
ಈಗ ದಕ್ಷಿಣದ ಪ್ಯಾನ್ ಇಂಡಿಯಾ (Pan India) ಸ್ಟಾರ್ಗಳೆಂದರೆ ಪ್ರಭಾಸ್, ಅಲ್ಲು ಅರ್ಜುನ್, ರಾಮ್ ಚರಣ್, ಜೂ ಎನ್ಟಿಆರ್ ಎನ್ನಲಾಗುತ್ತದೆ. ಆದರೆ ತೆಲುಗಿನ ಓಜಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದವರು ಮೆಗಾಸ್ಟಾರ್ ಚಿರಂಜೀವಿ. ಒಂದು ಸಮಯದಲ್ಲಿ ಇಡೀ ದೇಶದಲ್ಲಿ ಇನ್ಯಾವ ನಟನೂ ಪಡೆಯದಷ್ಟು ಸಂಭಾವನೆ ಪಡೆಯುತ್ತಿದ್ದ ಚಿರಂಜೀವಿ, ನಟಿಸಿರುವುದು ತೆಲುಗು ಸಿನಿಮಾಗಳಲ್ಲಿ ಮಾತ್ರವಾದರೂ ಅವರ ಹವಾ ಆಗಿನ ಸಮಯದಲ್ಲೇ ಉತ್ತರ ಭಾರತದಲ್ಲೆಲ್ಲ ಹಬ್ಬಿತ್ತು. ಯಾವ ಮಟ್ಟಿಗೆಂದರೆ ಕೆಲವಾರು ಮುಳುಗುತ್ತಿದ್ದ ಟಿವಿ ಚಾನೆಲ್ಗಳನ್ನು ಮೆಗಾಸ್ಟಾರ್ ಚಿರಂಜೀವಿಯ ಚಾರ್ಮ್ ಎತ್ತಿ ಹಿಡಿದಿತ್ತು.
ಸಮೀರ್ ನಾಯರ್, ಭಾರತೀಯ ಟಿವಿ ಕ್ಷೇತ್ರದ ದೊಡ್ಡ ಹೆಸರು. ಭಾರತದ ಟಿವಿ ಕ್ಷೇತ್ರದ ಪ್ರಗತಿಗೆ ದೊಡ್ಡ ಕಾಣ್ಕೆಯನ್ನು ನೀಡಿದವರು ಸಮೀರ್ ನಾಯರ್. ಹಲವು ಐಕಾನಿಕ್ ಟಿವಿ ಶೋಗಳ ಹಿಂದೆ ಸಮೀರ್ ನಾಯರ್ ಅವರ ಪ್ರತಿಭೆ ಕೆಲಸ ಮಾಡಿದೆ. ಇತ್ತೀಚೆಗಷ್ಟೆ ಇವರು ಅನುಪಮಾ ಚೋಪ್ರಾ ನಡೆಸಿಕೊಡುವ ಹಾಲಿವುಡ್ ರಿಪೋರ್ಟರ್ ಇಂಡಿಯಾ ಯೂಟ್ಯೂಬ್ ಚಾನೆಲ್ನ ಸಂದರ್ಶನದಲ್ಲಿ ಭಾಗಿ ಆಗಿದ್ದರು. ಈ ವೇಳೆ ಚಿರಂಜೀವಿ ಅವರು ಹೇಗೆ ಹಿಂದಿ ಟಿವಿಗಳ ಪ್ರಗತಿಗೆ ಕಾರಣರಾದರು ಎಂದು ವಿವರಿಸಿದ್ದಾರೆ.
ಸಂದರ್ಶನದಲ್ಲಿ ಮಾತನಾಡಿರುವ ಅವರು, ‘ಹಿಂದಿ ಚಾನೆಲ್ಗಳ ಟಿಆರ್ಪಿ ಕಡಿಮೆ ಆದಾಗೆಲ್ಲ ನಾವು ಚಿರಂಜೀವಿ ನಟಿಸಿರುವ ‘ಇಂದ್ರ’ ಸಿನಿಮಾದ ಹಿಂದಿ ಡಬ್ ವರ್ಷನ್ ಅನ್ನು ಪ್ರಸಾರ ಮಾಡಿಬಿಡುತ್ತಿದ್ದೆವು, ಪ್ರತಿ ಬಾರಿ ಪ್ರಸಾರ ಮಾಡಿದಾಗಲೂ ಸಹ ನಮ್ಮ ಟಿಆರ್ಪಿ ಹೆಚ್ಚಾಗುತ್ತಿತ್ತು. ಹಿಂದಿಯಲ್ಲಿ ಅದನ್ನು ‘ಇಂದ್ರ: ದಿ ಟೈಗರ್’ ಎಂದು ಡಬ್ ಮಾಡಲಾಗಿತ್ತು. ಚಿರಂಜೀವಿ ಸಿನಿಮಾಗಳಿಗೆ ಆಗ ಭಾರಿ ಬೇಡಿಕೆ ಇತ್ತು. ಅವರ ಸಿನಿಮಾಗಳನ್ನು ಜನ ಮುಗಿಬಿದ್ದು ನೋಡುತ್ತಿದ್ದರು’ ಎಂದು ವಿವರಿಸಿದ್ದಾರೆ.
