Bigg Boss Elimination: ಬಿಗ್ ಬಾಸ್ ಮನೆಯಿಂದ ಚೈತ್ರಾ ಔಟ್; ಕೊರಗಜ್ಜನ ನೆನೆದು ಬಚಾವ್ ಆದ ಧನರಾಜ್
‘ಬಿಗ್ ಬಾಸ್ ಕನ್ನಡ ಸೀಸನ್ 11’ ರಿಯಾಲಿಟಿ ಶೋನಲ್ಲಿ ಚೈತ್ರಾ ಕುಂದಾಪುರ ಅವರ ಆಟ ಮುಗಿದಿದೆ. ಹಲವು ಬಾರಿ ನಾಮಿನೇಟ್ ಆಗಿ ಬಚಾವ್ ಆಗಿದ್ದ ಅವರು ಈ ವಾರ ದೊಡ್ಮನೆಯಿಂದ ಔಟ್ ಆಗಿದ್ದಾರೆ. ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗುವಾಗ ಚೈತ್ರಾ ಅವರು ಸಖತ್ ಎಮೋಷನಲ್ ಆಗಿದ್ದರು. ‘ಈ ಮನೆಯ ಅನ್ನದ ಋಣ ಮುಗಿಯಿತು’ ಎಂದರು.
ಮಾತಿನ ಮೂಲಕ ಬಿಗ್ ಬಾಸ್ ಟ್ರೋಫಿ ಗೆಲ್ಲಬಹುದು ಎಂಬ ಭ್ರಮೆಯಲ್ಲಿದ್ದ ಚೈತ್ರಾ ಕುಂದಾಪುರ ಅವರು ಈ ವಾರ ಎಲಿಮಿನೇಟ್ ಆಗಿದ್ದಾರೆ. ಕೊನೇ ಹಂತದಲ್ಲಿ ಮೋಕ್ಷಿತಾ ಪೈ, ಧನರಾಜ್, ಚೈತ್ರಾ ಕುಂದಾಪುರ ಅವರು ಡೇಂಜರ್ ಝೋನ್ಗೆ ಬಂದಿದ್ದರು. ಮೋಕ್ಷಿತಾ ಅವರು ಮೊದಲು ಸೇಫ್ ಆದರು. ಕೊನೆಯಲ್ಲಿ ಧನರಾಜ್ ಮತ್ತು ಚೈತ್ರಾ ನಡುವೆ ಯಾರು ಔಟ್ ಆಗಬಹುದು ಎಂದ ಕೌತುಕ ಮೂಡಿತು. ಅಂತಿಮವಾಗಿ ಚೈತ್ರಾ ಅವರ ಆಟ ಇಲ್ಲಿಗೆ ಮುಗಿಯಿತು ಎಂಬುದು ಗೊತ್ತಾಯಿತು. ಎಲ್ಲರಿಗೂ ಭಾವುಕವಾಗಿ ವಿದಾಯ ಹೇಳಿದ ಚೈತ್ರಾ ಅವರು ದೊಡ್ಮನೆಯಿಂದ ಹೊರಗೆ ಬಂದರು.
ಎಲಿಮಿನೇಷನ್ ಪ್ರಕ್ರಿಯೆ ನಡೆಯುವಾಗ ‘ಬಿಗ್ ಬಾಸ್ ಮನೆಯಲ್ಲಿ ಒಂದು ಲಕೋಟೆ ಇರಲಿದೆ. ಅದರಲ್ಲಿ ಸೇಫ್ ಆದವರ ಹೆಸರು ಬರೆದಿರುತ್ತದೆ’ ಎಂದು ಸುದೀಪ್ ಹೇಳಿದರು. ಮನೆ ಪೂರ್ತಿ ಸುತ್ತಾಡಿ ಧನರಾಜ್ ಮತ್ತು ಚೈತ್ರಾ ಅವರು ಲಕೋಟೆ ಹುಡುಕಿದರು. ಹುಡುಕುವ ವೇಳೆ ಧನರಾಜ್ ಅವರು ‘ಸ್ವಾಮಿ ಕೊರಗಜ್ಜ’ ಎಂದು ದೇವರನ್ನು ಸ್ಮರಿಸಿದರು. ಅಚ್ಚರಿ ಎಂದರೆ, ಧನರಾಜ್ ಅವರೇ ಸೇಫ್ ಆದರು!
