೊಟ್ಟಿಗೆ ಮಾತನಾಡುತ್ತಾ, ಕಳೆದ ಬಾರಿಯ ವಿನ್ನರ್ಗೆ ಐದು ಕೋಟಿ ಮತಗಳು ಬಂದಿದ್ದವು ಈಗ ಎಷ್ಟು ಬಂದಿರಬಹುದು ಊಹಿಸಿ ಎಂದಾಗ ಗಿಲ್ಲಿ ಸೇರಿ ಇನ್ನೂ ಕೆಲವರು 6 ಕೋಟಿ ಹೆಚ್ಚೆಂದರೆ 10 ಕೋಟಿ ಎಂದರು. ಆದರೆ ವೋಟಿಂಗ್ ಲೈನ್ ಕ್ಲೋಸ್ ಆಗಲು ಇನ್ನೂ 24 ಗಂಟೆಗಿಂತಲೂ ಹೆಚ್ಚು ಸಮಯ ಇರುವಾಗಲೇ ಒಬ್ಬ ಸ್ಪರ್ಧಿಗೆ ಅಂದರೆ ಗೆಲ್ಲಲಿರುವ ಸ್ಪರ್ಧಿಗೆ 37 ಕೋಟಿಗೂ ಹೆಚ್ಚು ಮತಗಳು ಬಂದಿವೆ ಎಂಬುದನ್ನು ಸುದೀಪ್ ಬಹಿರಂಗ ಪಡಿಸಿದ್ದಾರೆ.
ಇದು ಮಾತ್ರವೇ ಅಲ್ಲದೆ ಕಳೆದ ವರ್ಷ ಹಾಗೂ ಈ ವರ್ಷ ಈ ವರೆಗೆ ಆರನೇ ಸ್ಪರ್ಧಿಗೆ ಬಂದಿರುವ ಮತಗಳ ಅಂತರವನ್ನು ಸಹ ಸುದೀಪ್ ತೋರಿಸಿದರು. 11ನೇ ಸೀಸನ್ನ 6ನೇ ಸ್ಪರ್ಧಿಗೆ 64 ಲಕ್ಷ ಮತಗಳು ಬಂದಿದ್ದವು. ಆದರೆ ಈ ಸೀಸನ್ನಲ್ಲಿ ವೋಟಿಂಗ್ ಲೈನ್ ಕ್ಲೋಸ್ ಆಗಲು ಇನ್ನೂ ಹಲವು ಗಂಟೆಗಳು ಬಾಕಿ ಇರುವಾಗಲೇ 94 ಲಕ್ಷ ಮತಗಳು ಬಂದಿವೆ. ಈ ಸಂಖ್ಯೆ ಒಂದು ಕೋಟಿಗೂ ಹೆಚ್ಚಾಗುವ ಸಾಧ್ಯತೆ ಇದೆ.
ಇದನ್ನೂ ಓದಿ:ಬಿಗ್ಬಾಸ್ನಿಂದ ಹೊರಬಂದೊಡನೆ ಹೇರ್ಸ್ಟೈಲ್ ಬದಲಿಸಿದ ಧ್ರುವಂತ್
ಮತ್ತೊಂದು ವಿಷಯವನ್ನು ಸಹ ಸುದೀಪ್ ಅವರು ಸ್ಪರ್ಧಿಗಳಿಗೆ ಹೇಳಿದರು. ಗೆಲ್ಲಲಿರುವ ಸ್ಪರ್ಧಿಗೆ ಈಗಾಗಲೇ 37 ಕೋಟಿಗೂ ಹೆಚ್ಚು ಮತಗಳು ಬಂದಿವೆ ಆದರೂ ಸಹ ಮೊದಲ ಸ್ಪರ್ಧಿಗೂ ಎರಡನೇ ಸ್ಪರ್ಧಿಗೂ ಮತಗಳ ಅಂತರ ಬಹಳ ಕಡಿಮೆ ಇದೆ ಎಂದಿದ್ದಾರೆ. ಆ ಮೂಲಕ ಸ್ಪರ್ಧೆ ಇನ್ನೂ ಕಠಿಣವಾಗಿದೆ ಎಂದಿದ್ದಾರೆ. ಮಾತ್ರವಲ್ಲದೆ, ನೀವು (ಸ್ಪರ್ಧಿಗಳು) ಏನು ಪಡೆದುಕೊಂಡಿದ್ದೀರೆಂದರೆ ಎಂಬುದಕ್ಕೆ ಇದು ಸಾಕ್ಷಿ. ಮೊದಲೆಲ್ಲ ಜನ ನೋಡುತ್ತಿದ್ದರು ಆದರೆ ಮತ ಹಾಕುವವರ ಸಂಖ್ಯೆ ಕಡಿಮೆ ಇರುತ್ತಿತ್ತು, ಆದರೆ ಈಗ ಜನರ ಇನ್ವಾಲ್ವ್ಮೆಂಟ್ ಹೆಚ್ಚಾಗಿದೆ. ಪ್ರತಿಯೊಬ್ಬರೂ ವೋಟ್ ಹಾಕುತ್ತಿದ್ದಾರೆ. ಬಿಗ್ಬಾಸ್ ನಮ್ಮ ಜೀವನದ ಭಾಗ ಅಂದುಕೊಂಡಿದ್ದಾರೆ. ಈ ಬಿಗ್ಬಾಸ್ ವೇದಿಕೆ ಸಹ ದಿನೇ ದಿನೇ ದೊಡ್ಡದಾಗುತ್ತಿದೆ. ಭಾಗವಹಿಸಿದವರನ್ನು ಎಲ್ಲಿಗೋ ಕರೆದೊಯ್ಯುತ್ತಿದೆ, ಹಲವು ಅವಕಾಶಗಳನ್ನು ನೀಡುತ್ತಿದೆ. ಈ ರೀತಿಯ ಅವಕಾಶ ಬೇರೆ ಯಾವ ರಿಯಾಲಿಟಿ ಶೋನಲ್ಲೂ ಸಿಗುವುದಿಲ್ಲ ಎಂದರು ಸುದೀಪ್.
ಗಿಲ್ಲಿ, ಅಶ್ವಿನಿ, ರಕ್ಷಿತಾ, ಧನುಶ್, ಕಾವ್ಯಾ, ರಘು ಅವರುಗಳ ಅಭಿಮಾನಿಗಳು, ಗೆಳೆಯರುಗಳು ಈಗಾಗಲೇ ಸ್ಪರ್ಧಿಗಳ ಬಗ್ಗೆ ಅಭಿಯಾನ ಆರಂಭಿಸಿದ್ದು ಮತಗಳನ್ನು ಹಾಕಿಸುತ್ತಿದ್ದಾರೆ. ಮತ ಹಾಕುವಂತೆ ಪ್ರಚಾರ ಮಾಡುತ್ತಿದ್ದಾರೆ. ಗಿಲ್ಲಿಗಾಗಿ ಹಲವೆಡೆ ಅಭಿಮಾನಿಗಳು ಮತ ಅಭಿಯಾನ ಮಾಡುತ್ತಿರುವುದು ಇತ್ತೀಚೆಗೆ ಸಖತ್ ಸುದ್ದಿ ಆಗಿತ್ತು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:58 pm, Sat, 17 January 26




