ರೇಣುಕಾ ಸ್ವಾಮಿ ಶವ ಸಿಕ್ಕ ಸ್ಥಳದಲ್ಲೇ ಮಚ್ಚು ಎಸೆದರಾ ರಜತ್?

|

Updated on: Apr 12, 2025 | 7:04 PM

Bigg Boss Rajath: ಬಿಗ್​ಬಾಸ್ ಮಾಜಿ ಸ್ಪರ್ಧಿಗಳಾದ ವಿನಯ್ ಹಾಗೂ ರಜತ್ ರೀಲ್ಸ್ ಮಾಡುವಾಗ ಮಚ್ಚು ತೋರಿಸಿ ಬಂಧನಕ್ಕೆ ಒಳಗಾಗಿದ್ದರು. ಅಲ್ಲದೆ ಅವರು ನಿಜವಾದ ಮಚ್ಚನ್ನು ರೇಣುಕಾ ಸ್ವಾಮಿ ಶವ ದೊರಕಿದ್ದ ಸುಮ್ಮನಹಳ್ಳಿ ದೊಡ್ಡ ಮೋರಿಗೆ ಎಸೆದಿದ್ದಾರೆ ಎನ್ನಲಾಗಿತ್ತು. ಈ ಬಗ್ಗೆ ಸ್ವತಃ ರಜತ್ ಟಿವಿ9 ಜೊತೆಗೆ ಮಾತನಾಡಿದ್ದಾರೆ.

ರೇಣುಕಾ ಸ್ವಾಮಿ ಶವ ಸಿಕ್ಕ ಸ್ಥಳದಲ್ಲೇ ಮಚ್ಚು ಎಸೆದರಾ ರಜತ್?
Rajath
Follow us on

ವಿನಯ್ ಗೌಡ (Vinay Gowda) ಹಾಗೂ ರಜತ್ (Rajath) ಅವರುಗಳು ಮಚ್ಚು ಹಿಡಿದು ರೀಲ್ಸ್ ಮಾಡಿ ಪೊಲೀಸರ ಅತಿಥಿಯಾಗಿದ್ದರು. ಆದರೆ ಅವರು ನಿಜವಾದ ಮಚ್ಚು ಬಳಸಿ ರೀಲ್ಸ್ ಮಾಡಿ ಅದನ್ನು ಪೊಲೀಸರಿಗೆ ಸಿಗದಂತೆ ರೇಣುಕಾ ಸ್ವಾಮಿ ಶವ ಸಿಕ್ಕ ಸುಮ್ಮನಹಳ್ಳಿ ಮೋರಿಯಲ್ಲಿ ಎಸೆದಿದ್ದರು ಎನ್ನಲಾಗಿತ್ತು. ಇದೀಗ ರಜತ್, ಮೊದಲ ಬಾರಿಗೆ ರೀಲ್ಸ್ ವಿವಾದದ ಬಗ್ಗೆ ಮಾಧ್ಯಮಗಳ ಬಳಿ ಮಾತನಾಡಿದ್ದು, ತಾವು ಮಚ್ಚನ್ನು ಸುಮ್ಮನಹಳ್ಳಿ ದೊಡ್ಡ ಮೋರಿಗೆ ಎಸೆದಿದ್ದು ನಿಜವೇ ಎಂಬ ಬಗ್ಗೆ ಸ್ಪಷ್ಟಪಡಿಸಿದ್ದಾರೆ.

‘ಕೆಲವರು ನನ್ನನ್ನು ದರ್ಶನ್ ಹಾಗೂ ರೇಣುಕಾ ಸ್ವಾಮಿ ಕೊಲೆ ಕೇಸಿಗೆ ಲಿಂಕ್ ಮಾಡಲು ಯತ್ನಿಸಿದ್ದಾರೆ. ದರ್ಶನ್ ಅವರೆಲ್ಲಿ, ನಾನೆಲ್ಲಿ, ಆ ರೇಣುಕಾ ಸ್ವಾಮಿ ಎಲ್ಲಿ. ಒಂದಕ್ಕೊಂದು ಸಂಬಂಧವೇ ಇಲ್ಲ. ನಾನು ಸುಮನಹಳ್ಳಿ ಮೋರಿ ಬಳಿ ಮಚ್ಚು ಬಿಸಾಡಿದ್ದು ನಿಜ ಆದರೆ, ನಾನು ಬಿಸಾಡಿದ್ದು ಸಹ ನಿಜವಾದ ಮಚ್ಚಲ್ಲ. ಅದು ಸೆಟ್ ಪ್ರಾಪರ್ಟಿ ಆಗಿತ್ತು’ ಎಂದಿದ್ದಾರೆ ರಜತ್.