ಚೈತ್ರಾ ಕುಂದಾಪುರ ಅವರು ಬಿಗ್ ಬಾಸ್ ಮನೆಯಲ್ಲಿ ಮಾಡಿದ ತಪ್ಪುಗಳು ಒಂದೆರಡಲ್ಲ. ಅನಾರೋಗ್ಯದ ಕಾರಣದಿಂದ ಆಸ್ಪತ್ರೆಗೆ ಹೋಗಿ ಬಂದಿದ್ದಾಗ ಹೊರ ಜಗತ್ತಿನ ವಿಷಯಗಳನ್ನೆಲ್ಲ ಅವರು ಬಿಗ್ ಬಾಸ್ ಮನೆಯ ಒಳಗೆ ಹೇಳಿದ್ದರು. ಆಗ ಅವರಿಗೆ ಸುದೀಪ್ ಸಿಕ್ಕಾಪಟ್ಟೆ ಕ್ಲಾಸ್ ತೆಗೆದುಕೊಂಡಿದ್ದರು. ಅದಕ್ಕೂ ಮುನ್ನ ‘ನಿನ್ನ ಅಪ್ಪನಿಗೆ ಹುಟ್ಟಿದ್ದರೆ..’ ಎಂದು ಜಗದೀಶ್ಗೆ ಚೈತ್ರಾ ಬೈಯ್ದಿದ್ದರು. ಆಗ ಕೂಡ ಕಿಚ್ಚ ಬುದ್ಧಿ ಹೇಳಿದ್ದರು. ಸುದೀಪ್ ಬುದ್ಧಿ ಹೇಳಿದ ಮೇಲೆ ಕೂಡ ಚೈತ್ರಾ ಅವರು ತಮ್ಮದೇ ಸರಿ ಎಂಬಂತೆ ಬಿಗ್ ಬಾಸ್ ಮನೆಯ ಒಳಗೆ ಕುಳಿತು ಮಾತನಾಡಿದ್ದರು.
ಇದನ್ನೂ ಓದಿ: ಬಿಗ್ ಬಾಸ್ ಬಿಟ್ಟರೂ ಸುದೀಪ್ ಬಿಡಲಿಲ್ಲ; ಭವ್ಯಾಗೆ ಸೂಕ್ತ ಶಿಕ್ಷೆ ಕೊಟ್ಟ ಕಿಚ್ಚ
ಪ್ರತಿ ಬಾರಿ ನಾಮಿನೇಷನ್ನಿಂದ ಸೇಫ್ ಆದಾಗ ‘ಮತ್ತೆ ಈ ಡೇಂಜರ್ ಜೋನ್ಗೆ ಬರುವುದಿಲ್ಲ. ಚೆನ್ನಾಗಿ ಆಡುತ್ತೇನೆ’ ಎಂದೆಲ್ಲ ಚೈತ್ರಾ ಭಾಷಣ ಬಿಗಿಯುತ್ತಿದ್ದರು. ಆದರೆ ಎಂದಿಗೂ ಅವರು ರಿಯಲ್ ಆಟ ಆಡಲೇ ಇಲ್ಲ. ಕೊನೇ ವಾರದಲ್ಲಿ ಮಾತ್ರ ಅವರಿಗೆ ಎಲ್ಲರಿಂದ ‘ಉತ್ತಮ’ ಪಟ್ಟ ಸಿಕ್ಕಿತು. ಕ್ಯಾಪ್ಟನ್ ಆಗಲು ಅವರಿಗೆ ಸಾಧ್ಯವಾಗಲಿಲ್ಲ. ಕಿಚ್ಚನ ಚಪ್ಪಾಳೆ ಕೂಡ ಸಿಗಲಿಲ್ಲ. ಆ ಬೇಸರದಲ್ಲೇ ಅವರು ಬಿಗ್ ಬಾಸ್ ಆಟವನ್ನು ಅಂತ್ಯಗೊಳಿಸಿದ್ದಾರೆ. ಸದ್ಯ ಬಿಗ್ ಬಾಸ್ ಮನೆಯಲ್ಲಿ ಧನರಾಜ್, ತ್ರಿವಿಕ್ರಮ್, ಭವ್ಯಾ ಗೌಡ, ಉಗ್ರಂ ಮಂಜು, ಮೋಕ್ಷಿತಾ ಪೈ, ಗೌತಮಿ ಜಾದವ್, ರಜತ್, ಹನುಮಂತ ಅವರು ಆಟ ಮುಂದುವರಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.