ಇದನ್ನೂ ಓದಿ:ಫಿಲ್ಮ್ಫೇರ್: ಲಂಕೇಶ್, ಇಂದ್ರಜಿತ್ ಬಳಿಕ ಸಮರ್ಜಿತ್ಗೂ ಒಲಿದ ಪ್ರತಿಷ್ಠಿತ ಪ್ರಶಸ್ತಿ
‘ಇಂದ್ರ’ ಮಾತ್ರವೇ ಅಲ್ಲದೆ ಚಿರಂಜೀವಿ ನಟಿಸಿರುವ ಇನ್ನೂ ಕೆಲವು ಹಿಟ್ ತೆಲುಗು ಸಿನಿಮಾಗಳನ್ನು ಹಿಂದಿಗೆ ಡಬ್ ಮಾಡಿ ಬೇರೆ ಬೇರೆ ಟಿವಿ ಚಾನೆಲ್ಗಳು ಆಗಾಗ್ಗೆ ಬಿಡುಗಡೆ ಮಾಡುತ್ತಿದ್ದವು. ಪ್ರತಿಬಾರಿ ಚಿರಂಜೀವಿ ಸಿನಿಮಾ ಪ್ರಸಾರ ಮಾಡಿದಾಗಲೂ ಆ ಚಾನೆಲ್ಗಳ ಟಿಆರ್ಪಿ ಹೆಚ್ಚುತ್ತಿತ್ತಂತೆ. ಹಾಗಿತ್ತು ಮೆಗಾಸ್ಟಾರ್ ಚಿರಂಜೀವಿಯ ಕ್ರೇಜ್.
ಅಸಲಿಗೆ ‘ಇಂದ್ರ’ ಸಿನಿಮಾ ಬಿಡುಗಡೆ ಆಗಿದ್ದು 2002 ರಲ್ಲಿ. ಸಿನಿಮಾನಲ್ಲಿ ಆರತಿ ಅಗರ್ವಾಲ್, ಸೊನಾಲಿ ಬೇಂದ್ರೆ, ಪ್ರಕಾಶ್ ರೈ ಇನ್ನೂ ಕೆಲವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಸಿನಿಮಾದ ಹಾಡುಗಳು ಭಾರಿ ಹಿಟ್ ಆಗಿದ್ದವು. ಇಂದ್ರ ಸೇನಾ ರೆಡ್ಡಿ ಹೆಸರಿನ ಪಾತ್ರದಲ್ಲಿ ಚಿರಂಜೀವಿ ನಟಿಸಿದ್ದರು. ಸುಮಾರು 10 ಕೋಟಿ ಬಜೆಟ್ನಲ್ಲಿ ನಿರ್ಮಾಣವಾಗಿದ್ದ ಆ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ 50 ಕೋಟಿಗೂ ಹೆಚ್ಚು ಮೊತ್ತ ಗಳಿಸಿದ್ದು ಮಾತ್ರವಲ್ಲದೆ ಹಲವು ವರ್ಷಗಳ ಕಾಲ ತೆಲುಗಿನ ಅತಿ ಹೆಚ್ಚು ಹಣ ಗಳಿಸಿದ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಈಗಲೂ ಸಹ ಕೆಲವು ಹಿಂದಿ ಚಾನೆಲ್ಗಳಲ್ಲಿ ‘ಇಂದ್ರ’ ಸಿನಿಮಾದ ಡಬ್ಬಿಂಗ್ ವರ್ಷನ್ ಪ್ರಸಾರ ಆಗುತ್ತಲೇ ಇರುತ್ತದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