ಮಚ್ಚು ಬಿಸಾಡುವ ಅವಶ್ಯಕತೆ ಏನಿತ್ತು ಎಂಬ ಪ್ರಶ್ನೆಗೆ, ‘ಮಚ್ಚು ನನ್ನ ಬಳಿ ಇತ್ತು, ಸೆಟ್ ಅವರಿಗೆ ಕಾಲ್ ಮಾಡಿ ವಾಪಸ್ ಕೊಡಲು ಮುಂದಾದೆ ಅವರು ತಮ್ಮ ಲಗ್ಗೆರೆ ಗೋಡಾನ್​ನಲ್ಲಿ ಮಚ್ಚು ಕೊಟ್ಟು ಬಿಡಿ ಎಂದರು. ಆದರೆ ನನಗೆ ಅಷ್ಟು ಸಮಯ ಇರಲಿಲ್ಲ. ನಾನು ಮಾರನೇಯ ದಿನ ಚಿತ್ರದುರ್ಗಕ್ಕೆ ಹೋಗಬೇಕಿತ್ತು. ಆದರೆ ಮಚ್ಚನ್ನು ಕಾರಿನಲ್ಲಿ ಇಟ್ಟುಕೊಳ್ಳುವುದು ಸರಿಯಲ್ಲ ಎಂದು ನಾನು ಬಿಸಾಡಿದೆ’ ಎಂದಿದ್ದಾರೆ ರಜತ್.

ಇದನ್ನೂ ಓದಿ:ರೀಲ್ಸ್ ವಿವಾದ, ರಜತ್-ವಿನಯ್ ನಡುವೆ ಭಿನ್ನಾಭಿಪ್ರಾಯ, ಮುರಿಯಿತೇ ಗೆಳೆತನ?

‘ಸೆಟ್​ನವರ ಬಳಿ ಅಂಥಹುದೇ ಮೂರು ಮಚ್ಚುಗಳಿವೆ, ಅವು ಬೇಗ ಮುರಿದು ಹೋಗುತ್ತವೆ ಎಂದೇ ಅವರು ಹೆಚ್ಚುವರಿ ಮಚ್ಚುಗಳನ್ನು ಮಾಡಿರುತ್ತಾರೆ. ಹಾಗಾಗಿ ಅವರೇ ಬಿಸಾಡಿ ಎಂದರು ಹಾಗಾಗಿ ಆ ಮಚ್ಚನ್ನು ನಾನು ಬಿಸಾಡಿದೆ. ಆದರೆ ಅದಕ್ಕೆ ನನ್ನನ್ನು ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಲಿಂಕ್ ಮಾಡುವ ಪ್ರಯತ್ನವನ್ನು ಕೆಲವರು ಮಾಡಿದ್ದಾರೆ. ನನಗೂ ಆ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ ರಜತ್.

ಬಿಗ್​ಬಾಸ್ ಮಾಜಿ ಸ್ಪರ್ಧಿಗಳಾದ ರಜತ್ ಮತ್ತು ವಿನಯ್ ಅವರುಗಳು ರೀಲ್ಸ್ ಒಂದನ್ನು ಮಾಡಿದ್ದರು. ಆ ರೀಲ್ಸ್​​ನಲ್ಲಿ ವಿನಯ್ ಹಾಗೂ ರಜತ್ ಅವರುಗಳು ಮಚ್ಚೊಂದನ್ನು ಹಿಡಿದುಕೊಂಡಿದ್ದರು. ಇದೇ ಕಾರಣಕ್ಕೆ ಅವರ ಮೇಲೆ ಪ್ರಕರಣ ದಾಖಲಾಗಿತ್ತು. ಆದರೆ ಅವರು ಮಚ್ಚನ್ನು ಪೊಲೀಸರಿಗೆ ಒಪ್ಪಿಸುವಾಗ ಬೇರೆ ಮಚ್ಚನ್ನು ಒಪ್ಪಿಸಿದ್ದರು. ಇದರಿಂದಾಗಿ ಅನುಮಾನ ಬಂಧ ಪೊಲೀಸರು ಇಬ್ಬರನ್ನೂ ಬಂಧಿಸಿ ವಿಚಾರಣೆಗೆ ಒಳಪಡಿಸಿದರು. ಕೆಲ ದಿನಗಳ ಬಳಿಕ ಇಬ್ಬರೂ ಸಹ ಜಾಮೀನಿನ ಮೇಲೆ ಬಿಡುಗಡೆ ಆದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:01 pm, Sat, 12 April 25