ಹಸು ಕೆಚ್ಚಲು ಕೊಯ್ದ ಪ್ರಕರಣ: ಗರಂ ಆದ ಬಿಗ್ ಬಾಸ್ ಸ್ಪರ್ಧಿ ಚೈತ್ರಾ ಕುಂದಾಪುರ

|

Updated on: Jan 13, 2025 | 8:35 PM

ಚೈತ್ರಾ ಕುಂದಾಪುರ ಅವರು ಹಿಂದೂ ಪರ ಹೋರಾಟಗಳಿಂದ ಗುರುತಿಸಿಕೊಂಡವರು. ಕಳೆದ ಮೂರು ತಿಂಗಳಿಂದ ಅವರು ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿ ಆಗಿದ್ದರು. ಎಲಿಮಿನೇಟ್​ ಆಗಿ ಹೊರಬರುತ್ತಿದ್ದಂತೆಯೇ ಚೈತ್ರಾ ಅವರ ಕಿವಿಗೆ ಕಹಿ ಸುದ್ದಿ ಬಿದ್ದಿದೆ. ಬೆಂಗಳೂರಿನಲ್ಲಿ ಹಸುವಿನ ಕೆಚ್ಚಲು ಕೊಯ್ದು ವಿಕೃತಿ ಮೆರೆದ ಘಟನೆಯ ಬಗ್ಗೆ ಚೈತ್ರಾ ಕುಂದಾಪುರ ಪ್ರತಿಕ್ರಿಯೆ ನೀಡಿದ್ದಾರೆ.

ಹಸು ಕೆಚ್ಚಲು ಕೊಯ್ದ ಪ್ರಕರಣ: ಗರಂ ಆದ ಬಿಗ್ ಬಾಸ್ ಸ್ಪರ್ಧಿ ಚೈತ್ರಾ ಕುಂದಾಪುರ
Chaithra Kundapura
Follow us on

ಬಿಗ್ ಬಾಸ್ ಆಟದಿಂದ ಚೈತ್ರಾ ಕುಂದಾಪುರ ಅವರು ಎಲಿಮಿನೇಟ್ ಆಗಿದ್ದಾರೆ. ದೊಡ್ಮನೆಯಿಂದ ಹೊರಬಂದ ಅವರು ಮಾಧ್ಯಮಗಳಿಗೆ ಸಂದರ್ಶನ ನೀಡಿದ್ದಾರೆ. ಹಸುಗಳ ಕೆಚ್ಚಲು ಕೊಯ್ದ ಪ್ರಕರಣದ ಬಗ್ಗೆ ಕೂಡ ಅವರು ಈ ವೇಳೆ ಪ್ರತಿಕ್ರಿಯಿಸಿದ್ದಾರೆ. ಹಿಂದೂ ಪರ ಹೋರಾಟಗಳ ಮೂಲಕ ಗುರುತಿಸಿಕೊಂಡ ಚೈತ್ರಾ ಅವರಿಗೆ ಈ ವಿಕೃತ ಘಟನೆಯಿಂದ ನೋವಾಗಿದೆ. ಹಸುಗಳ ಕೆಚ್ಚಲು ಕೊಯ್ದವರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಚೈತ್ರಾ ಅವರು ಹೇಳಿದ್ದಾರೆ. ಘಟನೆಯ ಬಗ್ಗೆ ಕೇಳಿ ತಮಗೆ ಆಘಾತ ಆಯಿತು ಎಂದು ಅವರು ಹೇಳಿದ್ದಾರೆ.

‘ನಾವು ಗೋವುಗಳನ್ನು ಕೇವಲ ಪ್ರಾಣಿ ಎಂದು ನೋಡುವುದಿಲ್ಲ. ನಮಗೆ ಅಕ್ಷರಶಃ ಗೋಮಾತೆ ಅವಳು. ಮುಕ್ಕೋಟಿ ದೇವರುಗಳ ಆವಾಸ ಸ್ಥಾನ ಆಗಿರುವ ಗೋವಿನ ಕೆಚ್ಚಲನ್ನು ಕೊಯ್ಯುವಂತಹ ವಿಕೃತಿ ಮೆರೆಯುತ್ತಾರೆ ಎಂದರೆ ಇವರ ಮನಸ್ಥಿತಿ ಎಂಥದ್ದು? ಇವರು ಎಂಥ ವಾತಾವರಣದಲ್ಲಿ ಬೆಳೆದಿರುತ್ತಾರೆ ಎಂಬುದನ್ನು ನಾವೆಲ್ಲ ಆಲೋಚನೆ ಮಾಡಬೇಕು’ ಎಂದಿದ್ದಾರೆ ಚೈತ್ರಾ ಕುಂದಾಪುರ.

‘ಕುಡಿದ ಮತ್ತಿನಲ್ಲಿ ಆತ ಈ ಕೃತ್ಯ ಮಾಡಿದ್ದಾನೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಕುಡಿದ ಮತ್ತಿನಲ್ಲಿ ಯಾರೂ ಕೂಡ ಇಂಥ ವಿಕೃತಿ ಮೆರೆಯಲ್ಲ. ಉದ್ದೇಶ ಪೂರ್ವಕವಾಗಿಯೇ ಈ ಕೆಲಸ ಮಾಡಿದ್ದಾರೆ. ಈಗ ಪ್ರಾಣಿ ದಯಾ ಸಂಘಗಳು ಎಲ್ಲಿದ್ದಾವೆ ಅಂತ ನನಗೆ ಆಶ್ಚರ್ಯ ಆಗುತ್ತದೆ. ನಾಯಿಗಳಿಗಾಗಿ, ಬೆಕ್ಕುಗಳಿಗಾಗಿ ಧ್ವನಿ ಎತ್ತುತ್ತೀರಿ. ನಿಮ್ಮ ಪ್ರಾಣಿಗಳ ವಿಭಾಗದಲ್ಲಿ ಹಸು ಬರುವುದಿಲ್ಲವೇ’ ಎಂದು ಚೈತ್ರಾ ಅವರ ಪ್ರಶ್ನಿಸಿದ್ದಾರೆ.

‘ತಾಯಿ ಮೂರು ವರ್ಷಗಳ ಕಾಲ ಮಗುವಿಗೆ ಎದೆಹಾಲು ಕುಡಿಸುತ್ತಾಳೆ. ಆದರೆ ಜೀವನ ಪರ್ಯಂತ ನಮಗೆ ಹಾಲು ನೀಡಿ ಸಾಕುವವಳು ಗೋಮಾತೆ. ಜಗತ್ತಿನ ಬೇರೆ ಯಾವುದೇ ಪ್ರಾಣಿಗೂ ತಾಯಿ ಎನ್ನುವ ಸ್ಥಾನವನ್ನು ನೀಡಿಲ್ಲ. ಗೋವಿಗೆ ಮಾತೆ ಎಂಬ ಸ್ಥಾನ ಕೊಟ್ಟಿದ್ದು ಯಾಕೆಂದರೆ ಆಕೆ ಮನು ಕುಲವನ್ನು ಬದುಕಿನ ಉದ್ದಕ್ಕೂ ಸಾಕುತ್ತಾಳೆ. ಇದು ನಮ್ಮೆಲ್ಲ ಧಾರ್ಮಿಕ ಭಾವನೆ ಆದ್ದರಿಂದ ಪ್ರಾಣಿ ದಯಾ ಸಂಘಗಳು ಇದನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ ಎನಿಸುತ್ತದೆ’ ಎಂದು ಚೈತ್ರಾ ಹೇಳಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ಮನೆಯಿಂದ ಹೊರಬಂದು ಮದುವೆ ಬಗ್ಗೆ ಮಾತಾಡಿದ ಚೈತ್ರಾ ಕುಂದಾಪುರ

‘ಹಿಂದೂಗಳ ಭಾವನೆಗೆ ಧಕ್ಕೆ ಮಾಡಿರುವ ಪ್ರಕರಣವನ್ನು ಕೂಡ ದಾಖಲಿಸಬೇಕು. ಯಾಕೆಂದರೆ ಇದು ತುಂಬ ಚಿಕ್ಕ ಘಟನೆ ಖಂಡಿತ ಅಲ್ಲ. ಈ ಘಟನೆ ಮೂಲಕ ಸಮಾಜಕ್ಕೆ ಏನೋ ಸಂದೇಶ ಕೊಡಲು ಪ್ರಯತ್ನಿಸುತ್ತಿದ್ದಾರೆ ಎನಿಸುತ್ತದೆ. ಇವತ್ತು ಹಸು ಮೇಲೆ ದಾಳಿ ಮಾಡಿರುವವರು ನಾಳೆ ಮನುಷ್ಯರ ಮೇಲೆ ಎಷ್ಟು ಕ್ರೂರವಾಗಿ ಹಿಂಸಿಸುವ ಮಟ್ಟಕ್ಕೆ ಹೋಗಬಹುದು ಎಂಬುದನ್ನು ನಾವೆಲ್ಲ ಯೋಚಿಸಬೇಕು’ ಎಂದಿದ್ದಾರೆ ಚೈತ್ರಾ ಕುಂದಾಪುರ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.